ಕುಕ್ಕೆ ಸುಬ್ರಹ್ಮಣ್ಯದಲ್ಲಿ ಗಂಗಾ ಶಶಿಧರನ್ ವಯಲಿನ್ ವಾದನ, ನರಸಿಂಹ ಜಯಂತಿ ಮಹೋತ್ಸವ | Violin magician Ganga Shashidharan mesmerizes at Kukke Subrahmanya

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಗಂಗಾ ಶಶಿಧರನ್ ವಯಲಿನ್ ವಾದನ, ನರಸಿಂಹ ಜಯಂತಿ ಮಹೋತ್ಸವ | Violin magician Ganga Shashidharan mesmerizes at Kukke Subrahmanya

Last Updated:

ದಕ್ಷಿಣ ಕನ್ನಡ: ಕುಕ್ಕೆ ಸುಬ್ರಹ್ಮಣ್ಯದ ನರಸಿಂಹ ಜಯಂತಿ ಮಹೋತ್ಸವದಲ್ಲಿ 11 ವರ್ಷದ ಗಂಗಾ ಶಶಿಧರನ್ ವಯಲಿನ್ ವಾದನದ ಮೂಲಕ ಸಭಿಕರನ್ನು ಮಂತ್ರಮುಗ್ಧಗೊಳಿಸಿದ್ದಾಳೆ.

X

ಇಲ್ಲಿ ವಿಡಿಯೋ ನೋಡಿ

ದಕ್ಷಿಣ ಕನ್ನಡ: ಕುಕ್ಕೆ ಸುಬ್ರಹ್ಮಣ್ಯದ (Kukke Subramanya Temple) ನರಸಿಂಹ ಸಂಪುಟ ಮಠದಲ್ಲಿ ನರಸಿಂಹ ಜಯಂತಿ ಮಹೋತ್ಸವ (Narasimha Jayanti Celebration) ಕಾರ್ಯಕ್ರಮ ನಡೆಯುತ್ತಿದೆ. ನರಸಿಂಹ ಸಂಪುಟ ಮಠದ ಸ್ವಾಮೀಜಿ ಶ್ರೀ ವಿದ್ಯಾ ಪ್ರಸನ್ನ ತೀರ್ಥ ಸ್ವಾಮೀಜಿಯವರ (Shri Vidya Prasanna Theertha Swamiji) ನೇತೃತ್ವದಲ್ಲಿ ಸಭಾ ಕಾರ್ಯಕ್ರಮ, ಸಾಂಸ್ಕೃತಿಕ ಕಾರ್ಯಕ್ರಮಗಳೂ ನಡೆಯುತ್ತಿವೆ. ಕೇರಳದ (Kerala) ಅತೀ ಕಿರಿಯ ವಯಲಿನ್ ಮಾಂತ್ರಿಕೆ ಗಂಗಾ ಶಶಿಧರನ್ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಕಾರ್ಯಕ್ರಮ ನೀಡಿದ್ದು, ಅದ್ಭುತ ಪ್ರತಿಭೆಯ ಮೂಲಕ ಮೋಡಿ ಮಾಡಿದ್ದಾಳೆ.

ನರಸಿಂಹ ಜಯಂತಿ ಕಾರ್ಯಕ್ರಮ ದಲ್ಲಿ ಸಭಿಕರನ್ನು ಮಂತ್ರಮುಗ್ಧಗೊಳಿಸಿದ ಗಂಗಾ, ಸ್ವಾಮೀಜಿ ಎದುರು,ಪ್ರಸಿದ್ಧ ಮಲಯಾಳಂ ಅಯ್ಯಪ್ಪ ಸ್ವಾಮಿ ಭಕ್ತಿ ಗೀತೆ “ಸಾಮ‌ವೇದಂ ನಾವಿಲ್” ಪದ್ಯವನ್ನು ವಯಲಿನ್ ಮೂಲಕ ನುಡಿಸಿದ್ದಾಳೆ. ಕಾರ್ಯಕ್ರಮ ವೀಕ್ಷಣೆ ಮಾಡುತ್ತಿದ್ದ ಸ್ವಾಮೀಜಿ ಬಳಿ ಬಂದು ಪುಟ್ಟ ಹುಡುಗಿ ಗಂಗಾ ಅದ್ಭುತವಾಗಿ ವಯಲಿನ್ ನುಡಿಸುವ ಮೂಲಕ ಆಶೀರ್ವಾದ ಪಡೆದಿದ್ದಾಳೆ.

ಕೇರಳದ ಗುರುವಾಯೂರಿನಲ್ಲಿ ಜನಿಸಿರುವ ಗಂಗಾ ಶಶಿಧರನ್ 11 ವರ್ಷದ ಪುಟ್ಟ ಬಾಲಕಿ. ತನ್ನ ಮೂರನೇ ವಯಸ್ಸಿನಲ್ಲಿಯೇ ಹಠ ಹಿಡಿದು ವಯಲಿನ್ ಕಲಿತ ಗಂಗಾ ಈಗ ತನ್ನ ಅಸಾಧಾರಣ ಪ್ರತಿಭೆಯ ಮೂಲಕ ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದ ವೇದಿಕೆಗಳಲ್ಲಿ ಕಲಾಚಾತುರ್ಯವನ್ನು ಪ್ರದರ್ಶಿಸಿ ಎಲ್ಲರ ಮೆಚ್ಚುಗೆ ಗಳಿಸಿದ್ದಾಳೆ.

ವಯಲಿನ್ ವಾದನದಲ್ಲಿ ತನ್ಮಯಳಾಗಿ, ಭಾವನಾತ್ಮಕ ಆಳವನ್ನು ಹೊಂದಿರುವ ಗಂಗಾ ವಯಲಿನ್ ನುಡಿಸೋದನ್ನು ಕೇಳೋದು ಕಿವಿಗೆ ಇಂಪು. ಆದರೆ ಆಕೆಯ ಮುಖಭಾವ ನೋಡೋದು ಕಣ್ಣಿಗೆ ತಂಪು. ಸದ್ಯ ಕೇರಳದ ಮಲಪ್ಪುರಂನ ವೆಲಿಯಂಕೋಡ್ ನಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಈಕೆಗೆ ಭವಿಷ್ಯದಲ್ಲಿ ಪೈಲೆಟ್ ಆಗುವ ಆಸೆ ಇದೆ. ಇಷ್ಟು ಸಣ್ಣ ಪ್ರಾಯದಲ್ಲೇ ಕಲಾ ಸರಸ್ವತಿಯ ಪೂರ್ಣ ಆಶೀರ್ವಾದ ಪಡೆದ ಗಂಗಾ ಶಶಿಧರನ್ ಕಾರ್ಯಕ್ರಮಕ್ಕೆ ಲಕ್ಷಾಂತರ ಜನ ಅಭಿಮಾನಿಗಳು ಇದ್ದಾರೆ.