Last Updated:
ವಿಂಡ್‌ಹೋಕ್‌ನ ವಾಂಡರರ್ಸ್ ಕ್ರಿಕೆಟ್ ಮೈದಾನದಲ್ಲಿ ನಡೆದ ಏಕೈಕ ಟಿ20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಮೀಬಿಯಾ ಗೆಲುವು ಸಾಧಿಸಿದೆ.
ಅಂತಾರಾಷ್ಟ್ರೀಯ ಕ್ರಿಕೆಟ್ (International cricket)ನಲ್ಲಿ ನಮೀಬಿಯಾ (Namibia) ತಂಡ ಸಂಚಲನ ಮೂಡಿಸಿದೆ. ಅಕ್ಟೋಬರ್ 11, 2025 ನಮೀಬಿಯಾ ಕ್ರಿಕೆಟ್ ಇತಿಹಾಸದಲ್ಲಿ ಅತ್ಯಂತ ಸ್ಮರಣೀಯ ಕ್ಷಣಗಳಲ್ಲಿ ಒಂದಾಗಿದೆ. ಈ ದಿನವನ್ನು ನಮೀಬಿಯಾ ತಂಡದ ಅಭಿಮಾನಿಗಳು ಎಂದಿಗೂ ಮರೆಯಲು ಸಾಧ್ಯವಿಲ್ಲ. ಕೆಲವು ದಿನಗಳ ಹಿಂದೆ ಭಾರತದಲ್ಲಿ ನಡೆಯಲಿರುವ 2026 ರ ಟಿ20 ವಿಶ್ವಕಪ್ (T20 World Cup)ಗೆ ನಮೀಬಿಯಾ ಅರ್ಹತೆ ಪಡೆದ ದಾಖಲೆ ಮಾಡಿತ್ತು. ಇದೀಗ ಕ್ರಿಕೆಟ್ ಅಂಗಳಕ್ಕೆ ಅಂಬೆಗಾಲು ಇಡುತ್ತಿರುವ ನಮೀಬಿಯಾ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿಇತಿಹಾಸವನ್ನು ಸೃಷ್ಟಿಸಿದೆ. ತವರಿನಲ್ಲಿ ಆಡಿದ ಏಕೈಕ ಟಿ20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ (South Africa) ತಂಡವನ್ನು ನಮೀಬಿಯಾ ಹೀನಾಯವಾಗಿ ಸೋಲಿಸಿದೆ. ಈ ರೋಚಕ ಪಂದ್ಯದಲ್ಲಿ ನಮೀಬಿಯಾ ತಂಡವು ಕೊನೆಯ ಎಸೆತದಲ್ಲಿ ನಾಲ್ಕು ವಿಕೆಟ್‌ಗಳಿಂದ ಗೆದ್ದು ಬೀಗಿದೆ.
ದಕ್ಷಿಣ ಆಫ್ರಿಕಾದಂತಹ ಬಲಿಷ್ಠ ತಂಡವನ್ನು ಸೋಲಿಸಿರುವುದು ನಮೀಬಿಯಾಕ್ಕೆ ಐತಿಹಾಸಿಕ ಗೆಲುವಾಗಿದೆ. ಏಕೆಂದರೆ ನಮೀಬಿಯಾ ಟಿ20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಪೂರ್ಣ ಸದಸ್ಯ ರಾಷ್ಟ್ರವನ್ನು ನಾಲ್ಕನೇ ಬಾರಿ ಸೋಲಿಸಿದೆ. ದಕ್ಷಿಣ ಆಫ್ರಿಕಾಕ್ಕೂ ಮೊದಲು, ಐರ್ಲೆಂಡ್, ಜಿಂಬಾಬ್ವೆ ಮತ್ತು ಶ್ರೀಲಂಕಾ ತಂಡಗಳನ್ನು ನಮೀಬಿಯಾ ಸೋಲಿಸಿತ್ತು. ಇದಲ್ಲದೆ, ನಮೀಬಿಯಾ ಟಿ20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಕೊನೆಯ ಎಸೆತದಲ್ಲಿ ರೋಮಾಂಚಕ ಗೆಲುವು ಸಾಧಿಸಿದ್ದು ಇದು ಎರಡನೇ ಬಾರಿ. 2022 ರಲ್ಲಿ ಜಿಂಬಾಬ್ವೆ ವಿರುದ್ಧವೂ ನಮೀಬಿಯಾ ಕೊನೆಯ ಎಸೆತದಲ್ಲಿ ಗೆದ್ದಿತು.
ವಿಂಡ್‌ಹೋಕ್‌ನ ವಾಂಡರರ್ಸ್ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಮೊದಲು ಬ್ಯಾಟಿಂಗ್ ಮಾಡಿತು. ಕ್ವಿಂಟನ್ ಡಿ ಕಾಕ್ ಮತ್ತು ರೀಜಾ ಹೆಂಡ್ರಿಕ್ಸ್‌ರಂತಹ ಸ್ಟಾರ್ ಬ್ಯಾಟರ್ಸ್ ತಂಡದ ಪರ ಅಬ್ಬರಿಸಲಿಲ್ಲ. ಒಂದು ಹಂತದಲ್ಲಿ ಹರಿಣಗಳ ಪಡೆ 82 ರನ್‌ಗಳಿಗೆ 6 ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟದಲ್ಲಿತ್ತು.
ಈ ಹಂತದಲ್ಲಿ ದಕ್ಷಿಣ ಆಫ್ರಿಕಾ ಸಂಪೂರ್ಣ 20 ಓವರ್‌ಗಳನ್ನು ಆಡುವುದು ಸಾಧ್ಯವಾಗುತ್ತಾ? ಎಂಬ ಪ್ರಶ್ನೆ ಹುಟ್ಟುಕೊಂಡಿತ್ತು. ಆದರೆ ಹೇಗೋ ಹರಿಣಗಳ ಪಡೆ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 134 ರನ್ ಗಳಿಸಿತು. ಜೇಸನ್ ಸ್ಮಿತ್ 31 ರನ್ ಗಳಿಸಿ ಟಾಪ್ ಸ್ಕೋರರ್ ಎನಿಸಿಕೊಂಡರು. ರೂಬಿನ್ ಹರ್ಮನ್ 23 ರನ್‌ಗಳನ್ನು ಗಳಿಸಿದರು. ನಮೀಬಿಯಾ ಪರ, ಟ್ರಂಪೆಲ್‌ಮನ್ 3 ವಿಕೆಟ್ ಕಬಳಿಸಿ ಮಿಂಚದರೆ, ಮ್ಯಾಕ್ಸ್ ಹಿಂಗೊ ಎರಡು ವಿಕೆಟ್‌ಗಳನ್ನು ಪಡೆದರು.
ದಕ್ಷಿಣ ಆಫ್ರಿಕಾ ತಂಡವನ್ನು ಕಡಿಮೆ ಮೊತ್ತಕ್ಕೆ ಕಟ್ಟಿ ಹಾಕುವಲ್ಲಿ ನಮೀಬಿಯಾ ಬೌಲರ್ಸ್ ಯಶಸ್ವಿಯಾದರು. ಹಾಗೆಯೇ ನಮೀಬಿಯಾದ ಬ್ಯಾಟರ್ಸ್ ಕೂಡ ಕೊನೆಯ ಎಸೆತದವರೆಗೂ ತಮ್ಮ ಹಿಡಿತವನ್ನು ಪಂದ್ಯದ ಮೇಲೆ ಸಾಧಿಸಿದರು. ನಮೀಬಿಯಾ 85 ರನ್‌ಗಳಿಗೆ 5 ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಅಲ್ಲಿಂದ ನಮೀಬಿಯಾಗೆ ಗೆಲುವು ಅಸಂಭವವೆನಿಸಿತು. ಆರನೇ ವಿಕೆಟ್ 101 ರನ್‌ಗಳಿಗೆ ಪತನವಾಯಿತು. ಈ ಹಂತದಲ್ಲಿ ದಕ್ಷಿಣ ಆಫ್ರಿಕಾದ ಗೆಲುವು ಖಚಿತವೆಂದು ತೋರಿತು. ಆದಾಗ್ಯೂ, ಜೇನ್ ಗ್ರೀನ್ ಮತ್ತು ರೂಬೆನ್ ಟ್ರೂಪೆಲ್‌ಮನ್ ಕೊನೆಯ ಎರಡು ಓವರ್‌ಗಳಲ್ಲಿ ಪಂದ್ಯದ ದಿಕ್ಕನ್ನು ತಿರುಗಿಸಿದರು.
ನಮೀಬಿಯಾ ತಂಡ ಗೆಲ್ಲಲು ಕೊನೆಯ 2 ಓವರ್‌ಗಳಲ್ಲಿ 23 ರನ್‌ಗಳ ಅಗತ್ಯವಿತ್ತು. ಕ್ರೀಸ್ನಲ್ಲಿದ್ದ ಟ್ರಂಪೆಲ್‌ಮನ್ ಮತ್ತು ಜೇನ್ ಗ್ರೀನ್ ಗೆಲುವಿಗೆ ಬೇಕಾಗಿದ್ದ 23 ರನ್‌ಗಳನ್ನು 12 ಎಸೆತಗಳಲ್ಲಿ ಗಳಿಸಿದರು. 19ನೇ ಓವರ್‌ನಲ್ಲಿ ಒಂದು ಬೌಂಡರಿ ಮತ್ತು ಮೂರು ಡಬಲ್ಸ್‌ಗಳೊಂದಿಗೆ ಒಟ್ಟು 12 ರನ್‌ಗಳು ಗಳಿಸಲಾಯಿತು. ಕೊನೆಯ ಓವರ್‌ನಲ್ಲಿ ಗೆಲುವಿಗೆ 11 ರನ್‌ಗಳು ಬೇಕಾಗಿದ್ದವು.
ಗ್ರೀನ್ ಮೊದಲ ಎಸೆತದಲ್ಲೇ ಸಿಕ್ಸರ್ ಬಾರಿಸಿದರು. ಆಗ 5 ಎಸೆತಗಳಲ್ಲಿ 5 ರನ್‌ಗಳು ಅಗತ್ಯವಿತ್ತು. ಇದರ ಹೊರತಾಗಿಯೂ, ಪಂದ್ಯವು ಕೊನೆಯ ಎಸೆತವನ್ನು ತಲುಪಿತು. ಎರಡನೇ ಎಸೆತದಲ್ಲಿ ಒಂದು ರನ್, ಮೂರನೇ ಎಸೆತದಲ್ಲಿ ಡಬಲ್, ನಾಲ್ಕನೇ ಎಸೆತದಲ್ಲಿ ಒಂದು ರನ್, 5ನೇ ಎಸೆತವು ಡಾಟ್ ಆಗಿತ್ತು. ಇದರಿಂದಾಗಿ ಕೊನೆಯ ಎಸೆತದಲ್ಲಿ ಗೆಲುವಿಗೆ ಒಂದು ರನ್ ವಿತ್ತು. ಸ್ಟ್ರೈಕ್‌ನಲ್ಲಿದ್ದ ಗ್ರೀನ್ ಬೌಂಡರಿ ಬಾರಿಸಿ ನಮೀಬಿಯಾಕ್ಕೆ ಐತಿಹಾಸಿಕ ಗೆಲುವು ತಂದುಕೊಟ್ಟರು.
October 11, 2025 11:18 PM IST