ಈ ವರ್ಷದ ಜನವರಿಯಿಂದ ಮಾರ್ಚ್ ತನಕ ಸುಬ್ರಹ್ಮಣ್ಯ ರೋಡ್ ರೈಲು ನಿಲ್ದಾಣದಲ್ಲಿ ನೈರುತ್ಯ ರೈಲ್ವೆ ವಲಯವು 2 ಕೋಟಿ 90 ಲಕ್ಷದ 40 ಸಾವಿರದ ನಾನೂರ ನಾಲ್ಕು (2,90,40,404) ರೂಪಾಯಿ ಆದಾಯವನ್ನು ಗಳಿಸಿತ್ತು. ಅದೇ ಏಪ್ರಿಲ್‍ನಿಂದ ಜೂನ್ ತನಕ ಬರೋಬ್ಬರಿ 3,02,45,904 ರೂಪಾಯಿ ಗಳಿಸಿದೆ. ಇದರಲ್ಲಿ ಎಕ್ಸ್ ಪ್ರೆಸ್ ರೈಲುಗಳ ಆದಾಯ, ಪ್ಯಾಸೆಂಜರ್ ರೈಲುಗಳ ಆದಾಯ, ಪ್ಲಾಟ್‍ಫಾರ್ಮ್ ಟಿಕೇಟು, ಕ್ಯಾಂಟೀನ್, ಜಾಹೀರಾತು ಎಲ್ಲವೂ ಸೇರಿದೆ. ಆದರೂ ಮೂರು ತಿಂಗಳಿನಲ್ಲಿ ಸುಮಾರು 12 ಲಕ್ಷ ರೂಪಾಯಿ ಏರಿಕೆಯಾಗಿದೆ.
ಸುಬ್ರಹ್ಮಣ್ಯ ರೋಡ್ ರೈಲು ನಿಲ್ದಾಣದ ಬಳಿಕ ಸಿಗುವ ರೈಲು ನಿಲ್ದಾಣವೆಂದರೆ ಬಜಕೆರೆ ಹಾಲ್ಟ್ ರೈಲು ನಿಲ್ದಾಣ. ಇಲ್ಲಿ ಜನವರಿಯಿಂದ ಮಾರ್ಚ್ ತನಕ ನೈರುತ್ಯ ರೈಲ್ವೆ ವಲಯವು 8,880 ರೂಪಾಯಿ ಆದಾಯವನ್ನು ಗಳಿಸಿತ್ತು. ಅದೇ ಏಪ್ರಿಲ್‍ನಿಂದ ಜೂನ್ ತನಕ 31,570 ರೂಪಾಯಿ.ಕಡಬ ತಾಲೂಕು ಕೇಂದ್ರಕ್ಕೆ ಹತ್ತಿರದಲ್ಲಿರುವ ರೈಲು ನಿಲ್ದಾಣ. ಇಲ್ಲಿಂದ ಕೋಡಿಂಬಾಳ ರೈಲು ನಿಲ್ದಾಣಕ್ಕೆ . ಜನವರಿಯಿಂದ ಮಾರ್ಚ್ ತನಕ ಕೇವಲ ಮಧ್ಯಾಹ್ನದ ಪ್ಯಾಸೆಂಜರ್ ರೈಲಿನ ನಿಲುಗಡೆಯಿಂದ 26,775 ರೂಪಾಯಿ ಆದಾಯವನ್ನು ಗಳಿಸಿದ್ದ ನೈರುತ್ಯ ರೈಲ್ವೆ ವಲಯವು ಮಂಗಳೂರು-ಕಬಕ ಪುತ್ತೂರು ರೈಲು ಸುಬ್ರಹ್ಮಣ್ಯಕ್ಕೆ ವಿಸ್ತರಣೆಗೊಂಡ ಬಳಿಕ ಬರೋಬ್ಬರಿ 83,290 ರೂಪಾಯಿ ಗಳಿಸಿದೆ.
ಎಡಮಂಗಲ ರೈಲು ನಿಲ್ದಾಣದಲ್ಲಿ ಈ ಹಿಂದೆ ಬೆಂಗಳೂರು-ಕಣ್ಣೂರು/ಕಾರವಾರ ಎಕ್ಸ್‍ಪ್ರೆಸ್ ರೈಲುಗಳು ಕೂಡ ನಿಲ್ಲುತ್ತಿತ್ತು. ಜನವರಿಯಿಂದ ಮಾರ್ಚ್ ತನಕ ಎಡಮಂಗಲ ರೈಲು ನಿಲ್ದಾಣದಲ್ಲಿ 8,915 ರೂಪಾಯಿ ಆದಾಯವನ್ನು ಗಳಿಸಿದ್ದ ನೈರುತ್ಯ ರೈಲ್ವೆ ವಲಯವು ಏಪ್ರಿಲ್‍ನಿಂದ ಜೂನ್ ತನಕ 42,190 ರೂಪಾಯಿಯಷ್ಟು ಆದಾಯವನ್ನು ಗಳಿಸಿದೆ. ಈ ರೈಲು ನಿಲ್ದಾಣದ ಆದಾಯದಲ್ಲಿ ಸುಮಾರು 33,275 ರೂಪಾಯಿ ಏರಿಕೆ ಆಗಿದೆ. ಕಾಣಿಯೂರು ರೈಲು ನಿಲ್ದಾಣ ಜನವರಿಯಿಂದ ಮಾರ್ಚ್ ತನಕ 8,965 ರೂಪಾಯಿ ಆದಾಯವನ್ನು ಗಳಿಸಿದ್ದ ನೈರುತ್ಯ ರೈಲ್ವೆ ವಲಯವು ಏಪ್ರಿಲ್‍ನಿಂದ ಜೂನ್ ತನಕ ಅಂದರೆ ಪ್ಯಾಸೆಂಜರ್ ರೈಲು ವಿಸ್ತರಣೆಗೊಂಡ ಬಳಿಕ ಬರೋಬ್ಬರಿ 89,050 ರೂಪಾಯಿ ಗಳಿಸಿದೆ. ಅಂದರೆ ಕೇವಲ ಮೂರು ತಿಂಗಳಿನಲ್ಲಿ 80,085 ರೂಪಾಯಿಯಷ್ಟು ಆದಾಯ ಏರಿಕೆಗೊಂಡಿದೆ.ಇದು ಕಾಣಿಯೂರು ರೈಲು ನಿಲ್ದಾಣದಿಂದ ರೈಲಿಗೆ ಜನರು ಕೊಡುತ್ತಿರುವ ಬೆಂಬಲವನ್ನು ಸ್ಪಷ್ಟವಾಗಿ ತೋರಿಸುತ್ತದೆ ಹಾಗು ಕಾಣಿಯೂರಿನಲ್ಲಿ ಸುಸಜ್ಜಿತ ರೈಲು ನಿಲ್ದಾಣದ ಬೇಡಿಕೆಗೆ ಮತ್ತಷ್ಟು ಬಲ ನೀಡಿದೆ.
ಜಿಲ್ಲೆಯ ಎರಡನೆಯ ದೊಡ್ಡ ನಗರವಾದ ಪುತ್ತೂರಿನಲ್ಲಿರುವ ಕಬಕ-ಪುತ್ತೂರು ರೈಲು ನಿಲ್ದಾಣ ಕಳೆದ ಜನವರಿಯಿಂದ ಮಾರ್ಚ್ ತನಕ 1,09,34,431 ರೂಪಾಯಿಗಳಷ್ಟು ಆದಾಯವನ್ನು ಗಳಿಸಿತ್ತು. ಅದೇ ಏಪ್ರಿಲ್‍ನಿಂದ ಜೂನ್ ತನಕ ಬರೋಬ್ಬರಿ 1,22,44,465 ರೂಪಾಯಿಗಳಷ್ಟು ಆದಾಯವನ್ನು ನೈರುತ್ಯ ರೈಲ್ವೆ ವಲಯವು ಗಳಿಸಿದೆ.ಇದರಲ್ಲಿ ಎಕ್ಸ್‍ಪ್ರೆಸ್ ರೈಲುಗಳ ಆದಾಯ, ಪ್ಯಾಸೆಂಜರ್ ರೈಲುಗಳ ಆದಾಯ, ಪ್ಲಾಟ್‍ಫಾರ್ಮ್ ಟಿಕೇಟು, ಕ್ಯಾಂಟೀನ್, ಜಾಹೀರಾತು ಎಲ್ಲವೂ ಸೇರಿದೆ. ಆದರೂ ಮೂರು ತಿಂಗಳಿನಲ್ಲಿ ಸುಮಾರು 13,10,034 ರೂಪಾಯಿ ಏರಿಕೆಯಾಗಿದೆ.
ಎಲ್ಲಾ ನಿಲ್ದಾಣಗಳ ಆದಾಯವನ್ನು ಸೇರಿಸಿ ಹೇಳುವುದಾದರೆ ನೈರುತ್ಯ ರೈಲ್ವೆ ವಲಯವೂ ಪಡೀಲ್ ಹಾಗೂ ಸುಬ್ರಹ್ಮಣ್ಯ ರೋಡ್ ನಡುವೆ ಇರುವ ಎಲ್ಲಾ ರೈಲು ನಿಲ್ದಾಣಗಳಿಂದ ಏಪ್ರಿಲ್‍ನಿಂದ ಜೂನ್ ತಿಂಗಳ ಅವಧಿಯಲ್ಲಿ ಬರೋಬ್ಬರಿ 5,04,38,446 ರೂಪಾಯಿ ಆದಾಯವನ್ನು ಗಳಿಸಿದೆ.
ಈಗ ಗಮನಿಸ ಬೇಕಾದ ವಿಷಯವೇನೆಂದರೆ ಮಂಗಳೂರು-ಪುತ್ತೂರು ಪ್ಯಾಸೆಂಜರ್ ರೈಲು ಸುಬ್ರಹ್ಮಣ್ಯ ರೋಡ್ ರೈಲು ನಿಲ್ದಾಣಕ್ಕೆ ವಿಸ್ತರಣೆಗೊಂಡ ಬಳಿಕ ಗ್ರಾಮೀಣ ಭಾಗದ ಸಣ್ಣ ರೈಲು ನಿಲ್ದಾಣಗಳ ಆದಾಯದಲ್ಲಿ ಬಹಳಷ್ಟು ಏರಿಕೆಗೊಂಡಿದೆ. ಇದರ ಅರ್ಥ ಮಂಗಳೂರು-ಸುಬ್ರಹ್ಮಣ್ಯ ಪ್ಯಾಸೆಂಜರ್ ರೈಲಿಗೆ ಉತ್ತಮ ಜನಸ್ಪಂದನೆ ದೊರಕಿದೆ.ಇಷ್ಟೆಲ್ಲ ಆದಾಯವನ್ನು ಈ ಭಾಗ ರೈಲ್ವೆ ಇಲಾಖೆ ನೀಡಿದರೂ ಅಭಿವೃದ್ಧಿ ವಿಷಯದಲ್ಲಿ ಇನ್ನೂ ಹಿಂದೆ ಉಳಿದಿದೆ. ಗ್ರಾಮೀಣ ಭಾಗದ ರೈಲು ನಿಲ್ದಾಣಗಳು ಇನ್ನು ಅಭಿವೃದ್ಧಿಗೊಳ್ಳಬೇಕಾಗಿದೆ.
Dakshina Kannada,Karnataka
July 20, 2025 12:30 PM IST