Asia Cup 2025: ಫೈನಲ್​​ನಲ್ಲಿ ಅಭಿಷೇಕ್ ‘ಬಚ್ಚನ್’ರನ್ನ ಬೇಗ ಔಟ್ ಮಾಡಿ!​ ಭಾರತ ಸೋಲಿಸಲು ಮಾಸ್ಟರ್ ಪ್ಲಾನ್ ನೀಡಿ ನಗಪಾಟಲಿಗೀಡಾದ ಶೋಯಬ್ ಅಖ್ತರ್‌ | Abhishek Bachchan Brilliantly Roasts Pakistan After Shoaib Akhtar’s On-Air Gaffe | ಕ್ರೀಡೆ

Asia Cup 2025: ಫೈನಲ್​​ನಲ್ಲಿ ಅಭಿಷೇಕ್ ‘ಬಚ್ಚನ್’ರನ್ನ ಬೇಗ ಔಟ್ ಮಾಡಿ!​ ಭಾರತ ಸೋಲಿಸಲು ಮಾಸ್ಟರ್ ಪ್ಲಾನ್ ನೀಡಿ ನಗಪಾಟಲಿಗೀಡಾದ ಶೋಯಬ್ ಅಖ್ತರ್‌ | Abhishek Bachchan Brilliantly Roasts Pakistan After Shoaib Akhtar’s On-Air Gaffe | ಕ್ರೀಡೆ
ನಗೆಪಾಟಲಿಗೀಡಾದ ಶೋಯಬ್ ಅಖ್ತರ್‌

ಪಾಕಿಸ್ತಾನದ ಮಾಜಿ ವೇಗದ ಬೌಲರ್ ಶೋಯಬ್ ಅಖ್ತರ್ “ಗೇಮ್ ಆನ್ ಹೈ” ಎಂಬ ಕ್ರಿಕೆಟ್ ಟಾಕ್ ಶೋದಲ್ಲಿ ಫೈನಲ್‌ಗೆ ಪಾಕಿಸ್ತಾನದ ಗೆಲುವಿನ ತಂತ್ರವನ್ನು ಚರ್ಚಿಸುತ್ತಿದ್ದಾಗ, ಒಂದು ಹಾಸ್ಯಾಸ್ಪದ ಹೇಳಿಕೆ ನೀಡಿದ್ದಾರೆ. ಭಾರತದ ಯುವ ಓಪನರ್ ಅಭಿಷೇಕ್ ಶರ್ಮಾ ಅವರನ್ನು ಬಾಲಿವುಡ್ ನಟ “ಅಭಿಷೇಕ್ ಬಚ್ಚನ್” ಎಂದು ತಪ್ಪಾಗಿ ಕರೆದಿದ್ದಾರೆ. “ಪಾಕಿಸ್ತಾನ ತಂಡ ಫೈನಲ್​ನಲ್ಲಿ ಅಭಿಷೇಕ್ ಬಚ್ಚನ್‌ರನ್ನು ಆರಂಭದಲ್ಲೇ ಔಟ್ ಮಾಡಿದರೆ, ಭಾರತದ ಮಿಡಲ್ ಆರ್ಡರ್ ಏನಾಗುತ್ತದೆ? ಅವರ ಮಧ್ಯಕ್ರಮಾಂಕದ ಬ್ಯಾಟಿಂಗ್ ಇನ್ನೂ ಸ್ಥಿರವಾಗಿಲ್ಲ” ಎಂದು ಅಖ್ತರ್ ಹೇಳಿದ್ದಾರೆ. ಅಕ್ತರ್ ನೀಡಿದ ತಪ್ಪು ಹೆಸರಿನಿಂದಾಗಿ ಶೋನ ಹೋಸ್ಟ್ ಮತ್ತು ಪ್ಯಾನೆಲಿಸ್ಟ್‌ಗಳು ನಗುಗಡಲಲ್ಲಿ ತೇಲಾಡಿದರು. ಅಖ್ತರ್ ತಕ್ಷಣವೇ ತಪ್ಪನ್ನು ಸರಿಪಡಿಸಿಕೊಂಡರಾದರೂ, ಈ ಕ್ಲಿಪ್ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದು, ಲಕ್ಷಾಂತರ ವ್ಯೂಗಳು ಮತ್ತು ಕಾಮೆಂಟ್‌ಗಳನ್ನು ಪಡೆದಿದೆ.

ಅಭಿಷೇಕ್ ಬಚ್ಚನ್ ಪ್ರತಿಕ್ರಿಯೆ

ಈ ವೈರಲ್ ಕ್ಲಿಪ್​ಗೆ ಪ್ರತಿಕ್ರಿಯೆ ನೀಡಿರುವ ಬಾಲಿವುಡ್ ನಟ ಅಭಿಷೇಕ್ ಬಚ್ಚನ್, “ಸರ್, ಅವರಿಗೆ (ಪಾಕಿಸ್ತಾನಕ್ಕೆ) ಅದನ್ನು (ನನ್ನನ್ನು ಔಟ್ ಮಾಡುವುದು) ಕೂಡ ಸಾಧ್ಯವಾಗುವುದಿಲ್ಲ ಎಂದು ಭಾವಿಸುತ್ತೇನೆ! ಮತ್ತು ನಾನು ಕ್ರಿಕೆಟ್ ಆಡುವುದರಲ್ಲಿ ಅಂತಾ ಉತ್ತಮನೇನು ಅಲ್ಲ!” ಎಂದು ಟಾಂಗ್ ನೀಡಿ ಉತ್ತರಿಸಿದ್ದಾರೆ.

ಈ ತಮಾಷೆಯ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದು, ಅಭಿಮಾನಿಗಳಿಂದ ತಮಾಷೆಯ ಕಾಮೆಂಟ್‌ಗಳ ಜೊತೆಗೆ ಮಿಮ್ಸ್​ಗಳನ್ನ ಮಾಡಿ ಹರಿಬಿಡುತ್ತಿದ್ದಾರೆ.

ಶೋಯಬ್ ಅಖ್ತರ್‌ರ ತಂತ್ರವೇನು?

ಅಖ್ತರ್‌ರ ತಂತ್ರವು ಭಾರತದ ಬ್ಯಾಟಿಂಗ್‌ನ ಕೀಲಿಯಾದ ಅಭಿಷೇಕ್ ಶರ್ಮಾ ಅವರನ್ನು ಆರಂಭದಲ್ಲೇ ಔಟ್ ಮಾಡಿ, ಭಾರತದ ಮಿಡಲ್ ಆರ್ಡರ್‌ಗೆ ಒತ್ತಡ ಹೇರಬೇಕು ಎಂಬುದಾಗಿತ್ತು. ಅವರು ಹೇಳಿದಂತೆ, “ಅಭಿಷೇಕ್ ಶರ್ಮಾ ಈ ಟೂರ್ನಿಯಲ್ಲಿ ಅದ್ಭುತ ಫಾರ್ಮ್‌ನಲ್ಲಿದ್ದಾರೆ. ಅವರನ್ನು ಶೀಘ್ರವಾಗಿ ಔಟ್ ಮಾಡಿದರೆ, ಸೂರ್ಯಕುಮಾರ್ ಯಾದವ್, ಪಾಂಡ್ಯ, ತಿಲಕ್​ ಮತ್ತು ಇತರ ಮಿಡಲ್ ಆರ್ಡರ್ ಬ್ಯಾಟರ್‌ಗಳ ಮೇಲೆ ಒತ್ತಡ ಬೀಳುತ್ತದೆ.” ಭಾರತದ ಫೀಲ್ಡಿಂಗ್ ದೋಷಗಳನ್ನು (12 ಕೈಚೆಲ್ಲಿದ ಕ್ಯಾಚ್‌ಗಳು) ಉಲ್ಲೇಖಿಸಿ, “ಪಾಕಿಸ್ತಾನ ಬಾಂಗ್ಲಾದೇಶ ವಿರುದ್ಧ (11 ರನ್‌ಗಳ ಗೆಲುವು) ತೋರಿದ ಮಾನಸಿಕತೆಯೊಂದಿಗೆ ಆಡಬೇಕು. 20 ಓವರ್‌ಗಳನ್ನು ತುಂಬುವ ಬದಲು, ಭಾರತವನ್ನು ಆಲೌಟ್ ಮಾಡುವ ಗುರಿಯಿಡಬೇಕು” ಎಂದು ಸಲಹೆ ನೀಡಿದರು.

ಭಾರತದ ಟೂರ್ನಿಯ ಪ್ರದರ್ಶನ

ಭಾರತ ತಂಡವು ಏಷ್ಯಾ ಕಪ್ 2025ರಲ್ಲಿ ಅದ್ಭುತ ಪ್ರದರ್ಶನ ತೋರಿದೆ. ಇದುವರೆಗೆ ಆಡಿದ ಐದು ಪಂದ್ಯಗಳಲ್ಲಿ (ಗ್ರೂಪ್ ಸ್ಟೇಜ್‌ನಲ್ಲಿ 3, ಸೂಪರ್ 4ರಲ್ಲಿ 2) ಎಲ್ಲದರಲ್ಲೂ ಗೆಲುವು ಸಾಧಿಸಿದೆ. ಪಾಕಿಸ್ತಾನ ವಿರುದ್ಧ ಎರಡು ಪಂದ್ಯಗಳಲ್ಲಿ ಗೆಲುವು ಸಾಧಿಸಿತು. ಫೈನಲ್‌ಗೆ ಮುಂಚಿನ ಕೊನೆಯ ಸೂಪರ್ 4 ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಆಡಲಿದೆ.

ಪಾಕಿಸ್ತಾನದ ಸ್ಥಿತಿ

ಪಾಕಿಸ್ತಾನ ತಂಡವು ಟೂರ್ನಿಯಲ್ಲಿ ಒಂದು ಗೆಲುವಿನೊಂದಿಗೆ (ಬಾಂಗ್ಲಾದೇಶ ವಿರುದ್ಧ 11 ರನ್‌ಗಳಿಂದ) ಫೈನಲ್‌ಗೆ ಅರ್ಹತೆ ಪಡೆದಿದೆ, ಆದರೆ ಭಾರತದಿಂದ ಎರಡು ಸೋಲುಗಳನ್ನು ಎದುರಿಸಿದೆ. ಸಲ್ಮಾನ್ ಆಘಾ ನಾಯಕತ್ವದ ತಂಡವು ಶಾಹೀನ್ ಶಾ ಅಫ್ರಿದಿ ಮತ್ತು ಹ್ಯಾರಿಸ್ ರೌಫ್‌ರ ಬೌಲಿಂಗ್‌ನಿಂದ ಭಾರತಕ್ಕೆ ಸವಾಲು ಒಡ್ಡಲು ಯೋಜಿಸಿದೆ. ಆದರೆ, ಅವರ ಬ್ಯಾಟಿಂಗ್ ವಿಭಾಗ ಸ್ಥಿರವಾಗಿಲ್ಲದಿರುವುದು ದೊಡ್ಡ ಚಿಂತೆಯ ವಿಷಯವಾಗಿದೆ.

ಭಾರತ vs ಪಾಕಿಸ್ತಾನ T20 ಹೆಡ್-ಟು-ಹೆಡ್

ಒಟ್ಟು ಪಂದ್ಯಗಳು: 15

ಭಾರತ ಗೆಲುವು: 11

ಪಾಕಿಸ್ತಾನ ಗೆಲುವು: 3

ಟೈ: 1

ಕನ್ನಡ ಸುದ್ದಿ/ ನ್ಯೂಸ್/ಕ್ರೀಡೆ/

Asia Cup 2025: ಫೈನಲ್​​ನಲ್ಲಿ ಅಭಿಷೇಕ್ ‘ಬಚ್ಚನ್’ರನ್ನ ಬೇಗ ಔಟ್ ಮಾಡಿ!​ ಭಾರತ ಸೋಲಿಸಲು ಮಾಸ್ಟರ್ ಪ್ಲಾನ್ ನೀಡಿ ನಗಪಾಟಲಿಗೀಡಾದ ಶೋಯಬ್ ಅಖ್ತರ್‌