Last Updated:
ಈಗಾಗಲೇ ಸರಣಿ ಕಳೆದುಕೊಂಡಿದ್ದ ಅಸೀಸ್ ಔಪಚಾರಿಕ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿ 431 ರನ್ಗಳಿಸಿತ್ತು. ಇದಕ್ಕೆ ಉತ್ತರವಾಗಿ ದಕ್ಷಿಣ ಆಫ್ರಿಕಾ ತಂಡ 24.5 ಓವರ್‌ಗಳಲ್ಲಿ ಕೇವಲ 155ಕ್ಕೆ ಆಲೌಟ್ ಆಗುವ ಮೂಲಕ ಹೀನಾಯ ಸೋಲು ಕಂಡಿತು.
ಆಸ್ಟ್ರೇಲಿಯಾ ತಂಡ ದಕ್ಷಿಣ ಆಫ್ರಿಕಾ (Australia vs South Africa) ವಿರುದ್ಧ ನಡೆದ 3ನೇ ಏಕದಿನ ಪಂದ್ಯದಲ್ಲಿ ಬರೋಬ್ಬರಿ 276 ರನ್ಗಳಿಂದ ಗೆದ್ದು ವಿಶ್ವದಾಖಲೆ (world Record) ಬರೆದಿದೆ. ಏಕದಿನ ಇತಿಹಾಸದಲ್ಲೇ ದಕ್ಷಿಣ ಆಫ್ರಿಕಾ ವಿರುದ್ಧ ದೊಡ್ಡ ಅಂತರದ ಜಯ ಸಾಧಿಸಿದ ದಾಖಲೆಗೆ ಕಾಂಗರೂ ಪಡೆ ಪಾತ್ರವಾಗಿದೆ. ಈಗಾಗಲೇ ಸರಣಿ ಕಳೆದುಕೊಂಡಿದ್ದ ಅಸೀಸ್ ಔಪಚಾರಿಕ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿ 431 ರನ್ಗಳಿಸಿತ್ತು. ಇದಕ್ಕೆ ಉತ್ತರವಾಗಿ ದಕ್ಷಿಣ ಆಫ್ರಿಕಾ ತಂಡ 24.5 ಓವರ್‌ಗಳಲ್ಲಿ ಕೇವಲ 155ಕ್ಕೆ ಆಲೌಟ್ ಆಗುವ ಮೂಲಕ ಹೀನಾಯ ಸೋಲು ಕಂಡಿತು.
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ತಂಡ ನಿಗದಿತ 50 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 431 ರನ್ ಗಳಿಸಿತು. ಇದು ಆಸ್ಟ್ರೇಲಿಯಾದ 2ನೇ ಗರಿಷ್ಠ ಮೊತ್ತವಾಗಿತ್ತು. 2006 ರಲ್ಲಿ ಜೋಹನೆಸ್ ಬರ್ಗ್ ಮೈದಾನದಲ್ಲಿ 4 ವಿಕೆಟ್ ನಷ್ಟಕ್ಕೆ 434 ರನ್ ಗಳಿಸಿದ್ದು ಗರಿಷ್ಠ ಸ್ಕೋರ್ ಆಗಿತ್ತು. ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಆಸೀಸ್ ತಂಡಕ್ಕೆ ಮೊದಲ ವಿಕೆಟ್ಗೆ ನಾಯಕ ಮಾರ್ಷ್ ಹಾಗೂ ಟ್ರಾವಿಸ್ ಹೆಡ್ 250 ರನ್‌ಗಳ ಜೊತೆಯಾಟ ನೀಡಿದರು. ಹೆಡ್ ಕೇವಲ 103 ಎಸೆತಗಳಲ್ಲಿ 17 ಬೌಂಡರಿ ಮತ್ತು 5 ಸಿಕ್ಸರ್‌ಗಳೊಂದಿಗೆ 142 ರನ್ ಗಳಿಸಿದರು. ಮಾರ್ಷ್ 106 ಎಸೆತಗಳಲ್ಲಿ 6 ಬೌಂಡರಿ ಮತ್ತು 5 ಸಿಕ್ಸರ್‌ಗಳೊಂದಿಗೆ 100 ರನ್ ಗಳಿಸಿದರು. ಹೆಡ್ 35ನೇ ಓವರ್ನಲ್ಲಿ ಕೇಶವ್ ಮಹಾರಾಜ ಬೌಲಿಂಗ್ನಲ್ಲಿ ಡೆವಾಲ್ಡ್ ಬ್ರೆವಿಸ್ಗೆ ಕ್ಯಾಚ್ ನೀಡಿ ಔಟ್ ಆದರು. ಹೆಡ್ ಔಟಾದ ಕೆಲವೇ ಎಸೆತಗಳಲ್ಲಿ ಮಾರ್ಷ್ ಶತಕ ಪೂರ್ಣಗೊಳಿಸಿ ಮತ್ತೊಬ್ಬ ಸ್ಪಿನ್ನರ್ ಮುತ್ತುಸಾಮಿಗೆ ವಿಕೆಟ್ ಒಪ್ಪಿಸಿದರು.
ಆದರೆ 3ನೇ ವಿಕೆಟ್ಗೆ ಒಂದಾದ ಕ್ಯಾಮರೂನ್ ಗ್ರೀನ್ ಹಾಗೂ ಅಲೆಕ್ಸ್ ಕ್ಯಾರಿ ಕೇವಲ 85 ಎಸೆತಗಳಲ್ಲಿ 164 ರನ್‌ಗಳ ಜೊತೆಯಾಟ ನೀಡಿದರು. ಹರಿಣಗಳ ಬೌಲರ್ಗಳನ್ನ ಪುಡಿಗಟ್ಟಿದ ಗ್ರೀನ್ ಕೇವಲ 55 ಎಸೆತಗಳಲ್ಲಿ 6 ಬೌಂಡರಿ ಮತ್ತು 8 ಸಿಕ್ಸರ್‌ಗಳೊಂದಿಗೆ ಒಟ್ಟು 118 ರನ್ ಸಿಡಿಸಿ ಅಜೇಯರಾಗಿ ಉಳಿದರು. ಇದು ಏಕದಿನ ಕ್ರಿಕೆಟ್ನಲ್ಲಿ ಅವರ ಮೊದಲ ಶತಕವಾಗಿದೆ. ಆಸ್ಟ್ರೇಲಿಯಾ ಪರ 2ನೇ ವೇಗದ ಶತಕವಾಗಿದೆ ಈ ಮೂವರ ಶತಕಗಳ ಜೊತೆಗೆ, ವಿಕೆಟ್ ಕೀಪರ್-ಬ್ಯಾಟರ್ ಅಲೆಕ್ಸ್ ಕ್ಯಾರಿ (50) ಕೂಡ ಅರ್ಧಶತಕದೊಂದಿಗೆ ಉತ್ತಮ ಪ್ರದರ್ಶನ ನೀಡಿದರು.
432 ರನ್‌ಗಳ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ತಂಡ ಯಾವುದೇ ಹಂತದಲ್ಲಿ ಆಸೀಸ್ ಬೌಲರ್ಗಳಿಗೆ ಸವಾಲು ಎಸೆಯಲು ಸಾಧ್ಯವಾಗಲಿಲ್ಲ. ಬೇಬಿ ಎಬಿಡಿ ಖ್ಯಾತಿಯ ಡೆವಾಲ್ಡ್ ಬ್ರೆವಿಸ್ 28 ಎಸೆತಗಳಲ್ಲಿ 2 ಬೌಂಡರಿ, 5 ಸಿಕ್ಸರ್ಗಳ ಸಹಿತ 49 ರನ್ಗಳಿಸಿ ತಂಡದ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಉಳಿದವರಲ್ಲಿ ಟೋನಿ ಡಿ ಜಾರ್ಜಿ 33 ಮಾತ್ರ 20ರ ಗಡಿ ದಾಟಿದರು. ಆರಂಭಿಕರಾದ ಮಾರ್ಕ್ರಮ್ 2, ರಿಕಲ್ಟನ್ 11, ನಾಯಕ ತೆಂಬಾ ಬವುಮಾ 19,ಟ್ರಿಸ್ಟಾನ್ ಸ್ಟಬ್ಸ್ 1, ಮುಲ್ಡರ್ 5, ಕಾರ್ಬಿನ್ ಬಾಷ್ 17 ಅಲ್ಪಮೊತ್ತಕ್ಕೆ ವಿಕೆಟ್ ಒಪ್ಪಿಸಿದರು.
ಆಸ್ಟ್ರೇಲಿಯಾ ಪರ ಉದಯೋನ್ಮುಖ ಬೌಲರ್ ಕೂಪರ್ ಕನೋಲಿ 22ಕ್ಕೆ 5 ವಿಕೆಟ್ ಪಡೆದರೆ, ಕ್ಸೇವಿಯರ್ ಬಾರ್ಲೆಟ್ 45ಕ್ಕೆ2, ಸೀನ್ ಅಬಾಟ್ 27ಕ್ಕೆ2, ಆ್ಯಡಂ ಜಂಪಾ 31ಕ್ಕೆ1 ವಿಕೆಟ್ ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.
ದಕ್ಷಿಣ ಆಫ್ರಿಕಾ ತಂಡ 431ರನ್ಗಳಿಗೆ ಉತ್ತರವಾಗಿ ಕೇವಲ 155 ರನ್ಗಳಿಗೆ ಆಲೌಟ್ ಆಗಿ 276 ರನ್‌ಗಳ ಹೀನಾಯ ಸೋಲು ಕಂಡಿತು. ಕಾಂಗರೂ ಪಡೆ ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ಏಕದಿನದಲ್ಲಿ ಅತಿ ದೊಡ್ಡ ಗೆಲುವು ಸಾಧಿಸಿದ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಈ ಹಿಂದೆ ಭಾರತದ ತಂಡ 2023ರಲ್ಲಿ 243 ರನ್ಗಳಿಂದ ಸೋಲುಣಿಸಿ ದಾಖಲೆ ಬರೆದಿತ್ತು.
ಆಸ್ಟ್ರೇಲಿಯಾ ತಂಡಕ್ಕೆ ಇದು 2ನೇ ಅತಿದೊಡ್ಡ ಏಕದಿನ ಪಂದ್ಯದ ಗೆಲುವಾಗಿದೆ. 2023ರ ಏಕದಿನ ವಿಶ್ವಕಪ್ ವೇಳೆ ನೆದರ್ಲೆಂಡ್ಸ್ ವಿರುದ್ಧ 309 ರನ್‌ಗಳ ಗೆಲುವು ಸಾಧಿಸಿರುವುದು ದಾಖಲೆಯಾಗಿದೆ.
August 24, 2025 7:12 PM IST