INDW vs ENGW: 42 ಎಸೆತಕ್ಕೆ 49 ರನ್​ ಹೊಡೆಯಲಾಗದೇ ಸೋತ ಭಾರತ ಮಹಿಳಾ ತಂಡ! ಬೇಗ ನಿವೃತ್ತಿಯಾಗಿ ಆ ಪ್ಲೇಯರ್​ಗೆ ಫ್ಯಾನ್ಸ್ ಆಗ್ರಹ

INDW vs ENGW: 42 ಎಸೆತಕ್ಕೆ 49 ರನ್​ ಹೊಡೆಯಲಾಗದೇ ಸೋತ ಭಾರತ ಮಹಿಳಾ ತಂಡ! ಬೇಗ ನಿವೃತ್ತಿಯಾಗಿ ಆ ಪ್ಲೇಯರ್​ಗೆ ಫ್ಯಾನ್ಸ್ ಆಗ್ರಹ
ದಾಖಲೆ ಮಿಸ್ ಮಾಡಿಕೊಂಡ ಭಾರತ

ಈಗಾಗಲೇ ಇಂಗ್ಲೆಂಡ್​ ನೆಲದಲ್ಲಿ ಮೊದಲ ಬಾರಿಗೆ ಸತತ 2 ಪಂದ್ಯಗಳನ್ನು ಗೆದ್ದು ದಾಖಲೆ ಬರೆದಿರುವ ತಂಡ 3ನೇ ಪಂದ್ಯ ಗೆದ್ದಿದ್ದರೆ ಸಣಿ ತನ್ನದಾಗಿಸಿಕೊಳ್ಳುತ್ತಿದ್ದರು. ಸುಲಭವಾಗಿ ಗೆಲ್ಲಬಹುದಾದ ಪಂದ್ಯವನ್ನ ಹರ್ಮನ್ ಪ್ರೀತ್ ಬಳಗೆ ಕೆಟ್ಟ ಹೊಡೆತಕ್ಕೆ ಕೈಹಾಕಿ, ನಿರ್ಲಕ್ಷ್ಯದ ಬ್ಯಾಟಿಂಗ್ ಮಾಡುವ ಮೂಲಕ ದಿಢೀರ್ ಕುಸಿತಕಂಡು ಸೋಲೊಪ್ಪಿಕೊಂಡಿತು. ಈಗ ಸರಣಿಯನ್ನು ಗೆಲ್ಲಲು ಕನಿಷ್ಠ ಮುಂದಿನ ಪಂದ್ಯದವರೆಗೆ ಕಾಯಬೇಕಾಗುತ್ತದೆ. ಭಾರತ vs ಇಂಗ್ಲೆಂಡ್ ನಾಲ್ಕನೇ ಟಿ20 ಅಂತರರಾಷ್ಟ್ರೀಯ ಪಂದ್ಯವು ಜುಲೈ 9 ರಂದು ಮ್ಯಾಂಚೆಸ್ಟರ್‌ನ ಎಮಿರೇಟ್ಸ್ ಓಲ್ಡ್ ಟ್ರಾಫರ್ಡ್‌ನಲ್ಲಿ ಭಾರತೀಯ ಕಾಲಮಾನ ರಾತ್ರಿ 11 ಗಂಟೆಗೆ ನಡೆಯಲಿದೆ.

ಮೊದಲ ವಿಕೆಟ್​ಗೆ 85 ರನ್​ಗಳ ಜೊತೆಯಾಟ

ಮೂರನೇ ಟಿ20 ಅಂತಾರಾಷ್ಟ್ರೀಯ ಪಂದ್ಯವನ್ನು ಗೆಲ್ಲಲು ಭಾರತಕ್ಕೆ 172 ರನ್‌ಗಳ ಗುರಿ ಪಡೆದಿತ್ತು. ಗುರಿಯನ್ನು ಬೆನ್ನಟ್ಟಿದ ಭಾರತ ಪವರ್‌ಪ್ಲೇನಲ್ಲಿ 61 ರನ್ ಗಳಿಸಿತು. ಎರಡನೇ ಓವರ್‌ನಲ್ಲಿ ಚೇತರಿಕೆ ಪಡೆದ ನಂತರ, ಶಫಾಲಿ 25 ಎಸೆತಗಳಲ್ಲಿ 7 ಬೌಂಡರಿ ಹಾಗೂ 2 ಸಿಕ್ಸರ್​ಗಳ ಸಹಿತ 47 ರನ್ ಬಾರಿಸಿದರು 9 ನೇ ಓವರ್‌ನಲ್ಲಿ ಎಕ್ಲೆಸ್ಟೋನ್‌ಗೆ ಬಲಿಯಾದರು. ಸ್ಮೃತಿ ಮಂಧಾನ 38 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು.

ಕೈಕೊಟ್ಟ ಮಧ್ಯಮ ಕ್ರಮಾಂಕ

ಸ್ಮೃತಿ ಮಂಧಾನ ಕ್ರೀಸ್‌ನಲ್ಲಿ ಇರುವವರೆಗೂ, ಗೆಲ್ಲುವ ಸಾಧ್ಯತೆ ಶೇ.100ರಷ್ಟಿತ್ತು. ಒಂದು ಹಂತದಲ್ಲಿ 42 ಎಸೆತಗಳಲ್ಲಿ ಕೇವಲ 49 ರನ್​ಗಳ ಅಗತ್ಯವಿತ್ತು. ಮಂಧಾನ 39 ಎಸೆತಗಳಲ್ಲಿ 52, ಜೆಮೀಮಾ ರೋಡ್ರಿಗ್ಸ್ 14 ಎಸೆತಗಳಲ್ಲಿ 20 ರನ್​ಗಳಿಸಿ ಅಜೇಯರಾಗಿ ಉಳಿದಿದ್ದರು. ಆದರೆ 14ನೇ ಓವರ್​​ನಲ್ಲಿ ರೋಡ್ರಿಗ್ಸ್ ಔಟ್ ಆಗುತ್ತಿದ್ದಂತೆ ಭಾರತದ ರನ್​ಗತಿಗೆ ಕಡಿವಾಣ ಬಿದ್ದಿತು. 14ನೇ ಓವರ್​​ನಲ್ಲಿ 3, 15ನೇ ಓವರ್​​ನಲ್ಲಿ 5, 16ನೇ ಓವರ್​​ನಲ್ಲಿ 6 ರನ್​ ಮಾತ್ರಗಳಿಸಿತು. ಸ್ವತಃ ಇನ್​ಫಾರ್ಮ್​ ಮಂಧಾನ ಸತತ 6 ಡಾಟ್ ಬಾಲ್ ಮಾಡಿದರು.

ಫಿನಿಶ್ ಮಾಡದ ಕೌರ್

16 ನೇ ಓವರ್‌ನ ಮೂರನೇ ಎಸೆತದಲ್ಲಿ ಸ್ಮೃತಿ ಮಂಧಾನ ಪೆವಿಲಿಯನ್‌ಗೆ ಮರಳಿದಾಗ, ತಂಡದ ಸ್ಕೋರ್ 3 ವಿಕೆಟ್‌ಗಳಿಗೆ 131 ರನ್‌ಗಳಾಗಿತ್ತು. ಭಾರತ ಮುಂದಿನ 27 ಎಸೆತಗಳಲ್ಲಿ 41 ರನ್ ಗಳಿಸಬೇಕಿತ್ತು. ಆದರೆ ತಂಡದ ಯಾವೊಬ್ಬ ಬ್ಯಾಟರ್ ಕೂಡ ಗೆಲುವಿನ ಉತ್ಸಾಹದಲ್ಲಿ ಬ್ಯಾಟಿಂಗ್ ಮಾಡಲಿಲ್ಲ. ಹರ್ಮನ್ ಪ್ರೀತ್ ಕೌರ್ ಕ್ರೀಸ್​​ನಲ್ಲಿದ್ದರು, ಕೊನೆಯ ಓವರ್​​ನಲ್ಲಿ 12 ರನ್​ಗಳಿಸಲು ತಂಡ ವಿಫಲವಾಯಿತು. ಕೌರ್ 17 ಎಸೆತಗಳಲ್ಲಿ 2 ಬೌಂಡರಿ ಸಹಿತ ಕೇವಲ 23 ರನ್​ಗಳಿಸಿದರು. ಸ್ಫೋಟಕ ಬ್ಯಾಟಿಂಗ್​​ಗೆ ಹೆಸರಾಗಿದ್ದ ರಿಚಾ ಘೋಷ್ ಕೂಡ 10 ಎಸೆತಗಳಲ್ಲಿ ಕೇವಲ 7 ರನ್​ಗಳಿಸಲಷ್ಟೆ ಶಕ್ತರಾದರು. ಅಮನ್​ಜೋತ್ ಕೌರ್ 4 ಎಸೆತಗಳಲ್ಲಿ ಅಜೇಯ 7 ರನ್​ಗಳಿಸಿದರು.

ಇಂಗ್ಲೆಂಡ್ ಪರ ಲಾರೆನ್ ಫಿಲರ್ 30ಕ್ಕೆ2, ಸೋಫಿಯಾ ಎಕ್ಲೆನ್ಸ್​ಸ್ಟೋನ್ 24ಕ್ಕೆ1, ಇಸಬೆಲ್ ವಾಂಗ್ 36ಕ್ಕೆ1 ವಿಕೆಟ್ ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.

ಡಂಕ್ಲಿ-ವ್ಯಾಟ್ ಭರ್ಜರಿ ಜೊತೆಯಾಟ

ಇದಕ್ಕೂ ಮುನ್ನ ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್​ಗೆ ಸೋಫಿಯಾ ಡಂಕ್ಲಿ (75) ಮತ್ತು ಡ್ಯಾನಿ ವ್ಯಾಟ್-ಹಾಡ್ಜ್ (66) ಮೊದಲ ವಿಕೆಟ್​​ಗೆ 137 ರನ್‌ಗಳ ಭರ್ಜರಿ ಜೊತೆಯಾಟ ನೀಡಿದರು. ಡಂಕ್ಲಿ53 ಎಸೆತಗಳಲ್ಲಿ 7 ಬೌಂಡರಿ, 1 ಸಿಕ್ಸರ್ ಸಹಿತ 75, ವ್ಯಾಟ್ 42 ಎಸೆತಗಳಲ್ಲಿ 7 ಬೌಂಡರಿ, 3 ಸಿಕ್ಸರ್​ಗಳೊಂದಿಗೆ 66 ರನ್​ಗಳಿಸಿದರು. ಈ ಜೋಡಿ 15 ಓವರ್​ಗಳಲ್ಲಿ 137 ರನ್​ ಕಲೆಯಾಕಿ ದೊಡ್ಡ ಮೊತ್ತದ ಗುರಿಯ ಭರವಸೆ ಮೂಡಿಸಿದ್ದರು. ಆದರೆ ಡಂಕ್ಲಿ ವಿಕೆಟ್ ಬೀಳುತ್ತಿದ್ದಂತೆ ದಿಡೀರ್ ಕುಸಿತ ಕಂಡ ತಂಡ ಮುಂದಿನ 5 ಓವರ್​ಗಳಲ್ಲಿ ಕೇವಲ 31 ರನ್​ ಗಳಿಸಿ 9 ವಿಕೆಟ್ ಕಳೆದುಕೊಂಡಿತು. ಒಟ್ಟಾರೆ 20 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 171 ರನ್ ಗಳಿಸಿತು.

ಭಾರತದ ಪರ ಅರುಂಧತಿ ರೆಡ್ಡಿ 32ಕ್ಕೆ3, ದೀಪ್ತಿ ಶರ್ಮಾ 27ಕ್ಕೆ 3, ಚರಣಿ 43ಕ್ಕೆ2, ರಾಧಾ ಯಾದವ್ 15ಕ್ಕೆ1 ವಿಕೆಟ್ ಪಡೆದು ಮಿಂಚಿದರು.

ಹರ್ಮನ್ ಪ್ರೀತ್ ಕೌರ್ ವಿರುದ್ದ ಕಿಡಿ

14ನೇ ಓವರ್​​ನಲ್ಲಿ ತಂಡಕ್ಕೆ 42 ಎಸೆತಗಳಿಗೆ 49 ರನ್​ಗಳ ಅಗತ್ಯವಿದ್ದಾಗ ಕ್ರೀಸ್​ಗೆ ಬಂದ ಅನುಭವಿ ಹರ್ಮನ್ ಪ್ರೀತ್ ಕೌರ್​ 7 ಓವರ್​ಗಳ ಕಾಲ ಬ್ಯಾಟಿಂಗ್ ಮಾಡಿದರೂ ತಂಡವನ್ನ ಗೆಲುವಿನ ಗಡಿ ದಾಟಿಸಲು ವಿಫಲರಾದರು. ಈ ರೀತಿಯ ಕೆಟ್ಟ ಪ್ರದರ್ಶನ ಅವರಿಂದ ಹಿಂದೆಯೂ ಬಂದಿರುವುದರಿಂದ ಭಾರತೀಯ ಅಭಿಮಾನಿಗಳು ಬೇಗ ನಿವೃತ್ತಿಯಾಗಿ ಎಂದು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.