Last Updated:
ಐಸಿಸಿ ಮಹಿಳಾ ಏಕದಿನ ವಿಶ್ವಕಪ್ 2025 ರ ಪಂದ್ಯದಲ್ಲಿ ಪಾಕಿಸ್ತಾನ ಮತ್ತು ಭಾರತ ಮುಖಾಮುಖಿಯಾಗಿವೆ. ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ಪಾಕಿಸ್ತಾನಕ್ಕೆ ಸ್ಪರ್ಧಾತ್ಮಕ ಗುರಿ ನೀಡಿದೆ.
ಕೊಲಂಬೊದಲ್ಲಿ ನಡೆಯುತ್ತಿರುವ 2025 ರ ಮಹಿಳಾ ಏಕದಿನ ವಿಶ್ವಕಪ್ (Womens ODI World Cup) ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ (India vs Pakistan) ಸೆಣಸಾಡುತ್ತಿವೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ವನಿತೆಯರ ತಂಡ ಸ್ಪರ್ಧಾತ್ಮಕ ಮೊತ್ತ ಕಲೆ ಹಾಕಿದೆ. ಪಾಕಿಸ್ತಾನ ವಿರುದ್ಧ ಬೃಹತ್ ಮೊತ್ತ ಪೇರಿಸುವ ಲೆಕ್ಕಚಾರದಲ್ಲಿ ಹರ್ಮನ್ಪ್ರೀತ್ ಕೌರ್ (Harmanpreet Kaur) ನೇತೃತ್ವದ ಭಾರತ ತಂಡವಿತ್ತು. ಆದರೆ, ಅಂದುಕೊಂಡಂತೆ ಬೃಹತ್ ಮೊತ್ತ ಕಲೆ ಹಾಕಲು ಟೀಮ್ ಇಂಡಿಯಾ ಪರ ಉತ್ತಮ ಜೊತೆಯಾಟ ಮೂಡಿ ಬರಲಿಲ್ಲ. ಆದರೂ, ಹರ್ಲೀನ್ ಡಿಯೋಲ್ (Harleen Deol) ಅವರ ಜವಾಬ್ದಾರಿಯುತ ಇನ್ನಿಂಗ್ಸ್ ನೆರವಿನಿಂದ ಪಾಕಿಸ್ತಾನಕ್ಕೆ ಭಾರತ ವನಿತೆಯರ ತಂಡ ಸ್ಪರ್ಧಾತ್ಮಕ ಗುರಿ ನೀಡಿದೆ.
ಪಂದ್ಯದಲ್ಲಿ ಟಾಸ್ ಗೆದ್ದ ಪಾಕಿಸ್ತಾನ ನಾಯಕಿ ಫಾತಿಮಾ ಸನಾ ಬೌಲಿಂಗ್ ಮಾಡಲು ನಿರ್ಧರಿಸಿದರು. ಹೀಗಾಗಿ ಇನ್ನಿಂಗ್ಸ್ ಆರಂಭಿಸಿದ ಭಾರತ ಮಂದಗತಿಯಲ್ಲಿ ಇನ್ನಿಂಗ್ಸ್ ಕಟ್ಟಿತ್ತು. ಪರಿಣಾಮ ಭಾರತ ಬೃಹತ್ ಮೊತ್ತ ಕಲೆ ಹಾಕಲು ಸಾಧ್ಯವಾಗಲಿಲ್ಲ. ನಿಗದಿತ 50 ಓವರ್ಗಳಲ್ಲಿ ಭಾರತ 247 ರನ್ಗಳಿಗೆ ಆಲೌಟಾಯಿತು.
ಟೀಮ್ ಇಂಡಿಯಾ ಪರ ಪ್ರತೀಕಾ ರಾವಲ್ ಮತ್ತು ಸ್ಮೃತಿ ಮಂಧಾನ ಇನ್ನಿಂಗ್ಸ್ ಆರಂಭಿಸಿದರು. ಶ್ರೀಲಂಕಾ ವಿರುದ್ಧದ ಮೊದಲ ಪಂದ್ಯದಲ್ಲಿ ನಿರಾಸೆ ಮೂಡಿಸಿದ ಸ್ಮೃತಿ ಮಂಧಾನ ಪಾಕಿಸ್ತಾನ ವಿರುದ್ಧವೂ ಮಂಕಾದರು. ಮಂಧಾನ ಕೇವಲ 23 ರನ್ಗಳಿಗೆ ಔಟಾದರು. ಬಳಿಕ ಪ್ರತೀಕಾ ರಾವಲ್ ಕೂಡ 31 ರನ್ ಗಳಿಸಿ ವಿಕೆಟ್ ಕಳೆದುಕೊಂಡರು. ಇತ್ತ ಹರ್ಲೀನ್ ಡಿಯೋಲ್ ತಮ್ಮ ಜವಾಬ್ದಾರಿಯುತ ಇನ್ನಿಂಗ್ಸ್ ಆಡಿದರು.
ಕೊನೆಯಲ್ಲಿ ಅಬ್ಬರಿಸಿದ ರಿಚಾ ಘೋಷ್ 20 ಎಸೆತಗಳಲ್ಲಿ 3 ಬೌಂಡರಿ ಮತ್ತು 2 ಸಿಕ್ಸರ್ ನೆರವಿನಿಂದ 35 ರನ್ ಗಳಿಸಿ ಭಾರತ ತಂಡದ ಮೊತ್ತ ಹೆಚ್ಚಿಸಿದರು. ಇದಕ್ಕೂ ಮುನ್ನ ಅದ್ಭುತ ಇನ್ನಿಂಗ್ಸ್ ಆಡಿದ ಹರ್ಲೀನ್ ಡಿಯೋಲ್ ತಂಡದ ಪರ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಹರ್ಲೀನ್ ಡಿಯೋಲ್ 65 ಎಸೆತಗಳಲ್ಲಿ 4 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಿಂದ 46 ರನ್ ಕಲೆ ಹಾಕಿದರು.
October 05, 2025 7:43 PM IST