ಆಸ್ಟ್ರೇಲಿಯಾದ ವೇಗದ ಬೌಲರ್ ಮಿಚೆಲ್ ಸ್ಟಾರ್ಕ್ ಈ ಪಂದ್ಯದಲ್ಲಿ ಐತಿಹಾಸಿಕ ಪ್ರದರ್ಶನ ನೀಡಿದರು. ಕೇವಲ 15 ಎಸೆತಗಳಲ್ಲಿ ಐದು ವಿಕೆಟ್‌ಗಳನ್ನು ಪಡೆಯುವ ಮೂಲಕ ಸ್ಟಾರ್ಕ್, ಟೆಸ್ಟ್ ಕ್ರಿಕೆಟ್‌ನಲ್ಲಿ ಕನಿಷ್ಠ ಎಸೆತಗಳಲ್ಲಿ ಐದು ವಿಕೆಟ್ ಪಡೆದ ದಾಖಲೆಯನ್ನು ನಿರ್ಮಿಸಿದರು. ಇನ್ನೊಂದೆಡೆ, ಸ್ಕಾಟ್ ಬೋಲ್ಯಾಂಡ್ ಪಿಂಕ್ ಬಾಲ್ ಟೆಸ್ಟ್‌ನಲ್ಲಿ ಹ್ಯಾಟ್ರಿಕ್ ಸಾಧನೆ ಮಾಡಿದ ವಿಶ್ವದ ಮೊದಲ ಬೌಲರ್ ಎನಿಸಿಕೊಂಡರು. ವೆಸ್ಟ್ ಇಂಡೀಸ್‌ನ ಏಳು ಬ್ಯಾಟ್ಸ್‌ಮನ್‌ಗಳು ಒಂದೇ ರನ್ ಗಳಿಸದೆ ಪೆವಿಲಿಯನ್‌ಗೆ ಮರಳಿ ಹೀನಾಯ ಸೋಲಿಗೆ ಕಾರಣರಾದರು.
ವೆಸ್ಟ್ ಇಂಡೀಸ್ ತಂಡದ ನಾಯಕ ರೋಸ್ಟನ್ ಚೇಸ್ ಈ ಮುಜುಗರದ ಸೋಲಿನ ಬಗ್ಗೆ ತೀವ್ರ ನಿರಾಶೆ ವ್ಯಕ್ತಪಡಿಸಿದ್ದಾರೆ. “30 ರನ್‌ಗಿಂತ ಕಡಿಮೆ ಮೊತ್ತಕ್ಕೆ ಆಲೌಟ್ ಆಗುವುದು ತುಂಬಾ ಮುಜುಗರದ ಸಂಗತಿ. ಸರಣಿಯಾದ್ಯಂತ ನಮ್ಮ ಬ್ಯಾಟಿಂಗ್ ಕಳಪೆಯಾಗಿತ್ತು, ಈ ಇನ್ನಿಂಗ್ಸ್ ಇನ್ನಷ್ಟು ನಿರಾಶಾದಾಯಕವಾಗಿದೆ,” ಎಂದು ಅವರು ಹೇಳಿದರು. ವಿಕೆಟ್ ಬ್ಯಾಟಿಂಗ್‌ಗೆ ಉತ್ತಮವಾಗಿತ್ತು, ನಮಗೆ 204 ರನ್‌ಗಳ ಗುರಿಯನ್ನು ಸಾಧಿಸಲು ಸಾಧ್ಯವಿತ್ತು . ಚೆಂಡು ಯಾದೃಚ್ಛಿಕವಾಗಿ ಪುಟಿಯುತ್ತಿರಲಿಲ್ಲ. ಆದರೆ, ನಾವು ರನ್ ಗಳಿಸಲು ವಿಫಲರಾದೆವು,” ಎಂದು ಅವರು ವಿಷಾದಿಸಿದರು.
ಈ ಸೋಲು ವೆಸ್ಟ್ ಇಂಡೀಸ್ ಕ್ರಿಕೆಟ್‌ಗೆ ಆಘಾತಕಾರಿಯಾಗಿದ್ದು, ತಂಡದ ಬ್ಯಾಟಿಂಗ್ ದೌರ್ಬಲ್ಯವನ್ನು ಮತ್ತೊಮ್ಮೆ ಬಯಲಿಗೆಳೆದಿದೆ. ಆಸ್ಟ್ರೇಲಿಯಾದ ಪ್ರಭಾವಿ ಬೌಲಿಂಗ್ ಮತ್ತು ವೆಸ್ಟ್ ಇಂಡೀಸ್‌ನ ಕಳಪೆ ಬ್ಯಾಟಿಂಗ್ ಪ್ರದರ್ಶನದಿಂದ ಈ ಪಂದ್ಯವು ಕ್ರಿಕೆಟ್ ಇತಿಹಾಸದಲ್ಲಿ ಮರೆಯಲಾಗದ ಘಟನೆಯಾಗಿ ಉಳಿಯಲಿದೆ.
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ತಂಡ 225ಕ್ಕೆ ಆಲೌಟ್ ಆದರೆ, ವೆಸ್ಟ್ ಇಂಡೀಸ್ ಮೊದಲ ಇನ್ನಿಂಗ್ಸ್‌ನಲ್ಲಿ 143ಕ್ಕೆ ಆಲೌಟ್ ಆಗಿತ್ತು. ಇತ್ತ ಆಸ್ಟ್ರೇಲಿಯಾ 2ನೇ ಇನ್ನಿಂಗ್ಸ್‌ನಲ್ಲಿ ಸಂಪೂರ್ಣ ಬ್ಯಾಟಿಂಗ್ ವೈಫಲ್ಯ ಅನುಭವಿಸಿ ಕೇವಲ 120ಕ್ಕೆ ಆಲೌಟ್ ಆಗಿತ್ತು. ಆದರೂ 204 ರನ್‌ಗಳ ಗುರಿ ನೀಡಲು ಸಫಲವಾಗಿತ್ತು. ಗುರಿ ಬೆನ್ನಟ್ಟಿದ ವಿಂಡೀಸ್ ಸ್ಟಾರ್ ಎಸೆದ ಮೊದಲ ಓವರ್ನಲ್ಲೇ 3 ವಿಕೆಟ್ ಕಳೆದುಕೊಂಡಿತು. ನಂತರ ಅವರದ್ದೇ ಬೌಲಿಂಗ್ನಲ್ಲಿ 5ನೇ ಓವರ್ನಲ್ಲಿ 2 ವಿಕೆಟ್ ಕಳೆದುಕೊಂಡಿತು. 14ನೇ ಓವರ್ನಲ್ಲಿ ಸ್ಟಾಟ್ ಬೋಲ್ಯಾಂಡ್ ಹ್ಯಾಟ್ರಿಕ್ ಪಡೆದರು. 15ನೇ ಓವರ್ನಲ್ಲಿ ಸ್ಟಾರ್ಕ್ ತಮ್ಮ 6ನೇ ವಿಕೆಟ್ ಪಡೆದು ವಿಂಡೀಸ್ ಇನ್ನಿಂಗ್ಸ್ಗೆ ಅಂತ್ಯವಾಡಿದರು.
ಮೊದಲ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾ 159 ರನ್, 2ನೇ ಪಂದ್ಯದಲ್ಲಿ 133 ರನ್ಗಳಿಂದ ಗೆಲುವು ಸಾಧಿಸಿತ್ತು. ಇದೀಗ ಸತತ 3 ಜಯದೊಂದಿಗೆ ವಿಶ್ವಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಅಗ್ರಸ್ಥಾನವನ್ನ ಮತ್ತಷ್ಟು ಬಲಪಡಿಸಿಕೊಂಡಿದೆ.
ಈ ಇನ್ನಿಂಗ್ಸ್‌ನಲ್ಲಿ, ಸ್ಟಾರ್ಕ್ ಕೇವಲ 15 ಎಸೆತಗಳಲ್ಲಿ 5 ವಿಕೆಟ್‌ಗಳನ್ನು ಕಬಳಿಸಿದರು (W 0 0 0 W W 0 0 0 0 0 0 W 2 W). ಕ್ರಿಕೆಟ್ ಇತಿಹಾಸದಲ್ಲಿ ಎಸೆತಗಳ ಲೆಕ್ಕದಲ್ಲಿ ಇದು ಅತ್ಯಂತ ವೇಗದ ಐದು ವಿಕೆಟ್ ಗೊಂಚಲಾಗಿದೆ. ಈ ಇನ್ನಿಂಗ್ಸ್‌ನಲ್ಲಿ ಸ್ಟಾರ್ಕ್ ಒಟ್ಟು 7.3 ಓವರ್‌ಗಳನ್ನು ಬೌಲಿಂಗ್ ಮಾಡಿ, ಕೇವಲ 9 ರನ್‌ಗಳಿಗೆ 6 ವಿಕೆಟ್‌ಗಳನ್ನು ಕಬಳಿಸಿದರು. ಪರಿಣಾಮವಾಗಿ, 204 ರನ್‌ಗಳ ಗುರಿಯನ್ನು ಬೆನ್ನಟ್ಟಿದ ವೆಸ್ಟ್ ಇಂಡೀಸ್ ಕೇವಲ 27 ರನ್‌ಗಳಿಗೆ ಶೋಚನೀಯವಾಗಿ ಪತನಗೊಂಡಿತು . 176 ರನ್‌ಗಳ ಬೃಹತ್ ಅಂತರದಿಂದ ಸೋತಿತು. ಈ ಗೆಲುವಿನೊಂದಿಗೆ, ಆಸೀಸ್ 3 ಪಂದ್ಯಗಳ ಸರಣಿಯನ್ನು 3-0 ಅಂತರದಿಂದ ಕ್ಲೀನ್ ಸ್ವೀಪ್ ಮಾಡಿತು.
ತಮ್ಮ ವೃತ್ತಿಜೀವನದ 100ನೇ ಟೆಸ್ಟ್ ಪಂದ್ಯವನ್ನು ಆಡುತ್ತಿರುವ ಸ್ಟಾರ್ಕ್, ಪಂದ್ಯಶ್ರೇಷ್ಠ ಪ್ರಶಸ್ತಿ ಹಾಗೂ ಸರಣಿಶ್ರೇಷ್ಠ ಪ್ರಶಸ್ತಿಯನ್ನು ಪಡೆದರು. ಅದೇ ಪಂದ್ಯದಲ್ಲಿ ಸ್ಟಾರ್ಕ್ ಮತ್ತೊಂದು ಸಾಧನೆ ಮಾಡಿದರು. ಅವರು ಟೆಸ್ಟ್‌ನಲ್ಲಿ 400 ವಿಕೆಟ್‌ಗಳ (402) ಮೈಲಿಗಲ್ಲನ್ನು ಮೀರಿದರು. ಈ ಪಿಂಕ್ ಬಾಲ್ ವಿರುದ್ಧದ ಪಂದ್ಯದಲ್ಲಿ 6 ವಿಕೆಟ್ ಕಬಳಿಸಿದ ಸ್ಟಾರ್ಕ್, ಪಿಂಕ್ ಬಾಲ್ ಮೂಲಕ ತಮ್ಮ ಅಂಕಿಅಂಶಗಳನ್ನು ಮತ್ತಷ್ಟು ಸುಧಾರಿಸಿಕೊಂಡರು.
July 15, 2025 4:59 PM IST