IPL 2025: ಹರಾಜಿನಲ್ಲಿ ಅನ್​​ಸೋಲ್ಡ್​ ಆಗಿದ್ದ ಕೇನ್​ ವಿಲಿಯಮ್ಸನ್ ಹೊಸ ರೂಪದಲ್ಲಿ​​ ಐಪಿಎಲ್​​ಗೆ ರೀ ಎಂಟ್ರಿ! | Kane Williamson Set for IPL Return But Not as a Player Commentator Role Awaits

IPL 2025: ಹರಾಜಿನಲ್ಲಿ ಅನ್​​ಸೋಲ್ಡ್​ ಆಗಿದ್ದ ಕೇನ್​ ವಿಲಿಯಮ್ಸನ್ ಹೊಸ ರೂಪದಲ್ಲಿ​​ ಐಪಿಎಲ್​​ಗೆ ರೀ ಎಂಟ್ರಿ! | Kane Williamson Set for IPL Return But Not as a Player Commentator Role Awaits

Last Updated:

ಅನುಭವಿ ಬ್ಯಾಟ್ಸ್‌ಮನ್ ಕೇನ್ ವಿಲಿಯಮ್ಸನ್ ಐಪಿಎಲ್ 2025 ರಲ್ಲಿ ಅಚ್ಚರಿಯ ಪ್ರವೇಶ ಮಾಡಿದ್ದಾರೆ. ಐಪಿಎಲ್ 2025 ಮೆಗಾ ಹರಾಜಿನಲ್ಲಿ ವಿಲಿಯಮ್ಸನ್ ಅವರನ್ನು ಯಾವುದೇ ತಂಡ ಖರೀದಿಸಲಿಲ್ಲ. ಆದರೆ ಈ ನ್ಯೂಜಿಲೆಂಡ್ ಸೂಪರ್‌ಸ್ಟಾರ್ ಮುಂಬರುವ ಐಪಿಎಲ್ ಋತುವಿನಲ್ಲಿ ಹೊಸ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಕೇನ್ ವಿಲಿಯಮ್ಸನ್ಕೇನ್ ವಿಲಿಯಮ್ಸನ್
ಕೇನ್ ವಿಲಿಯಮ್ಸನ್

ಐಪಿಎಲ್ 2025ರ (IPL 2025) 18ನೇ ಸೀಸನ್ ಮಾರ್ಚ್ 22, ಶನಿವಾರದಿಂದ ಆರಂಭವಾಗಲಿದ್ದು, ಅನುಭವಿ ಕಿವೀಸ್ ಬ್ಯಾಟ್ಸ್‌ಮನ್ ಕೇನ್ ವಿಲಿಯಮ್ಸನ್ (Kane Williamson) ಈ ಬಾರಿ ಅಚ್ಚರಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಐಪಿಎಲ್ 2025ರ ಮೆಗಾ ಹರಾಜಿನಲ್ಲಿ ಯಾವ ತಂಡವೂ ವಿಲಿಯಮ್ಸನ್‌ರನ್ನು ಖರೀದಿಸಿರಲಿಲ್ಲ. ಈ ನ್ಯೂಜಿಲೆಂಡ್ ಸೂಪರ್‌ಸ್ಟಾರ್ ಮೈದಾನದಲ್ಲಿ ಬ್ಯಾಟ್ ಬೀಸದೇ ಕಾಮೆಂಟೇಟರ್ ಆಗಿ ಭಾಗವಹಿಸಲಿದ್ದಾರೆ. ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ (KKR) ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ಮುಖಾಮುಖಿಯಾಗಲಿವೆ.

ಐಪಿಎಲ್ ಕಾಮೆಂಟೇಟರ್ ಪಟ್ಟಿ

ಐಪಿಎಲ್ ಪ್ರಸಾರಕರಾದ ಸ್ಟಾರ್ ಸ್ಪೋರ್ಟ್ಸ್ ತನ್ನ ಕಾಮೆಂಟರಿ ತಂಡವನ್ನು ಪ್ರಕಟಿಸಿದ್ದು, ಇದರಲ್ಲಿ ಕೇನ್ ವಿಲಿಯಮ್ಸನ್ ಜೊತೆಗೆ ಸುರೇಶ್ ರೈನಾ, ಶಿಖರ್ ಧವನ್, ವೀರೇಂದ್ರ ಸೆಹ್ವಾಗ್, ಹರ್ಭಜನ್ ಸಿಂಗ್, ಅನಿಲ್ ಕುಂಬ್ಳೆ, ಎಬಿ ಡಿವಿಲಿಯರ್ಸ್, ಆರನ್ ಫಿಂಚ್, ರಾಬಿನ್ ಉತ್ತಪ್ಪ, ಅಂಬಟಿ ರಾಯುಡು, ಮೊಹಮ್ಮದ್ ಕೈಫ್, ಪಿಯೂಷ್ ಚಾವ್ಲಾ, ಸುನಿಲ್ ಗವಾಸ್ಕರ್, ನವಜೋತ್ ಸಿಂಗ್ ಸಿಧು, ಆಕಾಶ್ ಚೋಪ್ರಾ, ಸಂಜಯ್ ಮಂಜ್ರೇಕರ್, ಮೈಕೆಲ್ ಕ್ಲಾರ್ಕ್, ಮ್ಯಾಥ್ಯೂ ಹೇಡನ್, ಮಾರ್ಕ್ ಬೌಚರ್, ಆರ್‌ಪಿ ಸಿಂಗ್, ಶೇನ್ ವ್ಯಾಟ್ಸನ್, ಸಂಜಯ್ ಬಂಗಾರ್, ವರುಣ್ ಆರನ್, ಪ್ರಗ್ಯಾನ್ ಓಜಾ ಮತ್ತು ಅಜಯ್ ಜಡೇಜಾ ಸೇರಿದ್ದಾರೆ. ಈ ತಂಡವು ಐಪಿಎಲ್ ಪ್ರೇಕ್ಷಕರಿಗೆ ವಿಶೇಷ ಅನುಭವ ನೀಡಲಿದೆ.

2 ಬಾರಿ ಟ್ರೋಫಿ ಗೆದ್ದಿರುವ ಕೇನ್

ವಿಲಿಯಮ್ಸನ್ ಐಪಿಎಲ್‌ನಲ್ಲಿ ಎರಡು ಬಾರಿ ವಿಜೇತ ತಂಡದ ಭಾಗವಾಗಿದ್ದಾರೆ. 2016ರಲ್ಲಿ ಡೇವಿಡ್ ವಾರ್ನರ್ ನಾಯಕತ್ವದ ಸನ್‌ರೈಸರ್ಸ್ ಹೈದರಾಬಾದ್ (SRH) ಚಾಂಪಿಯನ್ ಆಗಿತ್ತು. 2022ರಲ್ಲಿ ಗುಜರಾತ್ ಟೈಟಾನ್ಸ್ (GT) ಪ್ರಶಸ್ತಿ ಗೆದ್ದಾಗಲೂ ಅವರು ತಂಡದ ಸದಸ್ಯರಾಗಿದ್ದರು. ಆದರೆ, ಈ ಬಾರಿ ಅವರು ಬ್ಯಾಟ್‌ಗಿಂತ ಮೈಕ್ ಹಿಡಿಯಲಿದ್ದಾರೆ. 34 ವರ್ಷದ ಈ ಬಲಗೈ ಬ್ಯಾಟ್ಸ್‌ಮನ್ ತಮ್ಮ ಅಂತರರಾಷ್ಟ್ರೀಯ ವೃತ್ತಿಜೀವನದಲ್ಲಿ 105 ಟೆಸ್ಟ್ ಪಂದ್ಯಗಳಲ್ಲಿ 33 ಶತಕಗಳೊಂದಿಗೆ 9,276 ರನ್, 173 ಏಕದಿನ ಪಂದ್ಯಗಳಲ್ಲಿ 15 ಶತಕಗಳೊಂದಿಗೆ 7,235 ರನ್ ಮತ್ತು 93 ಟಿ20 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ 2,575 ರನ್ ಗಳಿಸಿದ್ದಾರೆ.

ಇದನ್ನೂ ಓದಿ: ಬೋನಸ್ ಪಾಯಿಂಟ್ ಪರಿಚಯಿಸಲು ಐಸಿಸಿ ಪ್ಲಾನ್! ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಇನ್ಮೇಲೆ ಮತ್ತಷ್ಟು ರೋಚಕ

ಉದ್ಘಾಟನಾ ಸಮಾರಂಭದಲ್ಲಿ ಸೆಲೆಬ್ರೆಟಿಗಳು

ಐಪಿಎಲ್ ಉದ್ಘಾಟನಾ ಸಮಾರಂಭವು ಗಮನಾರ್ಹವಾಗಿದ್ದು, ಗಾಯಕಿ ಶ್ರೇಯಾ ಘೋಷಾಲ್, ಪಂಜಾಬಿ ಗಾಯಕ ಕರಣ್ ಅಹುಜಾ ಮತ್ತು ಬಾಲಿವುಡ್ ನಟಿ ದಿಶಾ ಪಟಾನಿ ಪ್ರದರ್ಶನ ನೀಡಲಿದ್ದಾರೆ. ಈ ತಾರೆಯರು ಈಡನ್ ಗಾರ್ಡನ್ಸ್‌ನಲ್ಲಿ ಉತ್ಸಾಹ ಹೆಚ್ಚಿಸಲಿದ್ದಾರೆ. ವಿಲಿಯಮ್ಸನ್‌ರಂತಹ ಆಟಗಾರರ ಸೇರ್ಪಡೆಯಿಂದ ಕಾಮೆಂಟರಿ ಬಾಕ್ಸ್ ಇನ್ನಷ್ಟು ಆಕರ್ಷಕವಾಗಲಿದ್ದು, ಐಪಿಎಲ್ 2025ರ ಮೊದಲ ಪಂದ್ಯದಲ್ಲಿ ಕೆಕೆಆರ್ ಮತ್ತು ಆರ್‌ಸಿಬಿ ನಡುವಿನ ಕಾದಾಟಕ್ಕೆ ಅವರ ವಿಶ್ಲೇಷಣೆ ಹೊಸ ಆಯಾಮ ನೀಡಲಿದೆ ಎಂದು ಕ್ರಿಕೆಟ್ ಪ್ರೇಮಿಗಳು ಭಾವಿಸಿದ್ದಾರೆ.