Last Updated:
ಸಮರ್ಥ ಕಲಾವಿದೆ ಸುಮತಿ ಶೆಟ್ಟಿ, ಕೆಮ್ರಾಲ್ ಗ್ರಾಮದ ನಿವಾಸಿ, ಕಸವನ್ನು ಕಲಾಕೃತಿಗಳಾಗಿ ಪರಿವರ್ತಿಸುತ್ತಾರೆ. ವಯಸ್ಸು ಎಂಬತ್ತಾದರೂ ಕುಗ್ಗದ ಉತ್ಸಾಹದಿಂದ, ದಿನಕ್ಕೆ 2 ಗಂಟೆ ಕಲಾಕೃತಿಗಳನ್ನು ರಚಿಸುತ್ತಾರೆ.
ದಕ್ಷಿಣಕನ್ನಡ: ಇವರ ಕೈಗೆ ಏನೇ ಕಸ ಸಿಕ್ಕರೂ ಅದೊಂದು ಕಲಾಕೃತಿಯಾಗುತ್ತದೆ. ಮನೆಯ ಒಳಗೂ ಹೊರಗೂ ಇವರ ಕಲ್ಪನೆಯ ಮೂಸೆಯಲ್ಲಿ ಅರಳಿದ ಕಲಾಕೃತಿಗಳು ರಾರಾಜಿಸುತ್ತಿವೆ. ದಾರಿ ಹೋಕರು ಯಾರಾದರೂ ಈ ಮನೆಯತ್ತ ನೋಡಿದರೆ ಸಾಕು ಕಂಪೌಂಡ್‌ನೊಳಗೆ ಪ್ರವೇಶಿಸಿ ಒಂದು ರೌಂಡ್ ಇವರ ಕಲಾಕೃತಿಗಳನ್ನು ನೋಡಿಯೇ ಹೋಗುವುದಂತೆ!
ಪಕ್ಷಿಕೆರೆ ಕೆಮ್ರಾಲ್ ಗ್ರಾಮದ ನಿವಾಸಿ ಸುಮತಿ ಶೆಟ್ಟಿಯವರೇ ಈ ಕಲಾಕೃತಿಗಳ ರೂವಾರಿ. ವಯಸ್ಸು ಎಂಬತ್ತಾದರೂ ಕುಗ್ಗದ ಉತ್ಸಾಹ. ತೆಂಗಿನ ಗೆರಟೆ, ಸ್ಟ್ರಾ, ಮರದ ತುಂಡು, ಮಣಿ, ಬಿದಿರಿನ ಬೊಂಬು, ಹುಲ್ಲು, ಮಣ್ಣಿನ ಮಡಿಕೆ, ಹೆಂಚು, ಕಲ್ಲು, ಬಾಟಲಿ, ಪ್ಲಾಸ್ಟಿಕ್, ಟಯರ್ ಏನೇ ನಿರುಪಯುಕ್ತ ವಸ್ತುಗಳಲ್ಲೂ ತಮ್ಮದೇ ಕಲ್ಪನೆಯ ಕಲಾಕೃತಿ ರಚಿಸುವುದರಲ್ಲಿ ಇವರು ಸಿದ್ಧಹಸ್ತರು.
ಎಸೆದ ನೀರಿನ ಬಾಟಲಿಯನ್ನು ಹೂವಾಗಿ ಪರಿವರ್ತಿಸಿದರೆ, ತೆಂಗಿನ ಗೆರಟೆ, ಒಣಗಿದ ತೆಂಗಿಗೆ ಇವರು ಮೂಸಂಬಿ, ಮಾವಿನ ಹಣ್ಣಿನ ರೂಪಕೊಟ್ಟು ಚಂದವಾಗಿಸಿದ್ದಾರೆ. ಹುಲ್ಲಿನಲ್ಲಿ ಚಂದದ ಬುಟ್ಟಿಗಳನ್ನು ತಯಾರಿಸಿದರೆ, ಮಂಗಳೂರು ಹಂಚಿಗೆ ಬಣ್ಣಬಳಿದು ಕಣ್ಸೆಳೆಯುವಂತೆ ಮಾಡಿದ್ದಾರೆ. ಮನೆಯ ಗಿಡಗಳ ಬುಡಗಳನ್ನೂ ಸಣ್ಣಸಣ್ಣ ಕಲ್ಲುಗಳನ್ನು ಇರಿಸಿ ಕಲಾಕೃತಿಯನ್ನಾಗಿಸಿದ್ದಾರೆ. ಮಣ್ಣಿನ ಮಡಿಕೆ, ಹೂಜಿ, ಗಾಜಿನ ಬಾಟಲಿಗಳಿಗೆ ರಂಗು ತುಂಬಿಸಿ ಅಂದವಾಗಿಸಿದ್ದಾರೆ.
ದಿನದಲ್ಲಿ 2 ಗಂಟೆಗಳ ಕಾಲ ಕಲಾಕೃತಿ ರಚನೆ
ಮದುವೆಯಾದ ಬಳಿಕ 35 ವರ್ಷ ಮುಂಬೈನಲ್ಲಿದ್ದರು. ಮಕ್ಕಳಿಗೆ ಮದುವೆಯಾದ ಬಳಿಕ ಹುಟ್ಟೂರಿನ ಸೆಳೆತಕ್ಕೊಳಗಾದರು. ಕೆಮ್ರಾಲ್‌ನಲ್ಲಿರುವ ತಂದೆಯ ಜಾಗದಲ್ಲಿ ಮನೆ ಕಟ್ಟಿಸಿ ಕಳೆದ 20 ವರ್ಷಗಳಿಂದ ವಾಸವಾಗಿದ್ದಾರೆ. ದಿನದ 2 ಗಂಟೆಗಳ ಕಾಲ ಕಲಾಕೃತಿ ರಚಿಸಲು ಸಮಯ ಮೀಸಲಿಟ್ಟು, ಆಗಾಗ ಅವುಗಳನ್ನು ನಿರ್ವಹಣೆ ಮಾಡುತ್ತಿದ್ದರೆ ಸಾಕು ಎಷ್ಟು ವರ್ಷವೂ ಬಾಳಿಕೆ ಬರುತ್ತದೆ. ನನ್ನ ಈ ಕಾರ್ಯಕ್ಕೆ ಪುತ್ರಿಯರು, ಅಳಿಯಂದಿರು, ಮೊಮ್ಮಕ್ಕಳು ಸಹಕಾರ ನೀಡುತ್ತಾರೆ ಎಂದು ಹೇಳುತ್ತಾರೆ ಸುಮತಿ ಶೆಟ್ಟಿ.
Dakshina Kannada,Karnataka
August 07, 2025 1:34 PM IST