Last Updated:
ಟೀಮ್ ಇಂಡಿಯಾ ಆಟಗಾರರಿಗೆ ಏಷ್ಯಾಕಪ್ ಟ್ರೋಫಿ ಮತ್ತು ಮೆಡೆಲ್ಗಳನ್ನು ವಾಪಾಸ್ ಮಾಡುವುದಕ್ಕೆ ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಷರತ್ತುವೊಂದನ್ನು ಹಾಕಿದ್ದು, ಮತ್ತೊಂದು ವಿವಾದವನ್ನು ಹುಟ್ಟು ಹಾಕಿದ್ದಾರೆ.
Ind vs Pak: 2025 ರ ಏಷ್ಯಾಕಪ್ ಫೈನಲ್ (Asia Cup Final 2025) ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಟೀಮ್ ಇಂಡಿಯಾ (India vs Pakistan) 5 ವಿಕೆಟ್ಗಳ ಐತಿಹಾಸಿಕ ಜಯ ಸಾಧಿಸಿತು. ಏಷ್ಯಾಕಪ್ ಟೂರ್ನಿಯುದ್ಧಕ್ಕೂ ಪಾಕಿಸ್ತಾನವು ಅವಮಾನಕ್ಕೊಳಗಾಯಿತು. ಭಾರತ ಎದುರು ಪಾಕಿಸ್ತಾನ ಹ್ಯಾಟ್ರಿಕ್ ಸೋಲು ಕಂಡಿತ್ತು. ಇದೇ ಮೊದಲ ಬಾರಿಗೆ ಒಂದೇ ಟೂರ್ನಿಯಲ್ಲಿ ಪಾಕಿಸ್ತಾನವನ್ನು ಭಾರತ ಸತತ ಮೂರು ಪಂದ್ಯಗಳಲ್ಲಿ ಸೋಲಿಸಿ ಇತಿಹಾಸ ಸೃಷ್ಟಿಸಿತ್ತು. ಫೈನಲ್ ಗೆಲುವಿನ ಬಳಿಕ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ (PCB) ಅಧ್ಯಕ್ಷ ಮೊಹ್ಸಿನ್ ನಖ್ವಿಯಿಂದ (Mohsin Naqvi) ಟ್ರೋಫಿ ತೆಗೆದುಕೊಳ್ಳಲು ಭಾರತ ನಿರಾಕರಿಸಿತ್ತು.
ಮೊಹ್ಸಿನ್ ನಖ್ವಿ ವೇದಿಕೆಯ ಮೇಲೆ ಟ್ರೋಫಿ ಹಿಡಿದು ಭಾರತ ತಂಡಕ್ಕಾಗಿ ಕಾಯುತ್ತಿದ್ದರು. ಆದರೆ ಟೀಮ್ ಇಂಡಿಯಾ ಆಟಗಾರರು ಮೈದಾನದಲ್ಲಿ ಆರಾಮವಾಗಿ ಕುಳಿತು, ತಮ್ಮ ಪಾಡಿಗೆ ಮೊಬೈಲ್ ನೋಡುತ್ತಿದ್ದರು. ಇದು ಮೊಹ್ಸಿನ್ ನಖ್ವಿ ಕೋಪಕ್ಕೆ ಕಾರಣವಾಯಿತು. ಕೂಡಲೇ ಏಷ್ಯಾಕಪ್ ಟ್ರೋಫಿ ಮತ್ತು ಮೆಡೆಲ್ಗಳನ್ನು ತನ್ನೊಂದಿಗೆ ನಖ್ವಿ ಹೊತ್ತೊಯ್ದಿದ್ದರು. ಇಲ್ಲಿವರೆಗೂ ಟೀಮ್ ಇಂಡಿಯಾ ಆಟಗಾರರಿಗೆ ಏಷ್ಯಾಕಪ್ ಟ್ರೋಫಿ ಮತ್ತು ಮೆಡೆಲ್ಗಳನ್ನು ವಾಪಾಸ್ ಮಾಡಿಲ್ಲ. ನಖ್ವಿ ಈಗ ಹೊಸ ಹೈ- ಡ್ರಾಮಾ ಸೃಷ್ಟಿಸಿದ್ದಾರೆ.
ಟೀಮ್ ಇಂಡಿಯಾ ಆಟಗಾರರಿಗೆ ಏಷ್ಯಾಕಪ್ ಟ್ರೋಫಿ ಮತ್ತು ಮೆಡೆಲ್ಗಳನ್ನು ವಾಪಾಸ್ ಮಾಡುವುದಕ್ಕೆ ಮೊಹ್ಸಿನ್ ನಖ್ವಿ ಷರತ್ತುವೊಂದನ್ನು ಹಾಕಿದ್ದಾರೆ. ಇದೀಗ ಮೊಹ್ಸಿನ್ ನಖ್ವಿ ಮತ್ತೊಂದು ವಿವಾದದಲ್ಲಿ ಸಿಲುಕಿ ಹಾಕಿಕೊಂಡಂತೆ ಕಾಣಿಸುತ್ತಿದೆ.
ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಮುಖ್ಯಸ್ಥ ಮೊಹ್ಸಿನ್ ನಖ್ವಿ ಅವರು ಏಷ್ಯಾ ಕಪ್ ವಿಜೇತ ತಂಡದ ಪದಕಗಳನ್ನು ಭಾರತ ತಂಡಕ್ಕೆ ವಾಪಾಸ್ ಮಾಡಲಿ ಮುಂದಾಗಿದ್ದಾರೆ ಎಂದು ವರದಿಗಳು ತಿಳಿಸಿವೆ. ಆದರೆ ನಖ್ವಿ ಒಂದು ಷರತ್ತನ್ನು ವಿಧಿಸಿದ್ದಾರೆ. “ಔಪಚಾರಿಕ ಸಮಾರಂಭ” ನಡೆದ ನಂತರವೇ ಟ್ರೋಫಿಯನ್ನು ಭಾರತಕ್ಕೆ ಹಸ್ತಾಂತರಿಸುವುದಾಗಿ ನಖ್ವಿ ಹೇಳಿರುವ ಬಗ್ಗೆ ವರದಿಯಾಗಿವೆ. ಆದರೆ, ಅಂತಹ ಸಮಾರಂಭ ನಡೆಯುವ ಸಾಧ್ಯತೆ ತುಂಬಾ ಕಡಿಮೆ ಇದೆ.
ನವೆಂಬರ್ನಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಸಭೆಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸುವುದಾಗಿ ಬಿಸಿಸಿಐ ಭರವಸೆ ನೀಡಿದೆ. ವರದಿಗಳ ಪ್ರಕಾರ, ಸೆಪ್ಟೆಂಬರ್ 30, ಮಂಗಳವಾರ ದುಬೈನಲ್ಲಿ ನಡೆಯಲಿರುವ ಎಸಿಸಿ ಸಭೆಯಲ್ಲಿ ಬಿಸಿಸಿಐ ಶೀಘ್ರವೇ ಭಾರತ ತಂಡಕ್ಕೆ ಏಷ್ಯಾಕಪ್ ಟ್ರೋಫಿ ಮತ್ತು ಮೆಡೆಲ್ಗಳನ್ನು ಹಸ್ತಾಂತರಿಸುವಂತೆ ಚರ್ಚೆ ನಡೆಸಲಿದೆ. ಈ ಸಭೆ ಭಾರತೀಯ ಕಾಲಮಾನ ಪ್ರಕಾರ ಸುಮಾರು ಮಧ್ಯಾಹ್ನ 3:30 ಕ್ಕೆ ಪ್ರಾರಂಭವಾಗಲಿದೆ.
September 29, 2025 10:28 PM IST