Last Updated:
ವೆಸ್ಟ್ ಇಂಡೀಸ್ ವಿರುದ್ಧದ 2ನೇ ಟೆಸ್ಟ್ ಪಂದ್ಯವನ್ನ 7 ವಿಕೆಟ್ಗಳಿಂದ ಭಾರತ ತಂಡ 2 ಪಂದ್ಯಗಳ ಟೆಸ್ಟ್ ಸರಣಿಯಲ್ಲ 2-0ಯಲ್ಲಿ ಕ್ಲೀನ್ ಸ್ವೀಪ್ ಮಾಡಿದೆ.
ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದ ವೆಸ್ಟ್ ಇಂಡೀಸ್ (India vs West Indies) ವಿರುದ್ಧದ ಎರಡು ಟೆಸ್ಟ್ ಪಂದ್ಯಗಳ ಟೆಸ್ಟ್ ಸರಣಿಯ ಎರಡನೇ ಮತ್ತು ಅಂತಿಮ ಪಂದ್ಯದಲ್ಲಿ ಟೀಮ್ ಇಂಡಿಯಾ 7 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಸರಣಿಯನ್ನ 2-0ಯಲ್ಲಿ ಕ್ಲೀನ್ ಸ್ವೀಪ್ ಸಾಧಿಸಿದೆ. ಪಂದ್ಯದ ಐದನೇ ಮತ್ತು ಕೊನೆಯ ದಿನದಂದು ಗೆಲುವಿಗಾಗಿ ಕೇವಲ 58 ರನ್‌ಗಳಿಸಬೇಕಿತ್ತು. ನಿನ್ನೆ 1 ವಿಕೆಟ್ ಕಳೆದುಕೊಂಡು 63 ರನ್ಗಳಿಸಿತ್ತು. 5ನೇ ದಿನ ಮತ್ತೆರಡು ವಿಕೆಟ್ ಕಳೆದುಕೊಂಡಿತು. ಕನ್ನಡಿಗ ಕೆಎಲ್ ರಾಹುಲ್ ಅಜೇಯ ಅರ್ಧಶತಕ ಸಿಡಿಸಿ ಭಾರತಕ್ಕೆ ಗೆಲುವು ತಂದುಕೊಟ್ಟರು.
ಕೊನೆಯ ದಿನ ಬ್ಯಾಟಿಂಗ್ ಆರಂಭಿಸಿದ ಟೀಮ್ ಇಂಡಿಯಾ ನಿನ್ನೆಯ 63 ರನ್‌ಗಳಿಗೆ 25 ರನ್ ಸೇರಿಸಿತು. 4ನೇ ದಿನದಾಟದ ಅಂತ್ಯಕ್ಕೆ 30 ರನ್ಗಳಿಸಿ ಅಜೇಯರಾಗಿ ಉಳಿದಿದ್ದ ಸಾಯಿ ಸುದರ್ಶನ್ ಇಂದು ಕೇವಲ 7 ರನ್ಗಳಿಸಿ ವಿಕೆಟ್ ಒಪ್ಪಿಸಿದರು. 76 ಎಸೆತಗಳನ್ನೆದುರಿಸಿದ ಸಾಯಿ 5 ಬೌಂಡರಿಗಳ ಸಹಿತ 37 ರನ್ಗಳಿಸಿ ರೋಸ್ಟನ್ ಚೇಸ್ ಬೌಲಿಂಗ್ನಲ್ಲಿ ಹೋಪ್ಗೆ ಕ್ಯಾಚ್ ನೀಡಿ ಔಟ್ ಆದರು. ನಂತರ ಬಂದ ನಾಯಕ ಗಿಲ್ ಹೊಡಿ ಬಡಿ ಆಟಕ್ಕೆ ಮುಂದಾಗಿ ಕೇವಲ 15 ಎಸೆತಗಳಲ್ಲಿ ತಲಾ 1 ಬೌಂಡರಿ, ಸಿಕ್ಸರ್ ಸೇರಿ 13 ರನ್ಗಳಿಸಿ ಚೇಸ್ಗೆ 2ನೇ ಬಲಿಯಾದರು.
ಆದರೆ ಕೆಎಲ್ ರಾಹುಲ್ ಹಾಗೂ ಜುರೆಲ್ ಯಾವುದ ತಪ್ಪೆಸಗದೇ ಭಾರತವನ್ನ ಗೆಲುವಿನ ಗಡಿ ದಾಟಿಸಿದರು. ಆಕರ್ಷಕ ಬ್ಯಾಟಿಂಗ್ ಮಾಡಿದ ಕೆಎಲ್ ರಾಹುಲ್ 108 ಎಸೆತಗಳಲ್ಲಿ 6 ಬೌಂಡರಿ, 2 ಸಿಕ್ಸರ್ಗಳ ಸಹಿತ ಅಜೇಯ 58 ರನ್ಗಳಿಸಿದರೆ, ಜುರೆಲ್ 6 ಎಸೆತಗಳಲ್ಲಿ 6 ರನ್ಗಳಿಸಿ ತಂಡವನ್ನ ಗೆಲುವಿನ ಗಡಿ ದಾಟಿಸಿದರು.
ಈ ಟೆಸ್ಟ್ ಪಂದ್ಯವು ನಾಲ್ಕನೇ ದಿನದಂದು ಕೊನೆಗೊಳ್ಳಬೇಕಿತ್ತು, ಆದರೆ ವೆಸ್ಟ್ ಇಂಡೀಸ್ 10ನೇ ವಿಕೆಟ್ ತೋರಿದ ಅದ್ಭುತ ಬ್ಯಾಟಿಂಗ್‌ನಿಂದಾಗಿ, ಭಾರತ ತನ್ನ ಗೆಲುವಿಗಾಗಿ ಐದನೇ ದಿನಕ್ಕೆ ಹೋಗುವಂತಾಯಿತು. ಮೊದಲು ಬ್ಯಾಟಿಂಗ್ ಮಾಡಿದ ಭಾರತ 518 ರನ್‌ಗಳಿಗೆ ತಮ್ಮ ಇನ್ನಿಂಗ್ಸ್ ಅನ್ನು ಡಿಕ್ಲೇರ್ ಮಾಡಿತು, ಇದಕ್ಕೆ ಪ್ರತಿಕ್ರಿಯೆಯಾಗಿ ಪ್ರವಾಸಿ ತಂಡ ಮೊದಲ ಇನ್ನಿಂಗ್ಸ್ನಲ್ಲಿ 248 ರನ್‌ಗಳಿಗೆ ಆಲೌಟ್ ಆಯಿತು. ನಂತರ ಭಾರತ ಫಾಲೋ-ಆನ್ ಅನ್ನು ಜಾರಿಗೊಳಿಸಿತು. 2ನೇ ಇನ್ನಿಂಗ್ಸ್ನಲ್ಲಿ ಕೊಂಚ ಪ್ರತಿರೋಧ ತೋರಿದ ವೆಸ್ಟ್ ಇಂಡೀಸ್ ತಂಡ 390 ರನ್ ಗಳಿಸಿ ಭಾರತಕ್ಕೆ 121 ರನ್‌ಗಳ ಗುರಿಯನ್ನು ನೀಡಿತು. ಭಾರತ ಈ ಸಾಧಾರಣ ಗುರಿಯನ್ನ 3 ವಿಕೆಟ್ ಕಳೆದುಕೊಂಡು ಗೆಲುವು ಸಾಧಿಸಿತು.
October 14, 2025 10:43 AM IST