Last Updated:
ಕೆಲ್ ರಾಹುಲ್ 46, ಯಶಸ್ವಿ ಜೈಸ್ವಾಲ್ 58, ಶಾರ್ದೂಲ್ ಠಾಕೂರ್ 41 ಹಾಗೂ ರಿಷಭ್ ಪಂತ್ ಅವರ ಹೋರಾಟದ ಇನ್ನಿಂಗ್ಸ್ ನೆರವಿನಿಂದ ಭಾರತ ತಂಡ ಮೊದಲ ಇನ್ನಿಂಗ್ಸ್ನಲ್ಲಿ ಸ್ಪರ್ಧಾತ್ಮಕ ಮೊತ್ತ ದಾಖಲಿಸಿದೆ.
ಮ್ಯಾಂಚೆಸ್ಟರ್ನ ಓಲ್ಡ್ ಟ್ರಾಫರ್ಡ್ ಮೈದಾನದಲ್ಲಿ ನಡೆಯುತ್ತಿರುವ 5 ಪಂದ್ಯಗಳ ಟೆಸ್ಟ್ ಸರಣಿಯ 4ನೇ ಪಂದ್ಯದಲ್ಲಿ ಟೀಮ್ ಇಂಡಿಯಾ 358ಕ್ಕೆ ಆಲೌಟ್ ಆಗಿದೆ. ಟಾಸ್ ಸೋತು ಬ್ಯಾಟಿಂಗ್ ಮಾಡಿದ ಟೀಮ್ ಇಂಡಿಯಾ ಕೆಲ್ ರಾಹುಲ್ 46, ಯಶಸ್ವಿ ಜೈಸ್ವಾಲ್ 58, ಶಾರ್ದೂಲ್ ಠಾಕೂರ್ 41 ಹಾಗೂ ರಿಷಭ್ ಪಂತ್ ಅವರ ಹೋರಾಟದ ಇನ್ನಿಂಗ್ಸ್ ನೆರವಿನಿಂದ ಭಾರತ ತಂಡ ಮೊದಲ ಇನ್ನಿಂಗ್ಸ್ನಲ್ಲಿ ಸ್ಪರ್ಧಾತ್ಮಕ ಮೊತ್ತ ದಾಖಲಿಸಿತು. ಇಂಗ್ಲೆಂಡ್ ತಂಡದ ನಾಯಕ ಬೆನ್ ಸ್ಟೋಕ್ಸ್ 5 ವಿಕೆಟ್ ಪಡೆದರೆ, ಜೋಫ್ರಾ ಆರ್ಚರ್ 3 ವಿಕೆಟ್ ಪಡೆದು ಮಿಂಚಿದರು.
ಮೊದಲ ದಿನ ಭಾರತ ತಂಡ 4 ವಿಕೆಟ್ ಕಳೆದುಕೊಂಡು 264 ರನ್ಗಳಿಸಿತ್ತು. 2ನೇ ದಿನ ಬ್ಯಾಟಿಂಗ್ ಮುಂದುವರಿಸಿದ ಭಾರತ 358 ರನ್ಗಳಿಗೆ ತೆಗೆದುಕೊಂಡು ಹೋಗಿ ಇನ್ನಿಂಗ್ಸ್ ಮುಗಿಸಿತು. 2ನೇ ದಿನ ಬ್ಯಾಟಿಂಗ್ ಆರಂಭಿಸುತ್ತಿದ್ದಂತೆ ಕೇವಲ 2ನೇ ಓವರ್ನಲ್ಲಿ ಜಡೇಜಾ ವಿಕೆಟ್ ಕಳೆದುಕೊಂಡಿತು. ನಿನ್ನೆ 19 ರನ್ಗಳಿಸಿದ್ದ ಜಡ್ಡು ಇಂದು ಕೇವಲ 1 ರನ್ಗಳಿಸಿ ಔಟ್ ಆದರು.
ಈ ಹಂತದಲ್ಲಿ ಶಾರ್ದೂಲ್ ಠಾಕೂರ್ ಹಾಗೂ ವಾಷಿಂಗ್ಟನ್ ಸುಂದರ್ 7ನೇ ವಿಕೆಟ್ಗೆ 48 ರನ್ ಸೇರಿಸಿದರು. ಇದು ಇಂದಿನ ಗರಿಷ್ಠ ರನ್ ಜೊತೆಯಾಟವಾಯಿತು. ಶಾರ್ದೂಲ್ ಠಾಕೂರ್ 88 ಎಸೆತಗಳಲ್ಲಿ 5 ಬೌಂಡರಿ ಸಹಿತ 41 ರನ್ಗಳಿಸಿ ಔಟ್ ಬೆನ್ ಸ್ಟೋಕ್ಸ್ಗೆ ವಿಕೆಟ್ ಒಪ್ಪಿಸಿದರು. ಭಾರತದ 7ನೇ ವಿಕೆಟ್ ಕಳೆದುಕೊಂಡ ನಂತರ ಗಾಯಗೊಂಡಿದ್ದ ಪಂತ್ ಮತ್ತೆ ಕುಂಟುತ್ತಲೇ ಬ್ಯಾಟಿಂಗ್ ಮಾಡಿ 8ನೇ ವಿಕೆಟ್ಗೆ 28 ರನ್ ಸೇರಿಸಿದರು. ಸುಂದರ್ 90 ಎಸೆತಗಳಲ್ಲಿ 2 ಬೌಂಡರಿಗಳ ಸಹಿತ 27 ರನ್ಗಳಿಸಿದರು. ಸುಂದರ್ ವಿಕೆಟ್ ಪತನದ ನಂತರ ಭಾರತ ತನ್ನ ಮುಂದಿನ 3 ವಿಕೆಟ್ ಕೇವಲ 21 ರನ್ ಅಂತರದಲ್ಲಿ ಕಳೆದುಕೊಂಡಿತು. ನಿನ್ನೆ 48 ಎಸೆತಗಳಲ್ಲಿ 37 ರನ್ಗಳಿಸಿದ್ದ ಗಾಯಾಳು ಪಂತ್ ಇಂದು ಹೆಚ್ಚುವರಿ 27 ಎಸೆತಗಳನ್ನ ಎದುರಿಸಿದರು. ಒಟ್ಟಾರೆ 75 ಎಸೆತಗಳಲ್ಲಿ 3 ಬೌಂಡರಿ, 2 ಸಿಕ್ಸರ್ ಸಹಿತ 54 ರನ್ಗಳಿಸಿ ಆರ್ಚರ್ ಬೌಲಿಂಗ್ನಲ್ಲಿ ಬೌಲ್ಡ್ ಆದರು.
ಪಂತ್ ಬೆನ್ನಲ್ಲೇ ನಂತರ ಬಂದ ಅನ್ಶುಲ್ ಕಂಬೋಜ್ ಶೂನ್ಯಕ್ಕೆ ಔಟ್ ಆದರೆ, ಬುಮ್ರಾ ಕೇವಲ 4 ರನ್ಗಳಿಸಿ ವಿಕೆಟ್ ಒಪ್ಪಿಸಿದರು. ಸಿರಾಜ್ ಅಜೇಯ 5 ರನ್ಗಳಿಸಿದರು. ಇಂಗ್ಲೆಂಡ್ ಪರ ಅಬ್ಧುತ ಬೌಲಿಂಗ್ ಮಾಡಿದ ಇಂಗ್ಲೆಂಡ್ ತಂಡದ ನಾಯಕ ಬೆನ್ ಸ್ಟೋಕ್ಸ್ 72 ರನ್ ನೀಡಿ 5 ವಿಕೆಟ್ ಪಡೆದರು. ಜೋಫ್ರಾ ಆರ್ಚರ್ 73ಕ್ಕೆ 3 ವಿಕೆಟ್ ಪಡೆದರೆ, ಲಿಯಾಮ್ ಡಾಸೆನ್ 45ಕ್ಕೆ 1, ಕ್ರಿಸ್ ವೋಕ್ಸ್ 66ಕ್ಕೆ 1 ವಿಕೆಟ್ ಪಡೆದರು.
ಟಾಸ್ ಸೋತು ಬ್ಯಾಟಿಂಗ್ಗೆ ಇಳಿದ ಭಾರತ ತಂಡ ಮೊದಲ ವಿಕೆಟ್ಗೆ 94 ರನ್ಗಳ ಭರ್ಜರಿ ಜೊತೆಯಾಟ ನಡೆಸಿದರು. ಮೊದಲ ಸೆಷನ್ನಲ್ಲಿ ಆಂಗ್ಲ ಬೌಲರ್ಗಳನ್ನ ಸಮರ್ಥವಾಗಿ ಎದುರಿಸಿದ ರಾಹುಲ್- ಜೈಸ್ವಾಲ್ ವಿಕೆಟ್ ಕಳೆದುಕೊಳ್ಳದೆ ಜವಾಬ್ದಾರಿಯುವ ಬ್ಯಾಟಿಂಗ್ ಮಾಡಿದರು. ಕನ್ನಡಿಗ ರಾಹುಲ್ 98 ಎಸೆತಗಳಲ್ಲಿ 4 ಬೌಂಡರಿ ಸಹಿತ 46 ರನ್ಗಳಿಸಿ ಅರ್ಧಶತಕಕ್ಕೆ ಕೇವಲ 4 ರನ್ಗಳ ಅಗತ್ಯವಿದ್ದಾಗ ಕ್ರಿಸ್ ವೋಕ್ಸ್ ಬೌಲಿಂಗ್ನಲ್ಲಿ ಜ್ಯಾಕ್ ಕ್ರಾಲೆಗೆ ಕ್ಯಾಚ್ ನೀಡಿ ಔಟ್ ಆದರು.
ನಂತರ 3ನೇ ಕ್ರಮಾಂಕದಲ್ಲಿ ಬಂದ ಸಾಯಿ ಸುದರ್ಶನ್ 2ನೇ ವಿಕೆಟ್ ಜೊತೆಯಾಟದಲ್ಲಿ ಜೈಸ್ವಾಲ್ ಜೊತೆಗೂಡಿ 26 ರನ್ ಸೇರಿಸಿದರು.107 ಎಸೆತಗಳನ್ನೆದುರಿಸಿದ ಜೈಸ್ವಾಲ್ 10 ಬೌಂಡರಿ, 1 ಸಿಕ್ಸರ್ ಸಹಿತ 58 ರನ್ಗಳಿಸಿ ಸರಣಿಯಲ್ಲಿ ಮೊದಲ ಪಂದ್ಯವನ್ನಾಡುತ್ತಿರುವ ಡಾಸೆನ್ಗೆ ವಿಕೆಟ್ ಒಪ್ಪಿಸಿದರು. 4ನೇ ಕ್ರಮಾಂಕದಲ್ಲಿ ಬಂದ ನಾಯಕ ಗಿಲ್ ಕೇವಲ 12 ರನ್ಗಳಿಸಿ ಔಟ್ ಆದರು.
4ನೇ ವಿಕೆಟ್ಗೆ ಸಾಯಿ ಸುದರ್ಶನ್ ಹಾಗೂ ರಿಷಭ್ ಪಂತ್ 72 ರನ್ಗಳ ಜೊತೆಯಾಟ ನಡೆಸಿದ್ದರು. ಆದರೆ 48 ಎಸೆತಗಳಲ್ಲಿ 37 ರನ್ಗಳಿಸಿದ್ದ ಪಂತ್ ಗಾಯಗೊಂಡು ಪೆವಿಲಿಯನ್ ತೊರೆದರು. ಇದರ ಬೆನ್ನಲ್ಲೇ ಸಾಯಿ ಸುದರ್ಶನ್ ಕೂಡ ವಿಕೆಟ್ ಒಪ್ಪಿಸಿದರು. 151 ಎಸೆತಗಳಲ್ಲಿ 7 ಬೌಂಡರಿಗಳ ಸಹಿತ ಬೆನ್ ಸ್ಟೋಕಸ್ ಬೌಲಿಂಗ್ನಲ್ಲಿ ಬೆನ್ ಕಾರ್ಸ್ಗೆ ಕ್ಯಾಚ್ ನೀಡಿ ಔಟ್ ಆದರು.
July 24, 2025 6:59 PM IST