Last Updated:
ಓಮನ್ ದೇಶದಿಂದ ಬಂದ ಬಂಗುಡೆ ಮತ್ತು ಬೂತಾಯಿ ಮೀನುಗಳು ಕರಾವಳಿಯ ಮಾರುಕಟ್ಟೆಯಲ್ಲಿ ಜನಪ್ರಿಯವಾಗಿವೆ, ಹೆಚ್ಚಿನ ಗಾತ್ರ, ರುಚಿ ಮತ್ತು ಔಷಧೀಯ ಗುಣಗಳಿಂದ ಗ್ರಾಹಕರ ಆಕರ್ಷಣೆ ಹೆಚ್ಚಾಗಿದೆ.
ದಕ್ಷಿಣ ಕನ್ನಡ: ಬಂದಿತು ಬಂದಿತು ಬಂಗುಡೆ ಬಂದಿತು… ಅಯ್ಯೋ ಇದೇನಿದು ಹಾಡಿನ (Song) ಸಾಹಿತ್ಯವೇ ಅದಲು-ಬದಲು ಆಯ್ತಲ್ಲಾ?! ಎಂದು ಯೋಚಿಸ್ತಿದ್ದೀರಾ? ಹೂಂ, ನಿಜಕ್ಕೂ ಇದು ದೂರದಿಂದ ಬಂದಂತಹ ಬಂಗುಡೆ (Mackerel Fish) ಮೀನು. ಎಲ್ಲೋ ಮಂಗಳೂರಿಂದ (Mangaluru) ಬೆಂಗಳೂರಿಗೋ ಅಥವಾ ಉಡುಪಿಯಿಂದ ಹುಬ್ಬಳ್ಳಿಗೆ ಬಂದ ಹಾಗಲ್ಲ! ಇದು ಓಮನ್ (Oman) ದೇಶದಿಂದ ಬಂದ ಮೀನುಗಳು.
ಕರಾವಳಿಯ ಮೀನು ಪ್ರಿಯರಿಗೆ ಸಂತಸದ ಸುದ್ದಿಯೊಂದು ಬಂದಿದೆ. ಓಮನ್ ದೇಶದ ಬಂಗುಡೆ ಮತ್ತು ಬೂತಾಯಿ ಮೀನುಗಳು ಕರಾವಳಿಯ ಮಾರುಕಟ್ಟೆಗೆ ಲಗ್ಗೆಯಿಟ್ಟಿದ್ದು, ಮೀನು ಪ್ರಿಯರ ಆಕರ್ಷಣೆಯ ಕೇಂದ್ರಬಿಂದುವೂ ಆಗಿದೆ. ಬಂಗುಡೆ ಮತ್ತು ಬೂತಾಯಿ ಕರಾವಳಿ ಭಾಗದಲ್ಲಿ ಅತೀ ಹೆಚ್ಚು ಮಾರಾಟವಾಗುವ ಮತ್ತು ಹೆಚ್ಚು ಜನ ಇಷ್ಟಪಡುವ ಮೀನುಗಳಾಗಿದ್ದು, ಇದೀಗ ವಿದೇಶದಿಂದ ಬಂದ ಈ ಮೀನುಗಳ ರುಚಿ ನೋಡಲು ಜನ ಮೀನು ಮಾರುಕಟ್ಟೆಗೆ ಭೇಟಿ ನೀಡಲಾರಂಭಿಸಿದ್ದಾರೆ.
ಕರಾವಳಿ ಭಾಗದಲ್ಲಿ ಮೀನಿಗೆ ಹೆಚ್ಚು ಡಿಮ್ಯಾಂಡ್ ಇದ್ದು, ಇಲ್ಲಿನ ಹೆಚ್ಚಿನ ಮಾಂಸಾಹಾರ ತಿನ್ನುವ ಕುಟುಂಬಗಳು ಹೆಚ್ಚಾಗಿ ಇಷ್ಟಪಡೋದು ಬಂಗುಡೆ ಮತ್ತು ಬೂತಾಯಿ ಮೀನುಗಳನ್ನ. ಇತರೆ ಮೀನುಗಳಿಗೆ ಹೋಲಿಸಿದಲ್ಲಿ ಕೊಂಚ ಅಗ್ಗವಾಗಿರುವ ಈ ಎರಡು ಜಾತಿಯ ಮೀನುಗಳು ಸಿಗುವ ಕಾರಣಕ್ಕೇ ಇಲ್ಲಿ ಈ ಮೀನುಗಳಿಗೆ ಭಾರಿ ಬೇಡಿಕೆ ಹೆಚ್ಚೆನ್ನಬಹುದಾಗಿದೆ. ಅದರಲ್ಲೂ ಬೂತಾಯಿ ಮೀನಿನಲ್ಲಿ ಹೆಚ್ಚಿನ ಔಷಧೀಯ ಗುಣಗಳೂ ಇರುವ ಕಾರಣಕ್ಕೂ ಈ ಮೀನಿನ ಬಗ್ಗೆ ಕರಾವಳಿಯಲ್ಲಿ ಹೆಚ್ಚಿನ ಒಲವಿದೆ.
ಇತ್ತೀಚಿನ ಕೆಲವು ದಿನಗಳಿಂದ ಮಾರುಕಟ್ಟೆಯಲ್ಲಿ ದೊಡ್ಡ ಗಾತ್ರದ ಬಂಗುಡೆ ಮತ್ತು ಬೂತಾಯಿ ಮೀನುಗಳು ಕಾಣಿಸತೊಡಗಿದ್ದು, ಗ್ರಾಹಕನ ಆಕರ್ಷಣೆಯ ಕೇಂದ್ರಬಿಂದುವೂ ಆಗಿದೆ. ಸ್ಥಳೀಯವಾಗಿ ಮೀನುಗಾರರು ಹಿಡಿದು ತರುವ ಬಂಗುಡೆ ಮತ್ತು ಬೂತಾಯಿ ಮೀನುಗಳಿಗಿಂತ ಗಾತ್ರದಲ್ಲಿ ದೊಡ್ಡದಾಗಿರುವ ಈ ಮೀನುಗಳು ಹೆಚ್ಚು ರುಚಿಕರವಾಗಿರುತ್ತೆ ಎನ್ನುವ ಕಾರಣಕ್ಕೆ ಮೀನು ಪ್ರಿಯರು ಈ ಮೀನುಗಳ ಖರೀದಿಗೆ ಮುಂದಾಗುತ್ತಿದ್ದಾರೆ.
ಗಾತ್ರ ಮಾತ್ರವಲ್ಲದೆ ಇದರ ದರವೂ ಸ್ಥಳೀಯವಾಗಿ ಸಿಗುವ ಮೀನುಗಳ ದರಕ್ಕಿಂತ ಹೆಚ್ಚಾಗಿದೆ. ಹೋಟೆಲ್ ಗಳಿಂದ ಈ ಮೀನುಗಳು ಹೆಚ್ಚಾಗಿ ಹೋಗುತ್ತಿದ್ದು, ಕಿಲೋವೊಂದಕ್ಕೆ 400 ರಿಂದ 450 ರೂಪಾಯಿ ದರವಿದೆ. ಒಂದು ಕಿಲೋದಲ್ಲಿ ಮೂರು ಬಂಗುಡೆ ತೂಗಿದರೆ, ಬೂತಾಯಿ ಕಿಲೋವೊಂದಕ್ಕೆ 12 ತೂಗುತ್ತವೆ. ಅದೇ ರೀತಿ ಸ್ಥಳೀಯವಾಗಿ ಸಿಗುವ ಬಂಗುಡೆಗೆ ಕಿಲೋವೊಂದಕ್ಕೆ 150 ರಿಂದ 200 ರೂಪಾಯಿ ದರವಿದ್ದು, ಒಂದು ಕಿಲೋದಲ್ಲಿ 6 ರಿಂದ 7 ಬಂಗುಡೆಗಳು ತೂಗುತ್ತದೆ. ಅದೇ ರೀತಿ ಬೂತಾಯಿಗೆ ಕಿಲೋವೊಂದಕ್ಕೆ ಸದ್ಯ ಮಾರುಕಟ್ಟೆಯಲ್ಲಿ 400 ರೂಪಾಯಿ ದರವಿದ್ದು, ಕಿಲೋದಲ್ಲಿ 12 ಬೂತಾಯಿಗಳು ತೂಗುತ್ತವೆ.
ಓಮನ್-ಗುಜರಾತ್-ಮಂಗಳೂರು ಮೀನುಗಳ ಮಹಾಪ್ರಯಾಣ
ಓಮನ್ ದೇಶದಿಂದ ಈ ಮೀನುಗಳು ಮೊದಲು ಗುಜರಾತ್ ಗೆ ಆಗಮಿಸಿ ಬಳಿಕ ಅಲ್ಲಿಂದ ದೇಶದ ವಿವಿಧ ಮಾರುಕಟ್ಟೆಗೆ ತಲುಪುತ್ತವೆ. ಓಮನ್ ನಿಂದ ವಿಮಾನದ ಮೂಲಕ ಬರುವ ಈ ಮೀನುಗಳು ಬಳಿಕ ಗುಜರಾತ್ ನಿಂದ ವಿಮಾನ, ರೈಲು ಮತ್ತು ರಸ್ತೆಯ ಮೂಲಕ ಮೀನು ಮಾರುಕಟ್ಟೆಗಳಿಗೆ ವಿತರಣೆಯಾಗುತ್ತವೆ. ನಮ್ಮ ಕರಾವಳಿಯ ಮೀನನ್ನೇ ತಿಂದಿರುವ ಗ್ರಾಹಕರಿಗೆ ಓಮನ್ ದೇಶದ ಮೀನುಗಳ ರುಚಿ ನೋಡುವ ಆತುರವೂ ಇದೆ. ಭಾರಿ ಮಳೆ ಹಾಗು ಹವಾಮಾನ ವೈಪರಿತ್ಯದಿಂದ ಸ್ಥಳೀಯ ಮೀನುಗಾರರಿಗೆ ಮೀನಿನ ಅಭಾವವಿದ್ದು, ಈ ಅಭಾವವನ್ನು ವಿದೇಶಿ ಮೀನುಗಳು ನೀಗಿಸುತ್ತಿವೆ.
Dakshina Kannada,Karnataka
September 04, 2025 1:21 PM IST