Last Updated:
ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ಶಾರದ ಮಂದಿರದ ನವರಾತ್ರಿ ಉತ್ಸವದ ಶಾರದಾ ವಿಸರ್ಜನಾ ಮೆರವಣಿಗೆ ಕಲಾತಂಡದೊಂದಿಗೆ ಅದ್ಧೂರಿಯಾಗಿ ಸಂಪನ್ನಗೊಂಡಿತು. ಡಿಜೆ ಪಟಾಕಿ ನಿಷೇಧ ಪ್ರಥಮ.
ದಕ್ಷಿಣ ಕನ್ನಡ: ಕಳೆದ ಹನ್ನೊಂದು ದಿನಗಳಿಂದ ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಪುತ್ತೂರಿನ (Puttur) ಶಾರದಾ (Sharada) ಮಂದಿರದಲ್ಲಿ ನಡೆಯುತ್ತಿದ್ದ ನವರಾತ್ರಿ (Navaratri) ಉತ್ಸವಕ್ಕೆ ಅದ್ಧೂರಿ ತೆರೆ ಬಿದ್ದಿದೆ. ಮಂದಿರದಲ್ಲಿ ಆರಾಧಿಸಿಕೊಂಡು ಬರುತ್ತಿದ್ದ ಶಾರದಾ ಮೂರ್ತಿಯ ವಿಸರ್ಜನಾ ಮೆರವಣಿಗೆ ಸಂಪನ್ನಗೊಳ್ಳುವ ಮೂಲಕ ದಸರಾ ಉತ್ಸವ ಸಮಾಪ್ತಿಯಾಗಿದೆ. 91 ವರ್ಷಗಳಿಂದ ದಸರಾ ಉತ್ಸವವನ್ನು ಆಚರಿಸಿಕೊಂಡು ಬರುತ್ತಿರುವ ಪುತ್ತೂರಿನ ಮಹಾಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿರುವ ಶಾರದಾ ಭಜನಾ ಮಂದಿರ ಶಾರದಾ ವಿಸರ್ಜನಾ ಮೆರವಣಿಗೆ ಅದ್ಧೂರಿಯಾಗಿ ಸಂಪನ್ನಗೊಂಡಿದೆ. ಪ್ರತಿ ವರ್ಷದಂತೆ ಈ ಬಾರಿಯೂ ಪುತ್ತೂರಿನ ಬೊಳುವಾರು ವೃತ್ತದಿಂದ ಆರಂಭಗೊಂಡ ಶಾರದಾ ವಿಸರ್ಜನಾ ಮೆರವಣಿಗೆ ದರ್ಬೆ ವೃತ್ತದವರೆಗೂ ಸಂಚರಿಸಿ, ಬಳಿಕ ಮಹಾಲಿಂಗೇಶ್ವರ ದೇವಸ್ಥಾನದ ಬಾವಿಯಲ್ಲಿ ಶಾರದೆಯ ವಿಗ್ರಹವನ್ನು ವಿಸರ್ಜಿಸುವ ಮೂಲಕ ಸಂಪನ್ನಗೊಂಡಿದೆ.
ಈ ಬಾರಿ ಕೇರಳದ ವಿಶಿಷ್ಟ ಕಲಾತಂಡಗಳು ಶಾರದೆಯ ಮೆರವಣಿಗೆಗೆ ಮತ್ತಷ್ಟು ಮೆರಗು ತಂದಿದೆ. ಕಣ್ಣೂರಿನ ವೆಳಕ್ಕಾಟಂ, ಪಾಲಕ್ಕಾಡಿನ ದೇವ ನೃತ್ಯಂ, ಪಾಲಕ್ಕಾಡಿನ ಫ್ಲವರ್ ಡ್ಯಾನ್ಸ್, ತ್ರಿಶೂರಿನ ಸಿಂಗಾರಿ ಕಾವಡಿ, ಕಾಸರಗೋಡಿನ ಕರಿಂಕಾಳಿ, ತ್ರಿಶೂರ್ ನ ಪೂಕಾವಡಿ, ಕೊಟ್ಟಾಯಂನ ಗರುಡಾಯನ ಹೀಗೆ ಹಲವು ಪ್ರಕಾರ ಕೇರಳ ಕಲಾ ತಂಡಗಳು ನೆರೆದಿದ್ದ ಜನರಿಗೆ ಮನೋರಂಜನೆಯನ್ನು ನೀಡಿದೆ. ಈ ಕಲಾತಂಡಗಳ ಜೊತೆಗೆ ಕೇರಳದ ಚೆಂಡೆಮೇಳ, ಪುತ್ತೂರಿನ ಸಿಂಗಾರಿ ಮೇಳ ಗಮನ ಸೆಳೆದವು.
ಪ್ರತಿ ಬಾರಿಯಂತೆ ಈ ಬಾರಿಯೂ ಮೆರವಣಿಗೆಯಲ್ಲಿ ಧ್ವನಿವರ್ಧಕಗಳ ಕರ್ಕಶ ಧ್ವನಿಗೆ ಬದಲಾಗಿ ಹತ್ತಾರು ಕುಣಿತ ಭಜನಾ ತಂಡಗಳಿ ದೇವರ ನಾಮದ ಭಜನೆ ಹಾಡುವ ಮತ್ತು ಕುಣಿಯುವ ಮೂಲಕ ಜನರನ್ನ ಭಕ್ತಿಯ ಕಡೆಗೆ ಕೊಂಡೊಯ್ದಿದೆ. ದಕ್ಷಿಣ ಕನ್ನಡ ಜಿಲ್ಲೆಯ ಮೊದಲ ಬಾರಿಗೆ ದಸರಾ ಮೆರವಣಿಗೆಯಲ್ಲಿ ಡಿಜೆ ಮತ್ತು ಪಟಾಕಿ ಸಿಡಿಸುವುದನ್ನು ನಿಷೇಧಿಸಿದ ಮೊದಲ ಸಮಿತಿಯಾಗಿಯೂ ಪುತ್ತೂರಿನ ಶಾರದಾ ಭಜನಾ ಮಂದಿರದ ಸಮಿತಿಯಾಗಿದೆ.
Dakshina Kannada,Karnataka
October 03, 2025 5:52 PM IST