Women’s ODI World Cup: ನ್ಯೂಜಿಲೆಂಡ್ ತಂಡಕ್ಕೆ ಸೋಲುಣಿಸಿದ ಭಾರತದ ವನಿತೆಯರು; ಸೆಮಿ ಫೈನಲ್ ಪ್ರವೇಶಿಸಿದ ಕೌರ್ ಪಡೆ/ India enter semi-finals of ICC Women’s ODI World Cup 2025 after defeating New Zealand | ಕ್ರೀಡೆ

Women’s ODI World Cup: ನ್ಯೂಜಿಲೆಂಡ್ ತಂಡಕ್ಕೆ ಸೋಲುಣಿಸಿದ ಭಾರತದ ವನಿತೆಯರು; ಸೆಮಿ ಫೈನಲ್ ಪ್ರವೇಶಿಸಿದ ಕೌರ್ ಪಡೆ/ India enter semi-finals of ICC Women’s ODI World Cup 2025 after defeating New Zealand | ಕ್ರೀಡೆ

ಮೊದಲು ಬ್ಯಾಟಿಂಗ್ ಮಾಡಿದ ಭಾರತ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿತು. ಕೊನೆಯ ಎರಡು ಓವರ್ ಬಾಕಿ ಇರುವಾಗ ಮಳೆ ಆರಂಭವಾಯಿತು. ಪರಿಣಾಮ ಪಂದ್ಯ 1.5 ಗಂಟೆಗಳ ಕಾಲ ಸ್ಥಗಿತಗೊಳಿಸಲಾಗಿತ್ತು. ನಂತರ 1 ಓವರ್ ಕಡಿತಗೊಳಿಸಿ ಪಂದ್ಯವನ್ನು 49 ಓವರ್​​ಗಳಿಗೆ ಆಡಿಸಲಾಯಿತು. ಭಾರತ ತಂಡ 49 ಓವರ್​ಗಳಲ್ಲಿ 3 ವಿಕೆಟ್ ಕಳೆದುಕೊಂಡು 340 ರನ್​ಗಳ ಸವಾಲಿನ ಮೊತ್ತವನ್ನು ಕಲೆ ಹಾಕಿತು.

ಡಿಎಲ್‌ಎಸ್ ನಿಯಮದ ಪ್ರಕಾರ ನ್ಯೂಜಿಲೆಂಡ್ ವನಿತೆಯರು ಗೆಲ್ಲಲು 44 ಓವರ್‌ಗಳಲ್ಲಿ 325 ರನ್ ಗಳಿಸಬೇಕಾಗಿತ್ತು. ಆದರೆ ಸಂಘಟಿತ ಬೌಲಿಂಗ್ ದಾಳಿ ನಡೆಸಿದ ಟೀಮ್ ಇಂಡಿಯಾ ಬೌಲರ್ಸ್ ನ್ಯೂಜಿಲೆಂಡ್ ತಂಡವನ್ನು 274 ರನ್​ಗಳಿಗೆ ಕಟ್ಟಿ ಹಾಕಿದರು.

ಬ್ರೂಕ್ ಹಾಲಿಡೆ ಹಾಗೂ ಇಸಬೆಲ್ಲಾ ಗಾಝಾ 6ನೇ ವಿಕೆಟ್ ಜೊತೆಯಾಟದಲ್ಲಿ 72 ರನ್​ ಸೇರಿಸಿ ಭಾರತದ ಗೆಲುವನ್ನ ಸ್ವಲ್ಪ ಸಮಯ ತಡೆದರು. ಹಾಲಿಡೆ 84 ಎಸೆತಗಳಲ್ಲಿ 9 ಬೌಂಡರಿ, 1 ಸಿಕ್ಸರ್ ಸಹಿತ 81 ರನ್​ಗಳಿಸಿದರೆ, ಇಸಬೆಲ್ಲಾ 51 ಎಸೆತಗಳಲ್ಲಿ ಅಜೇಯ 65 ರನ್​ಗಳಿಸಿದರು. ಜೆಸ್ ಕೆರ್ 18 ರನ್​ಗಳಿಸಿದರು.

ಭಾರತದ ಪರ ರೇಣುಕಾ ಠಾಕೂರ್ ಹಾಗೂ ಕ್ರಾಂತಿ ಗೌಡ್ ತಲಾ 2 ವಿಕೆಟ್ ಪಡೆದರೆ, ಸ್ನೇಹ್ ರಾಣಾ, ಶ್ರೀಚರಣಿ, ದೀಪ್ತಿ ಶರ್ಮಾ, ಪ್ರತಿಕಾ ರಾವಲ್ ತಲಾ 1 ವಿಕೆಟ್ ಪಡೆದು ಗೆಲುವಿನ ರೂವಾರಿಯಾದರು.

ಭಾರತದ ಇನ್ನಿಂಗ್ಸ್

ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ್ದ ಭಾರತ ತಂಡ ಸ್ಮೃತಿ ಮಂಧಾನ (109ರನ್ಸ್, 95 ಎಸೆತ, 10 ಬೌಂಡರಿ, 5 ಸಿಕ್ಸರ್) , ಪ್ರತಿಕಾ ರಾವಲ್ (122, 134 ಎಸೆತ,13 ಬೌಂಡರಿ, 2 ಸಿಕ್ಸರ್​) ಶತಕ ಹಾಗೂ ಜೆಮಿಮಾ ರೋಡ್ರಿಗಸ್ (76 ರನ್ಸ್, 55 ಎಸೆತ, 11 ಬೌಂಡರಿ) ಅರ್ಧಶತಕ ಶತಕದ ನೆರವಿನಿಂದ 49 ಓವರ್​ಗಳಲ್ಲಿ 3 ವಿಕೆಟ್ ಕಳೆದುಕೊಂಡು 340 ರನ್​ಗಳಿಸಿತ್ತು. ನಾಯಕಿ ಹರ್ಮನ್ ಪ್ರೀತ್ ಕೌರ್, 10, ರಿಚಾ ಘೋಷ್ ಅಜೇಯ 4 ರನ್​ಗಳಿಸಿದ್ದರು.

4ನೇ ತಂಡವಾಗಿ ಸೆಮಿಫೈನಲ್ ಪ್ರವೇಶಿಸಿದ ಭಾರತ

ಈ ಗೆಲುವುನೊಂದಿಗೆ ಟೀಮ್ ಇಂಡಿಯಾ 4ನೇ ತಂಡವಾಗಿ ಸೆಮಿಫೈನಲ್ ಪ್ರವೇಶ ಪಡೆಯಿತು. ಭಾರತ ತಂಡ 6 ಪಂದ್ಯಗಳಲ್ಲಿ ತಲಾ 3 ಜಯ ಹಾಗೂ ಸೋಲಿನೊಂದಿಗೆ 6 ಅಂಕ ಪಡೆದಿದ್ದು, ಇನ್ನೊಂದು ಪಂದ್ಯವನ್ನಾಡಲಿದೆ. ಈ ಪಂದ್ಯವನ್ನ ಗೆದ್ದರೂ ಭಾರತ ತಂಡ 4ನೇ ಸ್ಥಾನದಲ್ಲೇ ಇರಲಿದೆ. ಈಗಾಗೇಲೆ ದಕ್ಷಿಣ ಆಫ್ರಿಕಾ , ಆಸ್ಟ್ರೇಲಿಯಾ, ಇಂಗ್ಲೆಂಡ್ ತಂಡಗಳು ಸೆಮಿಫೈನಲ್ ಪ್ರವೇಶಿಸಿದ್ದು, ಕ್ರಮವಾಗಿ ಟಾಪ್ 3 ಸ್ಥಾನದಲ್ಲಿವೆ.