Last Updated:
ಭಾರತ -ಶ್ರೀಲಂಕಾ ನಡುವಿನ ಸೂಪರ್ 4 ಪಂದ್ಯ ಟೈನಲ್ಲಿ ಅಂತ್ಯವಾಗಿತ್ತು. ಸೂಪರ್ ಓವರ್ನಲ್ಲಿ ದಾಸುನ್ ಶನಕರನ್ನ ಕ್ಯಾಚ್ ಔಟ್ ಎಂದು ಅಂಪೈರ್ ತೀರ್ಪು ನೀಡಿದರು. ಅದೇ ಎಸೆತದಲ್ಲಿ ಶನಕ ರನ್ಔಟ್ ಆಗಿದ್ದರು. ಕ್ಯಾಚ್ ಚೆಕ್ ಮಾಡಿದ ಮೂರನೇ ಅಂಪೈರ್ ನಾಟೌಟ್ ಎಂದು ತೀರ್ಪು ನೀಡಿದರು. ಆದರೆ ಸಂಜು ಸ್ಯಾಮ್ಸನ್ ರನ್ಔಟ್ ಮಾಡಿದ್ದರೂ, ಅದನ್ನ ಪರಿಗಣಿಸದೇ ಮತ್ತೆ ಶನಕಾಗೆ ಬ್ಯಾಟಿಂಗ್ ಮಾಡಲು ಅವಕಾಶ ನೀಡಿರುವುದು ಗೊಂದಲಕ್ಕೆ ಕಾರಣವಾಗಿದೆ.
ಏಷ್ಯಾ ಕಪ್ 2025ರ (Asia Cup) ಸೂಪರ್ 4 ಪಂದ್ಯದಲ್ಲಿ ಭಾರತ ಮತ್ತು ಶ್ರೀಲಂಕಾ (India vs Sri Lanka) ನಡುವಿನ ರೋಚಕ ಪಂದ್ಯ ಸೂಪರ್ ಓವರ್ನಲ್ಲಿ ಅಂತ್ಯವಾಗಿದೆ. ಈ ಸೂಪರ್ ಓವರ್ನಲ್ಲಿ ಶ್ರೀಲಂಕಾದ ಆಲ್ರೌಂಡರ್ ಶನಕ ರನ್ಔಟ್ ಆಗಿದ್ದರೂ ಥರ್ಡ್ ಅಂಪೈರ್ರಿಂದ ನಾಟ್ ಔಟ್ ಎಂದು ಘೋಷಿಸಲ್ಪಟ್ಟ ಘಟನೆ ಗೊಂದಲ ಸೃಷ್ಟಿಸಿತು. ಆದರೆ, ಕ್ರಿಕೆಟ್ ನಿಯಮಗಳ ಪ್ರಕಾರ ಈ ನಿರ್ಧಾರ ಸರಿಯಾಗಿತ್ತು.
ಭಾರತ ಮತ್ತು ಶ್ರೀಲಂಕಾ ನಡುವಿನ ಸೂಪರ್ 4 ಪಂದ್ಯ ಟೈ ಆಗಿದ್ದರಿಂದ ಸೂಪರ್ ಓವರ್ಗೆ ಮೊರೆ ಹೋಗಿತ್ತು. ಶ್ರೀಲಂಕಾ ಮೊದಲು ಬ್ಯಾಟಿಂಗ್ ಮಾಡಿತು. ಭಾರತದ ವೇಗಿ ಅರ್ಷದೀಪ್ ಸಿಂಗ್ ಎಸೆದ ಸೂಪರ್ ಓವರ್ನ 4ನೇ ಬಾಲ್ನಲ್ಲಿ ಶನಕ ಬೈ ತೆಗೆದುಕೊಳ್ಳುವಾಗ ಸಂಜು ಸ್ಯಾಮ್ಸನ್ ರನ್ ಔಟ್ ಮಾಡಿದರು.
ಆದರೆ ಅದೇ ಸಮಯದಲ್ಲಿ ಅರ್ಷದೀಪ್ ಸಿಂಗ್ ಕ್ಯಾಚ್ ಔಟ್ಗೆ ಮನವಿ ಮಾಡಿದರು. ಅಂಪೈರ್ ಕೂಡ ಔಟ್ ಎಂದು ತೀರ್ಪು ನೀಡಿದರು. ದಾಸುನ್ ಶನಕ ಆನ್-ಫೀಲ್ಡ್ ಅಂಪೈರ್ರ ನಿರ್ಧಾರವನ್ನು ಸವಾಲು ಮಾಡಿ ಡಿಆರ್ಎಸ್ (ಡಿಸಿಷನ್ ರಿವ್ಯೂ ಸಿಸ್ಟಮ್) ಕೇಳಿದರು. ಡಿಆರ್ಎಸ್ನಲ್ಲಿ ರಿಪ್ಲೇ ಮತ್ತು ಅಲ್ಟ್ರಾ-ಎಡ್ಜ್ ನಲ್ಲಿ ಬಾಲ್ ಬ್ಯಾಟ್ಗೆ ತಾಗಿರಲಿಲ್ಲ, ಯಾವುದೇ ಸ್ಪೈಕ್ ಕಾಣಿಸಲಿಲ್ಲ. ಆದ್ದರಿಂದ, ಶನಕ ಕ್ಯಾಚ್ ಔಟ್ನಿಂದ ಸೇವ್ ಆದರು.
ಕ್ಯಾಚ್ ಔಟ್ ರಿಪ್ಲೇ ನಲ್ಲಿ ನಾಟೌಟ್ ಎಂದು ತೀರ್ಪು ಬಂದಿತು. ಆದರೆ ರನ್ ಔಟ್ ಔಟ್ ಪರಿಗಣಿಸದೇ ಮತ್ತೆ ಶನಕಗೆ ಆಡಲು ಅವಕಾಶ ನೀಡಿದ್ದು ಅಚ್ಚರಿಗೆ ಕಾರಣವಾಯಿತು. ಕ್ರಿಕೆಟ್ ನಿಯಮಗಳ ಪ್ರಕಾರ, ಆನ್-ಫೀಲ್ಡ್ ಅಂಪೈರ್ ಮೊದಲು ಶನಕನನ್ನು ಕ್ಯಾಚ್ ಔಟ್ ಎಂದು ಘೋಷಿಸಿದ್ದರಿಂದ, ಆ ಕ್ಷಣದಲ್ಲಿ ಬಾಲ್ “ಡೆಡ್ ಬಾಲ್” (ನಿಷ್ಕ್ರಿಯ ಚೆಂಡು) ಆಗುತ್ತದೆ. ಡಿಆರ್ಎಸ್ನಲ್ಲಿ ಕ್ಯಾಚ್ ಔಟ್ ನಿರ್ಧಾರದ ವಿರುದ್ಧ ತೀರ್ಪು ಬಂದಿದ್ದರಿಂದ, ರನ್ಔಟ್ ಅನ್ನ ಪರಿಗಣನೆಗೆ ತೆಗೆದುಕೊಳ್ಳಲಾಗಲ್ಲ, ಏಕೆಂದರೆ ಬ್ಯಾಟರ್ ಅಂಪೈರ್ ತೀರ್ಪಿನ ವಿರುದ್ಧ ಡಿಆರ್ಎಸ್ ತೆಗೆದುಕೊಂಡ ಕೂಡಲೇ ಆ ಚೆಂಡು ಡೆಡ್ ಆಗಿರುತ್ತದೆ. ಹಾಗಾಗಿ ಶನಕ ರನ್ಔಟ್ನಿಂದ ಬಚಾವ್ ಆದರು. ಒಂದು ವೇಳೆ ಅರ್ಷದೀಪ್ ಕ್ಯಾಚ್ಗೆ ಅಪೀಲ್ ಮಾಡದಿದ್ದರೆ ಅದು ರನ್ಔಟ್ ಆಗುತ್ತಿತ್ತು.
ಆದರೆ ಈ ಜೀವದಾನದ ಲಾಭವನ್ನು ಶನಕ ಸಂಪೂರ್ಣವಾಗಿ ಪಡೆಯಲಿಲ್ಲ. ಮುಂದಿನ ಬಾಲ್ನಲ್ಲಿ (5ನೇ ಬಾಲ್), ಅರ್ಶದೀಪ್ ಸಿಂಗ್ರ ಎಸೆತದಲ್ಲಿ ದೊಡ್ಡ ಶಾಟ್ ಆಡಲು ಯತ್ನಿಸಿ, ಥರ್ಡ್ ಮ್ಯಾನ್ನಲ್ಲಿ ಜಿತೇಶ್ ಶರ್ಮಾಗೆ ಕ್ಯಾಚ್ ಕೊಟ್ಟರು. ಶ್ರೀಲಂಕಾ 5 ಬಾಲ್ಗಳಲ್ಲಿ ಕೇವಲ 2 ರನ್ಗಳನ್ನು ಗಳಿಸಿ, 2 ವಿಕೆಟ್ಗಳನ್ನು ಕಳೆದುಕೊಂಡು ತಮ್ಮ ಸೂಪರ್ ಓವರ್ ಮುಗಿಸಿತು.
ಭಾರತಕ್ಕೆ ಸೂಪರ್ ಓವರ್ನಲ್ಲಿ 3 ರನ್ಗಳ ಸುಲಭ ಗುರಿ ದೊರೆಯಿತು. ಭಾರತದ ಬ್ಯಾಟ್ಸ್ಮನ್ಗಳು ಮೊದಲ ಬಾಲ್ನಲ್ಲೇ ಈ ಗುರಿಯನ್ನು ತಲುಪಿ, ಶ್ರೀಲಂಕಾ ವಿರುದ್ಧ ರೋಮಾಂಚಕ ಗೆಲುವು ಸಾಧಿಸಿದರು. ಈ ಗೆಲುವು ಏಷ್ಯಾ ಕಪ್ 2025ರಲ್ಲಿ ಭಾರತದ ಸತತ ಆರನೇ ಗೆಲುವಾಗಿದ್ದು, ತಂಡದ ಫಾರ್ಮ್ನ್ನು ತೋರಿಸಿತು.
ಈ ಗೆಲುವಿನೊಂದಿಗೆ ಭಾರತ ತಂಡವು ಸೆಪ್ಟೆಂಬರ್ 28, 2025ರಂದು ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಪಾಕಿಸ್ತಾನ ವಿರುದ್ಧ ಫೈನಲ್ಗೆ ಸಜ್ಜಾಗಿದೆ. ಈ ಟೂರ್ನಿಯಲ್ಲಿ ಭಾರತ ಈಗಾಗಲೇ ಪಾಕಿಸ್ತಾನವನ್ನು ಎರಡು ಬಾರಿ (ಗ್ರೂಪ್ ಸ್ಟೇಜ್ ಮತ್ತು ಸೂಪರ್ 4) ಸೋಲಿಸಿದೆ. ಸೂರ್ಯಕುಮಾರ್ ಯಾದವ್ ನಾಯಕತ್ವದ ಭಾರತ ತಂಡವು ಈ ಫೈನಲ್ನಲ್ಲಿ ಮೂರನೇ ಗೆಲುವಿನೊಂದಿಗೆ 41 ವರ್ಷಗಳಲ್ಲಿ 9ನೇ ಬಾರಿಗೆ ಏಷ್ಯಾ ಕಪ್ ಟ್ರೋಫಿಯನ್ನು ಗೆಲ್ಲಲು ಕಾತರಗೊಂಡಿದೆ.
September 27, 2025 7:38 PM IST