Last Updated:
ಶುಕ್ರವಾರ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಆಸ್ಟ್ರೇಲಿಯಾವನ್ನು 84 ರನ್‌ಗಳಿಂದ ಸೋಲಿಸಿತು. ಆಫ್ರಿಕಾ ಮೂರು ಪಂದ್ಯಗಳ ಏಕದಿನ ಸರಣಿಯನ್ನು 2-0 ಅಂತರದಿಂದ ಗೆದ್ದುಕೊಂಡಿತು.
ಹಾಲಿ ವಿಶ್ವಚಾಂಪಿಯನ್ ಆಸ್ಟ್ರೇಲಿಯಾ (Australia) ತಂಡ ತವರಿನಲ್ಲೇ ಸರಣಿ ಸೋಲಿನ ಮುಖಭಂಗ ಅನುಭವಿಸಿದೆ. ಪ್ರವಾಸಿ ದಕ್ಷಿಣ ಆಫ್ರಿಕಾ ತಂಡ ಸತತ ಎರಡನೇ ಏಕದಿನ ಪಂದ್ಯದಲ್ಲೂ ಕಾಂಗರೂ ಪಡೆ ಬಗ್ಗು ಬಡಿದು ಇನ್ನೂ ಒಂದು ಪಂದ್ಯ ಇರುವಂತೆ ಸರಣಿಯನ್ನ ವಶಪಡಿಸಿಕೊಂಡಿತು. ಈ ಮೂಲಕ ಆಸ್ಟ್ರೇಲಿಯಾ ವಿರುದ್ಧ ಸತತ 5 ನೇ ಏಕದಿನ ಸರಣಿಯನ್ನು (ODI Series) ಗೆದ್ದ ದಾಖಲೆ ಬರೆಯಿತು. 2008ರಿಂದ ಆಸೀಸ್ ನೆಲದಲ್ಲಿ ನಡೆದಿರುವ 4 ಏಕದಿನ ಸರಣಿಯಲ್ಲಿ ದಕ್ಷಿಣ ಆಫ್ರಿಕಾ ತಂಡ 3 ಬಾರಿ ಸರಣಿ ಗೆದ್ದ ದಾಖಲೆ ಬರೆದಿದೆ.
ಶುಕ್ರವಾರ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಆಸ್ಟ್ರೇಲಿಯಾವನ್ನು 84 ರನ್‌ಗಳಿಂದ ಸೋಲಿಸಿತು. ಆಫ್ರಿಕಾ ಮೂರು ಪಂದ್ಯಗಳ ಏಕದಿನ ಸರಣಿಯನ್ನು 2-0 ಅಂತರದಿಂದ ಗೆದ್ದುಕೊಂಡಿತು. ಇದರೊಂದಿಗೆ, ಆಫ್ರಿಕಾ ಆಸ್ಟ್ರೇಲಿಯಾ ವಿರುದ್ಧದ ಸತತ ಐದನೇ ಏಕದಿನ ಸರಣಿಯನ್ನು ಗೆದ್ದುಕೊಂಡಿತು. ಎರಡನೇ ಏಕದಿನ ಪಂದ್ಯದಲ್ಲಿ, ದಕ್ಷಿಣ ಆಫ್ರಿಕಾ ಮೊದಲು ಬ್ಯಾಟ್ ಮಾಡಿ 49.1 ಓವರ್‌ಗಳಲ್ಲಿ 277 ರನ್ ಗಳಿಸಿತು. ಮ್ಯಾಥ್ಯೂ ಬ್ರೀಟ್ಜ್ಕೆ ಆಫ್ರಿಕಾ ಪರ ಅತಿ ಹೆಚ್ಚು 88 ರನ್, ಟ್ರಿಸ್ಟಾನ್ ಸ್ಟಬ್ಸ್ 74 ರನ್ ಗಳಿಸಿ ಸ್ಪರ್ಧಾತ್ಮಕ ಮೊತ್ತಕ್ಕೆ ನೆರವಾದರು.
ಆಸ್ಟ್ರೇಲಿಯಾ ಪರ ಆ್ಯಡಂ ಜಂಪಾ 63ಕ್ಕೆ3, ಮಾರ್ನಸ್ ಲಾಬುಶೇನ್ 29ಕ್ಕೆ2 ನೇಥನ್ ಎಲ್ಲಿಸ್ 46ಕ್ಕೆ2, ಕ್ಸೇವಿಯರ್ ಬಾರ್ಟ್ಲೆಟ್ 45ಕ್ಕೆ2 ವಿಕೆಟ್ ಪಡೆದರು.
278ರನ್‌ಗಳ ಗುರಿ ಬೆನ್ನಟ್ಟೊದ ಆಸ್ಟ್ರೇಲಿಯಾ ತಂಡವು 37.4 ಓವರ್‌ಗಳಲ್ಲಿ ಎಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡು ಕೇವಲ 193 ರನ್‌ಗಳನ್ನು ಗಳಿಸಲು ಸಾಧ್ಯವಾಯಿತು. ಗುರಿಯನ್ನು ಬೆನ್ನಟ್ಟುವ ವೇಳೆ ಆಸ್ಟ್ರೇಲಿಯಾ ತಂಡವು ಕೆಟ್ಟ ಆರಂಭ ಪಡೆಯಿತು. ಕೇವಲ ಏಳು ರನ್‌ಗಳಿಗೆ ಎರಡು ವಿಕೆಟ್‌ಗಳನ್ನು ಕಳೆದುಕೊಂಡಿತು. ಟ್ರಾವಿಸ್ ಹೆಡ್ (6), ಮಾರ್ನಸ್ ಲ್ಯಾಬುಶೇನ್ (1) ಔಟಾದರು. ನಾಯಕ ಮಿಚೆಲ್ ಮಾರ್ಷ್ (18) ರೂಪದಲ್ಲಿ ಆಸ್ಟ್ರೇಲಿಯಾದ ಮೂರನೇ ವಿಕೆಟ್ ಪತನವಾಯಿತು. ಇದರ ನಂತರ, ಜೋಶ್ ಇಂಗ್ಲಿಸ್ ಮತ್ತು ಕ್ಯಾಮರೂನ್ ಗ್ರೀನ್ ಇನ್ನಿಂಗ್ಸ್ ನಿಭಾಯಿಸಲು ಪ್ರಯತ್ನಿಸಿದರು. ನಾಲ್ಕನೇ ವಿಕೆಟ್‌ಗೆ 67 ರನ್‌ಗಳ ಜೊತೆಯಾಟ ನೀಡಿ ಚೇತರಿಕೆ ನೀಡಲು ಪ್ರಯತ್ನಿಸಿದರು.
ಆದರೆ 23 ನೇ ಓವರ್‌ನಲ್ಲಿ, ಸೆನುರಾನ್ ಮುತ್ತುಸಾಮಿ 35 ರನ್ಗಳಿಸಿದ್ದ ಕ್ಯಾಮರೂನ್ ಗ್ರೀನ್ ಅವರನ್ನು ಔಟ್ ಮಾಡಿ ದಕ್ಷಿಣ ಆಫ್ರಿಕಾಕ್ಕೆ ನಾಲ್ಕನೇ ಯಶಸ್ಸನ್ನು ತಂದುಕೊಟ್ಟರು. ಇದರ ಬೆನ್ನಲ್ಲೇ ಅಲೆಕ್ಸ್ ಕ್ಯಾರಿ (13) ಕೂಡ ಔಟಾದರು.
34ನೇ ಓವರ್‌ನಲ್ಲಿ, ಲುಂಗಿ ಎನ್‌ಗಿಡಿ ತಮ್ಮ ಸತತ 2 ಓವರ್‌ಗಳಲ್ಲಿ ಆರನ್ ಹಾರ್ಡಿ (10) ಹಾಗೂ ಜೋಶ್ ಇಂಗ್ಲಿಸ್ (87) ಅವರನ್ನು ಔಟ್ ಮಾಡುವ ಮೂಲಕ ಸಂಪೂರ್ಣ ಪಂದ್ಯ ದಕ್ಷಿಣ ಆಫ್ರಿಕಾ ಕಡೆ ವಾಲುವಂತೆ ಮಾಡಿದರು. ‘ಜೋಶ್ ಇಂಗ್ಲಿಸ್ ಅವರನ್ನು ವಿಕೆಟ್ ಕೀಪರ್ ರಿಕಲ್ಟನ್‌ಗೆ ಕ್ಯಾಚ್ ನೀಡುವ ಮೂಲಕ ಪೆವಿಲಿಯನ್ ಸೇರಿಕೊಂಡರು. ಇಂಗ್ಲಿಸ್ 74 ಎಸೆತಗಳಲ್ಲಿ 10 ಬೌಂಡರಿ ಮತ್ತು ಎರಡು ಸಿಕ್ಸರ್‌ಗಳ ಸಹಿತ 87 ರನ್ ಗಳಿಸಿ ಏಕಾಂಗಿ ಹೋರಾಟ ನಡೆಸಿದರು. ಇದಾದ ನಂತರ, ಕ್ಸೇವಿಯರ್ ಬಾರ್ಟ್ಲೆಟ್ (8), ನಾಥನ್ ಎಲ್ಲಿಸ್ 3 ರನ್ ಗಳಿಸಿ ಔಟ್ ಆದರು. 38 ನೇ ಓವರ್‌ನ ನಾಲ್ಕನೇ ಎಸೆತದಲ್ಲಿ, ಎನ್‌ಗಿಡಿ ಆಡಮ್ ಜಂಪಾರನ್ನ (3) ಔಟ್ ಮಾಡಿ ಆಸ್ಟ್ರೇಲಿಯಾದ ಇನ್ನಿಂಗ್ಸ್ ಅನ್ನು 193 ರನ್‌ಗಳಿಗೆ ಕೊನೆಗೊಳಿಸಿದರು. ಆಸ್ಟ್ರೇಲಿಯಾ ತನ್ನ ಕೊನೆಯ ನಾಲ್ಕು ವಿಕೆಟ್‌ಗಳನ್ನು ಕೇವಲ 18 ರನ್‌ಗಳಿಗೆ ಕಳೆದುಕೊಂಡಿತು.
‘ದಕ್ಷಿಣ ಆಫ್ರಿಕಾ ಪರ, ಲುಂಗಿ ಎನ್‌ಗಿಡಿ 8.4 ಓವರ್‌ಗಳಲ್ಲಿ 42 ರನ್‌ಗಳಿಗೆ 5 ವಿಕೆಟ್ ಪಡೆದರು. ನಾಂಡ್ರೆ ಬರ್ಗರ್ ಎರಡು ವಿಕೆಟ್ ಪಡೆದರು. ವಿಯಾನ್ ಮುಲ್ಡರ್ ಮತ್ತು ಸೆನುರನ್ ಮುತ್ತುಸಾಮಿ ತಲಾ ಒಬ್ಬ ಬ್ಯಾಟ್ಸ್‌ಮನ್ ಅನ್ನು ಔಟ್ ಮಾಡಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.
August 22, 2025 6:40 PM IST