ರಾಜೀವ್ ಶುಕ್ಲಾ ಅವರು ಭಾನುವಾರ ಬಿಸಿಸಿಐ ಉಪಾಧ್ಯಕ್ಷ ಸ್ಥಾನಕ್ಕೆ ತಮ್ಮ ನಾಮಪತ್ರ ಸಲ್ಲಿಸಿದ ನಂತರ, ಸುದ್ದಿಪ್ರತಿನಿಧಿಗಳೊಂದಿಗೆ ಮಾತನಾಡಿ ಈ ಮಾಹಿತಿಯನ್ನು ಖಚಿತಪಡಿಸಿದರು. “ಮುಂದಿನ ಅವಧಿಗೆ ಹೊಸ ಸಮಿತಿಯನ್ನು ರೂಪಿಸಲಾಗುತ್ತಿದೆ. ಡೆಲ್ಲಿ ತಂಡದ ಮಾಜಿ ನಾಯಕ ಮಿಥುನ್ ಮನ್ಹಾಸ್ ಅವರನ್ನ ಅಧ್ಯಕ್ಷನಾಗಿ ಮಾಡಲು ನಿರ್ಧರಿಸಲಾಗಿದೆ. ಐಪಿಎಲ್ ಅಧ್ಯಕ್ಷರಾಗಿ ಅರುಣ್ ಧುಮಾಲ್ ಮುಂದುವರಿಯುತ್ತಾರೆ” ಎಂದು ಶುಕ್ಲಾ ಹೇಳಿದ್ದಾರೆ. ರೋಜರ್ ಬಿನ್ನಿ ನಿವೃತ್ತಿಯಾದ ಬಳಿಕ ಹಂಗಾಮಿ ಅಧ್ಯಕ್ಷರಾಗಿ ರಾಜೀವ್ ಶುಕ್ಲಾ ನೇಮಕಗೊಂಡಿದ್ದರು.
ಈ ನಿರ್ಧಾರವು ದೆಹಲಿಯಲ್ಲಿ ಭಾನುವಾರ ನಡೆದ ಸಭೆಯಲ್ಲಿ ತೆಗೆದುಕೊಳ್ಳಲಾಗಿದೆ. ಐಸಿಸಿ ಅಧ್ಯಕ್ಷ ಜಯ್ ಶಾ, ರಾಜೀವ್ ಶುಕ್ಲಾ, ಬಿಸಿಸಿಐ ಸೆಕ್ರೆಟರಿ ದೇವಜಿತ್ ಸೈಕಿಯಾ, ದೆಹಲಿ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷ ರೋಹನ್ ಜೈಟ್ಲಿ ಮತ್ತು ಮಾಜಿ ಸೆಕ್ರೆಟರಿ ನಿರಂಜನ್ ಶಾ ಅವರಂತಹ ಪ್ರಮುಖರು ಭಾಗವಹಿಸಿದ್ದರು. ಸೌರವ್ ಗಂಗುಲಿ ಅಥವಾ ಹರ್ಭಜನ್ ಸಿಂಗ್ ಅವರಂತಹ ಮಾಜಿ ಆಟಗಾರರ ಹೆಸರುಗಳು ಸುದ್ದಿಯಲ್ಲಿದ್ದರೂ, ಮನ್‌ಹಾಸ್ ಅವರನ್ನು ಒಮ್ಮತದ ಅಭ್ಯರ್ಥಿಯಾಗಿ ಆಯ್ಕೆ ಮಾಡಲಾಗಿದೆ.
ಭಾನುವಾರ ಬಿಸಿಸಿಐ ತಲುಪುವ ಸಮಯಕ್ಕೆ ಹಲವು ಅಭ್ಯರ್ಥಿಗಳು ವಿವಿಧ ಸ್ಥಾನಗಳಿಗೆ ನಾಮಪತ್ರ ಸಲ್ಲಿಸಿದರು. ಅಧ್ಯಕ್ಷ ಸ್ಥಾನಕ್ಕೆ ಮಿಥುನ್ ಮನ್‌ಹಾಸ್ ಅವ ರು ಜಮ್ಮು ಮತ್ತು ಕಾಶ್ಮೀರ ಕ್ರಿಕೆಟ್ ಅಸೋಸಿಯೇಷನ್ (ಜೆಕೆಸಿಎ) ಪರವಾಗಿ ನಾಮಪತ್ರ ಸಲ್ಲಿಸಿದರು.
ಉಪಾಧ್ಯಕ್ಷ: ರಾಜೀವ್ ಶುಕ್ಲಾ (ಮುಂದುವರಿಕೆ).
ಕಾರ್ಯಾದರ್ಶಿ: ದೇವಜಿತ್ ಸೈಕಿಯಾ (ಮುಂದುವರಿಕೆ).
ಜಂಟಿ ಕಾರ್ಯದರ್ಶಿ: ಛತ್ತೀಸ್‌ಗಢ್ ಸ್ಟೇಟ್ ಕ್ರಿಕೆಟ್ ಸಂಘದ ಪ್ರಭತೇಜ್ ಭಟ್ಟಿಯಾ.
ಖಜಾಂಚಿ: ರಾಘುರಾಮ್ ಭಟ್.
ಐಪಿಎಲ್ ಗೈಡಿಂಗ್ ಕೌನ್ಸಿಲ್ ಅಧ್ಯಕ್ಷ: ಅರುಣ್ ಧುಮಾಲ್ (ಮುಂದುವರಿಕೆ).
ಬಿಸಿಸಿಐ ಏಪೆಕ್ಸ್ ಕೌನ್ಸಿಲ್‌ಗೆ ಹೊಸ ಸದಸ್ಯ: ಮಾಜಿ ಸೌರಾಷ್ಟ್ರ ಆಟಗಾರ ಜಯದೇವ್ ಶಾ
ಈ ಎಲ್ಲಾ ನಿರ್ಧಾರಗಳು ಸೆಪ್ಟೆಂಬರ್ 28ರಂದು ಮುಂಬೈಯಲ್ಲಿ ನಡೆಯುವ ಬಿಸಿಸಿಐ ವಾರ್ಷಿಕ ಸಾಮಾನ್ಯ ಸಭೆ (ಎಜಿಎಂ)ಯಲ್ಲಿ ಅಂತಿಮಗೊಳ್ಳಲಿದ್ದು, ಅಧಿಕೃತವಾಗಿ ಘೋಷಣೆ ಮಾಡಲಾಗುತ್ತದೆ.
ಮಿಥುನ್ ಮನ್‌ಹಾಸ್ ಅವರು ಜಮ್ಮು ಮತ್ತು ಕಾಶ್ಮೀರದಿಂದ ಬಂದ ಮಾಜಿ ಭಾರತೀಯ ದೇಶೀಯ ಕ್ರಿಕೆಟ್ ಆಟಗಾರರು. ಅವರು ದೆಹಲಿ ತಂಡದ ನಾಯಕರಾಗಿ ಆಡಿದ್ದರು ಮತ್ತು ರಾಷ್ಟ್ರೀಯ ತಂಡದಲ್ಲಿ ಆಡಲು ಅವಕಾಶ ಸಿಗದಿದ್ದರೂ, ದೇಶೀಯ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. 1997-98ರಿಂದ 2016-17ರವರೆಗೆ ದೀರ್ಘ ಕಾಲ ದೇಶಿ ಕ್ರಿಕೆಟ್ ಆಡಿರುವ ಮಿಥುನ್ನು 157 ಪ್ರಥಮ ದರ್ಜೆ ಪಂದ್ಯಗಳಲ್ಲಿ 9,714 ರನ್, ಲಿಸ್ಟ್ ಎ ಕ್ರಿಕೆಟ್‌ನಲ್ಲಿ 130 ಪಂದ್ಯಗಳಲ್ಲಿ 4,126 ರನ್, ಮತ್ತು ಟಿ20ಯಲ್ಲಿ 91 ಪಂದ್ಯಗಳಲ್ಲಿ 1,170 ರನ್ ಗಳಿಸಿದ್ದಾರೆ.
ಐಪಿಎಲ್‌ನಲ್ಲಿ ಅವರು ದೆಹಲಿ ಡೇರ್‌ಡೆವಿಲ್ಸ್ (ಈಗ ದೆಹಲಿ ಕ್ಯಾಪಿಟಲ್ಸ್), ಪುಣೆ ವಾರಿಯರ್ಸ್ ಇಂಡಿಯಾ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳಿಗೆ ಪ್ರತಿನಿಧಿಸಿದ್ದಾರೆ. 55 ಐಪಿಎಲ್ ಪಂದ್ಯಗಳಲ್ಲಿ 514 ರನ್ ಸ್ಕೋರ್ ಮಾಡಿ, ಸ್ಟ್ರೈಕ್ ರೇಟ್ 109.36ರೊಂದಿಗೆ ಆಡಿದ್ದಾರೆ. ಜಮ್ಮು ಮತ್ತು ಕಾಶ್ಮೀರ ಕ್ರಿಕೆಟ್ ಅಸೋಸಿಯೇಷನ್‌ನ್ನು ನಡೆಸುವ ಉಪಸಮಿತಿಯ ಸದಸ್ಯರಾಗಿರುವ ಅವರು, ಬಾಂಗ್ಲಾದೇಶ ತಂಡದ ಕೋಚ್, ಕಿಂಗ್ಸ್ XI ಪಂಜಾಬ್ (ಈಗ ಪಂಜಾಬ್ ಕಿಂಗ್ಸ್), ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಟೈಟನ್ಸ್ ತಂಡಗಳ ಕೋಚ್ ಆಗಿಯೂ ಕೆಲಸ ಮಾಡಿದ್ದಾರೆ.
September 21, 2025 6:21 PM IST