Last Updated:
ಸುರುಳಿ ಸುಗಂಧಿ ಅಥವಾ ವೈಟ್ ಬಟರ್‌ಫ್ಲೈ ಜಿಂಜರ್ ಲಿಲಿ, ನೇಪಾಳ ಹಿಮಾಲಯ ಮತ್ತು ದಕ್ಷಿಣ ಕನ್ನಡದಲ್ಲಿ ಬೆಳೆಯುವ ಸುಗಂಧಿ ಹೂವು, ಕ್ಯೂಬ ದೇಶದ ರಾಷ್ಟ್ರೀಯ ಹೂವಾಗಿದೆ.
ದಕ್ಷಿಣ ಕನ್ನಡ: ಬೆಳ್ಳಗೆ ಹಾಲಿನಂತೆ ಕಂಗೊಳಿಸುವ ಈ ಹೂವು ಸುಗಂಧಿ ಹೂವು. ಸುರುಳಿ ಹೂವು ಎಂದು ಕರೆಯಲ್ಪಡುವ ಈ ಹೂವು ಸಾಮಾನ್ಯವಾಗಿ ಎಲ್ಲಾ ಕಡೆ ಕಂಡು ಬರುವ ಹೂವಾಗಿದೆ. ಈ ಹೂವನ್ನು ಭೀಮನು ದ್ರೌಪದಿಗೆ ತಂದು ಕೊಟ್ಟನೆಂದು ಪುರಾಣ ಕಥೆಗಳು ಹೇಳುತ್ತವೆ. ಈ ಹೂವುಗಳು ಸಾಮಾನ್ಯವಾಗಿ ‘ವೈಟ್ ಬಟರ್‌ಫ್ಲೈ ಜಿಂಜರ್ ಲಿಲಿ’ ಅಥವಾ ‘ಸೊಂಟಕ್ಕ’ (Hedychium coronarium) ಎಂದು ಕರೆಯಲ್ಪಡುತ್ತವೆ. ಈ ಹೂವುಗಳು ತಮ್ಮ ಆಹ್ಲಾದಕರ ಸುಗಂಧ ಮತ್ತು ಆಕರ್ಷಕ ನೋಟಕ್ಕೆ ಹೆಸರುವಾಸಿಯಾಗಿವೆ.
ಇವು ಹಿಮಾಲಯದ ಪೂರ್ವ ಭಾಗ ಮತ್ತು ಪಶ್ಚಿಮ ಘಟ್ಟಗಳಲ್ಲಿ ಕಂಡುಬರುತ್ತವೆ. ಸಾಮಾನ್ಯವಾಗಿ ಕೆರೆಯ ಬದಿಗಳಲ್ಲಿ ನೀರಿನ ಹರಿವು ನಿರಂತರವಾಗಿ ಇರುವ ಜಾಗದ ಬದಿಗಳಲ್ಲಿ ಈ ಹೂವಿನ ಗಿಡ ಇರುತ್ತದೆ. ಅರಿಶಿಣದ ಕೊಂಬಿನಂತೆ ಈ ಗಿಡದ ಗೆಡ್ಡೆ ಇರುತ್ತದೆ.
ಬೆಳಿಗ್ಗೆ ಕಂಡ ಮೊಗ್ಗುಗಳು ಸಾಮಾನ್ಯವಾಗಿ ಮಧ್ಯಾಹ್ನದ ಹೊತ್ತಿಗೆ ಮೆಲ್ಲನೆ ಅರಳಲು ಶುರುವಾಗಿ ಸಂಜೆ ಆಗುತ್ತಿದ್ದಂತೆ ಪೂರ್ತಿ ಅರಳಿ ತನ್ನ ಸುಗಂಧದಿಂದ ಎಲ್ಲರ ಗಮನ ಸೆಳೆಯುತ್ತದೆ. ಶುಭ್ರ ಬಿಳಿ ಬಣ್ಣದ ಮತ್ತು ಗಂಧ ಹಳದಿ ಬಣ್ಣದ ಎರಡು ಬಗೆಯ ಹೂಗಳಿವೆ. ಬಿಳಿ ಬಣ್ಣದ ಹೂವಿನ ಬುಡದಲ್ಲಿ ಹಳದಿ ಬಣ್ಣ ಇರುತ್ತದೆ. ಈ ಹೂವು ನಮ್ಮ ಅಕ್ಕಪಕ್ಕದಲ್ಲಿ ಇದ್ದರೆ ನಾವು ಸಾಮಾನ್ಯವಾಗಿ ಸುಗಂಧ ದ್ರವ್ಯ ಹಾಕಿಕೊಳ್ಳುವ ಅಗತ್ಯವಿಲ್ಲ. ಅಷ್ಟೊಂದು ಸುಗಂಧ ಬೀರುವ ಹೂವು ಇದು.
ಇದು ತುಳುನಾಡಲ್ಲಿ ಬೆಳೆಯುತ್ತಿರೋದೇ ಆಶ್ಚರ್ಯ
ಸುರುಳಿ ಸುಗಂಧಿ ಕ್ಯೂಬ ದೇಶದ ರಾಷ್ಟ್ರೀಯ ಹೂವು. ಅಲ್ಲಿ ಈ ಹೂವನ್ನು ‘ಮರಿಪೊಸ’ ಅಂದರೆ ಚಿಟ್ಟೆ ಎಂದೂ ಕರೆಯಲಾಗುತ್ತದೆ, ಇದಕ್ಕೆ ಕಾರಣ ಅದರ ಆಕಾರ. ಸುರುಳಿ ಸುಗಂಧಿ ವರ್ಷಪೂರ್ತಿ ಹೂ ಬಿಡುವ ಗಿಡ. ಇದು ಮೂಲತಃ ನೇಪಾಳ ಮತ್ತು ಭಾರತದ ಹಿಮಾಲಯ ಪರ್ವತ ಶ್ರೇಣಿಯಲ್ಲಿ ಕಂಡುಬರುತ್ತದೆ. ಕರಾವಳಿ ಭಾಗದಲ್ಲೂ ಈ ಹೂವು ಇಲ್ಲಿನ ವಾತಾವರಣಕ್ಕೆ ಹೊಂದಿಕೊಂಡು ಬೆಳೆಯುತ್ತಿದ್ದು, ಈ ಭಾಗದ ಮಹಿಳೆಯರು ಹೆಚ್ಚಾಗಿ ಇದನ್ನು ಮುಡಿಗಿಟ್ಟು ಶೃಂಗಾರ ಮಾಡಿಕೊಳ್ಳುತ್ತಾರೆ.
Mangalore,Dakshina Kannada,Karnataka
October 06, 2025 7:25 PM IST