India vs England: ಕಿಂಗ್ ಚಾರ್ಲ್ಸ್ III ರನ್ನು ಭೇಟಿಯಾದ ಟೀಂ ಇಂಡಿಯಾ! ಆಕಾಶ್‌‌ದೀಪ್ ಸಹೋದರಿಯ ಆರೋಗ್ಯ ವಿಚಾರಿಸಿದ ಕಿಂಗ್ | India cricket teams meet King Charles III

India vs England: ಕಿಂಗ್ ಚಾರ್ಲ್ಸ್ III ರನ್ನು ಭೇಟಿಯಾದ ಟೀಂ ಇಂಡಿಯಾ! ಆಕಾಶ್‌‌ದೀಪ್ ಸಹೋದರಿಯ ಆರೋಗ್ಯ ವಿಚಾರಿಸಿದ ಕಿಂಗ್ | India cricket teams meet King Charles III

Last Updated:

ಲಾರ್ಡ್ಸ್ ಟೆಸ್ಟ್ ಬಳಿಕ ಭಾರತ ಮಹಿಳಾ ಮತ್ತು ಪುರುಷರ ಕ್ರಿಕೆಟ್ ತಂಡಗಳು ಕಿಂಗ್ ಚಾರ್ಲ್ಸ್ III ಅವರನ್ನು ಭೇಟಿ ಮಾಡಿದರು. BCCI ಉಪಾಧ್ಯಕ್ಷ ರಾಜೀವ್ ಶುಕ್ಲಾ, ವಿಕ್ರಮ್ ದೊರೈಸ್ವಾಮಿ, ಶುಭಮನ್ ಗಿಲ್, ಹರ್ಮನ್ಪ್ರೀತ್ ಕೌರ್ ಉಪಸ್ಥಿತರಿದ್ದರು.

News18News18
News18

ಲಾರ್ಡ್ಸ್ ಟೆಸ್ಟ್ ಪಂದ್ಯದ ಬಳಿಕ ಭಾರತ ಪುರುಷರ ಮತ್ತು ಮಹಿಳೆಯರ ಕ್ರಿಕೆಟ್ ತಂಡಗಳು ಇಂಗ್ಲೆಂಡ್ ಕಿಂಗ್ ಚಾರ್ಲ್ಸ್ III (King Charles) ಅವರನ್ನು ಸೇಂಟ್ ಜೇಮ್ಸ್ ಪ್ಯಾಲೇಸ್‌ನಲ್ಲಿ ಭೇಟಿ ಮಾಡಿದರು. ಭೇಟಿ ಸಮಯದಲ್ಲಿ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ (BCCI) ಉಪಾಧ್ಯಕ್ಷ ರಾಜೀವ್ ಶುಕ್ಲಾ, ಭಾರತದ ಹೈಕಮಿಷನರ್ ವಿಕ್ರಮ್ ದೊರೈಸ್ವಾಮಿ, ಭಾರತದ ಟೆಸ್ಟ್‌ ಪಂದ್ಯದ ನಾಯಕ ಶುಭಮನ್ ಗಿಲ್ (Shubhman Gill) ಮತ್ತು ಮಹಿಳಾ ತಂಡದ ನಾಯಕಿ ಹರ್ಮನ್ಪ್ರೀತ್ ಕೌರ್ (Kaur), ಇತರೆ ಆಟಗಾರರು ಮತ್ತು ತರಬೇತಿ ಸಿಬ್ಬಂದಿ ಉಪಸ್ಥಿತರಿದ್ದರು.

ಲಾರ್ಡ್ಸ್ ಪಂದ್ಯದ ಬಳಿಕ ಮಂಗಳವಾರ ಎರಡೂ ತಂಡಗಳನ್ನು ಅರಮನೆಗೆ ಆಹ್ವಾನಿಸಲಾಗಿತ್ತು. ಈ ವೇಳೆ ಇಂಗ್ಲೆಂಡ್‌ ದೊರೆ ಹಲವು ವಿಷಯಗಳ ಬಗ್ಗೆ ಚರ್ಚೆ ನಡೆಸಿದರು ಎಂದು ಬಿಸಿಸಿಐ ಉಪಾಧ್ಯಕ್ಷರಾದ ರಾಜೀವ್‌ ಶುಕ್ಲ ಹಂಚಿಕೊಂಡಿದ್ದಾರೆ.

ಆಕಾಶ್ ದೀಪ್ ಸಹೋದರಿಯ ಆರೋಗ್ಯ ವಿಚಾರಿಸಿದ ಕಿಂಗ್

ಆಕಾಶ್ ದೀಪ್ ಅವರ ಸಹೋದರಿ ಅಖಂಡ್ ಜ್ಯೋತಿ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ. ಈ ಬಗ್ಗೆ ಕೂಡ ಕಿಂಗ್ ಮಾಹಿತಿ ತಿಳಿದುಕೊಂಡು ವಿಚಾರಿಸಿದ್ದು ವಿಶೇಷವಾಗಿತ್ತು. “ನಮ್ಮ ಬಗ್ಗೆ ತುಂಬಾ ವಿವರ ಕಲೆ ಹಾಕಿದ್ದರು. ನಮಗೆಲ್ಲ ರಾಜನ ಜೊತೆ ಮಾತನಾಡುತ್ತಿದ್ದೇವೆ ಎಂದು ಎನಿಸಲಿಲ್ಲ. ಅವರು ಬಹಳ ವಿನಮ್ರ ವ್ಯಕ್ತಿ. ಅವರನ್ನು ಭೇಟಿ ಮಾಡಿದ ಬಳಿಕ ಆಟಗಾರರು ತುಂಬಾ ಸಂತೋಷದಿಂದಿದ್ದಾರೆ” ಎಂದು ರಾಜೀವ್‌ ಶುಕ್ಲಾ ಹೇಳಿದರು.

ಸಿರಾಜ್ ವಿಕೆಟ್ ಬಗ್ಗೆ ಕಿಂಗ್ ಚಾರ್ಲ್ಸ್ ವಿಷಾದ

ಭೇಟಿಯ ವೇಳೆ ಕಿಂಗ್ ಚಾರ್ಲ್ಸ್ ಲಾರ್ಡ್ಸ್‌ನಲ್ಲಿ ನಡೆದ ಮೂರನೇ ಟೆಸ್ಟ್ ಬಗ್ಗೆ ಮಾತನಾಡಿದ್ದಾರೆ ಮತ್ತು ಸಿರಾಜ್ ವಿಕೆಟ್‌ ಬಗ್ಗೆ ಕೂಡ ಬೇಸರ ವ್ಯಕ್ತಪಡಿಸಿದರು.  ಸಿರಾಜ್ ಔಟಾದ ರೀತಿ ದುರದೃಷ್ಟಕರವಾಗಿತ್ತು ಎಂದು ಕಿಂಗ್ ಚಾರ್ಲ್ಸ್ III ಹೇಳಿದ್ದಾಗಿ ಶುಕ್ಲಾ ಬಹಿರಂಗಪಡಿಸಿದರು. ಕಿಂಗ್ ಚಾರ್ಲ್ಸ್ ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ ಅಂತಿಮ ಕ್ಷಣಗಳ ಬಗ್ಗೆ ಚರ್ಚಿಸಿದರು ಎಂದು ಶುಭಮನ್‌ ಗಿಲ್‌ ಹೇಳಿದರು. ಶೋಯೆಬ್ ಬಶೀರ್ ಅವರ ಚೆಂಡು ಸ್ಟಂಪ್‌ಗೆ ಹಿಂತಿರುಗಿದ ರೀತಿಯನ್ನು ಕಿಂಗ್ ಹೇಳಿದರು ಎಂದು ಗಿಲ್‌ ನೆನಪಿಸಿಕೊಂಡರು.  ‌

ಚಾರ್ಲ್ಸ್ ಉಪನಾಯಕ ರಿಷಭ್ ಪಂತ್ ಮತ್ತು ವಿಶ್ವದ ಅತ್ಯುತ್ತಮ ಬೌಲರ್ ಜಸ್ಪ್ರೀತ್ ಬುಮ್ರಾ ಅವರೊಂದಿಗೂ ಸಂಭಾಷಣೆ ನಡೆಸಿದರು, ನಂತರ ಕಿಂಗ್ ಚಾರ್ಲ್ಸ್ ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್, ರವೀಂದ್ರ ಜಡೇಜಾ, ಮುಖ್ಯ ಕೋಚ್ ಗೌತಮ್ ಗಂಭೀರ್ ಮತ್ತು ಇತರರು ಸೇರಿದಂತೆ ಉಳಿದವರನ್ನು ಭೇಟಿಯಾದರು. ಪುರುಷರ ತಂಡವನ್ನು ಭೇಟಿಯಾದ ನಂತರ, ಕಿಂಗ್ ಚಾರ್ಲ್ಸ್ ಭಾರತೀಯ ಮಹಿಳಾ ತಂಡವನ್ನು ಭೇಟಿ ಮಾಡಿ ಕೆಲವು ಆಟಗಾರರೊಂದಿಗೆ ಸಂಭಾಷಣೆ ನಡೆಸಿದರು.

ಕಿಂಗ್ ಚಾರ್ಲ್ಸ್ ವ್ಯಕ್ತಿತ್ವವನ್ನು ಹೊಗಳಿದ ಗಿಲ್

ಕಿಂಗ್ ಚಾರ್ಲ್ಸ್ ಅವರನ್ನು ಭೇಟಿಯಾದ ಅನುಭವವನ್ನು ಗಿಲ್ ಹಂಚಿಕೊಂಡಿದ್ದಾರೆ, “ಈ ಭೇಟಿ ಅದ್ಭುತವಾಗಿತ್ತು. ಅವರು ನಮ್ಮನ್ನು ಇಲ್ಲಿಗೆ ಆಹ್ವಾನಿಸಿದ್ದು, ನಮ್ಮ ಅದೃಷ್ಟ. ಕಿಂಗ್‌ ನಿಜಕ್ಕೂ ಉದಾರ ಮತ್ತು ದಯೆಯ ವ್ಯಕ್ತಿ. ಕಿಂಗ್ ಚಾರ್ಲ್ಸ್ ಅವರು ಆಟಗಾರರೊಂದಿಗೆ ಬೆರೆತ ರೀತಿ ಎಲ್ಲರಿಗೂ ಇಷ್ಟವಾಯಿತು” ಎಂದು ಅವರ ವ್ಯಕ್ತಿತ್ವವನ್ನು ಗಿಲ್‌ ಹೊಗಳಿದರು.

ಐದು ಪಂದ್ಯಗಳ ಟೆಸ್ಟ್ ಸರಣಿಗಾಗಿ ಭಾರತದ ಪುರುಷರ ತಂಡ ಇಂಗ್ಲೆಂಡ್ ಪ್ರವಾಸದಲ್ಲಿದೆ. ಶುಭ್‌ಮನ್ ಗಿಲ್ ಪುರುಷರ ತಂಡವು ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಐದು ಪಂದ್ಯಗಳ ಸರಣಿಯಲ್ಲಿ 1-2 ಹಿನ್ನಡೆಯಲ್ಲಿದ್ದರೆ, ಇತ್ತ ಹರ್ಮನ್‌ಪ್ರೀತ್ ಕೌರ್ ಮಹಿಳಾ ತಂಡದ ಇಂಗ್ಲೆಂಡ್ ವಿರುದ್ಧ 3-2 ಅಂತರದಿಂದ T20I ಸರಣಿಯನ್ನು ಗೆದ್ದು ಇತಿಹಾಸ ನಿರ್ಮಿಸಿದೆ.