Last Updated:
ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್ಗೆ ವಿದಾಯ ಘೋಷಿಸಿದ್ದಾರೆ. 123 ಟೆಸ್ಟ್ ಪಂದ್ಯಗಳಲ್ಲಿ 9230 ರನ್ ಗಳಿಸಿದ್ದಾರೆ. ರೋಹಿತ್ ಶರ್ಮಾ ನಿವೃತ್ತಿ ನಂತರ, ಕೊಹ್ಲಿಯೂ ನಿವೃತ್ತಿ ಘೋಷಿಸಿದ್ದಾರೆ.
ಟೀಂ ಇಂಡಿಯಾ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ (Virat Kohli) ಟೆಸ್ಟ್ ಕ್ರಿಕೆಟ್ (Test Cricket) ವಿದಾಯ ಘೋಷಣೆ ಮಾಡಿದ್ದಾರೆ. ಇಂದು ಅಂದರೆ ಮೇ 12ರ ಸೋಮವಾರ ಅಧಿಕೃತವಾಗಿ ಮಾಹಿತಿ ಹಂಚಿಕೊಂಡಿರುವ ವಿರಾಟ್ ಕೊಹ್ಲಿ, ಲಾಂಗ್ ಫಾರ್ಮಾಟ್ ನಿಂದ ನಿವೃತ್ತಿ ಪಡೆದುಕೊಳ್ಳುತ್ತಿರುವುದಾಗಿ (Retirement) ಘೋಷಣೆ ಮಾಡಿದ್ದಾರೆ. ಆಸ್ಟ್ರೇಲಿಯಾದಲ್ಲಿ ನಡೆದ ಬಾರ್ಡರ್ ಗವಾಸ್ಕರ್ ಟೂರ್ನಿಯಲ್ಲಿ ವಿಫಲರಾಗಿದ್ದ ಕೊಹ್ಲಿ, ಇಂಗ್ಲೆಂಡ್ ವಿರುದ್ಧ ಸರಣಿಗೂ (England Test Series) ಮುನ್ನವೇ ನಿವೃತ್ತಿ ಘೋಷಣೆ ಮಾಡಿರುವುದು ಗಮನಿಸಬೇಕಾದ ಅಂಶವಾಗಿದೆ. ಏಕೆಂದರೆ ಇತ್ತೀಚೆಗಷ್ಟೇ ಟೀಂ ಇಂಡಿಯಾವನ್ನು ಮುನ್ನಡೆಸುತ್ತಿದ್ದ ರೋಹಿತ್ ಶರ್ಮಾ ಕೂಡ ಟೆಸ್ಟ್ ಕ್ರಿಕೆಟ್ ಗೆ ನಿವೃತ್ತಿ ಘೋಷಣೆ ಮಾಡಿದ್ದರು. ಇದಾದ ಬೆನ್ನಲ್ಲೇ ವಿರಾಟ್ ಕೊಹ್ಲಿ ಕೂಡ ನಿವೃತ್ತಿ ಘೋಷಣೆ ಮಾಡಿರುವುದು ಅಭಿಮಾನಿಗಳಿಗೆ ಶಾಕ್ ನೀಡಿದೆ. ವಿಶೇಷ ಎಂದರೆ, ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಕೂಡ ಟಿ20 ಕ್ರಿಕೆಟ್ ಗೆ ನಿವೃತ್ತಿ ಘೋಷಣೆ ಮಾಡಿದ್ದರು. ಇದರೊಂದಿಗೆ ಈ ಇಬ್ಬರು ಆಟಗಾರರು ಏಕದಿನ ಮಾದರಿ ಕ್ರಿಕೆಟ್ ಮಾತ್ರ ಸಿಮೀತವಾಗಲಿದ್ದಾರೆ.
ಅಭಿಮಾನಿಗಳಿಗೆ ವಿರಾಟ್ ಕೊಹ್ಲಿ ಸಂದೇಶ
ಟೆಸ್ಟ್ ಕ್ರಿಕೆಟ್ ನಲ್ಲಿ ನಾನು ಭಾರತದ ಕ್ಯಾಪ್ ತೊಟ್ಟು 14 ವರ್ಷಗಳು ಕಳೆದಿದೆ. ನಾನು ಈ ಫಾರ್ಮಾಟ್ ನಿಂದ ನಿವೃತ್ತಿ ಪಡೆದುಕೊಳ್ಳುತ್ತಿದ್ದೇವೆ, ಆದರೆ ನನಗೆ ಇದು ಅಷ್ಟು ಸುಲಭವಲ್ಲ. ಆದರೆ ಸದ್ಯದ ಸನ್ನಿವೇಶದಲ್ಲಿ ಇದು ಉತ್ತಮ ನಿರ್ಧಾರ ಎಂದು ಅನಿಸುತ್ತಿದೆ. ಈ ಮಾದರಿ ಕ್ರಿಕೆಟ್ ಗೆ ನಾನು ಏನು ಮಾಡಬೇಕು, ನನ್ನಿಂದ ಏನೆಲ್ಲಾ ಸಾಧ್ಯ ಅಷ್ಟು ಮಾಡಿದ್ದೇನೆ. ಈ ಸಮಯದಲ್ಲಿ ನೆನಪು ಮಾಡಿಕೊಂಡರೆ ಈ ಫಾರ್ಮಾಟ್ ನನಗೆ ಹೆಚ್ಚು ನೀಡಿದೆ. ಯಾವುದೇ ಸಮಯದಲ್ಲಿ ಹಿಂದೆ ತಿರುಗಿ ನೋಡಿದರೂ ನನ್ನ ಟೆಸ್ಟ್ ಕೆರಿಯರ್ ಸಂತೋಷನ್ನು ನೀಡುತ್ತದೆ ಎಂದು ಕೊಹ್ಲಿ ಭಾವನಾತ್ಮಕ ಸಂದೇಶವನ್ನು ಹಂಚಕೊಂಡಿದ್ದಾರೆ.
ಕೊಹ್ಲಿ ಟೆಸ್ಟ್ ಮಾದರಿಯ ಸಂಕ್ಷೀಪ್ತ ಮಾಹಿತಿ
2011ರಲ್ಲಿ ಟೀಂ ಇಂಡಿಯಾ ಪರ ವಿರಾಟ್ ಕೊಹ್ಲಿ ಟೆಸ್ಟ್ ಮಾದರಿಗೆ ಎಂಟ್ರಿ ಕೊಟ್ಟಿದ್ದರು. 14 ವರ್ಷಗಳ ವೃತ್ತಿ ಜೀವನದಲ್ಲಿ 123 ಟೆಸ್ಟ್ ಪಂದ್ಯಗಳನ್ನು ಆಡಿರುವ ಕೊಹ್ಲಿ, 9230 ರನ್ ಗಳಿಸಿದ್ದಾರೆ. ಇದರಲ್ಲಿ 7 ದ್ವಿಶತಕ, 30 ಶತಕ, 31 ಅರ್ಧ ಶತಕಗಳು ಸೇರಿದೆ.
ಬಿಸಿಸಿಐನ ಆ ನಿರ್ಧಾರವೇ ಕೊಹ್ಲಿಗೆ ನಿವೃತ್ತಿಗೆ ಕಾರಣವಾಯ್ತಾ?
ಇತ್ತೀಚೆಗೆ ರೋಹಿತ್ ಶರ್ಮಾ ಟೆಸ್ಟ್ ಕ್ರಿಕೆಟ್ಗೆ ವಿದಾಯ ಹೇಳಿದ್ದರು. ಆ ಸಮಯದಿಂದಲೇ ವಿರಾಟ್ ಕೊಹ್ಲಿ ಕೂಡ ಟೆಸ್ಟ್ ಕ್ರಿಕೆಟ್ಗೆ ವಿದಾಯ ಹೇಳಲಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿದ್ದವು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಹಲವು ಮಾಜಿ ಕ್ರಿಕೆಟ್ ಆಟಗಾರರು, ಕ್ರಿಕೆಟ್ ವಿಶ್ಲೇಷಕರು ಕೊಹ್ಲಿ ತಮ್ಮ ನಿರ್ಧಾರವನ್ನು ಬದಲಿಸಿಕೊಳ್ಳಬೇಕು. ಯಾವುದೇ ಕಾರಣಕ್ಕೂ ನಿವೃತ್ತಿ ನೀಡಬಾರದು. ಏಕೆಂದರೆ ಇಬ್ಬರು ಆಟಗಾರರು ಒಟ್ಟಿಗೆ ನಿವೃತ್ತಿ ಘೋಷಣೆ ಮಾಡುವುದರಿಂದ ತಂಡದ ಮೇಲೆ ಭಾರೀ ಪರಿಣಾಮ ಉಂಟು ಮಾಡುತ್ತದೆ. ಕೊಹ್ಲಿ ಅವರ ಉಪಸ್ಥಿತಿ ತಂಡದಲ್ಲಿ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿದ್ದರು.
ವೆಸ್ಟ್ ಇಂಡೀಸ್ ಕ್ರಿಕೆಟ್ ದಿಗ್ಗಜ ಬ್ರಿಯಾನ್ ಲಾರಾ ಸಹ ಇದೇ ಮನವಿಯನ್ನು ಮಾಡಿದ್ದರು. ಟೀಂ ಇಂಡಿಯಾ ಮಾಜಿ ಆಟಗಾರರಾದ ನವ್ಜೋತ್ ಸಿಂಗ್ ಸಿಧು, ಆಸೀಸ್ ಕ್ರಿಕೆಟಿಗ ಮೈಕೆಲ್ ವಾನ್ ಸೇರಿದಂತೆ ಇತರ ಪ್ರಮುಖರು ಕೊಹ್ಲಿಯು ಟೆಸ್ಟ್ ಕ್ರಿಕೆಟ್ನಲ್ಲಿ ಮತ್ತಷ್ಟು ಕಾಲ ಮುಂದುವರಿಯಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಒಂದು ಹಂತದಲ್ಲಿ ಬಿಸಿಸಿಐ ಕೂಡ ಕೊಹ್ಲಿಯನ್ನು ಮನವೊಲಿಸಲು ಪ್ರಯತ್ನಿಸಿತ್ತು ಎಂಬ ಸುದ್ದಿಗಳು ಹರಿದಾಡಿದವು.
ಹೊಸ ಆಟಗಾರರಿಗೆ ಅವಕಾಶ ನೀಡುವ ಉದ್ದೇಶದಿಂದ ಅವರು ದೀರ್ಘ ಸ್ವರೂಪದ ಕ್ರಿಕೆಟ್ನಿಂದ ನಿವೃತ್ತರಾಗಿದ್ದಾರೆ ಎನ್ನಲಾಗಿದೆ. ಆದರೆ ತಂಡವನ್ನು ಮುನ್ನಡೆಸುತ್ತಿದ್ದ ರೋಹಿತ್ ಶರ್ಮಾ ನಿವೃತ್ತಿ ಘೋಷಣೆ ಮಾಡಿದ ಬಳಿಕ, ಕೊಹ್ಲಿ ತಂಡದ ಕ್ಯಾಪ್ಟನ್ಸಿ ಬಗ್ಗೆ ಆಕ್ಷಾಂಕ್ಷೆ ಹೊಂದಿದ್ದರಂತೆ. ಆದರೆ ಬಿಸಿಸಿಐ ದೀರ್ಘ ಕಾಲದ ಪ್ಲ್ಯಾನ್ ನಿಂದಾಗಿ ನಾಯಕತ್ವ ನೀಡಲು ಒಪ್ಪಿಗೆ ಸೂಚಿಸಿರಲಿಲ್ಲವಂತೆ. ಬಿಸಿಸಿಐನ ಈ ನಿರ್ಧಾರ ಕೊಹ್ಲಿ ಅವರ ನಿವೃತ್ತಿಗೆ ಕಾರಣವಾಗಿದೆ ಎಂಬ ಸುದ್ದಿಗಳು ದಟ್ಟವಾಗಿ ಹರಿದಾಡುತ್ತಿದೆ. ಈ ಎಲ್ಲದರ ನಡುವೆ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಟೂರ್ನಿಗೆ ರೋಹಿತ್ ಶರ್ಮಾ ಸ್ಥಾನದಲ್ಲಿ ಶುಭ್ ಮನ್ ಗಿಲ್ರನ್ನು ಕ್ಯಾಪ್ಟನ್ ಮಾಡುವ ಚಿಂತನೆ ನಡೆಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
Bangalore [Bangalore],Bangalore,Karnataka