ಬೆಳಗಾವಿಯಲ್ಲಿ ಸಿಟಿ ರವಿ ಬಂಧನ ಕೇಸ್ ವಿಚಾರ : ಸಿಐಡಿ ವಿಚಾರಣೆಗೆ ಹಾಜರಾದ ಡಿಸಿಪಿ, ಎಸಿಪಿ – CT RAVI ARREST CASE
ಸಚಿವೆ ವಿರುದ್ಧ ಅವಹೇಳನಕಾರಿ ಪದ ಬಳಕೆ ಆರೋಪ ಪ್ರಕರಣದಲ್ಲಿ ಸಿ ಟಿ ರವಿ ಅವರನ್ನು ಬಂಧಿಸಿದ್ದ ವಿಚಾರವಾಗಿ ಡಿಸಿಪಿ ರೋಹನ ಜಗದೀಶ ಮತ್ತು ಎಸಿಪಿ ಸದಾಶಿವ ಕಟ್ಟಿಮನಿ ಸಿಐಡಿ ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ.
ಸಿಐಡಿ ಮುಂದೆ ವಿಚಾರಣೆಗೆ ಹಾಜರಾದ ಹಿರಿಯ ಪೊಲೀಸ್ ಅಧಿಕಾರಿಗಳು
ಬೆಳಗಾವಿ : ಚಳಿಗಾಲ ಅಧಿವೇಶನ ವೇಳೆ ಸದನದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಅವಹೇಳನಕಾರಿ ಪದ ಬಳಕೆ ಪ್ರಕರಣದಲ್ಲಿ ವಿಧಾನ ಪರಿಷತ್ ಸದಸ್ಯ ಸಿ ಟಿ ರವಿ ಅವರನ್ನು ಬಂಧನ ಮಾಡಿದ್ದ ಬೆಳಗಾವಿ ಡಿಸಿಪಿ ಮತ್ತು ಎಸಿಪಿ ಅವರು ಸಿಐಡಿ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ.
ವಿಧಾನ ಪರಿಷತ್ನಲ್ಲಿ ಅಶ್ಲೀಲ ಪದ ಬಳಕೆ ಮಾಡಿರುವ ಕುರಿತು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಹಿರೇಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ದೂರು ದಾಖಲಿಸಿಕೊಂಡಿದ್ದ ಬೆಳಗಾವಿ ಪೊಲೀಸರು, ಸಿ ಟಿ ಅವರನ್ನು ಬಂಧಿಸಿದ್ದರು. ಇದಾದ ಬಳಿಕ ಪ್ರಕರಣ ಸಿಐಡಿಗೆ ವರ್ಗಾವಣೆ ಆಗಿತ್ತು. ಇದೀಗ ಸಿಐಡಿ ಅಧಿಕಾರಿಗಳು ಸಿ ಟಿ ರವಿ ಅವರನ್ನು ಬಂಧನ ಮಾಡಿದ್ದ ಡಿಸಿಪಿ ರೋಹನ ಜಗದೀಶ ಮತ್ತು ಎಸಿಪಿ ಸದಾಶಿವ ಕಟ್ಟಿಮನಿ ಅವರು ಇಂದು ಬೆಂಗಳೂರಿನಲ್ಲಿ ಸಿಐಡಿ ಅಧಿಕಾರಿಗಳ ಮುಂದೆ ವಿಚಾರಣೆಯಲ್ಲಿ ಭಾಗಿಯಾಗಿದ್ದಾರೆ.
ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಚಳಿಗಾಲ ಅಧಿವೇಶನದ ಕೊನೆ ದಿನ ಪರಿಷತ್ನಲ್ಲಿ ನಡೆದ ಗಲಾಟೆ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಅಲ್ಲದೇ ಸುವರ್ಣ ವಿಧಾನಸೌಧ ಮುಂಭಾಗದಿಂದ ಸಿ ಟಿ ರವಿ ಬಂಧನವಾಗಿತ್ತು. ಪ್ರಕರಣದ ಬಳಿಕ ಸಾಕಷ್ಟು ಆರೋಪ ಪ್ರತ್ಯಾರೋಪಗಳು ಕೇಳಿ ಬಂದಿದ್ದವು.