Last Updated:
ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಮೊದಲ ದಿನದಾಟದಂದು ಟೀಮ್ ಇಂಡಿಯಾ ಸ್ಟಾರ್ ಬ್ಯಾಟರ್ ಕೆಎಲ್ ರಾಹುಲ್ ಅರ್ಧಶತಕ ಗಳಿಸುವ ಮೂಲಕ ಸುನಿಲ್ ಗವಾಸ್ಕರ್ ಮತ್ತು ವೀರೇಂದ್ರ ಸೆಹ್ವಾಗ್ ಕ್ಲಬ್ಗೆ ಸೇರಿಕೊಂಡಿದ್ದಾರೆ.
ಭಾರತ ಮತ್ತು ವೆಸ್ಟ್ ಇಂಡೀಸ್ (India vs West Indies) ನಡುವಿನ ಟೆಸ್ಟ್ ಪಂದ್ಯದ ಮೊದಲ ದಿನದಂದು ಟೀಮ್ ಇಂಡಿಯಾ (Team India) ತನ್ನ ಅದ್ಭುತ ಪ್ರದರ್ಶನವನ್ನು ಮುಂದುವರಿಸಿತು. ವೆಸ್ಟ್ ಇಂಡೀಸ್ ತಂಡವು ಭಾರತದ ಬಲಿಷ್ಠ ಬೌಲಿಂಗ್ ಎದುರು ಸಂಪೂರ್ಣ ಮಂಕಾಯಿತು. ಟೀಮ್ ಇಂಡಿಯಾ ವೇಗದ ಬೌಲರ್ ಮೊಹಮ್ಮದ್ ಸಿರಾಜ್ (Mohammed Siraj) ಉರಿ ಬೌಲಿಂಗ್ ದಾಳಿಗೆ ವೆಸ್ಟ್ ಇಂಡೀಸ್ ಬ್ಯಾಟರ್ಸ್ ಹೆಚ್ಚು ಹೊತ್ತು ಕ್ರೀಸ್ನಲ್ಲಿ ನಿಂತು ಆಡಲು ಸಾಧ್ಯವಾಗಲಿಲ್ಲ. ಸಿರಾಜ್ ನಾಲ್ಕು ವಿಕೆಟ್ ಕಬಳಿಸಿದರೆ, ಜಸ್ಪ್ರೀತ್ ಬುಮ್ರಾ (Jasprit Bumrah) ಮೂರು ವಿಕೆಟ್ ಉರುಳಿಸಿದರು.
ಸಿರಾಜ್ ಮತ್ತು ಬುಮ್ರಾ ದಾಳಿಗೆ ದಾಳಿಗೆ ನಡುಗಿದ ವೆಸ್ಟ್ ಇಂಡೀಸ್ ತಂಡವು 162 ರನ್ಗಳಿಗೆ ಆಲೌಟ್ ಆಯಿತು. ಇದಕ್ಕೆ ಪ್ರತಿಕ್ರಿಯೆಯಾಗಿ, ಟೀಮ್ ಇಂಡಿಯಾ ದಿನದಾಟದ ಅಂತ್ಯಕ್ಕೆ ಎರಡು ವಿಕೆಟ್ ನಷ್ಟಕ್ಕೆ 121 ರನ್ ಗಳಿಸಿತ್ತು. ಕೆಎಲ್ ರಾಹುಲ್ 53 ರನ್ ಮತ್ತು ಶುಭ್ಮನ್ ಗಿಲ್ 18 ರನ್ ಗಳಿಸಿ ಅಜೇಯರಾಗಿ ಉಳಿದರು. ಇದರೊಂದಿಗೆ, ರಾಹುಲ್ ಅವರು ಟೀಮ್ ಇಂಡಿಯಾ ಮಾಜಿ ದಿಗ್ಗಜ ಬ್ಯಾಟರ್ಸ್ ಆದ ಸುನಿಲ್ ಗವಾಸ್ಕರ್ ಮತ್ತು ವೀರೇಂದ್ರ ಸೆಹ್ವಾಗ್ ಕ್ಲಬ್ಗೆ ಸೇರಿಕೊಂಡಿದ್ದಾರೆ.
ದಿನದಾಟದ ಅಂತ್ಯಕ್ಕೆ ವೆಸ್ಟ್ ಇಂಡೀಸ್ ತಂಡದ 162 ರನ್ಗಳಿಗೆ ಉತ್ತರವಾಗಿ ಭಾರತ ತನ್ನ ಇನ್ನಿಂಗ್ಸ್ ಅನ್ನು ಆರಂಭಿಸಿತು. ಆರಂಭಿಕರಾದ ಕೆಎಲ್ ರಾಹುಲ್ ಮತ್ತು ಯಶಸ್ವಿ ಜೈಸ್ವಾಲ್ ಮೊದಲ ವಿಕೆಟ್ಗೆ 68 ರನ್ಗಳ ಜೊತೆಯಾಟ ನೀಡಿದರು. ಜೈಸ್ವಾಲ್ 36 ರನ್ ಗಳಿಸಿದ ನಂತರ ತಮ್ಮ ವಿಕೆಟ್ ಕಳೆದುಕೊಂಡರು. ಸಾಯಿ ಸುದರ್ಶನ್ ಕೂಡ ಪರಿಣಾಮ ಬೀರುವಲ್ಲಿ ವಿಫಲರಾದರು. ನಾಯಕ ಶುಭಮನ್ ಗಿಲ್ 18 ರನ್ ಗಳಿಸಿದರೆ, ಆರಂಭಿಕ ರಾಹುಲ್ 53 ರನ್ ಗಳಿಸಿ ಅಜೇಯರಾಗಿ ಉಳಿದರು. ಪಂದ್ಯದ ಅಂತ್ಯಕ್ಕೆ ಟೀಮ್ ಇಂಡಿಯಾದ 2 ವಿಕೆಟ್ ನಷ್ಟಕ್ಕೆ 121 ರನ್ ಕಲೆ ಹಾಕಿದೆ.
ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಯಲ್ಲಿ ಕನ್ನಡಿಗ ಕೆಎಲ್ ರಾಹುಲ್ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರು. ವೆಸ್ಟ್ ಇಂಡೀಸ್ ವಿರುದ್ಧವೂ ಅದೇ ಫಾರ್ಮ್ ಮುಂದುವರೆಸಿದ ಕೆಎಲ್ ರಾಹುಲ್ ಮೊದಲ ದಿನದಾಟದ ಅಂತ್ಯಕ್ಕೆ ಅಜೇಯ ಅರ್ಧಶತಕ ಸಿಡಿಸಿ ಮಿಂಚಿದರು. ಈ ಅರ್ಧಶತಕದೊಂದಿಗೆ, ಟೆಸ್ಟ್ ಕ್ರಿಕೆಟ್ನಲ್ಲಿ ಆರಂಭಿಕನಾಗಿ 25 ಕ್ಕೂ ಹೆಚ್ಚು ಅರ್ಧಶತಕಗಳನ್ನು ಗಳಿಸಿದ ಐದನೇ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಸುನಿಲ್ ಗವಾಸ್ಕರ್ 75 ಅರ್ಧಶತಕಗಳೊಂದಿಗೆ ಅತಿ ಹೆಚ್ಚು ಅರ್ಧಶತಕಗಳ ದಾಖಲೆಯನ್ನು ಹೊಂದಿದ್ದಾರೆ.
ಸುನಿಲ್ ಗವಾಸ್ಕರ್ ನಂತರ ವೀರೇಂದ್ರ ಸೆಹ್ವಾಗ್ 51, ಗೌತಮ್ ಗಂಭೀರ್ 31, ಮುರಳಿ ವಿಜಯ್ 27 ಅರ್ಧಶತಕಗಳೊಂದಿಗೆ ದಾಖಲೆಯ ಪಟ್ಟಿಯಲ್ಲಿದ್ದಾರೆ. ಟೆಸ್ಟ್ನಲ್ಲಿ ಆರಂಭಿಕನಾಗಿ ರಾಹುಲ್ 26 ಅರ್ಧಶತಕಗಳನ್ನು ಗಳಿಸಿದ್ದಾರೆ. ಈ ಮೂಲಕ ಅವರು ಗವಾಸ್ಕರ್ ಮತ್ತು ಸೆಹ್ವಾಗ್ ದಾಖಲೆಯ ಪಟ್ಟಿಗೆ ಸೇರಿದ್ದಾರೆ.
ವೆಸ್ಟ್ ಇಂಡೀಸ್ ತಂಡಕ್ಕಿಂತ ಟೀಮ್ ಇಂಡಿಯಾ 41 ರನ್ಗಳ ಹಿನ್ನಡೆಯಲ್ಲಿದೆ. ಶುಕ್ರವಾರ ಎರಡನೇ ದಿನದಾಟದಂದು ಭಾರತ ತನ್ನ ಮುನ್ನಡೆಯನ್ನು ಹೆಚ್ಚಿಸಿಕೊಳ್ಳುವ ಯೋಜನೆ ಹಾಕಿಕೊಂಡಿದೆ. ಜೊತೆಗೆ ಮೊದಲ ಟೆಸ್ಟ್ ಪಂದ್ಯವನ್ನು ಗೆಲ್ಲುವ ಮೂಲಕ ಸರಣಿಯಲ್ಲಿ ಅಜೇಯ ಮುನ್ನಡೆ ಸಾಧಿಸುವ ಭರವಸೆಯಲ್ಲಿದೆ. ಟೀಮ್ ಇಂಡಿಯಾ ಈ ಸರಣಿಯನ್ನು ಗೆಲ್ಲುವಲ್ಲಿ ಯಶಸ್ವಿಯಾದರೆ, ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಪಾಯಿಂಟ್ ಪಟ್ಟಿಯಲ್ಲಿ ತನ್ನ ಪ್ರಾಬಲ್ಯವನ್ನು ಬಲಪಡಿಸಿಕೊಳ್ಳಲಿದೆ. ವೆಸ್ಟ್ ಇಂಡೀಸ್ 2002 ರಿಂದ ಭಾರತದಲ್ಲಿ ಸರಣಿಯನ್ನು ಗೆದ್ದಿಲ್ಲ. ಅವರು ಕೂಡ ಈ ದಾಖಲೆಯನ್ನು ಮುರಿಯಲು ನೋಡುತ್ತಿದ್ದಾರೆ.
October 02, 2025 8:48 PM IST