Asia Cup, IND vs PAK: ಫರ್ಹಾನ್ ಅರ್ಧಶತಕ; ಭಾರತಕ್ಕೆ ಗೆಲ್ಲಲು 172 ರನ್​ಗಳ ಸವಾಲಿನ ಗುರಿ ನೀಡಿದ ಪಾಕಿಸ್ತಾನ | ಕ್ರೀಡೆ

Asia Cup, IND vs PAK: ಫರ್ಹಾನ್ ಅರ್ಧಶತಕ; ಭಾರತಕ್ಕೆ ಗೆಲ್ಲಲು 172 ರನ್​ಗಳ ಸವಾಲಿನ ಗುರಿ ನೀಡಿದ ಪಾಕಿಸ್ತಾನ | ಕ್ರೀಡೆ

Last Updated:

ಏಷ್ಯಾಕಪ್​​ 2025ರ ಸೂಪರ್ 4 ಪಂದ್ಯದಲ್ಲಿ ಪಾಕಿಸ್ತಾನದ ಭಾರತದೆದರು ಉತ್ತಮ ಪ್ರದರ್ಶನ ನೀಡಿ 172 ರನ್​ಗಳ ಸವಾಲಿನ ಗುರಿ ನೀಡಿದೆ.

ಭಾರತ vs ಪಾಕಿಸ್ತಾನಭಾರತ vs ಪಾಕಿಸ್ತಾನ
ಭಾರತ vs ಪಾಕಿಸ್ತಾನ

ಏಷ್ಯಾಕಪ್​ ಸೂಪರ್ 4 ಹಂತದ 2ನೇ ಪಂದ್ಯದಲ್ಲಿ ಪಾಕಿಸ್ತಾನ ಉತ್ತಮ ಬ್ಯಾಟಿಂಗ್ ಪ್ರದರ್ಶನ ತೋರಿದೆ. ಆರಂಭಿಕ ಬ್ಯಾಟರ್ ಸಹೀಬ್ಜಾದಾ ಫರ್ಹಾನ್ ಸಿಡಿಸಿದ ಅರ್ಧಶತಕದ ನೆರವಿನಿಂದ ಪಾಕಿಸ್ತಾನ ತಂಡ ಭಾರತಕ್ಕೆ 172 ರನ್​ಗಳ ಸವಾಲಿನ ಗುರಿ ನೀಡಿದೆ. ಫರ್ಹಾನ್ ತಮಗೆ ಸಿಕ್ಕಂತಹ 2 ಜೀವದಾನವನ್ನ ಸದುಪಯೋಗಪಡಿಸಿಕೊಂಡು 58 ರನ್​ಗಳಿಸಿ ಪಾಕಿಸ್ತಾನ 150ರ ಗಡಿ ದಾಟಲು ನೆರವಾದರು. ಕೊನೆಯಲ್ಲಿ ನಾಯಕ ಸಲ್ಮಾನ್ ಅಲಿ ಆಘಾ ಹಾಗೂ ಮೊಹಮ್ಮದ್ ನವಾಜ್ ವೇಗವಾಗಿ ರನ್​​ಗಳಿಸಿ 171ರ ಸವಾಲಿನ ಮೊತ್ತಕ್ಕೆ ಕಾರಣರಾದರು.

ಟಾಸ್ ಗೆದ್ದ ಭಾರತ ತಂಡ ನಿರೀಕ್ಷೆಯಂತೆ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಸತತ 3 ಡಕ್ ಔಟ್ ಆಗಿದ್ದ ಸೈಮ್ ಅಯೂಬ್ ಬದಲಿಗೆ ಇಂದು ಫಖರ್ ಜಮಾನ್ ಆರಂಭಿಕನಾಗಿ ಕಣಕ್ಕಿಳಿದಿದ್ದರು. ಹಾರ್ದಿಕ್ ಪಾಂಡ್ಯ ತಮ್ಮ ಮೊದಲ ಓವರ್​ನ 3ನೇ ಎಸೆತದಲ್ಲೇ ಆರಂಭಿಕ ಫರ್ಹಾನ್ ವಿಕೆಟ್ ಪಡೆಯುವ ಅವಕಾಶ ಸೃಷ್ಟಿಸಿದ್ದರು. ಆದರೆ ಅಭಿಷೇಕ್ ಶರ್ಮಾ ಕೈಗೆ ಬಂದ ಕ್ಯಾಚ್ ಕೈಚೆಲ್ಲಿದರು. 3ನೇ ಓವರ್​ನಲ್ಲಿ ಮತ್ತೆ ಹಾರ್ದಿಕ್ ಪಾಂಡ್ಯ 3 ಬೌಂಡರಿ ಸಹಿತ 15 ರನ್​ಗಳಿಸಿ ಡೇಂಜರಸ್ ಆಗುತ್ತಿದ್ದ ಫಖರ್ ಜಮಾನ್ ವಿಕೆಟ್ ಉಡಾಯಿಸಿದರು.

ಆದರೆ ಆ ನಂತರ ಒಂದಾದ ಆಯೂಬ್-ಫರ್ಹಾನ್ ಜೋಡಿ 2ನೇ ವಿಕೆಟ್ ಜೊತೆಯಾಟದಲ್ಲಿ 72 ರನ್​ಗಳ ಜೊತೆಯಾಟ ನೀಡಿ ಚೇತರಿಕೆ ನೀಡಿದರು. 17 ಎಸೆತಗಳಲ್ಲಿ 21 ರನ್​ಗಳಿಸಿದ್ದ ಅಯೂಬ್ ಶಿವಂ ದುಬೆ ಬೌಲಿಂಗ್​​ನಲ್ಲಿ ಅಭಿಷೇಕ್ ಶರ್ಮಾ ಹಿಡಿದ ಅದ್ಭುತ ಕ್ಯಾಚ್​ಗೆ ಬದಲಿಯಾದರು. ಆ ನಂತರ ಟೀಮ್ ಇಂಡಿಯಾ ಬೌಲರ್​ಗಳು ಮೇಲುಗೈ ಸಾಧಿಸಿದರು. 4ನೇ ಕ್ರಮಾಂಕದಲ್ಲಿ ಬಂದ ಹುಸೇನ್ ತಲಾತ್ 11 ಎಸೆತಗಳಲ್ಲಿ 10 ರನ್​ಗಳಿಸಿ ಕುಲ್ದೀಪ್ ಯಾದವ್​ಗೆ ವಿಕೆಟ್ ಒಪ್ಪಿಸಿದರು. ಇದರ ಬೆನ್ನಲ್ಲೇ 45 ಎಸೆತಗಳಲ್ಲಿ 5 ಬೌಂಡರಿ, 3 ಸಿಕ್ಸರ್​ಗಳ ಸಹಿತ 58 ರನ್​ಗಳಿಸಿದ್ದ ಆರಂಭಿಕ ಆಟಗಾರ ಸಾಹಿಬ್ಜಾದಾ ಫರ್ಹಾನ್​ ದುಬೆ ಬೌಲಿಂಗ್​​ನಲ್ಲಿ ಸೂರ್ಯಕುಮಾರ್ ಯಾದವ್​ಗೆ ಕ್ಯಾಚ್ ನೀಡಿ ಔಟ್ ಆದರು.

ಕೊನೆಯಲ್ಲಿ ಮೊಹಮ್ಮದ್ ನವಾಜ್ 19 ಎಸೆತಗಳಲ್ಲಿ ತಲಾ 1 ಬೌಂಡರಿ, ಸಿಕ್ಸರ್ ಸಹಿತ 21, ನಾಯಕ ಸಲ್ಮಾನ್ ಅಲಿ ಆಘಾ 13 ಎಸೆತಗಳಲ್ಲಿ 17, ಫಹೀಮ್ ಅಶ್ರಫ್ 8 ಎಸೆತಗಳಲ್ಲಿ 1 ಬೌಂಡರಿ, 2 ಸಿಕ್ಸರ್​ಗಳ ಸಹಿತ 20 ರನ್​ಗಳಿಸಿ ಸವಾಲಿನ ಮೊತ್ತಕ್ಕೆ ಕಾರಣರಾದರು.