Last Updated:
ನಾಚಿಕೆ ಮುಳ್ಳು ಗಿಡವು ಅಡಿಕೆ ತೋಟ ಮತ್ತು ರಸ್ತೆ ಬದಿಗಳಲ್ಲಿ ಕಂಡುಬರುವ ಸಸ್ಯ. ಇದು ಆಯುರ್ವೇದದಲ್ಲಿ ದಿವ್ಯೌಷಧಿ. ಅತಿಸಾರ, ಸ್ತ್ರೀಯರ ಮುಟ್ಟು ವೈಪರಿತ್ಯ, ಅತಿಸ್ರಾವ, ಚೇಳುಕಡಿತ, ರಕ್ತ ಸಹಿತ ಮೂಲವ್ಯಾಧಿಗೆ ಪರಿಣಾಮಕಾರಿ.
ನಾಚಿಕೆ ಮುಳ್ಳು, ಮುಟ್ಟಿದರೆ ಮುನಿ (Touch Me Not) ಎನ್ನುವ ಹೆಸರಿನಿಂದ ಕರೆಯುವ ಗಿಡ (Plant) ಹೆಚ್ಚಾಗಿ ಅಡಿಕೆ ತೋಟ ಮತ್ತು ರಸ್ತೆ (Road) ಬದಿಗಳಲ್ಲಿ ಕಳೆಯಾಗಿ ಹರಡಿರುವ ಒಂದು ಸಸ್ಯ. ಗಿಡದ ತುಂಬಾ ಮುಳ್ಳು ಹರಡಿಕೊಂಡಿರುವ ಈ ಗಿಡದ ಮುಳ್ಳು ಚುಚ್ಚಿದರೆ ಸುಲಭದಲ್ಲಿ ಹೊರಕ್ಕೆ ಬಾರದು. ಹುಲಿ ಉಗುರಿನಂತೆ ಬಾಗಿಕೊಂಡಿರುವ ಈ ಮುಳ್ಳುಗಳು ಚುಚ್ಚಿದರೆ ಯಮಯಾತನೆಯ ರೀತಿ ಭಾರೀ ನೋವನ್ನೂ ನೀಡುತ್ತವೆ. ಮುಟ್ಟಿದ ಕೂಡಲೇ ಮುದುಡುವ ಇಂಥ ಗಿಡಗಳು ಪ್ರಕೃತಿಯ ಗರಿಮೆ. ಈ ಗಿಡದ ಬಗ್ಗೆ ತಿಳಿಯದವರು ಇದನ್ನೊಂದು ಕಳೆಯಾಗಿ ಕಂಡರೆ ಆಯುರ್ವೇದ ಪಂಡಿತರಿಗೆ ಇದೊಂದು ದಿವ್ಯೌಷಧ (Medicine). ದನಗಳು ಇದನ್ನು ಹೆಚ್ಚು ತಿನ್ನದಿದ್ದರೂ ಆಡುಗಳಿಗೆ ಇದು ಬಹಳ ಇಷ್ಟ.
ಯಾಕಾಗಿ ಈ ಗಿಡ ಮುಟ್ಟಿದರೆ ಮುದುಡಿಕೊಳ್ಳುತ್ತದೆ ಎನ್ನುವುದಕ್ಕೆ ಹಲವು ಕಾರಣಗಳಿವೆ. ಅತೀ ಹೆಚ್ಚಿನ ಪ್ರಮಾಣದ ಸೂಕ್ಷ ಸಂವೇದನೆಯು ಈ ಗಿಡಕ್ಕಿದೆ. ಎಲೆಯ ಬುಡದಲ್ಲಿ ಹಾಗು ಪತ್ರರಂಧ್ರದ ಬುಡದಲ್ಲಿರುವ ವಿಶೇಷ ಜೀವಕೋಶಗಳ ಪ್ರಕ್ರಿಯೆಯಿಂದ ಈ ಮುಚ್ಚುವ ಕ್ರಿಯೆ ನಡೆಯುತ್ತದೆ. ಗಿಡದ ಯಾವ ಭಾಗವನ್ನು ಮುಟ್ಟುತ್ತೇವೆಯೋ ಆ ಭಾಗದ ನೀರು ಗಿಡದೊಳಗೇ ಹೊರ ಹರಿಸಲ್ಪಟ್ಟು ಆ ಜಾಗ ಬರಿದಾದಾಗ ಕೂಡಲೇ ಎಲೆಗಳು ಮುದುಡಿಕೊಳ್ಳುತ್ತದೆ ಅಥವಾ ಮಡಚಿಕೊಳ್ಳುತ್ತದೆ.
ಮೂಲತ ಈ ಗಿಡ ಬ್ರೆಜಿಲ್ ದೇಶಕ್ಕೆ ಸೇರಿರುವ ಸಸ್ಯ ಪ್ರಭೇಧ. ಆದರೆ ಭಾರತದ ಉದ್ದಗಲಕ್ಕೂ ಈ ಸಸಿ ಹರಡಿಕೊಂಡಿದೆ. ಅತಿಸಾರ, ಸ್ತ್ರೀಯರ ಮುಟ್ಟು ವೈಪರಿತ್ಯ, ಅತಿಸ್ರಾವ, ಚೇಳುಕಡಿತ, ರಕ್ತ ಸಹಿತ ಮೂಲವ್ಯಾಧಿ, ಸೊಂಟನೋವು ಇವುಗಳಿಗೆ ಪರಿಣಾಮಕಾರಿ ಔಷಧಿ ಇದು. ಕಾಮವರ್ಧಕ ಔಷಧಿಯಾಗಿಯೂ ಉಪಯೋಗಿಸಬಹುದು. ಅಧಿಕ ಮಾಸಿಕ ರಕ್ತಸ್ರಾವ, ಮುಟ್ಟಾಗುವಾಗ ಅಧಿಕ ರಕ್ತ ಸ್ರಾವ ಅಥವಾ ತಿಂಗಳಲ್ಲಿ 2-3 ಸಲ ಋತು ಸ್ರಾವ ಆಗುವವರು ಇದರ ಬೇರು ಸಹಿತ ಗಿಡವನ್ನು ಅರೆದು ರಸ ತೆಗೆದು ದಿನಕ್ಕೊಂದು ಸಲ 1 ವಾರ ಕುಡಿಯಬೇಕು ಅಥವಾ ಕಷಾಯ ಮಾಡಿ ದಿನಕ್ಕೆರಡು ಸಲ ಕುಡಿದರೆ ಅಧಿಕ ರಕ್ತಸ್ರಾವ ನಿಲ್ಲುವುದು.
ಗುದದ್ವಾರದಿಂದ ಮಲವಿಸರ್ಜಿಸುವಾಗ ಮಾಂಸದ ಅಂಕುರ ಹೊರಬಂದು ನೋವು ಉಂಟಾಗುತ್ತದೆ. ಕೆಲವೊಮ್ಮೆ ರಕ್ತಸ್ರಾವವೂ ಆಗುತ್ತದೆ. ನಾಚಿಕೆ ಮುಳ್ಳನ್ನು ಬೇರು ಸಹಿತ ತುಂಡುಮಾಡಿ ಕಷಾಯ ಮಾಡಿ ಒಂದು ವಾರ ಕುಡಿಯುವ ಮೂಲಕ ರಕ್ತಸ್ರಾವ ಹಾಗು ನೋವು ಕಡಿಮೆಯಾಗುವುದು. ಎಲೆಯನ್ನು ಒಣಗಿಸಿ ಪುಡಿ ಮಾಡಿಟ್ಟುಕೊಂಡು ಹಾಲಿನೊಂದಿಗೆ ಸೇರಿಸಿ ಕುಡಿದರೂ ಪ್ರಯೋಜನವಾಗುವುದು. ಇಷ್ಟೆಲ್ಲಾ ಔಷಧೀಯ ಗುಣಗಳನ್ನು ಹೊಂದಿರುವ ಈ ನಾಚಿಕೆ ಮುಳ್ಳಿನ ಮಹತ್ವ ತಿಳಿದವರು ವಿರಳ.
(ಸೂಚನೆ: ಇಲ್ಲಿರುವ ಎಲ್ಲಾ ಮಾಹಿತಿಯೂ ಜಾಲತಾಣದಲ್ಲಿಯೇ ಲಭ್ಯ ವಿರುವ ಮಾಹಿತಿಯಾಗಿದ್ದು, ನ್ಯೂಸ್ 18 ಕನ್ನಡ ಮತ್ತು ಲೋಕಲ್ 18 ಕನ್ನಡ ಯಾವುದೇ ರೀತಿ ಇದನ್ನು ಪರೀಕ್ಷಿಸಿರುವುದಿಲ್ಲ. ವಿಧಾನ ಅನುಸರಿಸುವ ಮುನ್ನ ಸೂಕ್ತ ತಜ್ಞರಿಂದ ಮಾಹಿತಿ ಪಡೆಯಿರಿ)
Dakshina Kannada,Karnataka
July 05, 2025 6:04 PM IST