Abhimanyu Mishra: ಮತ್ತೊಂದು ಇತಿಹಾಸ ಬರೆದ ಗ್ರ್ಯಾಂಡ್‌ಮಾಸ್ಟರ್ ಅಭಿಮನ್ಯು ಮಿಶ್ರಾ! ಹಾಲಿ ಚಾಂಪಿಯನ್‌ ಡಿ. ಗುಕೇಶ್ ವಿರುದ್ಧ ಭರ್ಜರಿ ಗೆಲುವು‌ | Abhimanyu Mishra defeats D Gukesh at age 16 | ಕ್ರೀಡೆ

Abhimanyu Mishra: ಮತ್ತೊಂದು ಇತಿಹಾಸ ಬರೆದ ಗ್ರ್ಯಾಂಡ್‌ಮಾಸ್ಟರ್ ಅಭಿಮನ್ಯು ಮಿಶ್ರಾ! ಹಾಲಿ ಚಾಂಪಿಯನ್‌ ಡಿ. ಗುಕೇಶ್ ವಿರುದ್ಧ ಭರ್ಜರಿ ಗೆಲುವು‌ | Abhimanyu Mishra defeats D Gukesh at age 16 | ಕ್ರೀಡೆ
ಮತ್ತೊಂದು ಇತಿಹಾಸ ಬರೆದ ಅಭಿಮನ್ಯು ಮಿಶ್ರಾ

ಪ್ರಸ್ತುತ ಮತ್ತೊಮ್ಮೆ ಅಭಿಮನ್ಯು ಮಿಶ್ರಾ ಚೆಸ್‌ನಲ್ಲಿ ಹೊಸ ಇತಿಹಾಸ ಬರೆದಿದ್ದಾರೆ. ಹೌದು, ಅಭಿಮನ್ಯು ಮಿಶ್ರಾ ಅವರು ಚೆಸ್ ಆಟದಲ್ಲಿ ಹಾಲಿ ಚಾಂಪಿಯನ್‌ನನ್ನು ಸೋಲಿಸಿದ ಇತಿಹಾಸದಲ್ಲಿ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಹಾಲಿ ಚಾಂಪಿಯನ್‌ ವಿರುದ್ಧ ಗೆಲುವು

ಉಜ್ಬೇಕಿಸ್ತಾನ್‌ನ ಸಮರ್ಕಂಡ್‌ನಲ್ಲಿ ನಡೆದ FIDE ಗ್ರ್ಯಾಂಡ್ ಸ್ವಿಸ್ ಪಂದ್ಯಾವಳಿಯ 5ನೇ ಸುತ್ತಿನಲ್ಲಿ 16 ವರ್ಷದ ಅಮೇರಿಕನ್ ಆಟಗಾರ ಪ್ರಸ್ತುತ ವಿಶ್ವ ಚಾಂಪಿಯನ್ ಡಿ ಗುಕೇಶ್ ಅವರನ್ನು ಸೋಲಿಸಿ ಚದುರಂಗದ ಅಂತರಂಗ ಭೇದಿಸಿದ್ದಾರೆ. ವಿಶ್ವದ ಅತ್ಯಂತ ಕಿರಿಯ ಗ್ರ್ಯಾಂಡ್‌ಮಾಸ್ಟರ್ ಆಗಿರುವ 16 ವರ್ಷದ ಅಭಿಮನ್ಯು ಮಿಶ್ರಾ, 61-ನಡೆಗಳ ಹೋರಾಟದ ನಂತರ ಹಾಲಿ ವಿಶ್ವ ಚಾಂಪಿಯನ್ ಡೊಮ್ಮರಾಜು ಗುಕೇಶ್ ಅವರನ್ನು ಸೋಲಿಸಿದರು.

“ಟೂರ್ನಮೆಂಟ್ ಗೆಲ್ಲುವ ಭರವಸೆ ಇದೆ”

ಗೆಲುವಿನ ನಂತರ FIDE ಜೊತೆ ಮಾತನಾಡಿದ ಮಿಶ್ರಾ, “ಟೂರ್ನಮೆಂಟ್ ನಾನು ಊಹಿಸಿದ್ದಕ್ಕಿಂತ ಉತ್ತಮವಾಗಿ ನಡೆಯುತ್ತಿದೆ. ನಾನು ಈ ಫಾರ್ಮ್ ಅನ್ನು ಮುಂದುವರಿಸಿದರೆ ಟೂರ್ನಮೆಂಟ್ ಗೆಲ್ಲುವ ಅವಕಾಶವಿದೆ. ನಿನ್ನೆ ಕೂಡ, ನಾನು ಪ್ರಾಗ್ ವಿರುದ್ಧ ಕೆಲವು ತಪ್ಪುಗಳನ್ನು ಮಾಡಿದೆ. ನಾನು ಈ ಆಟಗಾರರಿಗಿಂತ ಕೀಳು ಎಂದು ನನಗೆ ಎಂದಿಗೂ ಅನಿಸಲಿಲ್ಲ. ನಾನು ಅವರೊಂದಿಗೆ ಸರಿಸಮಾನನಾಗಿದ್ದೇನೆ ಎಂದು ನಾನು ಭಾವಿಸುತ್ತೇನೆ” ಎಂದು ಗೆಲುವನ್ನು ಸಂಭ್ರಮಿಸಿದರು.

ಇಷ್ಟೇ ಅಲ್ಲದೇ ಚೆಸ್ ಆಟದಲ್ಲಿ ಅತ್ಯುತ್ತಮ ಆಟಗಾರನನ್ನು ಸೋಲಿಸಿದ್ದು ಜೀವಮಾನದ ಕ್ಷಣವಾಗಿದೆ ಎಂದು 16 ವರ್ಷದ ಮಿಶ್ರಾ ಹೇಳಿದರು.

ಮಿಶ್ರಾ ಯಾರು?

ಫೆಬ್ರವರಿ 5, 2009ರಲ್ಲಿ ಜನಿಸಿದ ಅಭಿಮನ್ಯು ಮಿಶ್ರಾ ನ್ಯೂಜೆರ್ಸಿಯಲ್ಲಿ ನೆಲೆಸಿದ್ದಾರೆ. ಚೆಸ್‌ ಲೋಕದಲ್ಲಿ ಈ ಹೆಸರು ತುಂಬಾ ಪ್ರಚಲಿತವಾಗಿದ್ದು,  ಜೂನ್ 2021 ರಲ್ಲಿ ಚೆಸ್ ಇತಿಹಾಸದಲ್ಲಿ ಅತ್ಯಂತ ಕಿರಿಯ ಗ್ರ್ಯಾಂಡ್‌ಮಾಸ್ಟರ್ ಆಗುವ ಮೂಲಕ ಸುದ್ದಿಯಾಗಿದ್ದರು. ಅಭಿಮನ್ಯು ಮಿಶ್ರಾ 12 ವರ್ಷ, 4 ತಿಂಗಳು, 25 ದಿನಗಳಲ್ಲಿ ಗ್ರ್ಯಾಂಡ್ ಮಾಸ್ಟರ್ ಸಾಧನೆ ಮಾಡಿದ್ದರು.

ಮಿಶ್ರಾ ಅದಕ್ಕೂ ಮೊದಲು ಅನೇಕ ಮೈಲಿಗಲ್ಲುಗಳನ್ನು ಸ್ಥಾಪಿಸಿದ್ದರು. ಏಳನೇ ವಯಸ್ಸಿನಲ್ಲಿ, ಅವರು 2000 USCF ರೇಟಿಂಗ್ ತಲುಪಿದ ಅತ್ಯಂತ ಕಿರಿಯ ಆಟಗಾರರಾದರು. 2019ರಲ್ಲಿ, ಅವರು ಕೇವಲ 10 ವರ್ಷ ಮತ್ತು 9 ತಿಂಗಳುಗಳಲ್ಲಿ ಅಂತಾರಾಷ್ಟ್ರೀಯ ಮಾಸ್ಟರ್ ಪ್ರಶಸ್ತಿಯನ್ನು ಗಳಿಸಿದರು.

ಪ್ರಜ್ಞಾನಂದಗೂ ಸೋಲು.. ಟೂರ್ನ್‌ಮೆಂಟ್‌ನ ಇತರೆ ಹೈಲೈಟ್ಸ್

ಜರ್ಮನಿಯ ಮಥಿಯಾಸ್ ಬ್ಲೂಬಾಮ್ ವಿರುದ್ಧ ಪ್ರಜ್ಞಾನಂದ ಕೂಡ ಸೋಲನ್ನು ಅನುಭವಿಸಿದರು. ಈ ಪಂದ್ಯಾವಳಿಯಲ್ಲಿ ಇಬ್ಬರು ಮಲಯಾಳಿ ಗ್ರ್ಯಾಂಡ್‌ಮಾಸ್ಟರ್‌ಗಳಾದ ನಿಹಾಲ್ ಸರಿನ್ ಮತ್ತು ಎಸ್ ಎಲ್ ನಾರಾಯಣನ್ ಅಜೇಯರಾಗಿ ಉಳಿದಿದ್ದಾರೆ.

ತ್ರಿಶೂರ್ ಮೂಲದ ನಿಹಾಲ್, ತಮ್ಮ ದೇಶದವರೇ ಆದ ಲಿಯಾನ್ ಲ್ಯೂಕ್ ಮೆಂಡೋನ್ಸಾ ಅವರನ್ನು ಸೋಲಿಸಿ 3.5 ಅಂಕಗಳನ್ನು ಗಳಿಸಿದರೆ, ತಿರುವನಂತಪುರದ ನಾರಾಯಣನ್, ಲು ಶಾಂಗ್ಲೇ ಜೊತೆ ಒಂದು ಅಂಕವನ್ನು ಹಂಚಿಕೊಂಡು ಸತತ ಐದನೇ ಡ್ರಾ ಸಾಧಿಸಿದರು.

ಈ ಮಧ್ಯೆ, ಓಪನ್ ವಿಭಾಗದ ಇಬ್ಬರು ಮಹಿಳೆಯರಲ್ಲಿ ಒಬ್ಬರಾದ ಜಿಎಂ ದಿವ್ಯಾ ದೇಶ್ಮುಖ್, ಶಮ್ಸಿದ್ದೀನ್ ವೊಖಿಡೋವ್ ವಿರುದ್ಧ ಸೋತರು. ದಿವ್ಯಾ (2478) ಮೂರು ಪಂದ್ಯಗಳಿಂದ ಅಜೇಯರಾಗಿ ಮುನ್ನಡೆದರು, 4ನೇ ಸುತ್ತಿನಲ್ಲಿ 2636 ರೇಟಿಂಗ್ ಹೊಂದಿರುವ ಬಾಸ್ಸೆಮ್ ಅಮೀನ್ ವಿರುದ್ಧ ಜಯ ಗಳಿಸಿದರು.

ಕನ್ನಡ ಸುದ್ದಿ/ ನ್ಯೂಸ್/ಕ್ರೀಡೆ/

Abhimanyu Mishra: ಮತ್ತೊಂದು ಇತಿಹಾಸ ಬರೆದ ಗ್ರ್ಯಾಂಡ್‌ಮಾಸ್ಟರ್ ಅಭಿಮನ್ಯು ಮಿಶ್ರಾ! ಹಾಲಿ ಚಾಂಪಿಯನ್‌ ಡಿ. ಗುಕೇಶ್ ವಿರುದ್ಧ ಭರ್ಜರಿ ಗೆಲುವು‌