Last Updated:
IND vs PAK: ಇದೇ ಸೆಪ್ಟೆಂಬರ್ 14 ರಂದು ದುಬೈನಲ್ಲಿ(Dubai) ನಡೆಯಲಿರುವ ಹೈವೋಲ್ಟೇಜ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿರುವಾಗಲೇ, ಈಗ ಈ ಪಂದ್ಯದ ಮೇಲೆ ವಿವಾದದ ಕರಿನೆರಳು ಬಿದ್ದಿದೆ.
ಕ್ರಿಕೆಟ್ ಮೈದಾನದಲ್ಲಿ ಭಾರತ ಮತ್ತು ಪಾಕಿಸ್ತಾನ (IND vs PAK) ಮುಖಾಮುಖಿಯಾಗುತ್ತಿವೆ ಎಂದರೆ ಸಾಕು, ಅಭಿಮಾನಿಗಳ ಉತ್ಸಾಹ ಜೋರಾಗಿರುತ್ತೆ. ಅದರಲ್ಲೂ ಏಷ್ಯಾ ಕಪ್ನಂತಹ (Asia Cup) ಮಹತ್ವದ ಟೂರ್ನಿಯಲ್ಲಿ ಈ ಸಾಂಪ್ರದಾಯಿಕ ಎದುರಾಳಿಗಳ ಕಾದಾಟಕ್ಕೆ ಇರೋ ಕಿಚ್ಚೇ ಬೇರೆ. ಇದೇ ಸೆಪ್ಟೆಂಬರ್ 14 ರಂದು ದುಬೈನಲ್ಲಿ(Dubai) ನಡೆಯಲಿರುವ ಹೈವೋಲ್ಟೇಜ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿರುವಾಗಲೇ, ಈಗ ಈ ಪಂದ್ಯದ ಮೇಲೆ ವಿವಾದದ ಕರಿನೆರಳು ಬಿದ್ದಿದೆ.
ಪುಣೆ ಮೂಲದ ಸಾಮಾಜಿಕ ಕಾರ್ಯಕರ್ತರೊಬ್ಬರು, ಭಾರತ-ಪಾಕಿಸ್ತಾನ ಪಂದ್ಯವನ್ನು ನಿಷೇಧಿಸಬೇಕೆಂದು ಕೋರಿ ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಈ ಬೆಳವಣಿಗೆಯು ಇದೀಗ ರಾಷ್ಟ್ರಮಟ್ಟದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ.
ಮಹಾರಾಷ್ಟ್ರದ ಕಾರ್ಯಕರ್ತ ಕೇತನ್ ತಿರೋಡ್ಕರ್ ಅವರು ಸಲ್ಲಿಸಿರುವ ಅರ್ಜಿಯಲ್ಲಿ, ಇತ್ತೀಚೆಗೆ ಪೆಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ಪ್ರಮುಖವಾಗಿ ಉಲ್ಲೇಖಿಸಲಾಗಿದೆ. “ಒಂದು ಕಡೆ ಪಾಕಿಸ್ತಾನ ಪ್ರೇರಿತ ಉಗ್ರರು ನಮ್ಮ ಸೈನಿಕರನ್ನು ಮತ್ತು ನಾಗರಿಕರನ್ನು ಗಡಿಯಲ್ಲಿ ಹತ್ಯೆಗೈಯುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ, ಪಾಕಿಸ್ತಾನದ ಜೊತೆ ಸ್ನೇಹಯುತ ಕ್ರಿಕೆಟ್ ಪಂದ್ಯವನ್ನು ಆಡುವುದು ನಮ್ಮ ಸೈನಿಕರ ತ್ಯಾಗ, ಬಲಿದಾನಗಳಿಗೆ ಮಾಡುವ ಅವಮಾನ” ಎಂದು ಅವರು ಅರ್ಜಿಯಲ್ಲಿ ವಾದಿಸಿದ್ದಾರೆ.
ಈ ಪಂದ್ಯವನ್ನು ಆಯೋಜಿಸುವುದು ಭಾರತದ ಸಂವಿಧಾನದ 21ನೇ ವಿಧಿಯ ಉಲ್ಲಂಘನೆಯಾಗಿದೆ ಎಂದು ಅರ್ಜಿದಾರರು ಗಂಭೀರ ಆರೋಪ ಮಾಡಿದ್ದಾರೆ. “ಸಂವಿಧಾನವು ಪ್ರತಿಯೊಬ್ಬ ಪ್ರಜೆಗೂ ಘನತೆಯಿಂದ ಬದುಕುವ ಹಕ್ಕನ್ನು ನೀಡಿದೆ. ನಮ್ಮ ಸೈನಿಕರು ಪ್ರಾಣ ತೆತ್ತಾಗ, ಅವರ ಕುಟುಂಬಗಳು ನೋವಿನಲ್ಲಿರುವಾಗ, ಪಾಕಿಸ್ತಾನದೊಂದಿಗೆ ಕ್ರಿಕೆಟ್ ಆಡುವುದು ದೇಶಕ್ಕೆ ತಪ್ಪು ಸಂದೇಶವನ್ನು ರವಾನಿಸುತ್ತದೆ. ಇದು ಭಯೋತ್ಪಾದನೆಯನ್ನು ಸಹಿಸಿಕೊಂಡಂತೆ ಆಗುತ್ತದೆ,” ಎಂದು ಅವರು ತಮ್ಮ ಅರ್ಜಿಯಲ್ಲಿ ತಿಳಿಸಿದ್ದಾರೆ.
ಈ ವಿಷಯದಲ್ಲಿ ಕೇಂದ್ರ ಸರ್ಕಾರವು ಈಗಾಗಲೇ ತನ್ನ ನಿಲುವನ್ನು ಸ್ಪಷ್ಟಪಡಿಸಿದೆ. ಭಾರತ ಮತ್ತು ಪಾಕಿಸ್ತಾನದ ನಡುವೆ ಯಾವುದೇ ದ್ವಿಪಕ್ಷೀಯ ಕ್ರಿಕೆಟ್ ಸರಣಿ ನಡೆಯುವುದಿಲ್ಲ ಎಂದು ಸರ್ಕಾರ ಹಿಂದೆಯೇ ಹೇಳಿತ್ತು. ಆದರೆ, ಐಸಿಸಿ ವಿಶ್ವಕಪ್ ಅಥವಾ ಏಷ್ಯಾ ಕಪ್ನಂತಹ ಬಹುರಾಷ್ಟ್ರೀಯ ಟೂರ್ನಿಗಳಲ್ಲಿ ಈ ಎರಡು ತಂಡಗಳು ಮುಖಾಮುಖಿಯಾಗಲು ಯಾವುದೇ ಅಡ್ಡಿಯಿಲ್ಲ ಎಂದು ಸ್ಪಷ್ಟಪಡಿಸಿತ್ತು. ಸರ್ಕಾರದ ಇದೇ ನಿಲುವಿನ ಅಡಿಯಲ್ಲಿ ಈ ಪಂದ್ಯವನ್ನು ಆಯೋಜಿಸಲಾಗುತ್ತಿದೆ.
ಭಾರತ-ಪಾಕಿಸ್ತಾನ ಪಂದ್ಯವೆಂದರೆ ಕೇವಲ ಆಟವಲ್ಲ, ಅದೊಂದು ಭಾವನೆಗಳ ಸಮರ. ಆದರೆ ಈಗ ಭಯೋತ್ಪಾದನೆ, ರಾಷ್ಟ್ರೀಯ ಹಿತಾಸಕ್ತಿ ಮತ್ತು ಸೈನಿಕರ ತ್ಯಾಗದಂತಹ ಗಂಭೀರ ವಿಷಯಗಳು ಮುನ್ನೆಲೆಗೆ ಬಂದಿರುವುದರಿಂದ, ಈ ಪಂದ್ಯದ ಸುತ್ತ ಕಾನೂನು ಮತ್ತು ರಾಜಕೀಯ ವಿವಾದ ಭುಗಿಲೆದ್ದಿದೆ.
ಸೆಪ್ಟೆಂಬರ್ 14ರ ಪಂದ್ಯಕ್ಕೆ ಇನ್ನು ಕೇವಲ ಮೂರೇ ದಿನ ಬಾಕಿ ಇರುವಾಗ, ಸುಪ್ರೀಂ ಕೋರ್ಟ್ ಈ ಅರ್ಜಿಯ ಬಗ್ಗೆ ಯಾವ ನಿರ್ಧಾರ ತೆಗೆದುಕೊಳ್ಳಲಿದೆ? ಬಿಸಿಸಿಐ ಇದಕ್ಕೆ ಹೇಗೆ ಪ್ರತಿಕ್ರಿಯಿಸಲಿದೆ? ಎಂಬುದು ತೀವ್ರ ಕುತೂಹಲ ಮೂಡಿಸಿದೆ. ಮುಂಬರುವ ಈ ಪಂದ್ಯವು ಕೇವಲ ಒಂದು ಕ್ರಿಕೆಟ್ ಪಂದ್ಯವಾಗಿ ಉಳಿಯಲಿದೆಯೇ? ಅಥವಾ ದೇಶದ ಹಿತಾಸಕ್ತಿಗಳ ಕುರಿತ ದೊಡ್ಡ ಚರ್ಚಾ ವೇದಿಕೆಯಾಗಲಿದೆಯೇ? ಎಂಬುದನ್ನು ಕಾದುನೋಡಬೇಕಿದೆ.
September 11, 2025 11:38 AM IST