Last Updated:
ಏಷ್ಯಾಕಪ್ ಮಂಗಳವಾರದಿಂದ ಆರಂಭವಾಗಿದ್ದು, ಉದ್ಘಾಟನಾ ಪಂದ್ಯದಲ್ಲಿ ಅಫ್ಘಾನಿಸ್ತಾನ ಕ್ರಿಕೆಟ್ ಶಿಶು ಹಾಂಗ್ಕಾಂಗ್ ವಿರುದ್ಧ 94 ರನ್ಗಳ ಬೃಹತ್ ಜಯ ಸಾಧಿಸಿದೆ.
ಏಷ್ಯಾ ಕಪ್ 2025 ಟೂರ್ನಮೆಂಟ್ನಲ್ಲಿ ಅಫ್ಘಾನಿಸ್ತಾನ ಉತ್ತಮ ಆರಂಭವನ್ನು ಪಡೆದುಕೊಂಡಿದೆ. ಮಂಗಳವಾರ ಹಾಂಗ್ ಕಾಂಗ್ ವಿರುದ್ಧದ ಮೊದಲ ಪಂದ್ಯದಲ್ಲಿ ಸಂಘಟಿತ ಪ್ರದರ್ಶನ ನೀಡಿದ ಅಫ್ಘಾನಿಸ್ತಾನ 94 ರನ್ಗಳ ಅಂತರದಿಂದ ಭಾರಿ ಗೆಲುವು ಸಾಧಿಸಿದೆ. ಸೆದಿಕುಲ್ಲಾ ಮತ್ತು ಅಜ್ಮತ್ವುಲ್ಲಾ ಬ್ಯಾಟಿಂಗ್ನಲ್ಲಿ ಮಿಂಚಿದರೆ, ಬೌಲರ್ಗಳು ಸಾಮೂಹಿಕವಾಗಿ ಉತ್ತಮ ಪ್ರದರ್ಶನ ನೀಡಿ ಗೆಲುವು ತಂದುಕೊಟ್ಟರು.
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ತಾನ ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ಗಳ ನಷ್ಟಕ್ಕೆ 188 ರನ್ ಗಳಿಸಿತು. ಆರಂಭಿಕರಾದ ಸೆದಿಕುಲ್ಲಾ ಅಟಲ್ (52 ಎಸೆತಗಳಲ್ಲಿ 6 ಬೌಂಡರಿ ಮತ್ತು 3 ಸಿಕ್ಸರ್ಗಳೊಂದಿಗೆ 73 ಅಜೇಯ) ಮತ್ತು ಅಜ್ಮತುಲ್ಲಾ ಒಮರ್ಜೈ (21 ಎಸೆತಗಳಲ್ಲಿ 2 ಬೌಂಡರಿ ಮತ್ತು 5 ಸಿಕ್ಸರ್ಗಳೊಂದಿಗೆ 53) ಸ್ಪೋಟಕ ಅರ್ಧಶತಕಗಳನ್ನು ಸಿಡಿಸಿದರು. ಮೊಹಮ್ಮದ್ ನಬಿ (26 ಎಸೆತಗಳಲ್ಲಿ 33, 3 ಬೌಂಡರಿ, 3 ಸಿಕ್ಸರ್) ಪ್ರಮುಖ ಇನ್ನಿಂಗ್ಸ್ ಆಡಿದರು.
ಹಾಂಗ್ ಕಾಂಗ್ ಬೌಲರ್ಗಳಲ್ಲಿ, ಕಿಂಚಿತ್ ಶಾ ಮತ್ತು ಆಯುಷ್ ಶುಕ್ಲಾ ತಲಾ ಎರಡು ವಿಕೆಟ್ ಪಡೆದರೆ, ಅತೀಕ್ ಇಕ್ಬಾಲ್ ಮತ್ತು ಇಶಾನ್ ಖಾನ್ ತಲಾ ಒಂದು ವಿಕೆಟ್ ಪಡೆದರು. ಮೊದಲ 10 ಓವರ್ಗಳಲ್ಲಿ ಉತ್ತಮ ಬೌಲಿಂಗ್ ಮಾಡಿದ್ದ ಹಾಂಗ್ ಕಾಂಗ್ ಕಳಪೆ ಫೀಲ್ಡಿಂಗ್ಗೆ ಬೆಲೆ ತೆತ್ತಿತು. ತಂಡದ ಫೀಲ್ಡರ್ಗಳು ಮೂರು ಸುಲಭ ಕ್ಯಾಚ್ಗಳನ್ನು ಕೈಬಿಟ್ಟರು ಇದರಿಂದ ಅಫ್ಘಾನ್ 188ರನ್ಗಳ ದೊಡ್ಡ ಮೊತ್ತ ಪೇರಿಸಲು ನೆರವಾಯಿತು
ನಂತರ ಚೇಸಿಂಗ್ ಆರಂಭಿಸಿದ ಹಾಂಗ್ ಕಾಂಗ್ ನಿಗದಿತ 20 ಓವರ್ಗಳಲ್ಲಿ 9 ವಿಕೆಟ್ಗಳಿಗೆ 94 ರನ್ ಗಳಿಸಲಷ್ಟೇ ಶಕ್ತವಾಯಿತು. ಬಾಬರ್ ಹಯಾತ್ (43 ಎಸೆತಗಳಲ್ಲಿ 39, 3 ಸಿಕ್ಸರ್ಗಳು) ಮತ್ತು ನಾಯಕ ಯಾಸಿಮ್ ಮೊರ್ತಾಜಾ (16) ಹೊರತುಪಡಿಸಿ, ಎಲ್ಲರೂ ಒಂದಂಕಿ ಮೊತ್ತಕ್ಕೆ ಸೀಮಿತರಾದರು. ಅಫ್ಘಾನ್ ಬೌಲರ್ಗಳಲ್ಲಿ, ಗುಲ್ಬಾದಿನ್ ನೈಬ್ (2/8) ಮತ್ತು ಫಜ್ಲಕ್ ಫಾರೂಕಿ (2/16) ತಲಾ ಎರಡು ವಿಕೆಟ್ ಪಡೆದರೆ, ಅಜ್ಮತುಲ್ಲಾ ಒಮರ್ಜೈ, ರಶೀದ್ ಖಾನ್ ಮತ್ತು ನೂರ್ ಅಹ್ಮದ್ ತಲಾ ಒಂದು ವಿಕೆಟ್ ಪಡೆದರು. ಇತರ ಇಬ್ಬರು ಬ್ಯಾಟ್ಸ್ಮನ್ಗಳು ರನೌಟ್ ಆದರು.
3ನೇ ಗರಿಷ್ಠ ಅಂತರದ ಜಯ
155 ರನ್ಗಳ ಜಯ- ಪಾಕಿಸ್ತಾನ vs ಹಾಂಗ್ಕಾಂಗ್
101 ರನ್ಗಳ ಜಯ- ಭಾರತ vs ಅಫ್ಘಾನಿಸ್ತಾನ
94 ರನ್ಗಳ ಜಯ ಅಫ್ಘಾನಿಸ್ತಾನ vs ಹಾಂಗ್ಕಾಂಗ್
71 ರನ್ಗಳ ಜಯ- ಯುಎಇ vs ಒಮಾನ್
66 ರನ್ಗಳ ಜಯ- ಅಫ್ಘಾನಿಸ್ತಾನ vs ಹಾಂಗ್ಕಾಂಗ್
ನಾಳೆ ಭಾರತ-ಯುಎಇ ಪಂದ್ಯ
ನಾಳೆ ಭಾರತ ಮತ್ತು ಅತಿಥೇಯ ಯುಎಇ ತಂಡ ಮುಖಾಮುಖಿಯಾಗಲಿವೆ. ಈ ಪಂದ್ಯ ದುಬೈ ಅಂತಾರಾಷ್ಟ್ರೀಯ ಮೈದಾನದಲ್ಲಿ ನಡೆಯಲಿದೆ.
September 10, 2025 12:21 AM IST