Last Updated:
ಜನಾರ್ದನ ರೆಡ್ಡಿ ಅವರ ಪುತ್ರ ಕಿರೀಟಿ ರೆಡ್ಡಿ ನಟಿಸಿರುವ ಜೂನಿಯರ್ ಕನ್ನಡ ಚಿತ್ರ ಯಶಸ್ವಿಗಾಗಿ ದಕ್ಷಿಣ ಕನ್ನಡದ ದೈವಸ್ಥಾನದಲ್ಲಿ ವಿಶೇಷ ಪ್ರಾರ್ಥನೆ. ರೆಡ್ಡಿ ದೈವದ ಆಶೀರ್ವಾದಕ್ಕಾಗಿ ಚಿತ್ರದ ಪೋಸ್ಟರ್ ಇಟ್ಟು ಪ್ರಾರ್ಥಿಸಿದರು.
ದಕ್ಷಿಣ ಕನ್ನಡ: ಸಿನಿಮಾ (Film) ಮಾಡೋದು ಎಷ್ಟು ಕಷ್ಟ ಅಂತ ಎಲ್ಲರಿಗೂ ಗೊತ್ತು. ಅದೇ ರೀತಿ ಸಿನಿಮಾವನ್ನು ಜನ ಇಷ್ಟ ಪಡಬೇಕು. ಯಶಸ್ಸು ಕಾಣಬೇಕು ಎಂಬುದು ಎಲ್ಲರ ಆಸೆ. ಅದೇ ರೀತಿ ಇಲ್ಲೊಂದ ಸಿನಿಮಾ ತಂಡ ದೈವದ ಮೊರೆ ಹೋಗಿದೆ. ಹೌದು ಗಂಗಾವತಿ ಶಾಸಕ, ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ (Janardhana Reddy) ಪುತ್ರ (Son) ಕಿರೀಟಿ ರೆಡ್ಡಿ ನಾಯಕ ನಟನಾಗಿ ಅಭಿನಯಿಸಿರುವ ಜೂನಿಯರ್ ಕನ್ನಡ ಚಲನಚಿತ್ರದ (Sandalwood) ಯಶಸ್ವಿಗೆ ದಕ್ಷಿಣ ಕನ್ನಡ ಜಿಲ್ಲೆಯ ಕುಗ್ರಾಮದ ದೈವಸ್ಥಾನವೊಂದರಲ್ಲಿ ವಿಶೇಷ ಪ್ರಾರ್ಥನೆ ನೆರವೇರಿದೆ. ಶಾಸಕ ಗಾಲಿ ಜನಾರ್ಧನ ರೆಡ್ಡಿ ಸ್ವತಹ ಈ ದೈವಸ್ಥಾನಕ್ಕೆ ಬಂದು ಚಿತ್ರದ ಯಶಸ್ವಿಯಾಗಿ ಚಿತ್ರದ ಪೋಸ್ಟರ್ ಅನ್ನು ದೈವದ ನಡೆಯಲ್ಲಿ ಇರಿಸಿ ದೈವದ ಆಶೀರ್ವಾದಕ್ಕಾಗಿ ಪ್ರಾರ್ಥಿಸಿದ್ದಾರೆ.
ಕಡಬ ತಾಲೂಕಿನ ಕೆಡಿಂಜೆಯ ಆರಲ್ತಡಿ ಇರ್ವರು ಉಳ್ಳಾಕ್ಲು, ಕೆಡಿಂಜೊಡಿತ್ತಾಯಿ ದೈವಸ್ಥಾನದ ಭಕ್ತರಾಗಿರುವ ಜನಾರ್ದನ ರೆಡ್ಡಿ ದೈವಸ್ಥಾನಕ್ಕೆ ಭೇಟಿ ನೀಡಿದ ಸಂದರ್ಶನದಲ್ಲಿ ಚಿತ್ರದ ಯಶಸ್ವಿಗಾಗಿಯೂ ದೈವದ ಮೊರೆ ಹೋಗಿದ್ದಾರೆ. ಬಳ್ಳಾರಿಯ ಜನಾರ್ಧನ ರೆಡ್ಡಿಯವರಿಗೆ ದಕ್ಷಿಣ ಕನ್ನಡ ಜಿಲ್ಲೆಯ ಕುಗ್ರಾಮವೊದರ ದೈವಸ್ಥಾನದ ನಂಟು ಬರಲು ಕಾರಣವೂ ಇದೆ. ಈ ದೈವಸ್ಥಾನವು ಅಜೀರ್ಣ ಸ್ಥಿತಿಯಲ್ಲಿ ಇದ್ದ ಸಂದರ್ಭದಲ್ಲಿ ಗ್ರಾಮಸ್ಥರಲೆಲ್ಲಾ ಸೇರಿ ದೈವಸ್ಥಾನದ ಜೀರ್ಣೋದ್ಧಾರದ ಕೆಲಸಕ್ಕೆ ಮುಂದಾಗುತ್ತಾರೆ.
ಈ ಸಮಯದಲ್ಲಿ ಇದೇ ಊರಿಗೆ ಸೇರಿದ ಯುವಕನೊಬ್ಬ ಬೆಂಗಳೂರಿನಲ್ಲಿ ದುಡಿಯುತ್ತಿದ್ದು, ಆತನಿಗೆ ಜನಾರ್ದನ ರೆಡ್ಡಿ ಪರಿಚಯವಿದ್ದ ಕಾರಣ ದೈವಸ್ಥಾನದ ವಿಚಾರವನ್ನು ಯುವಕ ಜನಾರ್ದನ ರೆಡ್ಡಿ ಬಳಿ ಪ್ರಸ್ತಾಪಿಸಿದ್ದಾನೆ. ಆ ಸಂದರ್ಭದಲ್ಲಿ ದೈವಸ್ಥಾನದ ಬ್ರಹ್ಮಕಲಶೋತ್ಸವ ನಡೆಯುವ ಸಂದರ್ಭದಲ್ಲಿ ಕ್ಷೇತ್ರಕ್ಕೆ ಭೇಟಿ ನೀಡುವುದಾಗಿಯೂ ರೆಡ್ಡಿ ಭರವಸೆಯನ್ನು ನೀಡಿದ್ದರು. ಆದರೆ ಬ್ರಹ್ಮಕಲಶೋತ್ಸವದ ಸಂದರ್ಭದಲ್ಲೇ ಆಂಧ್ರಪ್ರದೇಶದ ಓಬಳಾಪುರ ಅಕ್ರಮ ಅದಿರು ಸಾಗಾಟ ಪ್ರಕರಣದಲ್ಲಿ ಸಿಬಿಐ ಅವರನ್ನು ಬಂಧಿಸುತ್ತದೆ.
ಬ್ರಹ್ಮಕಲಶೋತ್ಸವದ ಪ್ರಯುಕ್ತ ದೇವಸ್ಥಾನದಲ್ಲಿ ಕೆಡಿಂಜೊಡಿತ್ತಾಯಿ ದೈವದ ನೇಮೋತ್ಸವ ನಡೆಯುವ ಸಂದರ್ಭದಲ್ಲಿ ಗ್ರಾಮಸ್ಥರು ಜನಾರ್ದನ ರೆಡ್ಡಿ ವಿಚಾರವನ್ನು ದೈವದ ಮುಂದೆ ಇಡುತ್ತಾರೆ. ಆ ಸಂದರ್ಭದಲ್ಲಿ ದೈವ ಒಂದು ತಿಂಗಳ ಒಳಗಾಗಿ ರೆಡ್ಡಿ ಬಂಧನದಿಂದ ಮುಕ್ತರಾಗುತ್ತಾರೆ ಎಂದು ಅಭಯ ನೀಡಿತ್ತು. ಅಭಯ ನೀಡಿ 27 ದಿನ ಕಳೆಯುವುದರ ಒಳಗಾಗಿ ರೆಡ್ಡಿಗೆ ಪ್ರಕರಣದಲ್ಲಿ ಜಾಮೀನು ದೊರೆತು ಜೈಲಿನಿಂದ ಹೊರ ಬರುತ್ತಾರೆ. ದೈವ ನೀಡಿದ ನುಡಿಯನ್ನು ಜನಾರ್ದನ ರೆಡ್ಡಿ ತನ್ನ ಎಕ್ಸ್ ಖಾತೆಯಲ್ಲಿ ಹಂಚುವ ಮೂಲಕ ತುಳುನಾಡಿನ ದೈವದ ಮಹಿಮೆಯನ್ನು ಕೊಂಡಾಡಿದ್ದರು. ಈ ಕಾರಣಕ್ಕಾಗಿ ಜನಾರ್ದನ ರೆಡ್ಡಿ ಕೆಡಿಂಜೊಡಿತ್ತಾಯಿ ದೈವದ ಭಕ್ತರಾಗಿ ಕ್ಷೇತ್ರಕ್ಕೆ ಆಗಮಿಸಿದ ಸಂದರ್ಭದಲ್ಲಿ ತನ್ನ ಮಗನ ಚಿತ್ರದ ಯಶಸ್ಸಿಗೂ ದೈವದ ಮೊರೆ ಹೋಗಿದ್ದಾರೆ.
Dakshina Kannada,Karnataka
July 17, 2025 1:00 PM IST