Last Updated:
ಟೀಮ್ ಇಂಡಿಯಾ ಮಾಜಿ ನಾಯಕ ಕಪಿಲ್ ದೇವ್ ಅವರ 400 ವಿಕೆಟ್ಗಳು ಮತ್ತು 5000 ರನ್ಗಳ ದಾಖಲೆಯನ್ನು ಮುರಿಯುವ ಬಗ್ಗೆ ಆಲ್ರೌಂಡರ್ ರವೀಂದ್ರ ಜಡೇಜಾ ಹೇಳಿದ್ದೇನು?
ಶುಭಮನ್ ಗಿಲ್ (Shubman Gill) ನಾಯಕತ್ವದಲ್ಲಿ ಟೀಮ್ ಇಂಡಿಯಾ (Team India) ತವರಿನಲ್ಲಿ ತನ್ನ ಮೊದಲ ಟೆಸ್ಟ್ ಗೆಲುವು ದಾಖಲಿಸಿತು. ವೆಸ್ಟ್ ಇಂಡೀಸ್ ತಂಡವನ್ನು ಭಾರತ (India vs West Indies) 140 ರನ್ಗಳಿಂದ ಸೋಲಿಸಿತು. ಈ ಪಂದ್ಯದಲ್ಲಿ ರವೀಂದ್ರ ಜಡೇಜಾ (Ravindra Jadeja) ಅದ್ಭುತ ಆಲ್ರೌಂಡರ್ ಪ್ರದರ್ಶನ ನೀಡಿದರು. ಈ ಮೂಲಕ ಟೀಮ್ ಇಂಡಿಯಾ ಗೆಲುವಿನಲ್ಲಿ ಜಡೇಜಾ ಹೀರೋ ಎನಿಸಿಕೊಂಡರು. ಜಡೇಜಾ ಬ್ಯಾಟಿಂಗ್ ಮತ್ತು ಬೌಲಿಂಗ್ನಲ್ಲಿ ಮಿಂಚುವ ಮೂಲಕ ಟೀಮ್ ಇಂಡಿಯಾವನ್ನು ಗೆಲುವಿನತ್ತ ಕೊಂಡೊಯ್ದರು. ಈಗ ಜಡೇಜಾ ಟೀಮ್ ಇಂಡಿಯಾದ ಮಾಜಿ ದಿಗ್ಗಜ ನಾಯಕ ಕಪಿಲ್ ದೇವ್ (Kapil Dev) ಅವರ ದಾಖಲೆಯನ್ನು ಸರಿಗಟ್ಟಲು ಸಜ್ಜಾಗಿದ್ದಾರೆ.
ಇಂಗ್ಲೆಂಡ್ ಪ್ರವಾಸದಲ್ಲೂ ಜಡೇಜಾ ತಮ್ಮ ಆಲ್ರೌಂಡರ್ ಪರಾಕ್ರಮವನ್ನು ಪ್ರದರ್ಶಿಸಿದರು. ಈಗ, ತವರಿನಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಜಡೇಜಾ ಅಮೋಘ ಶತಕ ಗಳಿಸಿದರು. ಬಳಿಕ ಎರಡನೇ ಇನ್ನಿಂಗ್ಸ್ನಲ್ಲಿ ತಮ್ಮ ಸ್ಪಿನ್ ಬೌಲಿಂಗ್ ಮೂಲಕ 4 ವಿಕೆಟ್ ಸಹ ಪಡೆದರು.
ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಪರ ಮೂರು ಶತಕಗಳು ಮೂಡಿ ಬಂದವು. ಕೆಎಲ್ ರಾಹುಲ್ (100), ಧ್ರುವ್ ಜುರೆಲ್ (125), ಮತ್ತು ಜಡೇಜಾ (104*) ಅವರ ಅದ್ಭುತ ಬ್ಯಾಟಿಂಗ್ನಿಂದ ಭಾರತ ತನ್ನ ಮೊದಲ ಇನ್ನಿಂಗ್ಸ್ ಅನ್ನು 5 ನಷ್ಟಕ್ಕೆ 448 ರನ್ ಗಳಿಸುವ ಮೂಲಕ ಡಿಕ್ಲೇರ್ ಮಾಡಿತು. ವೆಸ್ಟ್ ಇಂಡೀಸ್ ಎರಡನೇ ಇನ್ನಿಂಗ್ಸ್ನಲ್ಲಿ 146 ರನ್ಗಳಿಗೆ ಆಲೌಟ್ ಆಯಿತು. ಮೊಹಮ್ಮದ್ ಸಿರಾಜ್, ಜಸ್ಪ್ರೀತ್ ಬುಮ್ರಾ, ಕುಲದೀಪ್ ಯಾದವ್ ಮತ್ತು ವಾಷಿಂಗ್ಟನ್ ಸುಂದರ್ ಅದ್ಭುತ ಬೌಲಿಂಗ್ ಮಾಡಿದರು. ಇತ್ತ ಮಿಂಚಿನ ಪ್ರದರ್ಶನ ನೀಡಿದ ಜಡೇಜಾ ಹಲವಾರು ಟೆಸ್ಟ್ ದಾಖಲೆಗಳನ್ನು ಸೃಷ್ಟಿಸಿದರು.
“ನೀವು ಈಗ ನನ್ನ ಮೇಲೆ ಒತ್ತಡ ಹೇರುತ್ತಿದ್ದೀರಿ. ಆದರೆ ನಾನು 1000 ರನ್ ಮತ್ತು 60-70 ವಿಕೆಟ್ಗಳನ್ನು ಪಡೆಯುವ ಬಗ್ಗೆ ಯೋಚಿಸಬೇಕು. ನನ್ನ ವೃತ್ತಿಜೀವನದ ಈ ಹಂತದಲ್ಲಿ, ನಾನು ಕ್ರಿಕೆಟ್ ಅನ್ನು ಆನಂದಿಸುತ್ತಿದ್ದೇನೆ. ನಾನು ಮೈಲಿಗಲ್ಲುಗಳು ಅಥವಾ ದಾಖಲೆಗಳ ಬಗ್ಗೆ ಯೋಚಿಸುವುದಿಲ್ಲ. ನಾನು ವರ್ಷಗಳಿಂದ ಮಾಡುತ್ತಾ ಬಂದಿರುವುದನ್ನು ಮುಂದುವರಿಸಲು ನನ್ನ ಫಿಟ್ನೆಸ್ನ ಮೇಲೆ ಕೆಲಸ ಮಾಡುತ್ತಿದ್ದೇನೆ” ಎಂದು ಜಡೇಜಾ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
ಪ್ರಸ್ತುತ ರವೀಂದ್ರ ಜಡೇಜಾ 86 ಟೆಸ್ಟ್ಗಳಲ್ಲಿ, ಆರು ಶತಕಗಳು ಮತ್ತು 27 ಅರ್ಧಶತಕಗಳು ಸೇರಿದಂತೆ 3990 ರನ್ಗಳನ್ನು ಗಳಿಸಿದ್ದಾರೆ. ಅವರು 15 ಬಾರಿ ಇನ್ನಿಂಗ್ಸ್ವೊಂದರಲ್ಲಿ ಐದು ವಿಕೆಟ್ ಮತ್ತು ಮೂರು ಬಾರಿ ಹತ್ತು ವಿಕೆಟ್ ಪಡೆದಿದ್ದಾರೆ. ಒಟ್ಟು ಟೆಸ್ಟ್ ಕ್ರಿಕೆಟ್ನಲ್ಲಿ 334 ವಿಕೆಟ್ಗಳನ್ನು ಉರುಳಿಸಿದ್ದಾರೆ.
ಕೆಲವು ವರ್ಷಗಳ ಹಿಂದೆ, ನಾನು 8 ಅಥವಾ 9ನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದೆ. ಆದರೆ ಈಗ ನಾನು 6ನೇ ಸ್ಥಾನಕ್ಕೆ ಏರಿದ್ದೇನೆ. ಈಗ ನನಗೆ ತಯಾರಿ ನಡೆಸಲು ಸಮಯವಿದೆ. ಇನ್ನಿಂಗ್ಸ್ ವೇಗಗೊಳಿಸಲು ನನಗೆ ಅವಕಾಶವಿದೆ. ನಾನು ಆತುರಪಡಬೇಕಾಗಿಲ್ಲ ಅಥವಾ ಅನಗತ್ಯ ಅಪಾಯಗಳನ್ನು ತೆಗೆದುಕೊಳ್ಳಬೇಕಾಗಿಲ್ಲ ಎಂದು ಜಡೇಜಾ ಆಟದ ಬಗ್ಗೆ ತಿಳಿಸಿದ್ದಾರೆ. ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರೊಂದಿಗೆ ರವೀಂದ್ರ ಜಡೇಜಾ ಅವರ ಟೆಸ್ಟ್ ನಿವೃತ್ತಿಯ ಬಗ್ಗೆ ಮಾತುಕತೆ ನಡೆದಿತ್ತು. ಆದರೆ ಅವರು ಇಲ್ಲಿಯವರೆಗೆ ಟೀಮ್ ಇಂಡಿಯಾ ಪರ ತಮ್ಮ ಅತ್ಯುತ್ತಮ ಕೊಡುಗೆ ನೀಡುತ್ತಿದ್ದಾರೆ.
October 04, 2025 11:16 PM IST