Last Updated:
ಅಭಿಷೇಕ್ ಶರ್ಮಾ ಹಾಗೂ ಶುಭ್ಮನ್ ಗಿಲ್ ಸಿಡಿಲಬ್ಬರದ ಬ್ಯಾಟಿಂಗ್ ನೆರವಿನಿಂದ ಭಾರತ ತಂಡ ಪಾಕಿಸ್ತಾನ ನೀಡಿದ್ದ 172 ರನ್ಗಳ ಗುರಿಯನ್ನ 4 ವಿಕೆಟ್ ಕಳೆದುಕೊಂಡು ತಲುಪಿದೆ.
ಏಷ್ಯಾಕಪ್ 2025ರ ಸೂಪರ್ 4 ಹಂತದ 2ನೇ ಪಂದ್ಯದಲ್ಲಿ ಭಾರತ ತಂಡ ಬದ್ಧ ಎದುರಾಳಿ ಪಾಕಿಸ್ತಾನವನ್ನ ಧೂಳೀಪಟ ಮಾಡಿದೆ. ಭಾನುವಾರ ದುಬೈ ಅಂತಾರಾಷ್ಟ್ರೀಯ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಪಾಕಿಸ್ತಾನ ನೀಡಿದ್ದ 172 ರನ್ಗಳ ಸವಾಲಿನ ಗುರಿಯನ್ನ ಅಭಿಷೇಕ್ ಶರ್ಮಾ ಸಿಡಿಸಿದ ಅರ್ಧಶತಕದ ನೆರವಿನಿಂದ ಭಾರತ ತಂಡ ಇನ್ನು 7 ಎಸೆತಗಳಿರುವಂತೆ 4 ವಿಕೆಟ್ ಕಳೆದುಕೊಂಡು ಗೆಲುವು ಸಾಧಿಸಿತು. ಅಭಿಷೇಕ್ ಶರ್ಮಾ 39 ಎಸೆತಗಳಲ್ಲಿ 72 ರನ್ ಸಿಡಿಸಿದರೆ, ಅವರ ಆರಂಭಿಕ ಜೊತೆಗಾರ ಶುಭ್ಮನ್ ಗಿಲ್ 47 ರನ್ಗಳಿಸಿ ಭಾರತಕ್ಕೆ ಸುಲಭ ಗೆಲುವು ಸಿಗಲು ನೆರವಾದರು. ಭ
172 ರನ್ಗಳ ಗುರಿಯನ್ನ ಬೆನ್ನಟ್ಟಿದ ಟೀಮ್ ಇಂಡಿಯಾ ಅಮೋಘ ಆರಂಭ ಪಡೆದುಕೊಂಡಿತು. ಅಭಿಷೇಕ್ ಶರ್ಮಾ ಹಾಗೂ ಶುಭ್ಮನ್ ಗಿಲ್ ಇಬ್ಬರು ಮೊದಲ 10 ಓವರ್ಗಳಲ್ಲಿ ಪಾಕಿಸ್ತಾನ ಬೌಲರ್ಗಳನ್ನ ಧೂಳೀಪಟ ಮಾಡಿದರು. ಈ ಇಬ್ಬರು 59 ಎಸೆತಗಳಲ್ಲಿ 105 ರನ್ಗಳ ಜೊತೆಯಾಟ ನೀಡಿದರು. ಗಿಲ್ 28 ಎಸೆತಗಳಲ್ಲಿ 8 ಬೌಂಡರಿಗಳ ಸಹಿತ 47 ರನ್ಗಳಿಸಿ ಫಹೀಮ್ ಅಶ್ರಫ್ ಬೌಲಿಂಗ್ನಲ್ಲಿ ಬೌಲ್ಡ್ ಆದರು. ನಂತರ ಬಂದ ನಾಯಕ ಸೂರ್ಯಕುಮಾರ್ ಯಾದವ್ 3 ಎಸೆತಗಳನ್ನಾಡಿ ಖಾತೆ ತೆರೆಯದೇ ಹಾರಿಸ್ ರೌಫ್ ಬೌಲಿಂಗ್ನಲ್ಲಿ ಅಬ್ರಾರ್ ಅಹ್ಮದ್ಗೆ ಕ್ಯಾಚ್ ನೀಡಿ ನಿರ್ಗಮಿಸಿದರು.
ಸೂರ್ಯ ಔಟ್ ಆದ 17 ರನ್ಗಳ ಅಂತರದಲ್ಲಿ ಅಭಿಷೇಕ್ ಶರ್ಮಾ ಕೂಡ ವಿಕೆಟ್ ಒಪ್ಪಿಸಿದರು. ಅಭಿಷೇಕ್ ಶರ್ಮಾ 39 ಎಸೆತಗಳಲ್ಲಿ 6 ಬೌಂಡರಿ, 5 ಸಿಕ್ಸರ್ಗಳ ಸಹಿತ 74 ರನ್ಗಳಿಸಿ ಅಬ್ರಾರ್ಗೆ ವಿಕೆಟ್ ಒಪ್ಪಿಸಿದರು. ಬ್ಯಾಕ್ ಟು ಬ್ಯಾಕ್ ಸಿಕ್ಸರ್ ಹೊಡೆಯಲು ಯತ್ನಿಸಿ ಕ್ಯಾಚ್ ಔಟ್ ಆದರು. ಅಭಿಷೇಕ್ ನಂತರ ಭಾರತ ರನ್ಗಳಿಸುವ ವೇಗಕ್ಕೆ ಕಡಿವಾಣ ಬಿದ್ದಿತು. ಸಂಜು ಸ್ಯಾಮ್ಸನ್ ಹಾಗೂ ತಿಲಕ್ ವರ್ಮಾ 26 ಎಸೆತಗಳನ್ನಾಡಿ ಕೇವಲ 25 ರನ್ಗಳಿಸಿದರು. ಸಂಜು 17 ಎಸೆತಗಳನ್ನಾಡಿ 1 ಬೌಂಡರಿಯೊಂದಿಗೆ ಕೇವಲ 13 ರನ್ಗಳಿಸಿ ರೌಫ್ ಬೌಲಿಂಗ್ನಲ್ಲಿ ಬೌಲ್ಡ್ ಆದರು.
ಆದರೆ ಹಾರ್ದಿಕ್ ಪಾಂಡ್ಯ ಹಾಗೂ ತಿಲಕ್ ವರ್ಮಾ ಮುರಿಯದ 5ನೇ ವಿಕೆಟ್ಗೆ ಜೊತೆಯಾಟದಲ್ಲಿ 26 ರನ್ಗಳಿಸಿ ತಂಡವನ್ನು ಗೆಲುವಿನ ಗಡಿ ದಾಟಿಸಿದರು. ತಿಲಕ್ ವರ್ಮಾ 19 ಎಸೆತಗಳಲ್ಲಿ ತಲಾ 2 ಬೌಂಡರಿ, ಸಿಕ್ಸರ್ ಸಹಿತ ಅಜೇಯ 30 ರನ್ಗಳಿಸಿ ತಂಡವನ್ನು ಗೆಲುವಿನ ಗಡಿ ದಾಟಿಸಿದರು. ಹಾರ್ದಿಕ್ ಅಜೇಯ 7 ರನ್ಗಳಿಸಿದರು.
ಪಾಕಿಸ್ತಾನದ ಪರ ಹಾರಿಸ್ ರೌಫ್ 26ಕ್ಕೆ 2, ಅಬ್ರಾರ್ ಅಹ್ಮದ್ ಹಾಗೂ ಫಹೀಮ್ ಅಶ್ರಫ್ ತಲಾ 1 ವಿಕೆಟ್ ಪಡೆದರು.
September 22, 2025 12:04 AM IST