Stampede Case: ಕಾಲ್ತುಳಿತ ಪ್ರಕರಣ, ಭಾವನಾತ್ಮಕ ಪೋಸ್ಟ್ ಮೂಲಕ ಪರಿಹಾರ ಘೋಷಿಸಿದ ಆರ್​​ಸಿಬಿ!| RCB Announces Financial Aid For Families Of Bengaluru Stampede Victims | ಕ್ರೀಡೆ

Stampede Case: ಕಾಲ್ತುಳಿತ ಪ್ರಕರಣ, ಭಾವನಾತ್ಮಕ ಪೋಸ್ಟ್ ಮೂಲಕ ಪರಿಹಾರ ಘೋಷಿಸಿದ ಆರ್​​ಸಿಬಿ!| RCB Announces Financial Aid For Families Of Bengaluru Stampede Victims | ಕ್ರೀಡೆ

Last Updated:

ಕಾಲ್ತುಳಿತದಿಂದ ಮೃತಪಟ್ಟ ಪ್ರತಿ ಕುಟುಂಬಗಳಿಗೆ ಆರ್ಥಿಕ ಸಹಾಯ ನೀಡಿರುವುದಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಅಧಿಕೃತವಾಗಿ ಪ್ರಕಟಣೆ ಮೂಲಕ ತಿಳಿಸಿದೆ.

News18News18
News18

ಬೆಂಗಳೂರು (ಆ.30): ಈ ವರ್ಷ ಆರ್​ಸಿಬಿ ತಂಡದ 18 ವರ್ಷದ ಕನಸು ನನಸು ನನಸಾಯ್ತು. ಅಭಿಮಾನಿಗಳ ಸಂತಸ ಮುಗಿಲು ಮುಟ್ಟಿತ್ತು ಆದ್ರೆ ಈ ಖುಷಿ 48 ಗಂಟೆಯೂ ಇರಲಿಲ್ಲ. ಜೂನ್ 4ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ವಿಜಯೋತ್ಸವದ ವೇಳೆ ಚಿನ್ನಸ್ವಾಮಿ ಸ್ಟೇಡಿಯಂ ಮುಂದೆ ಕಾಲ್ತುಳಿತ ಸಂಭವಿಸಿತ್ತು. ಈ ದುರ್ಘಟನೆಯಲ್ಲಿ 11 ಮಂದಿ ಸಾವನ್ನಪ್ಪಿದ್ರು. ಇದು ಆರ್​ಸಿಬಿ ದೊಡ್ಡ ಕಪ್ಪು ಚುಕ್ಕೆ ಆಗಿದೆ.  ಕಾಲ್ತುಳಿತದಿಂದ ಮೃತಪಟ್ಟವರ ಕುಟುಂಬಗಳಿಗೆ ಆರ್​ಸಿಬಿ ಪರಿಹಾರ ಘೋಷಣೆ ಮಾಡಿದೆ. ಭಾವನಾತ್ಮಕ ಪೋಸ್ಟ್ ಶೇರ್​ ಮಾಡಿದೆ.

25 ಲಕ್ಷ ಪರಿಹಾರ ಘೋಷಣೆ ಮಾಡಿದ ಆರ್​ಸಿಬಿ

ಕಾಲ್ತುಳಿದ ದುರಂತ ಸಂಭವಿಸಿ 84 ದಿನಗಳ ನಂತರ ಸಾಮಾಜಿಕ ಮಾಧ್ಯಮದಲ್ಲಿ ಆರ್​ಸಿಬಿ ಮತ್ತೊಂದು ಪೋಸ್ಟ್ ಮಾಡಿದೆ. ಅಭಿಮಾನಿಗಳ ಕಲ್ಯಾಣಕ್ಕಾಗಿ ‘ಆರ್‌ಸಿಬಿ ಕೇರ್ಸ್’ ಅನ್ನು ಪ್ರಾರಂಭಿಸುತ್ತಿದೆ. ಈ ಮೂಲಕ ಕುಟುಂಬಕ್ಕೆ ಸಹಾಯಹಸ್ತ ಚಾಚಿದೆ.

ಕಾಲ್ತುಳಿತದಿಂದ ಮೃತಪಟ್ಟ ಪ್ರತಿ ಕುಟುಂಬಗಳಿಗೆ ತಲಾ 25 ಲಕ್ಷ ರೂ. ಧನ ಸಹಾಯ ನೀಡಿರುವುದಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಅಧಿಕೃತವಾಗಿ ಪ್ರಕಟಣೆ ಮೂಲಕ ತಿಳಿಸಿದೆ.

ಆರ್​ಸಿಬಿ ಭಾವುಕ ಪೋಸ್ಟ್​ನಲ್ಲಿ ಏನಿದೆ?

ಜನವರಿ 4, 2025 – ಈ ದಿನ ನಮ್ಮ ಹೃದಯದಲ್ಲಿ ಶಾಶ್ವತವಾಗಿ ಉಳಿಯಲಿದೆ.

ನಾವು ಕಳೆದುಕೊಂಡಿದ್ದು 11 ಅಭಿಮಾನಿಗಳನ್ನಷ್ಟೇ ಅಲ್ಲ… ಅವರು ನಮ್ಮ ಕುಟುಂಬದ ಸದಸ್ಯರಾಗಿದ್ದರು, ನಮ್ಮ ಹೃದಯದ ಭಾಗವಾಗಿದ್ದರು. ಅವರ ಉತ್ಸಾಹವೇ ನಮ್ಮ ಊರು, ಸಮುದಾಯ ಮತ್ತು ತಂಡಕ್ಕೆ ಜೀವ ತುಂಬುವ ಬೆಳಕಾಗಿತ್ತು. ನಮ್ಮ ನೆನಪುಗಳಲ್ಲಿ ಅವರು ಸದಾ ಜೀವಂತವಾಗಿರುತ್ತಾರೆ.

ಅವರ ಜಾಗವನ್ನು ಯಾವ ಸಹಾಯವೂ ತುಂಬಲಾರದು. ಆದರೆ ಮೊದಲನೇ ಮತ್ತು ಗೌರವದ ಸಂಕೇತವಾಗಿ, ಆರ್​ಸಿಬಿ ಪ್ರತಿ ಕುಟುಂಬಕ್ಕೆ 25 ಲಕ್ಷ ರೂ. ನೆರವನ್ನು ನೀಡಿದೆ. ಇದು ಕೇವಲ ಆರ್ಥಿಕ ಸಹಾಯವಲ್ಲ, ಕರುಣೆ, ಒಗಟ್ಟು ಮತ್ತು ನಿರಂತರ ಕಾಳಜಿಯ ಭರವಸೆ.

ಇದು ಆರ್​ಸಿಬಿ ಕೇರ್ಸ್​ನ ಆರಂಭವೂ ಹೌದು. ಅವರ ನೆನಪನ್ನು ಗೌರವಿಸುವ ಮೂಲಕ ಶುರುವಾದ ಈ ಪ್ರಯತ್ನ, ಅಭಿಮಾನಿಗಳ ಭಾವನೆ, ನಂಬಿಕೆ ಮತ್ತು ಸುರಕ್ಷತೆ ಪ್ರತಿಬಿಂಬಿಸುವ ದೀರ್ಘಕಾಲದ ಬದ್ಧತೆಯಾಗಿದೆ.

ಆರ್​ಸಿಬಿ ಕೇರ್ಸ್​ ಕುರಿತು ಇನ್ನಷ್ಟು ವಿವರಗಳು ಶೀಘ್ರದಲ್ಲೇ… ಎಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಬರೆದಿದ್ದು, ತನ್ನ ಅಧಿಕೃತ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಈ ಪೋಸ್ಟ್ ಹಂಚಿಕೊಂಡಿದೆ.

ಈ ಕಾಲ್ತುಳಿತ ಕೇಸ್​ ಸಂಬಂಧ ಆರ್‌ಸಿಬಿ, ಕೆಎಸ್‌ಸಿಎ ಮತ್ತು ಈವೆಂಟ್ ಮ್ಯಾನೇಜ್‌ಮೆಂಟ್ ಕಂಪನಿ ಡಿಎನ್‌ಎ ಎಂಟರ್‌ಟೈನ್‌ಮೆಂಟ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದರು. ಅಲ್ಲದೆ ರಾಜ್ಯ ಸರ್ಕಾರವೂ ಬೆಂಗಳೂರು ನಗರ ಪೊಲೀಸ್​ ಆಯುಕ್ತ ಬಿ. ದಯಾನಂದ ಸೇರಿದಂತೆ ಕೆಲ ಅಧಿಕಾರಿಗಳನ್ನು ಅಮಾನತುಗೊಳಿಸಿತ್ತು.