ಧನಶ್ರೀ ವರ್ಮಾ ಅವರಿಂದ ವಿಚ್ಛೇದನ ಪಡೆದಾಗಿನಿಂದ ಫುಲ್ ಸೈಲೆಂಟ್ ಆಗಿದ್ದ ಯುಜ್ವೇಂದ್ರ ಚಾಹಲ್, ಸಾಮಾಜಿಕ ಮಾಧ್ಯಮದಲ್ಲಿಯೂ ಸಾಕಷ್ಟು ಟ್ರೋಲ್ ಆಗಿದ್ದರು. ಧನಶ್ರೀ ಅವರಿಂದ ವಿಚ್ಛೇದನ ಪಡೆದ ನಂತರ ನೆಟ್ಟಿಗರು ಇವರನ್ನು ‘ವಂಚಕ’ ಎಂದು ಕರೆದಿದ್ದರು. ಇದೀಗ ಚಾಹಲ್ ಇತ್ತೀಚಿನ ಸಂದರ್ಶನದಲ್ಲಿ ಮನಬಿಚ್ಚಿ ಮಾತನಾಡಿದ್ದಾರೆ.
ರಾಜ್ ಶಮಾನಿ ಅವರ ಪಾಡ್‌ಕಾಸ್ಟ್‌ನಲ್ಲಿ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಮಾತನಾಡಿರುವ ಚಾಹಲ್, ಧನಶ್ರೀ ವರ್ಮಾ ಜೊತೆ ವಿಚ್ಛೇದನದ ಸುತ್ತಲಿನ ಪ್ರಶ್ನೆಗಳಿಗೆ ಕೊನೆಗೂ ಉತ್ತರ ನೀಡಿದ್ದಾರೆ. ಈ ಪಾಡ್‌ಕ್ಯಾಸ್ಟ್‌ನಲ್ಲಿ ಅವರು ತಮ್ಮ ಪ್ರತ್ಯೇಕತೆಯ ಹಿಂದಿನ ಕಾರಣಗಳ ಬಗ್ಗೆ ಪ್ರಾಮಾಣಿಕ ಒಳನೋಟಗಳನ್ನು ಹಂಚಿಕೊಂಡಿದ್ದು, ‘ಈ ನಿರ್ಧಾರವು ಹಠಾತ್ತನೆ ಆಗಿರಲಿಲ್ಲ, ಸ್ವಲ್ಪ ಸಮಯದಿಂದ ಇದರ ಬಗ್ಗೆ ಯೋಚನೆ ಮಾಡಿನೇ ತೆಗೆದುಕೊಂಡ ನಿರ್ಧಾರ’ ಆಗುದೆ ಎಂದು ಬಹಿರಂಗಪಡಿಸಿದರು.
‘ತಾನು ಯಾರಿಗೂ ಮೋಸ ಮಾಡಿಲ್ಲ’ ಎಂದು ಸ್ಪಷ್ಟಪಡಿಸಿರುವ ಯಜುವೇಂದ್ರ ಚಾಹಲ್, ದಾಂಪತ್ಯದಲ್ಲಿನ ವಿರಸ ಯಾವಾಗಲು ಕೊರೆಯುತ್ತಿದ್ದುದರಿಂದ ಬಹುಕಾಲ ಮಾನಸಿಕವಾಗಿಯೂ ನಾನು ನೊಂದಿದ್ದೆ. ಅಷ್ಟೇ ಅಲ್ಲ, ನನಗೆ ಆತ್ಮಹತ್ಯೆ ಬಗ್ಗೆಯೂ ಯೋಚಿಸುವಂತೆ ಮಾಡಿತ್ತು ಎಂದೂ ತಿಳಿಸಿದ್ದಾರೆ.
ಆ ಸಮಯದಲ್ಲಿ ತಾನು ಅನುಭವಿಸಿದ ಕಷ್ಟಗಳು, ಮಾನಸಿಕ ಸಮಸ್ಯೆಗಳು ಮತ್ತು ಜನರು ಹಬ್ಬಿಸಿದ ಸುಳ್ಳು ಸುದ್ದಿಗಳ ಬಗ್ಗೆಯೂ ವಿವರಣೆ ನೀಡಿದ ಚಾಹಲ್, ಈ ವಿಚಾರವನ್ನು ಯಾರಿಗೂ ತಿಳಿಸಬಾರದು ಎಂದು ತೀರ್ಮಾನಿಸಿದ ನಂತರ ಸಾರ್ವಜನಿಕ ಜೀವನ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಸಾಮಾನ್ಯ ದಂಪತಿಯಂತೆ ನಟಿಸಿದೆ ಎಂದು ಹೇಳಿದ್ದಾರೆ.
‘ಆತ್ಮಹತ್ಯೆಯ ಯೋಚನೆ ಬಂದಿತ್ತು’ ಚಾಹಲ್ ಆಘಾತಕಾರಿ ಹೇಳಿಕೆ!
2024ರ T20 ವಿಶ್ವಕಪ್ ಸಮಯದಲ್ಲಿ ಚಾಹಲ್ ಕ್ರಿಕೆಟ್‌ನಿಂದ ದೂರವಿದ್ದ ಬಗ್ಗೆ ಮಾತನಾಡಿ. ‘ನನಗೆ ಕ್ರಿಕೆಟ್‌ನಿಂದ ಒಂದು ವಿರಾಮ ಬೇಕಿತ್ತು. ಈ ಹಿಂದೆ ಹೀಗಾದಾಗ, ನಾನು ತುಂಬಾ ಬ್ಯುಸಿಯಾಗಿದ್ದೆ. ನನಗೆ ಗಮನಹರಿಸಲು ಸಾಧ್ಯವಾಗುತ್ತಿರಲಿಲ್ಲ. ಮೈದಾನದಲ್ಲಿ ಆಡುವಾಗಲೂ, ಈ ವಿಷಯಗಳು ನನ್ನ ಮನಸ್ಸಿನಲ್ಲಿ ಓಡಾಡುತ್ತಿದ್ದವು. ವಿಚ್ಛೇದನ ಮತ್ತು ನೂರಾರು ಬೇರೆ ವಿಷಯಗಳು ತಲೆಯಲ್ಲಿ ತುಂಬಿದ್ದವು. ಒಂದು ತಿಂಗಳು ನಾನು ಕೇವಲ ಎರಡು ಗಂಟೆ ನಿದ್ರೆ ಮಾಡುತ್ತಿದ್ದೆ. ಉಳಿದ ದಿನ ನನ್ನ ಸ್ನೇಹಿತರೊಂದಿಗೆ ಮಾತನಾಡುತ್ತಿದ್ದೆ. ನನ್ನ ಆತಂಕವನ್ನು ಅವರಿಗೆ ಹೇಳಿಕೊಳ್ಳುತ್ತಿದ್ದೆ. ಆತ್ಮಹತ್ಯೆಯ ಆಲೋಚನೆಗಳು ಬರುತ್ತಿದ್ದುದನ್ನೂ ಅವರೊಂದಿಗೆ ಹಂಚಿಕೊಳ್ಳುತ್ತಿದ್ದೆ’ ಎಂದು ಚಾಹಲ್ ಹೇಳಿದರು.
ಯುಜ್ವೇಂದ್ರ ಚಾಹಲ್ – ಧನಶ್ರೀ ವರ್ಮ
ಇದೇ ಫಸ್ಟ್ ಟೈಂ ಮನಬಿಚ್ಚಿ ಮಾತನಾಡಿದ ಚಾಹಲ್, ‘ಸಂಬಂಧವೆಂದರೆ ಹೊಂದಾಣಿಕೆ. ಒಬ್ಬರು ಸಿಟ್ಟಾದರೆ, ಇನ್ನೊಬ್ಬರು ಸಮಾಧಾನಪಡಿಸಬೇಕು. ಕೆಲವೊಮ್ಮೆ ಇಬ್ಬರು ವ್ಯಕ್ತಿಗಳ ಸ್ವಭಾವವೂ ಹೊಂದಿಕೆ ಆಗುವುದಿಲ್ಲ. ನಾನು ಭಾರತಕ್ಕಾಗಿ ಆಡುತ್ತಿದ್ದೆ, ಅವಳು ಕೂಡ ತನ್ನ ಕೆಲಸದಲ್ಲಿ ಬ್ಯುಸಿಯಾಗಿದ್ದಳು. ಒಂದೆರಡು ವರ್ಷಗಳ ಕಾಲ ಇದು ಹೀಗೇ ನಡೆಯಿತು. ನಾನು ನನ್ನ ಜೀವನದಿಂದ ಬೇಸತ್ತಿದ್ದೆ. ಪ್ರತಿದಿನ ಅದೇ ವಿಷಯಗಳು, ಅದೇ ಆತಂಕ. ದಿನದಲ್ಲಿ ಎರಡು ಗಂಟೆ ಅಳುವುದು, 2-3 ಗಂಟೆ ನಿದ್ರೆ. ಹೀಗಿರುವುದಕ್ಕಿಂತ ಸಾಯುವುದೇ ಮೇಲು ಎಂದು ಅನಿಸಿತು. ಈ ರೀತಿಯ ಆಲೋಚನೆಗಳು ಮೊದಲೆಲ್ಲ ತಿಂಗಳಿಗೆ 1-2 ಬಾರಿ ಬರುತ್ತಿದ್ದವು. ನಾನು ಕ್ರಿಕೆಟ್‌ನಿಂದ ವಿರಾಮ ತೆಗೆದುಕೊಂಡಾಗ ಹೀಗೆಲ್ಲಾ ಆಯಿತು. ಇಂತಹ ಪರಿಸ್ಥಿತಿ ನನ್ನ ಶತ್ರುಗಳಿಗೂ ಬರಬಾರದು’ ಎಂದು ಚಾಹಲ್ ಭಾವುಕರಾಗಿ ಹೇಳಿದ್ದಾರೆ.
‘ಆ ಸಮಯದಲ್ಲಿ, ನಾನು ಇಲ್ಲಿ ಸಮಯ ಕೊಡಬೇಕು, ಅಲ್ಲಿ ಸಮಯ ಕೊಡಬೇಕು ಎಂದು ಹೀಗೆಲ್ಲಾ ಯೋಚಿಸುತ್ತಿದ್ದೆ. ಆದರೆ ಸಂಬಂಧದ ಬಗ್ಗೆ ಯೋಚಿಸಲೂ ನನಗೆ ಸಮಯ ಸಿಗಲಿಲ್ಲ. ಪ್ರತಿದಿನ ಅದೇ ರೀತಿ ಆಗುತ್ತಿತ್ತು. ಇಬ್ಬರು ಮಹತ್ವಾಕಾಂಕ್ಷೆಯುಳ್ಳ ವ್ಯಕ್ತಿಗಳು ಒಟ್ಟಿಗೆ ಇರುವುದು ತಪ್ಪಲ್ಲ. ಪ್ರತಿಯೊಬ್ಬರಿಗೂ ಅವರದ್ದೇ ಆದ ಜೀವನವಿದೆ. ಪ್ರತಿಯೊಬ್ಬರಿಗೂ ಅವರದ್ದೇ ಆದ ಗುರಿಗಳಿರುತ್ತವೆ. ಸಂಗಾತಿಯಾಗಿ ನೀವು ಅದನ್ನು ಖಂಡಿತವಾಗಿ ಬೆಂಬಲಿಸಬೇಕು. ನೀವು 18ರಿಂದ 20 ವರ್ಷಗಳಿಂದ ಯಾವುದೋ ಒಂದು ಕೆಲಸ ಮಾಡುತ್ತಿದ್ದರೆ, ಅದನ್ನು ಸಂಬಂಧಕ್ಕಾಗಿ ಬಿಡಲು ಸಾಧ್ಯವಿಲ್ಲ’ ಎಂದು ಚಾಹಲ್ ಹೇಳಿದ್ದಾರೆ.
‘ನಮ್ಮ ಇಬ್ಬರ ಮಧ್ಯೆ ನಡೆಯುತ್ತಿದ್ದ ಗ್ಯಾಪ್ ಬಗ್ಗೆ ನಮಗೆ ಜನರಿಗೆ ತಿಳಿಸಬೇಕು ಎಂದು ಅನ್ನಿಸಲಿಲ್ಲ. ಮುಂದೆ ಏನಾಗುತ್ತದೆಯೋ ಎಂದು ಭಯವಿತ್ತು. ಕೊನೆಗೆ ನಾವು ಒಂದು ನಿರ್ಧಾರಕ್ಕೆ ಬರುವವರೆಗೂ ಏನನ್ನೂ ಬಹಿರಂಗವಾಗಿ ಯಾವುದನ್ನೂ ತಿಳಿಸಬಾರದು ಎಂಬ ನಿರ್ಧಾರಕ್ಕೆ ಬಂದೆವು. ಸಾಮಾಜಿಕ ಮಾಧ್ಯಮದಲ್ಲಿ ಸಾಮಾನ್ಯ ದಂಪತಿಯಂತೆ ನಟಿಸಿದೆವು. ನಾನಂತೂ ನಟಿಸುತ್ತಿದ್ದೆ’ ಎಂದು ಚಾಹಲ್ ವಿವರಿಸಿದರು.
‘ನಾನು ಮೋಸಗಾರನಲ್ಲ’
ತಮ್ಮ ಬಗ್ಗೆ ಹರಡಿದ್ದ ವದಂತಿಗಳ ಬಗ್ಗೆಯೂ ಮಾತನಾಡಿದ ಅವರು, ‘ನಾನು ವಿಚ್ಛೇದನದ ವಿಷಯದಲ್ಲಿ ತೊಂದರೆಯಲ್ಲಿದ್ದಾಗ, ಜನ ನನ್ನನ್ನು ಮೋಸಗಾರ ಎಂದು ಕರೆದರು. ನಾನು ಎಂದಿಗೂ ಯಾರಿಗೂ ಮೋಸ ಮಾಡಿಲ್ಲ. ನನ್ನಷ್ಟು ನಿಷ್ಠಾವಂತ ವ್ಯಕ್ತಿ ನಿಮಗೆ ಯಾವತ್ತೂ ಸಿಗಲು ಸಾಧ್ಯವಿಲ್ಲ. ನಾನು ನನ್ನ ಪ್ರೀತಿಪಾತ್ರರಿಗಾಗಿ ನನ್ನ ಹೃದಯದಿಂದ ಯೋಚಿಸುತ್ತೇನೆ. ನಾನು ಯಾವತ್ತೂ ಯಾರಲ್ಲೂ ಏನನ್ನೂ ಕೇಳಿಲ್ಲ, ಕೊಟ್ಟಿದ್ದೇನೆ. ನಿಮಗೆ ಗೊತ್ತಿಲ್ಲದ ವಿಷಯದ ಬಗ್ಗೆ ನೀವು ಬರೆಯುತ್ತೀರಿ. ನನಗೆ ಇಬ್ಬರು ಸಹೋದರಿಯರಿದ್ದಾರೆ, ಹುಡುಗಿಯರನ್ನು ಹೇಗೆ ಗೌರವಿಸಬೇಕೆಂದು ನನಗೆ ತುಂಬಾ ಚೆನ್ನಾಗಿ ತಿಳಿದಿದೆ. ಯಾರೊಂದಿಗಾದರೂ ನಿಮ್ಮನ್ನು ನೋಡಿದರೆ, ನಿಮ್ಮಿಬ್ಬರನ್ನು ಜೋಡಿ ಮಾಡಿ ಸುದ್ದಿ ಹಬ್ಬಿಸಿ ಬಿಡುತ್ತಾರೆ. ನೀವು ಒಮ್ಮೆ ಪ್ರತಿಕ್ರಿಯಿಸಿದರೆ ಸಾಕು. ಇನ್ನಷ್ಟು ಜನರು ಬರುತ್ತಾರೆ’ ಎಂದು ಚಾಹಲ್ ಬೇಸರ ವ್ಯಕ್ತಪಡಿಸಿದರು.
ಅಂದಹಾಗೆ, ವಿಚ್ಛೇದನದ ಕ್ರಮದಂತೆ ನ್ಯಾಯಾಲಯಕ್ಕೆ ಹಾಜರಾಗುವ ವೇಳೆ ಚಾಹಲ್ ‘Be your own sugar daddy’ ಎಂಬ ಟಿ-ಶರ್ಟ್ ಧರಿಸಿದ್ದರು. ಅದು ಎಲ್ಲರ ಕುತೂಹಲಕ್ಕೆ ಕಾರಣವಾಗಿತ್ತು. ಈ ಬಗ್ಗೆಯೂ ಮಾತನಾಡಿದ ಅವರು, “ಬೇರೆಯವರಿಂದ ಏನೋ ನಡೆಯಿತು. ಅದಕ್ಕೆ ನಾನು ಅವರಿಗೆ ಈ ಸಂದೇಶವನ್ನು ನೀಡಲು ಬಯಸಿದೆ,” ಎಂದು ಮಾಹಿತಿ ನೀಡಿದರು.
Mumbai,Maharashtra
August 01, 2025 11:42 AM IST