Last Updated:
ದಕ್ಷಿಣ ಕನ್ನಡದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಳದಲ್ಲಿ ಆ.15ರಿಂದ ಪ್ಲಾಸ್ಟಿಕ್ ನಿಷೇಧ. ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್. ಎಸ್. ಇಂಜಾಡಿ ಮತ್ತು ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ ಮಾಹಿತಿ.
ದಕ್ಷಿಣ ಕನ್ನಡ: ನಾಗಾರಾಧನೆಯ ಪುಣ್ಯ ತಾಣ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ (Kukke Subrahmanya) ದೇವಳದಲ್ಲಿ ಸರಕಾರದ (Govt) ಆದೇಶದಂತೆ ಮತ್ತು ರಾಜ್ಯ ಧಾರ್ಮಿಕ ದತ್ತಿ ಆಯುಕ್ತರ ಸುತ್ತೋಲೆ ಪ್ರಕಾರ ಆ.15 ರಿಂದ ಸಂಪೂರ್ಣವಾಗಿ ಪ್ಲಾಸ್ಟಿಕ್ ನಿಷೇಧ (Plastic Ban) ಮಾಡಲಾಗುವುದು.ಅಲ್ಲದೆ ಈ ಮೂಲಕ ನಮ್ಮ ನಡೆ ಪ್ಲಾಸ್ಟಿಕ್ ಮುಕ್ತದೆಡೆ ಅಭಿಯಾನಕ್ಕೆ ಪುಣ್ಯಕ್ಷೇತ್ರ ದಲ್ಲಿ ಚಾಲನೆ ನೀಡಲಾಗುವುದು. ಆರೋಗ್ಯಕ್ಕೆ ಮಾರಕವಾದ ಪ್ಲಾಸ್ಟಿಕ್ ಬಳಕೆ ಮಾಡದೆ ನಿರ್ಬಂಧಿಸುವ ಈ ಮಹೋನ್ನತ ಕಾರ್ಯಕ್ಕೆ ಸರ್ವ ಭಕ್ತರು ಮತ್ತು ಸಾರ್ವಜನಿಕರು ಸರ್ವ ರೀತಿಯ ಸಹಕಾರ ನೀಡಿ ಸಂಪೂರ್ಣವಾಗಿ ಪ್ಲಾಸ್ಟಿಕ್ (Plastic) ಬಳಕೆ ಹತ್ತಿಕ್ಕಲು ದೇವಳದೊಂದಿಗೆ ಕೈ ಜೋಡಿಸಬೇಕೆಂದು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್. ಎಸ್. ಇಂಜಾಡಿ ಮತ್ತು ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ ತಿಳಿಸಿದ್ದಾರೆ.
ಕರ್ನಾಟಕ ಸರಕಾರ ಅಧಿಸೂಚನೆಯಂತೆ ಧಾರ್ಮಿಕ ದತ್ತಿ ಇಲಾಖಾ ವ್ಯಾಪ್ತಿಯ ದೇವಸ್ಥಾನಗಳಲ್ಲಿ ಏಕಬಳಕೆಯ ಪ್ಲಾಸ್ಟಿಕ್ ಉತ್ಪನ್ನಗಳ ಉತ್ಪಾದನೆ ಸಂಗ್ರಹಣಿ, ವಿತರಣೆ, ಮಾರಾಟ ಮತ್ತು ಬಳಕೆಯನ್ನು ಕಡ್ಡಾಯವಾಗಿ ಆ.15ರಿಂದ ನಿಷೇಧಿಸಲಾಗುತ್ತದೆ. ದೇವಸ್ಥಾನಗಳಲ್ಲಿ ನೀರಿನ ಬಾಟಲ್ ಸೇರಿದಂತೆ ಎಲ್ಲಾ ರೀತಿಯ ಪ್ಲಾಸ್ಟಿಕ್ ಸಾಮಾಗ್ರಿಗಳ ಬಳಕೆಯನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
ದೇವಳದ ಪರಿಸರದ ಅಂಗಡಿಗಳಲ್ಲಿ, ವಾಣಿಜ್ಯ ಸಂಕೀರ್ಣಗಳಲ್ಲಿ ಏಕ ಬಳಕೆಯ ಪ್ಲಾಸ್ಟಿಕ್ಗಳ ಉತ್ಪಾದನೆ, ಸಂಗ್ರಹಣೆ, ವಿತರಣೆ, ಮಾರಾಟ ಮತ್ತು ಬಳಕೆಯನ್ನು ಕಡ್ಡಾಯವಾಗಿ ನಿರ್ಬಂಧಿಸಲಾಗುತ್ತದೆ. ಬಳಕೆ ಕಂಡು ಬಂದಲ್ಲಿ ಕರ್ನಾಟಕ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಕಾಯ್ದೆಗಳ ಪ್ರಕಾರ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದ್ದಾರೆ.
ಶ್ರೀ ದೇವಳದ ಅಧೀನದ ಎಲ್ಲಾ ಅಂಗಡಿ ಕಟ್ಟಡದ ಬಾಡಿಗೆದಾರರು, ವ್ಯಾಪಾರಸ್ಥರು ದೇವಳದ ಎಲ್ಲಾ ವ್ಯಾಪಾರದ ಅಂಗಡಿ ಕಟ್ಟಡಗಳಲ್ಲಿ ಹಾಗೂ ಆವರಣಗಳಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ಹಾಗೂ ಪ್ಲಾಸ್ಟಿಕ್ ಉತ್ಪನ್ನಗಳ ಮಾರಾಟವನ್ನು ಸಂಪೂರ್ಣವಾಗಿ ನಿಲ್ಲಿಸಬೇಕು. ಉಲ್ಲಂಘಿಸಿದಲ್ಲಿ ದಂಡನೆಯನ್ನು ವಿಧಿಸಲಾಗುವುದು ಹಾಗೂ ಅಂಗಡಿಗಳನ್ನು ತೆರವುಗೊಳಿಸಲು ಸೂಕ್ತ ಕ್ರಮ ವಹಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ಆ.15 ಸ್ವಾತಂತ್ರೋತ್ಸವದ ದಿನದಂದು ನಮ್ಮ ನಡೆ ಪ್ಲಾಸ್ಟಿಕ್ ಮುಕ್ತದೆಡೆಗೆ ಅಭಿಯಾನದ ಮೂಲಕ ಪ್ಲಾಸ್ಟಿಕ್ ಮುಕ್ತ ದೇವಸ್ಥಾನವನ್ನಾಗಿ ಘೋಷಣೆಯನ್ನು ಮಾಡಲಾಗುವುದು. ಸರ್ವರೂ ಸಹಕರಿಸಬೇಕು. ಸರ್ವರ ಸಹಕಾರದಿಂದ ಪ್ಲಾಸ್ಟಿಕ್ ಮುಕ್ತ ಕ್ಷೇತ್ರ ಅಭಿಯಾನ ಯಶಸ್ವಿಯಾಗುವುದು ಎಂದು ತಿಳಿಸಿದ್ದಾರೆ.
Dakshina Kannada,Karnataka
August 14, 2025 12:30 PM IST