Last Updated:
ಕಾಸರಗೋಡು ವೀರ್ಚಾಲಿನ ಪ್ರಾಧ್ಯಾಪಕ ರತ್ನಾಕರ ಮಲ್ಲಮೂಲೆಯವರ ಬನವಾಸಿ ಮನೆ ಮುಂದೆ ಭತ್ತದ ನಾಟಿ ಕಾರ್ಯಕ್ರಮ, 200 ಕ್ಕೂ ಹೆಚ್ಚು ಜನರ ಭಾಗವಹಿಸುವಿಕೆ, ಪಾರಂಪರಿಕ ಕೃಷಿ ಪರಿಚಯ.
ವ್ಯಕ್ತಿ ಯಾವುದೇ ಹುದ್ದೆಯಲ್ಲಿರಲಿ, ಸಾಮಾಜಿಕ ಸ್ಥಾನಮಾನದಲ್ಲಿರಲಿ, ನೀರು, ಆಹಾರವಿಲ್ಲದೇ ಆತ ಬದುಕಲಾರ. ಭತ್ತದಂತಹ ಆಹಾರ ಬೆಳೆಯ ಬಗ್ಗೆ ಇಂದಿನ ಯುವ ಸಮುದಾಯ ತಳೆದಿರುವ ನಿರ್ಲಕ್ಷ್ಯದಿಂದ ಮುಂದೊಂದು ದಿನ ಸಮಸ್ಯೆಯಾಗಲಿದೆ. ಈ ನಿಟ್ಟಿನಲ್ಲಿ ಯುವ ಬನದಲ್ಲಿ ಕೃಷಿ (Agriculture) ಆಸಕ್ತಿ ಮೂಡಿಸುವ ಕೆಲಸ ಪ್ರೇರಣಾದಾಯಕ ಕಾರ್ಯಕ್ರಮವೊಂದು ಎಲ್ಲರ ಗಮನಸೆಳೆದಿದೆ. ಕಾಸರಗೋಡು (Kasaragodu) ಜಿಲ್ಲೆಯ ವೀರ್ಚಾಲಿನ ಮಾನ್ಯ ಎಂಬಲ್ಲಿರುವ ಪ್ರಾದ್ಯಾಪಕ ರತ್ನಾಕರ ಮಲ್ಲಮೂಲೆಯವರ ಬನವಾಸಿ ಮನೆ ಎದುರಿನ ಅಂಗಳದಲ್ಲಿ ಭತ್ತದ (Paddy) ನಾಟಿ ಮಾಡುವ ಕಂಡ ಕೋರಿ ಎನ್ನುವ ಜಾನಪದ ಕಾರ್ಯಕ್ರಮ (Folk program)ಆಯೋಜಿಸಲ್ಪಟ್ಟಿತ್ತು.
ಮಕ್ಕಳು, ಜನಪ್ರತಿನಿಧಿಗಳು, ಹೆತ್ತವರು, ಶಿಕ್ಷಕರು, ಕೃಷಿ ತಜ್ಞರು, ವೈದ್ಯರು, ಪರಿಸರಪ್ರೇಮಿಗಳು ಹೀಗೆ 200 ಕ್ಕೂ ಮಿಕ್ಕಿ ಜನರು ನಾಟಿ ಸಂಭ್ರಮದಲ್ಲಿ ಭಾಗಿಯಾಗಿದ್ದರು. ಗದ್ದೆಯಲ್ಲಿ ಕೃಷಿ ಜನಪದಕ್ಕೆ ಸಂಬಂಧಿಸಿದ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಜನಪದ ಕೃಷಿ ಕಲಾವಿದರಾದ ಲಕ್ಷ್ಮೀ ಕುಂದ್ಲಾಜೆ ಹಾಗೂ ರಾಧಾ ಮಕ್ಕಾವ ವಿದ್ಯಾರ್ಥಿಗಳನ್ನು ಜತೆ ಸೇರಿಸಿ “ಓಬೇರೆ” ಹಾಡನ್ನು ಹಾಡುತ್ತಾ ನಾಟಿ ಕಾರ್ಯ ನಡೆಸಿದರು.
ಪ್ರಾಧ್ಯಾಪಕಿ ಡಾ.ಆಠಾಲತ ಅವರು ಓಬೇರೆ ಹಾಡುಗಳ ಆಶಯವನ್ನು ತಿಳಿಸಿದರು. ಮಧ್ಯಾಹ್ನ ತನಕ ವಿದ್ಯಾರ್ಥಿಗಳಿಗೆ ಗದ್ದೆ ಬೇಸಾಯದ ಬಗ್ಗೆ ಸುದೀರ್ಘ ಅನುಭವ ಇರುವ ಕೃಷ್ಣ ಮಣಿಯಾಣಿ ಮಾಹಿತಿ ನೀಡಿದರು. ನೇಗಿಲು, ಮುಟ್ಟಾಳೆ ಈ ಮುಂತಾದ ಪಾರಂಪರಿಕ ಕೃಷಿ ಉಪಕರಣಗಳ ಪರಿಚಯವನ್ನು ಮತ್ತು ಅವುಗಳ ಉಪಯೋಗವನ್ನು ತಿಳಿಸಿಕೊಟ್ಟರು.
ವಿವಿಧ ಶಾಲೆಯ ನೂರೈವತ್ತರಷ್ಟು ವಿದ್ಯಾರ್ಥಿಗಳು ಮುಟ್ಟಾಟ ಕಂಬಳ, ಕೆಸರುಗದ್ದೆ ಓಟ, ಹಗ್ಗ ಜಗ್ಗಾಟ, ನಿಧಿ ಹುಡುಕಾಟ, ರಿಲೆ ಸೇರಿದಂತೆ ಮುಂತಾದ ಆಟಗಳನ್ನು ಆಡಿ ಖುಷಿಪಟ್ಟರು. ಕರಾವಳಿ ಜನಪದ ಆಟಗಳನ್ನು ವಿದ್ಯಾರ್ಥಿಗಳಿಗಾಗಿ ಏರ್ಪಡಿಸಲಾಗಿತ್ತು. ವಿದ್ಯಾರ್ಥಿಗಳ ಜೊತೆಗೆ ಮಕ್ಕಳ ಪಾಲಕರು, ಶಿಕ್ಷಕರು ಸೇರಿದಂತೆ ಗಣ್ಯರೆಲ್ಲಾ ಕೆಸರು ಗದ್ದೆಯಲ್ಲಿ ಹಾಡಿ ಕುಣಿದಾಡಿದರು. ಮಕ್ಕಳಲ್ಲಿ ಭತ್ತದ ಗದ್ದೆಯ ಮಹತ್ವ ಮತ್ತು ಅದರ ಜೊತೆ ಬೆಳೆದುಕೊಂಡು ಬಂದಿರುವ ಸಂಸ್ಕೃತಿ, ಸಂಪ್ರದಾಯವನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ಮಾಡಿದ ಈ ಕಾರ್ಯಕ್ರಮಕ್ಕೆ ಸಾರ್ವಜನಿಕ ವಲಯದಿಂದಲೂ ಭಾರೀ ಮೆಚ್ಚುಗೆ ವ್ಯಕ್ತವಾಯಿತು.
Dakshina Kannada,Karnataka
July 01, 2025 4:45 PM IST