Last Updated:
ಆರ್‌ಸಿಬಿ ಫ್ರಾಂಚೈಸಿ ಖರೀದಿ ಮಾಡಲು ಭಾರತದ ಉದ್ಯಮಿ ಮುಂದಾಗಿದ್ದು, ತಂಡ ಎಷ್ಟು ಕೋಟಿ ರೂ.ಗಳಿಗೆ ಮಾರಾಟವಾಗಬಹುದು ಎಂಬ ಚರ್ಚೆ ಶುರುವಾಗಿದೆ.
ವಿಶ್ವದಲ್ಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ತಂಡ. ಐಪಿಎಲ್ (IPL) ಟೂರ್ನಿ ಆರಂಭದಿಂದಲ್ಲೂ ಕಪ್ ಗೆಲ್ಲುವ ಹುಡುಕಾಟದಲ್ಲಿದ್ದ ಆರ್‌ಸಿಬಿ (RCB) ತಂಡ ಕೊನೆಗೂ 18 ವರ್ಷಗಳ ಬಳಿಕ ಚಾಂಪಿಯನ್ ಆಗಿತ್ತು. ಆರ್‌ಸಿಬಿ ಚಾಂಪಿಯನ್ ಆದ ಬೆನ್ನಲ್ಲೇ ತಂಡ ತನ್ನ ಜನಪ್ರಿಯತೆಯನ್ನು ಮತ್ತಷ್ಟು ಹೆಚ್ಚಿಸಿಕೊಂಡಿತ್ತು. ಇತ್ತೀಚೆಗೆ ಐಪಿಎಲ್ ಸೃಷ್ಟಿಕರ್ತ ಲಲಿತ್ ಮೋದಿ (Lalit Modi) ಹಂಚಿಕೊಂಡಿದ್ದ ಪೋಸ್ಟ್ ನೋಡಿ ಆರ್‌ಸಿಬಿ ಅಭಿಮಾನಿಗಳು ಶಾಕ್ ಆಗಿದ್ದರು. ಲಲಿತ್ ಮೋದಿ ತಮ್ಮ ಇನ್‌ಸ್ಟಾಗ್ರಾಮ್‌ನ ಸ್ಟೋರಿಯಲ್ಲಿ “RCB ಸೇಲ್ ಗೆ ಇದೆ” (RCB FOR SALE) ಎಂದು ಬರೆದಿರುವ ಪೋಸ್ಟ್ ಅನ್ನು ಹಂಚಿಕೊಂಡಿದ್ದರು. ಇದು ಆರ್‌ಸಿಬಿ ಫ್ರಾಂಚೈಸಿ ಮಾರಾಟದ ಬಗ್ಗೆ ಚರ್ಚೆಯನ್ನು ಹುಟ್ಟು ಹಾಕಿತ್ತು.
ಲಲಿತ್ ಮೋದಿ ಅವರ ಇನ್‌ಸ್ಟಾಗ್ರಾಮ್ ಪೋಸ್ಟ್ ನಂತರ ಆರ್‌ಸಿಬಿ ಫ್ರಾಂಚೈಸಿ ಖರೀದಿಸಲು ಭಾರತದ ಉದ್ಯಮಿಯೊಬ್ಬರು ಮುಂದಾಗಿದ್ದಾರೆ. ಈ ಉದ್ಯಮಿ ಬೇರೆ ಅಲ್ಲ, ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ ಸಿಇಒ ಆದರ್ ಪೂನವಾಲ್ಲಾ.
ಐಪಿಎಲ್ 2025 ರ ಚಾಂಪಿಯನ್ ಅನ್ನು ಖರೀದಿಸಲು ಆರ್‌ಸಿಬಿ ಮಾಲೀಕರಾದ ಡಿಯಾಜಿಯೊ ಪಿಎಲ್‌ಸಿ ಜೊತೆ ಆದರ್ ಪೂನವಾಲ್ಲಾ ಮಾತುಕತೆ ನಡೆಸುತ್ತಿದ್ದಾರೆ. 2026 ರ ಐಪಿಎಲ್ ಆವೃತ್ತಿಗೂ ಮುನ್ನ ಆದರ್ ಪೂನವಾಲ್ಲಾ ಅವರು ಆರ್‌ಸಿಬಿ ಅನ್ನು ಖರೀದಿಸುವ ಸಾಧ್ಯತೆಯಿದೆ ಎಂದು ವರದಿಗಳಾಗಿವೆ. ಇದಕ್ಕೆ ಪೂರಕವಂತೆ ಪೂನವಾಲ್ಲಾ ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿರುವ ಆದರ್ ಪೂನವಾಲ್ಲಾ, “ಸರಿಯಾದ ಮೌಲ್ಯಮಾಪನದಲ್ಲಿ, ಆರ್‌ಸಿಬಿ ಒಂದು ಉತ್ತಮ ತಂಡ” ಎಂದು ಬರೆದಿದ್ದಾರೆ.
ಡಿಯಾಜಿಯೊ ಪಿಎಲ್‌ಸಿ ಆರ್‌ಸಿಬಿಯಲ್ಲಿನ ತನ್ನ ಎಲ್ಲಾ ಷೇರುಗಳನ್ನು ಮಾರಾಟ ಮಾಡಲು ಮುಂದಾಗಿದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಪ್ರಸ್ತುತ ಆರ್‌ಸಿಬಿ ಯುನೈಟೆಡ್ ಸ್ಪಿರಿಟ್ಸ್ ಡಿಯಾಜಿಯೊ ಪಿಎಲ್‌ಸಿ ಒಡೆತನದಲ್ಲಿದೆ. ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್ ಲಂಡನ್‌ನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಬ್ರಿಟಿಷ್ ಆಲ್ಕೋಹಾಲ್ ಪಾನೀಯ ಕಂಪನಿಯಾದ ಡಿಯಾಜಿಯೊದ ಅಂಗಸಂಸ್ಥೆಯಾಗಿದೆ.
ವರದಿಗಳ ಪ್ರಕಾರ, ಆದರ್ ಪೂನವಾಲ್ಲಾ ಆರ್‌ಸಿಬಿ ಫ್ರಾಂಚೈಸಿ ಅನ್ನು ಖರೀದಿಸಲು ಆಸಕ್ತಿ ಹೊಂದಿರುವ ಇತರರಿಗಿಂತ ಮುಂಚೂಣಿಯಲ್ಲಿದ್ದಾರೆ. ಸುಮಾರು 52 ಬಿಲಿಯನ್ ಅಥವಾ 17,762 ಕೋಟಿ ಮೌಲ್ಯಕ್ಕೆ ಆರ್‌ಸಿಬಿ ಫ್ರಾಂಚೈಸಿ ಮಾರಾಟವಾಗಲಿದೆ ಎನ್ನಲಾಗುತ್ತಿದೆ. ಈಗ ಮುಂದಿನ ಐಪಿಎಲ್ 2026 ರ ಆವೃತ್ತಿಯಲ್ಲಿ ಆರ್‌ಸಿಬಿ ಫ್ರಾಂಚೈಸಿಯ ಮಾಲೀಕರು ಯಾರು ಎಂಬ ಪ್ರಶ್ನೆ ಕ್ರಿಕೆಟ್ ಅಭಿಮಾನಿಗಳನ್ನು ಕಾಡುತ್ತಿದೆ.
18 ವರ್ಷಗಳಿಂದ ಆರ್‌ಸಿಬಿ ಒಂದು ಟ್ರೋಫಿಗಾಗಿ ಹೋರಾಟ ನಡೆಸಿತ್ತು. ಆದರೆ ಪ್ರತಿ ಬಾರಿಯೂ ಈ ಸಲ ಕಪ್ ನಮ್ದೆ ಎನ್ನುತ್ತಿದ್ದ ಆರ್‌ಸಿಬಿ ಅಭಿಮಾನಿಗಳಿಗೆ ನಿರಾಸೆ ಆಗುತ್ತಿತ್ತು. ಈ ಬಾರಿ ಶತಯಗತಾಯ ಆರ್‌ಸಿಬಿ ಕಪ್ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಫೈನಲ್ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ಮುನ್ನಡೆಸುತ್ತಿದ್ದ ಪಂಜಾಬ್ ಕಿಂಗ್ಸ್ ತಂಡವನ್ನು ಸೋಲಿಸಿ ಆರ್‌ಸಿಬಿ ಚೊಚ್ಚಲ ಐಪಿಎಲ್ ಟ್ರೋಫಿಗೆ ಮುತ್ತಿಟ್ಟಿತ್ತು. ಐಪಿಎಲ್ 2025 ರಲ್ಲಿ ತಂಡದ ಸಂಘಟಿತ ಆಟದಿಂದಾಗಿ ಆರ್‌ಸಿಬಿ ಚಾಂಪಿಯನ್ ಆಗಿತ್ತು. ಆರ್‌ಸಿಬಿ ಕಪ್ ಗೆಲ್ಲುತ್ತಿದ್ದಂತೆ ಫ್ಯಾನ್‌ಗಳ ಉತ್ಸಾಹ ಜೋರಾಗಿತ್ತು. ಈ ಐತಿಹಾಸಿಕ ವಿಜಯದ ನಂತರ, ಆರ್‌ಸಿಬಿ ಮಾರಾಟದ ಬಗ್ಗೆ ಕ್ರಿಕೆಟ್ ಗಲ್ಲಿಗಳಲ್ಲಿ ಮತ್ತೊಮ್ಮೆ ಚರ್ಚೆ ಆರಂಭವಾಗಿದೆ.
October 01, 2025 8:03 PM IST