Women’s WC: ಭಾರತದ ಕೈಯಲ್ಲಿದ್ದ ಗೆಲುವು ಕಸಿದುಕೊಂಡ ದಕ್ಷಿಣ ಆಫ್ರಿಕಾ! ಕಳಪೆ ಫೀಲ್ಡಿಂಗ್, ಬೌಲಿಂಗ್​​ಗೆ ಬೆಲೆತೆತ್ತ ಭಾರತ | ಕ್ರೀಡೆ

Women’s WC: ಭಾರತದ ಕೈಯಲ್ಲಿದ್ದ ಗೆಲುವು ಕಸಿದುಕೊಂಡ ದಕ್ಷಿಣ ಆಫ್ರಿಕಾ! ಕಳಪೆ ಫೀಲ್ಡಿಂಗ್, ಬೌಲಿಂಗ್​​ಗೆ ಬೆಲೆತೆತ್ತ ಭಾರತ | ಕ್ರೀಡೆ

Last Updated:

ಸತತ ಎರಡು ಗೆಲುವು ಕಂಡಿದ್ದ ಭಾರತ ಟೂರ್ನಿಯಲ್ಲಿ ಮೊದಲ ಸೋಲು ಕಂಡರೆ, ಮೊದಲ ಪಂದ್ಯದಲ್ಲಿ ಕೇವಲ 69ಕ್ಕೆ ಆಲೌಟ್ ಆಗಿ ಹೀನಾಯ ಸೋಲು ಕಂಡಿದ್ದ ಹರಿಣ ಪಡೆ ಸತತ 2 ಗೆಲುವು ಸಾಧಿಸಿ ಟೂರ್ನಿಯಲ್ಲಿ ಅದ್ಭುತ ಕಮ್​ಬ್ಯಾಕ್ ಮಾಡಿದೆ.

ನಾಡಿನ್ ಡಿ ಕ್ಲರ್ಕ್ನಾಡಿನ್ ಡಿ ಕ್ಲರ್ಕ್
ನಾಡಿನ್ ಡಿ ಕ್ಲರ್ಕ್

ಮಹಿಳಾ ವಿಶ್ವಕಪ್​ನನ 10ನೇ ಪಂದ್ಯದಲ್ಲಿ ಭಾರತ ಮಹಿಳಾ ತಂಡ ದಕ್ಷಿಣ ಆಫ್ರಿಕಾ ವಿರುದ್ದ 3 ವಿಕೆಟ್​ಗಳ ರೋಚಕ ಸೋಲು ಕಂಡಿದೆ. ಗುರುವಾರ ವಿಶಾಕಪಟ್ಟಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ಮಹಿಳಾ ತಂಡ 50 ಓವರ್ ಗಳಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡು 251 ರನ್ ಗಳಿಸಿತ್ತು. 252 ರನ್​ಗಳ ಗುರಿಯನ್ನ ದಕ್ಷಿಣ ಆಫ್ರಿಕಾ ತಂಡ 48.5 ಓವರ್​ಗಳಲ್ಲಿ 7 ವಿಕೆಟ್ ಕಳೆದುಕೊಂಡು ಗುರಿ ತಲುಪಿತು. 8ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಇಳಿದಿದ್ದ ನಡೀನ್ ಡಿಕ್ಲೆರ್ಕ್​ ಕೇವಲ 54 ಎಸೆತಗಳಲ್ಲಿ 8 ಬೌಂಡರಿಲ, 5 ಭರ್ಜರಿ ಸಿಕ್ಸರ್​ಗಳ ಸಹಿತ ಅಜೇಯ 84 ರನ್​ ಸಿಡಿಸಿ ಭಾರತದ ಕೈಯಲ್ಲಿದ್ದ ಗೆಲುವನ್ನ ಕಸಿದುಕೊಂಡರು. ಸತತ ಎರಡು ಗೆಲುವು ಕಂಡಿದ್ದ ಭಾರತ ಟೂರ್ನಿಯಲ್ಲಿ ಮೊದಲ ಸೋಲು ಕಂಡರೆ, ಮೊದಲ ಪಂದ್ಯದಲ್ಲಿ ಕೇವಲ 69ಕ್ಕೆ ಆಲೌಟ್ ಆಗಿ ಹೀನಾಯ ಸೋಲು ಕಂಡಿದ್ದ ಹರಿಣ ಪಡೆ ಸತತ 2 ಗೆಲುವು ಸಾಧಿಸಿ ಟೂರ್ನಿಯಲ್ಲಿ ಅದ್ಭುತ ಕಮ್​ಬ್ಯಾಕ್ ಮಾಡಿದೆ.

ಭಾರತ ನೀಡಿದ್ದ 252 ರನ್​ಗಳ ಗುರಿಯನ್ನ ಬೆನ್ನಟ್ಟಿದ ಹರಿಣ ಪಡೆ ಕೇವಲ 6 ರನ್​ಗಳಿಗೆ ಮೊದಲ ವಿಕೆಟ್ 18 ರನ್​ಗಳಾಗುಷ್ಟರಲ್ಲಿ 2ನೇ ವಿಕೆಟ್ ಕಳೆದುಕೊಂಡಿತು. ಕಳೆದ ಪಂದ್ಯದಲ್ಲಿ ಕಿವೀಸ್ ವಿರುದ್ಧ ಶತಕ ಸಿಡಿಸಿದ್ದ ತಾಜ್ಮಿನ್ ಬ್ರಿಟ್ಸ್ ಇಂದು ಖಾತೆ ತೆರೆಯದೇ ಔಟ್ ಆದರು. ಕಳೆದ ಪಂದ್ಯದಲ್ಲಿ 83 ರನ್​ಗಹಳಿಸಿ ಸುನೆ ಲೂಸ್ ಇಂದು 5 ರನ್​ಗಳಿಗೆ ವಿಕೆಟ್ ಒಪ್ಪಿಸಿದರು. ಆದರೆ 3ನೇ ವಿಕೆಟ್​ಗೆ ಒಂದಾದ ನಾಯಕಿ ವೋಲ್ವಾರ್ಟ್ ಹಾಗೂ ಅನುಭವಿ ಮರಿಜಾನ್ ಕಾಪ್ 39 ರನ್​ ಸೇರಿಸಿದರು. ಈ ಹಂತದಲ್ಲಿ ಕಣಕ್ಕಿಳಿದ ಸ್ನೇಹ್ ರಾಣಾ 20 ರನ್​ಗಳಿಸಿದ್ದ ಕಾಪ್​ರನ್ನ ಬೌಲ್ಡ್ ಮಾಡಿ ಪೆವಲಿಯನ್​ಗಟ್ಟಿದರು. ನಂತರ ಕೇವಲ 1 ರನ್​ ಅಂತರದಲ್ಲಿ ಅನ್ನೇಕ್ ಬಾಷ್ (1)ರನ್ನ ದೀಪ್ತಿ ಶರ್ಮಾ ಔಟ್ ಮಾಡಿದರು.

ವಿಕೆಟ್ ಕೀಪರ್ ಸಿನಾಲೊ ಜಫ್ಟಾ ಕೇವಲ 14 ರನ್​ಗಳಿಸಿ ಚರಣಿ ಬೌಲಿಂಗ್​​ನಲ್ಲಿ ಎಲ್​ಬಿಡಬ್ಲ್ಯೂ ಬಲೆಗೆ ಬಿದ್ದರು. ತಂಡದ ಮೊತ್ತ 81ಕ್ಕೆ 5 ವಿಕೆಟ್ ಕಳೆದುಕೊಂಡು ಸೋಲಿನ ಸುಳಿಯಲ್ಲಿದ್ದ ದಕ್ಷಿಣ ಆಫ್ರಿಕಾ ತಂಡಕ್ಕೆ ನಾಯಕಿ ವೋಲ್ವಾರ್ಡ್ಟ್ ಹಾಗೂ ಟ್ರಯಾನ್ 61 ರನ್​ಗಳ ಜೊತೆಯಾಟ ನೀಡಿ ಚೇತರಿಕೆ ನೀಡಿ ಮತ್ತೆ ಪಂದ್ಯದಲ್ಲಿ ಕಮ್​ಬ್ಯಾಕ್ ಮಾಡುವಂತೆ ಮಾಡಿದರು. ಈ ಅಪಾಯಕಾರಿ ಜೋಡಿಯನ್ನ ಕ್ರಾಂತಿ ಗೌಡ್​ ಬೇರ್ಪಡಿಸಿದರು. 111 ಎಸೆತಗಳಲ್ಲಿ 8 ಬೌಂಡರಿಗಳ ನೆರವಿನಿಂದ 70 ರನ್​ಗಳಿಸಿದ್ದ ಲೌರಾ ವೋಲ್ವಾರ್ಟ್​ರನ್ನ ಗೌಡ್ ಬೌಲ್ಡ್ ಮಾಡಿದರು.

ಈ ವಿಕೆಟ್ ಬೀಳುತ್ತಿದ್ದಂತೆ ಭಾರತ ಗೆಲುವು ಸುಲಭವಾಗಬಹುದು ಎನ್ನಲಾಗಿತ್ತು. ಆದರೆ ಟ್ರಯಾನ್ ಜೊತೆ ಸೇರಿದ ನಡೀನ್ ಡಿಕ್ಲೆರ್ಕ್ ಪಂದ್ಯದ ಗತಿಯನ್ನೇ ಬದಲಿಸಿದರು. ಈ ಜೋಡಿ 7ನೇ ವಿಕೆಟ್​ಗೆ ಕೇವಲ 60 ಎಸೆತಗಳಲ್ಲಿ 69 ರನ್​ ಸೇರಿಸಿದರು. ಟ್ರಯಾನ್ 49 ರನ್​ಗಳಿಸಿ ಸ್ನೇಹ್ ರಾಣಾ ಬೌಲಿಂಗ್​​ನಲ್ಲಿ ಎಲ್​ಬಿ ಬಲೆಗೆ ಬಿದ್ದರು.

ಟ್ರಯಾನ್ ವಿಕೆಟ್ ಬಿದ್ದಾಗ ದಕ್ಷಿಣ ಆಫ್ರಿಕಾ ತಂಡಕ್ಕೆ ಕೊನೆಯ 24 ಎಸೆತಗಳಲ್ಲಿ ಗೆಲ್ಲಲು 41 ರನ್​ಗಳ ಅಗತ್ಯವಿತ್ತು. ನಡೀನ್ ಡಿಕ್ಲೆರ್ಕ್ ಏಕಾಂಗಿಯಾಗಿ 40 ರನ್​ಗಳಿಸಿ ಇನ್ನು7 ಎಸೆತಗಳಿರುವಂತೆ ತಂಡವನ್ನ ಗೆಲುವಿನ ಗಡಿ ದಾಟಿಸಿದರು. 8ನೇ ವಿಕೆಟ್ ಜೊತೆಯಾಟದಲ್ಲಿ ಅಯಬೊಂಗಾ ಖಾಕಾ ಜೊತೆಗೆ ಕೇವಲ 18 ಎಸೆತಗಳಲ್ಲಿ 41 ರನ್​ ಸೇರಿಸಿ ಪಂದ್ಯವನ್ನ ಭಾರತದ ಕೈಯಿಂದ ಕಸಿದುಕೊಂಡರು.