Last Updated:
ತುಳುನಾಡಿನಲ್ಲಿ ನಾಗರಪಂಚಮಿಯ ಹಬ್ಬದ ಸಂಭ್ರಮ. ನಾಗನನ್ನು ಕಣ್ಣಿಗೆ ಕಾಣುವ ದೇವರೆಂದು ನಂಬಿ, ಪ್ರತಿಯೊಂದು ಕುಟುಂಬವೂ ನಾಗನ ವಿಗ್ರಹಕ್ಕೆ ಹಾಲು ಹಾಗೂ ಸೀಯಾಳಾಭಿಷೇಕ ಮಾಡುತ್ತದೆ.
ದಕ್ಷಿಣ ಕನ್ನಡ: ರಾಜ್ಯದೆಲ್ಲೆಡೆ ನಾಗರಪಂಚಮಿ (Nagara Panchami) ಹಬ್ಬದ ಸಂಭ್ರಮ ನಡೆಯುತ್ತಿದೆ. ಒಂದೊಂದು ಊರಲ್ಲಿ ಒಂದೊಂದು ರೀತಿಯ ಪೂಜೆಯನ್ನು ಮಾಡ್ತಾರೆ. ಆದ್ರೆ ಪರಶುರಾಮ ಸೃಷ್ಟಿಯ ತುಳುನಾಡಿನಲ್ಲಿ ನಾಗಾರಾಧನೆಗೆ ಅದರದೇ ಆದ ಮಹತ್ವವಿದ್ದು, ನಾಗನನ್ನು ಈ ಭಾಗದ ಜನ ಕಣ್ಣಿಗೆ ಕಾಣುವ ದೇವರೆಂದೇ (God) ನಂಬುತ್ತಾರೆ. ಈ ಕಾರಣದಿಂದಲೇ ತುಳುವರು ನಾಗರಪಂಚಮಿಯನ್ನು ಒಂದು ವಿಶೇಷ ಹಬ್ಬವನ್ನಾಗಿ (Festival) ಆಚರಿಸುತ್ತಾರೆ. ನಾಗರಪಂಚಮಿಯನ್ನು ನಾಗನ ವಿಗ್ರಹಕ್ಕೆ ಹಾಲೆರೆಯುವ ಮೂಲಕ ನಾಗನ ಕೃಪೆಗೆ ಪಾತ್ರರಾಗುತ್ತಾರೆ.
ಪ್ರಕೃತಿಯನ್ನೇ ದೇವರೆಂದು ಪೂಜಿಸುವ ತುಳುವರು ಪ್ರಕೃತಿಯಲ್ಲಿ ಆಗುವ ಬದಲಾವಣೆಗಳಿಗೆ ಅನುಗುಣವಾಗಿ ತಮ್ಮ ಸಂಪ್ರದಾಯಿಕ ಆಚರಣೆಗಳನ್ನು ಆಚರಿಸಿಕೊಂಡು ಬರುತ್ತಿದ್ದಾರೆ. ಇಂಥಹ ಆಚರಣೆಗಳಲ್ಲಿ ನಾಗರಪಂಚಮಿಯೂ ಒಂದಾಗಿದ್ದು, ತುಳುವರು ನಾಗನನ್ನೇ ಪ್ರತ್ಯಕ್ಷ ದೈವವಂದು ಇಂದಿಗೂ ನಂಬಿಕೊಂಡು ಬರುತ್ತಿದ್ದಾರೆ. ಈ ಕಾರಣಕ್ಕಾಗಿಯೇ ತುಳುನಾಡಿನ ಪ್ರತಿಯೊಂದು ಕುಟುಂಬಕ್ಕೂ ನಾಗನಕಟ್ಟೆಯಿದ್ದು, ನಾಗರಪಂಚಮಿಯಂದು ಈ ನಾಗನಕಟ್ಟೆಗೆ ವಿಶೇಷ ಪೂಜೆಗಳನ್ನು ಸಲ್ಲಿಸುವ ಮೂಲಕ ನಾಗನ ವಿಗ್ರಹಕ್ಕೆ ಹಾಲು ಹಾಗೂ ಸೀಯಾಳಾಭೀಷೇಕವನ್ನು ಮಾಡುವುದು ಇಲ್ಲಿ ಅನಾಧಿಕಾಲದಿಂದಲೂ ಬೆಳೆದು ಬಂದಿರುವಂತಹ ಸಂಪ್ರದಾಯವಾಗಿದೆ.
ತುಳುನಾಡಿನಲ್ಲಿ ನಾಗನ ಆರಾಧನೆಗೆ ಪೌರಾಣಿಕ ಇತಿಹಾಸವೂ ಇದ್ದು, ಪರಶುರಾಮನು ಸಮುದ್ರಕ್ಕೆ ತನ್ನ ಕೊಡಲಿಯನ್ನು ಎಸೆದು ತುಳುನಾಡನ್ನು ಸೃಷ್ಟಿಸಿದ ಸಂದರ್ಭದಲ್ಲಿ ಭೂಮಿಯಡಿಯಲ್ಲಿದ್ದ ಯಕ್ಷರು ತಮಗೆ ವಾಸಿಸಲು ಜಾಗ ನೀಡುವಂತೆ ಪರಶುರಾಮನಲ್ಲಿ ಬೇಡಿಕೊಳ್ಳುತ್ತಾರಂತೆ. ಈ ಸಂದರ್ಭದಲ್ಲಿ ತುಳುನಾಡಿನಲ್ಲಿ ನಿಮಗೆ ಜೀವಿಸುವ ಜೊತೆಗೆ ನಿಮ್ಮ ಆರಾಧನೆಯೂ ನಡೆಯಲಿದೆ ಎನ್ನುವ ಮಾತನ್ನು ಪರಶುರಾಮ ಅಂದು ಯಕ್ಷರಿಗೆ ನೀಡಿದ ಹಿನ್ನಲೆಯಲ್ಲಿ, ಇಂದಿಗೂ ತುಳುನಾಡಿನಲ್ಲಿ ಯಕ್ಷ ಸ್ವರೂಪವಾದ ನಾಗಗಳಿಗೆ ಇಲ್ಲಿ ಆರಾಧನೆಯಲ್ಲಿ ಪ್ರಥಮ ಸ್ಥಾನ ದೊರೆತಿದೆ.
ತುಳುನಾಡಿನ ಎಲ್ಲಾ ದೇವಸ್ಥಾನಗಳಲ್ಲೂ ಅಲ್ಲಿರುವ ಪ್ರಮುಖ ಆರಾಧ್ಯ ದೇವರ ಜೊತೆಗೆ ನಾಗನಿಗೆ ಪ್ರತ್ಯೇಕ ಕಟ್ಟೆಗಳನ್ನು ಕಟ್ಟಿ ಆರಾಧಿಸಲಾಗುತ್ತಿದೆ. ಕುಕ್ಕೆ ಸುಬ್ರಮಣ್ಯ ಕ್ಷೇತ್ರ ಸೇರಿದಂತೆ ಜಿಲ್ಲೆಯ ಹೆಚ್ಚಿನ ದೇವಸ್ಥಾನಗಳಲ್ಲೂ ನಾಗಾರಾಧನೆಗೆ ವಿಶಿಷ್ಟ ಮಹತ್ವವನ್ನೂ ನೀಡಲಾಗಿದೆ. ನಾಗರಪಂಚಮಿಯಂದು ತುಳುನಾಡಿನ ಪ್ರತಿಯೊಂದು ಕುಟುಂಬವೂ ನಾಗನ ವಿಗ್ರಹಗಳಿಗೆ ಹಾಲು ಹಾಗೂ ಸೀಯಾಳಾಭಿಷೇಕವನ್ನು ಮಾಡುವ ಮೂಲಕ ನಾಗನ ಮೇಲಿರುವ ನಂಬಿಕೆ ಹಾಗೂ ಭಕ್ತಿಯನ್ನು ಸಾದರಪಡಿಸುತ್ತದೆ.
Dakshina Kannada,Karnataka
July 28, 2025 5:42 PM IST