Last Updated:
ಮಹಿಳಾ ಏಕದಿನ ವಿಶ್ವಕಪ್ 2025 ರ ಮೂರನೇ ಪಂದ್ಯದಲ್ಲಿ ಬಾಂಗ್ಲಾದೇಶ ಎದುರು ಪಾಕಿಸ್ತಾನ ನಿರಾಶದಾಯಕ ಪ್ರದರ್ಶನ ನೀಡಿದೆ.
ಕೊಲಂಬೊದ ಆರ್.ಪ್ರೇಮದಾಸನ ಕ್ರೀಡಾಂಗಣದಲ್ಲಿ ನಡೆದ ಐಸಿಸಿ(ICC) ಮಹಿಳಾ ಏಕದಿನ ವಿಶ್ವಕಪ್ (Women’s ODI World Cup) 2025 ರ ಮೂರನೇ ಪಂದ್ಯದಲ್ಲಿ ಪಾಕಿಸ್ತಾನ ಮತ್ತು ಬಾಂಗ್ಲಾದೇಶ (Pakistan vs Bangladesh) ತಂಡಗಳು ಮುಖಾಮುಖಿಯಾಗಿದ್ದವು. ಟೂರ್ನಿಯಲ್ಲಿ ಪಾಕಿಸ್ತಾನ ತಂಡ ತನ್ನ ಮೊದಲ ಪಂದ್ಯದಲ್ಲಿ ನಿರಾಶದಾಯಕ ಪ್ರದರ್ಶನ ನೀಡಿದೆ. ಬಾಂಗ್ಲಾದೇಶ ಬೌಲಿಂಗ್ ದಾಳಿಗೆ ಕಂಗೆಟ್ಟ ಪಾಕಿಸ್ತಾನ ವನಿತೆಯರು ಬೃಹತ್ ಮೊತ್ತ ಕಲೆ ಹಾಕಲು ಸಾಧ್ಯವಾಗಲಿಲ್ಲ. ಪರಿಣಾಮ ಪಾಕಿಸ್ತಾನ ತಂಡದ ಮೊದಲ ಪಂದ್ಯದಲ್ಲಿ ಸೋಲಿನ ಕಹಿ ಅನುಭವಿಸಿದೆ. ಇತ್ತ ಭರ್ಜರಿ ಪ್ರದರ್ಶನ ನೀಡಿದ ಬಾಂಗ್ಲಾದೇಶ ತಂಡ ಗೆಲುವಿನ ಶುಭಾರಂಭ ಮಾಡಿದೆ.
ಮಹಿಳಾ ಏಕದಿನ ವಿಶ್ವಕಪ್ 2025 ರ ಮೂರನೇ ಪಂದ್ಯದಲ್ಲಿ ಟಾಸ್ ಗೆದ್ದ ಪಾಕಿಸ್ತಾನ ನಾಯಕಿ ಫಾತಿಮಾ ಸನಾ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದರು. ಆದರೆ ನಾಯಕಿ ಫಾತಿಮಾ ಸನಾ ನಿರೀಕ್ಷೆಗೆ ತಕ್ಕ ಪ್ರತಿಫಲ ಸಿಗಲಿಲ್ಲ. ಬಾಂಗ್ಲಾದೇಶ ಸಂಘಟಿತ ಬೌಲಿಂಗ್ ದಾಳಿಗೆ ಪಾಕಿಸ್ತಾನ ಕೇವಲ 38.3 ಓವರ್ಗಳಲ್ಲಿ 129 ರನ್ಗಳಿಗೆ ಆಲೌಟಾಯಿತು. ಈ ಸುಲಭ ಗುರಿ ಬೆನ್ನಟ್ಟಿದ ಬಾಂಗ್ಲಾದೇಶ ರುಬಿಯಾ ಹೈದರ್ ಅರ್ಧಶತಕದ ನೆರವಿನಿಂದ 31.1 ಓವರ್ಗಳಲ್ಲಿ ಮೂರು ವಿಕೆಟ್ ಕಳೆದುಕೊಂಡು ಗೆಲುವಿನ ನಗೆ ಬೀರಿತು.
ಪಾಕಿಸ್ತಾನ ನೀಡಿದ 130 ರನ್ಗಳ ಗುರಿ ಬೆನ್ನಟ್ಟಿದ ಬಾಂಗ್ಲಾದೇಶ ತಂಡವು 113 ಎಸೆತಗಳು ಬಾಕಿ ಇರುವಾಗ 7 ವಿಕೆಟ್ಗಳ ಭರ್ಜರಿ ಜಯಗಳಿಸುವಲ್ಲಿ ಯಶಸ್ವಿಯಾಯಿತು. ಬಾಂಗ್ಲಾದೇಶದ ಆರಂಭಿಕ ಬ್ಯಾಟರ್ ರುಬಿಯಾ ಹೈದರ್ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಅವರು 77 ಎಸೆತಗಳಲ್ಲಿ 70.12 ಸ್ಟ್ರೈಕ್ ರೇಟ್ನಲ್ಲಿ 8 ಬೌಂಡರಿಗಳ ನೆರವಿನಿಂದ ಅಜೇಯ 54 ರನ್ಗಳನ್ನು ಗಳಿಸಿದರು. ರುಬಿಯಾ ಹೊರತುಪಡಿಸಿ, ನಾಯಕಿ ನಿಗರ್ ಸುಲ್ತಾನಾ 44 ಎಸೆತಗಳಲ್ಲಿ 23 ರನ್ ಗಳಿಸಿದರೆ, ಐದನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ಶೋಭನಾ ಮೊಸ್ತಾರಿ ಅಜೇಯ 24 ರನ್ಗಳ ಕೊಡುಗೆ ನೀಡಿದರು. ಫರ್ಗಾನಾ ಹೋಕ್ 2, ಶರ್ಮಿನ್ ಅಖ್ತರ್ 10 ಮತ್ತು ನಿಗರ್ ಸುಲ್ತಾನ 23 ರನ್ ಗಳಿಸಿ ವಿಕೆಟ್ ಕಳೆದುಕೊಂಡರು.
ಇದಕ್ಕೂ ಮುನ್ನ ಮೊದಲ ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲವಾಯಿತು. ಆರಂಭದಲ್ಲೇ ಬಾಂಗ್ಲಾದೇಶದ ವೇಗಿ ಮರುಫಾ ಅಕ್ತರ್ 2 ವಿಕೆಟ್ ಕಬಳಿಸುವ ಮೂಲಕ ಪಾಕಿಸ್ತಾನ ತಂಡಕ್ಕೆ ಶಾಕ್ ನೀಡಿದರು. ಒಮೈಮಾ ಸೊಹೈಲ್ ಮತ್ತು ಸಿದ್ರಾ ಅಮೀನ್ ಬಂದ ದಾರಿಗೆ ಸುಂಕವಿಲ್ಲದಂತೆ ಶೂನ್ಯಕ್ಕೆ ವಿಕೆಟ್ ಕಳೆದುಕೊಂಡು ನಿರಾಸೆ ಮೂಡಿಸಿದರು. ಬಳಿಕ ಒಂದಾದ ಮುನೀಬಾ ಅಲಿ ಮತ್ತು ರಮೀನ್ ಶಮೀಮ್ ಎಚ್ಚರಿಕೆ ಆಟವಾಡಿದರು. ಉತ್ತಮವಾಗಿ ಆಡುತ್ತಿದ್ದ ಮುನೀಬಾ ಅಲಿ 17 ರನ್ ಗಳಿಸಿ ಔಟಾದರು.
ರಮೀನ್ ಶಮೀಮ್ ಕೂಡ 23 ರನ್ ಗಳಿಗೆ ಆಟ ನಿಲ್ಲಿಸಿದರೆ, ಸಿದ್ರಾ ನವಾಜ್ 15, ಅಲಿಯಾ ರಿಯಾಜ್ 13, ಫಾತಿಮಾ ಸನಾ 22, ನಟಾಲಿಯಾ ಪೆರ್ವೈಜ್ 9, ನಶ್ರಾ ಸಂಧು 1 ಮತ್ತು ಸಾದಿಯಾ ಇಕ್ಬಾಲ್ 4 ರನ್ ಗಳಿಸಲಷ್ಟೇ ಸಾಧ್ಯವಾಯಿತು. ಕೊನೆಯಲ್ಲಿ ಡಯಾನಾ ಬೇಗ್ ಅಜೇಯ 16 ರನ್ ಗಳಿಸಿದರು.
ಬಾಂಗ್ಲಾದೇಶ ತಂಡದ ಪರ ಶೋರ್ನಾ ಅಖ್ತರ್ ಮೂರು ವಿಕೆಟ್ ಪಡೆದು ಮಿಂಚಿದರು. ನಹಿದಾ ಅಖ್ತರ್ ಮತ್ತು ಮರುಫಾ ಅಖ್ತರ್ ತಲಾ ಎರಡು ವಿಕೆಟ್ ಪಡೆದರೆ, ನಿಶಿತಾ ಅಖ್ತರ್ ನಿಶಿ, ಫಹಿಮಾ ಖಾತುನ್ ಮತ್ತು ರಬೇಯಾ ಖಾನ್ ತಲಾ ಒಂದು ವಿಕೆಟ್ ಕಬಳಿಸಿದರು.
Othukkungal,Malappuram,Kerala
October 02, 2025 10:29 PM IST