ರಿಂಕು ಸಿಂಗ್ ತಮ್ಮ ಲವ್ಸ್ಟೋರಿ ಬಗ್ಗೆ ಬಗ್ಗೆ ಮಾತನಾಡುತ್ತಾ, “ನಮ್ಮ ಪ್ರೀತಿ 2022ರಲ್ಲಿ ಶುರುವಾಯಿತು. ಆಗ ಐಪಿಎಲ್ ಪಂದ್ಯಗಳು ಮುಂಬೈನಲ್ಲಿ ನಡೆಯುತ್ತಿದ್ದವು. ನನ್ನ ಫ್ಯಾನ್ಸ್ ಪೇಜ್ನಲ್ಲಿ ಪ್ರಿಯಾ ಸರೋಜ್ ತಮ್ಮ ಗ್ರಾಮದಲ್ಲಿ ಚುನಾವಣಾ ಪ್ರಚಾರ ಮಾಡುತ್ತಿರುವ ಫೋಟೋವನ್ನು ನಾನು ನೋಡಿದೆ. ಪ್ರಿಯಾಳ ಸಹೋದರಿ ಆ ಫೋಟೋಗಳನ್ನು ತೆಗೆದು, ಅವುಗಳನ್ನು ನನ್ನ ಫ್ಯಾನ್ಸ್ ಪುಟದಲ್ಲಿ ಹಾಕಿಸಿದ್ದರು. ಆ ಫೋಟೋವನ್ನು ನೋಡಿದ ತಕ್ಷಣವೇ ನನಗೆ ಪ್ರಿಯಾ ಇಷ್ಟವಾದರು. ಅವರೇ ನನಗೆ ಪರಿಪೂರ್ಣ ಜೋಡಿ ಎನಿಸಿದರು” ಎಂದು ಹೇಳಿದ್ದಾರೆ.
ಮೊದಲಿಗೆ ಪ್ರಿಯಾಗೆ ಸಂದೇಶ ಕಳುಹಿಸಲು ಹಿಂಜರಿಕೆ ಉಂಟಾಗಿತ್ತು. ಆದರೆ ಪ್ರಿಯಾ ತಮ್ಮ ಕೆಲವು ಫೋಟೋಗಳನ್ನು ಇನ್ಸ್ಟಾಗ್ರಾಮ್ನಲ್ಲಿ ಲೈಕ್ ಮಾಡಿದ್ದು ಗಮನಕ್ಕೆ ಬಂದಿತು. “ಅದನ್ನು ನೋಡಿದ ನಂತರ ನಾನು ತಕ್ಷಣವೇ ಅವರಿಗೆ ಇನ್ಸ್ಟಾಗ್ರಾಮ್ನಲ್ಲಿ ಸಂದೇಶ ಕಳುಹಿಸಿದೆ. ಅಲ್ಲಿಂದ ನಮ್ಮ ಸ್ನೇಹ ಶುರುವಾಯಿತು. ನಂತರ ನಾವು ಫೋನ್ ಕರೆಗಳ ಮೂಲಕ ಮಾತನಾಡಲು ಪ್ರಾರಂಭಿಸಿದೆವು. ವಾರಕ್ಕೆ ಕನಿಷ್ಠ ಎರಡು ದಿನವಾದರೂ ನಾವು ಮಾತನಾಡುತ್ತಿದ್ದೆವು. ವಿಶೇಷವಾಗಿ ನನ್ನ ಕ್ರಿಕೆಟ್ ಪಂದ್ಯಗಳ ಮೊದಲು, ಖಂಡಿತವಾಗಿಯೂ ಅವರೊಂದಿಗೆ ಮಾತನಾಡುತ್ತಿದ್ದೆ. ಹೀಗೆ 2022ರಿಂದ ನಮ್ಮ ಪ್ರೀತಿ ಆರಂಭವಾಯಿತು,” ಎಂದು ರಿಂಕು ತಮ್ಮ ಪ್ರೇಮಕಥೆಯ ಆರಂಭವನ್ನು ವಿವರಿಸಿದ್ದಾರೆ.
ರಿಂಕು ಸಿಂಗ್ ಮತ್ತು ಪ್ರಿಯಾ ಸರೋಜ್ ಜೂನ್ 8, 2025ರಂದು ಲಕ್ನೋದಲ್ಲಿ ಆಡಂಬರವಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಈ ಸಮಾರಂಭದಲ್ಲಿ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಮತ್ತು ಚಲನಚಿತ್ರ ನಟಿ ಜಯಾ ಬಚ್ಚನ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು. ರಿಂಕು ಮತ್ತು ಪ್ರಿಯಾ ತಮ್ಮ ನಿಶ್ಚಿತಾರ್ಥದ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು, “ನಾವು ಈ ಕ್ಷಣಕ್ಕಾಗಿ ಮೂರು ವರ್ಷಗಳಿಂದ ಕಾಯುತ್ತಿದ್ದೇವೆ” ಎಂದು ಬರೆದುಕೊಂಡಿದ್ದರು.
ಮೂಲತಃ ರಿಂಕು ಮತ್ತು ಪ್ರಿಯಾ ಅವರ ಮದುವೆ ನವೆಂಬರ್ 19, 2025ಕ್ಕೆ ವಾರಾಣಸಿಯ ತಾಜ್ ಹೋಟೆಲ್ನಲ್ಲಿ ನಿಗದಿಯಾಗಿತ್ತು. ಆದರೆ, ರಿಂಕು ಅವರ ಕ್ರಿಕೆಟ್ ಒಪ್ಪಂದಗಳಿಂದಾಗಿ, ಮದುವೆಯನ್ನು ಫೆಬ್ರವರಿ 2026ಕ್ಕೆ ಮುಂದೂಡಲಾಗಿದೆ. ತಾಜ್ ಹೋಟೆಲ್ನಲ್ಲಿ ಹೊಸ ದಿನಾಂಕಕ್ಕೆ ಮರುಬುಕಿಂಗ್ ಮಾಡಲಾಗಿದೆ ಎಂದು ರಿಂಕು ತಿಳಿಸಿದ್ದಾರೆ.
ಪ್ರಿಯಾ ಸರೋಜ್ ಲೋಕಸಭಾ ಸಂಸದೆಯಾಗಿ ತಮ್ಮ ಕ್ಷೇತ್ರದ ಜನರ ಸೇವೆಯಲ್ಲಿ ತೊಡಗಿದ್ದಾರೆ. ರಿಂಕು ಈ ಬಗ್ಗೆ ಹೇಳುತ್ತಾ, “ಪ್ರಿಯಾ ಸಂಸದರಾದ ನಂತರವೂ ನಮ್ಮ ಪ್ರೀತಿಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಆದರೆ, ಆರಂಭದಲ್ಲಿ ನಮಗೆ ಮಾತನಾಡಲು ಹೆಚ್ಚಿನ ಸಮಯ ಸಿಗುತ್ತಿತ್ತು. ಈಗ ಅವರು ತುಂಬಾ ಕಾರ್ಯನಿರತರಾಗಿದ್ದಾರೆ. ಅವರು ಗ್ರಾಮಗಳಿಗೆ ಭೇಟಿ ನೀಡಿ, ಜನರ ಸಮಸ್ಯೆಗಳನ್ನು ಆಲಿಸಿ, ಸಹಾಯ ಮಾಡುತ್ತಾರೆ. ಸಂಸತ್ತಿನ ಅಧಿವೇಶನಗಳಿಗೂ ಹಾಜರಾಗಬೇಕಾಗಿದೆ. ರಾಜಕಾರಣಿಯಾಗಿ ಅವರು ತಮ್ಮ ಕ್ಷೇತ್ರದಲ್ಲಿ ಗಟ್ಟಿಯಾದ ಅಡಿಪಾಯವನ್ನು ಹಾಕಬೇಕಾಗಿದೆ,” ಎಂದರು.
ರಿಂಕು ಮುಂದುವರೆದು, “ಪ್ರಿಯಾಳ ಇನ್ಸ್ಟಾಗ್ರಾಮ್ನಲ್ಲಿ ಅವರ ಕೆಲಸಕ್ಕೆ ಸಂಬಂಧಿಸಿದ ಫೋಟೋಗಳನ್ನು ಹೆಚ್ಚಾಗಿ ನೋಡಬಹುದು. ಬೆಳಗ್ಗೆ ಮನೆಯಿಂದ ಹೊರಟರೆ ರಾತ್ರಿಯ ವೇಳೆಗೆ ಮನೆಗೆ ಬರುತ್ತಾರೆ. ಆದ್ದರಿಂದ, ನಮಗೆ ಮಾತನಾಡಲು ಸಮಯ ಕಡಿಮೆ ಸಿಗುತ್ತದೆ. ಆದರೂ, ಅವರ ಜನರಿಗೆ ಸೇವೆ ಮಾಡುವ ಸಮರ್ಪಣೆಗೆ ನಾನು ಗೌರವ ಕೊಡುತ್ತೇನೆ,” ಎಂದು ಹೇಳಿದ್ದಾರೆ.
ರಿಂಕು ಸಿಂಗ್ ಭಾರತದ ಟಿ20 ತಂಡದ ಪ್ರಮುಖ ಆಟಗಾರರಲ್ಲಿ ಒಬ್ಬರಾಗಿದ್ದಾರೆ. ಐಪಿಎಲ್ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ತಂಡದ ಪರವಾಗಿ ಅವರು ಗಮನಾರ್ಹ ಪ್ರದರ್ಶನ ನೀಡಿದ್ದಾರೆ. 2023ರ ಐಪಿಎಲ್ನಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ 5 ಎಸೆತಗಳಲ್ಲಿ 5 ಸಿಕ್ಸರ್ಗಳನ್ನು ಬಾರಿಸಿ, 29 ರನ್ಗಳ ಅಗತ್ಯವಿದ್ದಾಗ ತಂಡವನ್ನು ಗೆಲುವಿಗೆ ಗಡಿ ದಾಟಿಸಿ ವಿಶ್ವವಿಖ್ಯಾತರಾಗಿದ್ದರು. ಈ ಪ್ರದರ್ಶನವು ಅವರನ್ನು ಜಾಗತಿಕವಾಗಿ ಗುರುತಿಸುವಂತೆ ಮಾಡಿತು. ಏಷ್ಯಾ ಕಪ್ 2025ರ ತಂಡದಲ್ಲಿ ಸ್ಥಾನ ಪಡೆದಿರುವ ರಿಂಕು, ಭಾರತಕ್ಕಾಗಿ ಮತ್ತೆ ತಮ್ಮ ಕೊಡುಗೆಯನ್ನು ನೀಡಲು ಸಿದ್ಧರಾಗಿದ್ದಾರೆ.
August 23, 2025 3:22 PM IST