Last Updated:
ಮೊದಲ ಫೈನಲಿಸ್ಟ್ ಸ್ಥಾನವನ್ನ ಖಚಿತಪಡಿಸುವ ಪಂದ್ಯದಲ್ಲಿ ಭಾರತ ತಂಡ ಮೊದಲು ಬ್ಯಾಟಿಂಗ್ ಮಾಡಿ 168 ರನ್ಗಳಿಸಿತ್ತು. 169 ರನ್ಗಳ ಸವಾಲಿನ ಗುರಿ ಬೆನ್ನಟ್ಟಿದ ಬಾಂಗ್ಲಾದೇಶ ತಂಡ ಸೈಫ್ ಹಸನ್ (69) ಅರ್ಧಶತಕದ ಹೊರತಾಗಿಯೂ 19.3 ಓವರ್ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 127ಕ್ಕೆ ಸೀಮಿತವಾಯಿತು
ಟೀಮ್ ಇಂಡಿಯಾ ಏಷ್ಯಾಕಪ್ನಲ್ಲಿ ತನ್ನ ಅಮೋಘ ಪ್ರದರ್ಶನವನ್ನ ಮುಂದುವರಿಸಿದೆ. ಬುಧವಾರ ನಡೆದ ತನ್ನ 2ನೇ ಸೂಪರ್ 4 ಪಂದ್ಯದಲ್ಲಿ ಭರ್ಜರಿ ಆಲ್ರೌಂಡರ್ ಪ್ರದರ್ಶನ ತೋರಿ ಬಾಂಗ್ಲಾದೇಶದ ವಿರುದ್ಧ 41 ರನ್ಗಳ ಜಯ ಸಾಧಿಸಿ ಫೈನಲ್ ಸ್ಥಾನವನ್ನ ಖಚಿತಪಡಿಸಿಕೊಂಡಿದೆ. ಬಾಂಗ್ಲಾದೇಶ ತಂಡ ಭಾರತ ನೀಡಿದ್ದ 169 ರನ್ಗಳಿಗೆ ಉತ್ತರವಾಗಿ 127ಕ್ಕೆ ಆಲೌಟ್ ಆಗುವ ಮೂಲಕ ಸೋಲೊಪ್ಪಿಕೊಂಡಿತು. ಈ ಪಂದ್ಯದ ಗೆಲುವಿನೊಂದಿಗೆ ಗುರುವಾರ ನಡೆಯುವ ಬಾಂಗ್ಲಾದೇಶ-ಪಾಕಿಸ್ತಾನ ನಡುವಿನ ಪಂದ್ಯ ನಾಕೌಟ್ ಪಂದ್ಯವಾಗಲಿದೆ. ಆದರೆ ಭಾರತ-ಶ್ರೀಲಂಕಾ ನಡುವಿನ ಪಂದ್ಯ ಕೇವಲ ಔಪಚಾರಿಕ ಪಂದ್ಯವಾಗಲಿದೆ. ಆ ಪಂದ್ಯದಲ್ಲಿ ಭಾರತ ಗೆದ್ದರೂ, ಸೋತರೂ ತನ್ನ ಫೈನಲ್ ಸ್ಥಾನಕ್ಕೆ ಯಾವುದೇ ಸಮಸ್ಯೆ ಇಲ್ಲ.
ಮೊದಲ ಫೈನಲಿಸ್ಟ್ ಸ್ಥಾನವನ್ನ ಖಚಿತಪಡಿಸುವ ಪಂದ್ಯದಲ್ಲಿ ಭಾರತ ತಂಡ ಮೊದಲು ಬ್ಯಾಟಿಂಗ್ ಮಾಡಿ 168 ರನ್ಗಳಿಸಿತ್ತು. 169 ರನ್ಗಳ ಸವಾಲಿನ ಗುರಿ ಬೆನ್ನಟ್ಟಿದ ಬಾಂಗ್ಲಾದೇಶ ತಂಡ ಸೈಫ್ ಹಸನ್ (69) ಅರ್ಧಶತಕದ ಹೊರತಾಗಿಯೂ 19.3 ಓವರ್ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 127ಕ್ಕೆ ಸೀಮಿತವಾಯಿತು.
169 ರನ್ಗಳ ಗುರಿಯನ್ನ ಬೆನ್ನಟ್ಟಿ ಬಾಂಗ್ಲಾದೇಶ 2ನೇ ಓವರ್ನಲ್ಲೇ ಆರಂಭಿಕ ಬ್ಯಾಟರ್ ತಾಂಜಿದ್ ಹಸನ್ (1) ವಿಕೆಟ್ ಕಳೆದುಕೊಂಡಿತು. ಬುಮ್ರಾ ಬೌಲಿಂಗ್ನಲ್ಲಿ ಹಸನ್ ದುಬೆ ಕ್ಯಾಚ್ ನೀಡಿ ನಿರ್ಗಮಿಸಿದರು. ಆದರೆ 2ನೇ ವಿಕೆಟ್ಗೆ ಪರ್ವೇಜ್ ಹೊಸೈನ್ ಹಾಗೂ ಸೈಫ್ ಹಸನ್ 45 ರನ್ಗಳಿಸಿ ಚೇತರಿಕೆ ನೀಡಿದರು. 19 ಎಸೆತಗಲ್ಲಿ 21 ರನ್ಗಳಿಸಿ ಪರ್ವೇಜ್ ಕುಲ್ದೀಪ್ ಯಾದವ್ ಬೌಲಿಂಗ್ನಲ್ಲಿ ಅಭಿಷೇಕ್ ಶರ್ಮಾಗೆ ಕ್ಯಾಚ್ ನೀಡಿ ಔಟ್ ಆದರು. ಕಳೆದ ಪಂದ್ಯದ ಹೀರೋ ತೌಹಿದ್ ಹೃದೋಯ್ ಕೇವಲ 6 ರನ್ಗಳಿಸಿ ಅಕ್ಷರ್ ಪಟೇಲ್ ಬೌಲಿಂಗ್ನಲ್ಲಿ ಅಭಿಷೇಕ್ ಶರ್ಮಾಗೆ ಕ್ಯಾಚ್ ನೀಡಿ ಪೆವೆಲಿಯನ್ ಸೇರಿಕೊಂಡರು.
5ನೇ ಕ್ರಮಾಂಕದಲ್ಲು ಬಂದ ಶಮೀಮ್ ಹೊಸೈನ್ ಶೂನ್ಯಕ್ಕೆ ವರುಣ್ ಚಕ್ರವರ್ತಿ ಬೌಲಿಂಗ್ನಲ್ಲಿ ಡಕ್ ಔಟ್ ಆದರೆ, ನಾಯಕ ಜಾಕರ್ ಅಲಿ 4 ರನ್ಗಳಿಸಿ ರನ್ ಔಟ್ ಆದರು. ಮೊಹಮ್ಮದ್ ಸೈಫುದ್ದೀನ್ 4, ರಶೀದ್ ಹೊಸೈನ್ 2, ತಾಂಜಿದ್ ಹಸನ್ ಸಕಿಬ್ 0, ಮುಸ್ತಫಿಜುರ್ 6 ರನ್ಗಳಿಗೆ ವಿಕೆಟ್ ಒಪ್ಪಿಸಿದರು. ಆರಂಭಿಕರಾಗಿ ಕಣಕ್ಕಿಳಿದಿದ್ದ ಸೈಫ್ ಹಸನ್ 51 ಎಸೆತಗಳಲ್ಲಿ 3 ಬೌಂಡರಿ, 5 ಸಿಕ್ಸರ್ಗಳ ಸಹಿತ 69 ರನ್ಗಳಿಸಿ 9ನೇ ಆಟಗಾರನಾಗಿ ವಿಕೆಟ್ ಒಪ್ಪಿಸಿದರು. ಹಸನ್ಗೆ ಭಾರತ ನೀಡಿದ 4 ಕ್ಯಾಚ್ ಡ್ರಾಫ್ ಅವಕಾಶ ಕೇವಲ ಅರ್ಧಶತಕ ಪೂರ್ಣಗೊಳಿಸಲು ಮಾತ್ರ ಸಾಧ್ಯವಾಯಿತು.
ಭಾರತದ ಪರ ಮಿಂಚಿದ ಕುಲ್ದೀಪ್ ಯಾದವ್ 4 ಓವರ್ಗಳಲ್ಲಿ 18 ರನ್ ನೀಡಿ 3 ವಿಕೆಟ್ ಪಡೆದು ಗೆಲುವಿನ ರೂವಾರಿಯಾದರು. ಇದು 5 ಪಂದ್ಯಗಳಲ್ಲಿ ಅವರ 3ನೇ 3 ವಿಕೆಟ್ ಸಾಧನೆಯಾಗಿದೆ., ವರುಣ್ ಚಕ್ರವರ್ತಿ 28ಕ್ಕೆ2, ಜಸ್ಪ್ರೀತ್ ಬುಮ್ರಾ 18ಕ್ಕೆ2, ಅಕ್ಷರ್ ಪಟೇಲ್ 37ಕ್ಕೆ1, ತಿಲಕ್ ವರ್ಮಾ 1ಕ್ಕೆ1 ವಿಕೆಟ್ ಪಡೆದರು.
ಇದಕ್ಕೂ ಮುನ್ನ ಟಾಸ್ ಸೋತು ಬ್ಯಾಟಿಂಗ್ ಮಾಡಿದ ಭಾರತ ತಂಡ ಅಭಿಷೇಕ್ ಶರ್ಮಾರ 75 ರನ್ಗಳ ನೆರವಿನಿಂದ 168 ರನ್ಗಳಿಸಿತ್ತು. ಪವರ್ ಪ್ಲೇನಲ್ಲಿ 72 , 10 ಓವರ್ಗಳಲ್ಲಿ 98 ರನ್ಗಳಿಸಿದ್ದ ಭಾರತ ಅಭಿಷೇ್ಕ ಶರ್ಮಾ ವಿಕೆಟ್ ಕಳೆದುಕೊಂಡ ಬಳಿಕ ದಿಢೀರ್ ಕುಸಿತಕಂಡು 200 ರನ್ಗಳಿಸುವ ಅವಕಾಶ ತಪ್ಪಿಸಿಕೊಂಡಿತು.
ಅಭಿಷೇಕ್ ಶರ್ಮಾ 37 ಎಸೆತಗಳಲ್ಲಿ 6 ಬೌಂಡರಿ 5 ಸಿಕ್ಸರ್ಗಳ ನೆರವಿನಿಂದ 75 ರನ್ಗಳಿಸಿದರೆ, ಹಾರ್ದಿಕ್ ಪಾಂಡ್ಯ 29 ಎಸೆತಗಳಲ್ಲಿ 4 ಬೌಂಡರಿ, 1 ಸಿಕ್ಸರ್ ಸಹಿತ 38, ಶುಭ್ಮನ್ ಗಿಲ್ 19 ಎಸೆತಗಳಲ್ಲಿ 29 ರನ್ಗಳಿಸಿದರು. ಅಕ್ಷರ್ ಪಟೇಲ್ 15 ಎಸೆತಗಳಲ್ಲಿ 10 ರನ್ಗಳಿಸಿ ನಿರಾಶೆ ಮೂಡಿಸಿದರೆ, ದುಬೆ (2), ಸೂರ್ಯಕುಮಾರ್ ಯಾದವ್ (5) ಹಾಗೂ ತಿಲಕ್ ವರ್ಮಾ (5) ಒಂದಂಕಿ ಮೊತ್ತಕ್ಕೆ ಸೀಮಿತವಾಗಿ ಬೇಸರ ಮೂಡಿಸಿದರು.
ಟೀಮ್ ಇಂಡಿಯಾ ಈ ಗೆಲುವಿನೊಂದಿಗೆ ಫೈನಲ್ ಸ್ಥಾನವನ್ನ ಖಚಿತಪಡಿಸಿಕೊಂಡಿದೆ. ಕೊನೆಯ ಪಂದ್ಯವನ್ನ ಶ್ರೀಲಂಕಾ ವಿರುದ್ದ ಸೋತರೂ ಟೀಮ್ ಇಂಡಿಯಾ ಫೈನಲ್ ಸ್ಥಾನ ಅಬಾಧಿತವಾಗಿದೆ. ನಾಳೆ ಪಾಕಿಸ್ತಾನ-ಬಾಂಗ್ಲಾದೇಶ ನಡುವಿನ ಪಂದ್ಯ ಸೆಮಿಫೈನಲ್ನಂತಾಗಿರಲಿದ್ದು, ಗೆದ್ದ ತಂಡ ಫೈನಲ್ ಪ್ರವೇಶಿಸಲಿದೆ.
September 24, 2025 11:34 PM IST