Last Updated:
ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟೆಸ್ಟ್ನಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆಯಲು ಕಾರಣವಾದ ಸಹ ಆಟಗಾರನ ಬಗ್ಗೆ ಕುಲ್ದೀಪ್ ಯಾದವ್ ಹೇಳಿದ್ದೇನು?
ಎರಡು ಟೆಸ್ಟ್ (Test) ಪಂದ್ಯಗಳಲ್ಲಿಯೂ ವೆಸ್ಟ್ ಇಂಡೀಸ್ ತಂಡವನ್ನು ಭಾರತ (India vs West Indies) ಸೋಲಿ ಸರಣಿಯನ್ನು 2-0 ಅಂತರದಲ್ಲಿ ವಶಪಡಿಸಿಕೊಂಡಿತು. ಶುಭಮನ್ ಗಿಲ್ (Shubman Gill) ನಾಯಕತ್ವದಲ್ಲಿ ಭಾರತಕ್ಕೆ ಇದು ಮೊದಲ ಟೆಸ್ಟ್ ಸರಣಿ (Test series) ಜಯ. ದೆಹಲಿಯ ಅರುಣ್ ಜೇಟ್ಲಿ (Arun Jaitley) ಕ್ರಿಕೆಟ್ (Cricket) ಸ್ಟೇಡಿಯಂನಲ್ಲಿ ನಡೆದ ಐದನೇ ಮತ್ತು ಕೊನೆಯ ದಿನದಂದು ಭಾರತ ತಂಡಕ್ಕೆ ಗೆಲ್ಲಲು 58 ರನ್ಗಳ ಅಗತ್ಯವಿತ್ತು. ಈ ಗುರಿಯನ್ನು ಮೊದಲ ಸೆಷನ್ನಲ್ಲಿಯೇ ಭಾರತ ಮುಟ್ಟಿತು. ಮೊದಲ ಇನ್ನಿಂಗ್ಸ್ನಲ್ಲಿ ಭಾರತ ಪರ 5 ವಿಕೆಟ್ ಸೇರಿದಂತೆ ಎರಡನೇ ಟೆಸ್ಟ್ನಲ್ಲಿ ಒಟ್ಟು 8 ವಿಕೆಟ್ ಕಬಳಿಸಿದ ಸ್ಪಿನ್ನರ್ (Spinner) ಕುಲ್ದೀಪ್ ಯಾದವ್ (Kuldeep Yadav) ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು. ಸ್ಟಾರ್ ಆಲ್ರೌಂಡರ್ ರವೀಂದ್ರ ಜಡೇಜಾ (Ravindra Jadeja) ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಪಡೆದ ಕುಲ್ದೀಪ್ ಯಾದವ್ ತಮ್ಮ ಅದ್ಭುತ ಪ್ರದರ್ಶನದ ಹಿಂದಿನ ಅಸಲಿ ಕಾರಣವನ್ನು ಬಿಚ್ಚಿಟ್ಟರು. ಈ ಆಟಗಾರನಿಂದ ಯಾವಗಲೂ ಉತ್ತಮ ಸಲಹೆಗಳನ್ನು ಪಡೆಯುತ್ತೇನೆ ಎಂದು ತಮ್ಮ ಅದ್ಭುತ ಫಾರ್ಮ್ಗೆ ಕಾರಣವಾದವರ ಬಗ್ಗೆ ಕುಲ್ದೀಪ್ ಯಾದವ್ ಮಾತನಾಡಿದರು.
ಪಂದ್ಯದ ನಂತರ ಮಾತನಾಡಿದ ಕುಲ್ದೀಪ್ ಯಾದವ್ ಅವರು ರವೀಂದ್ರ ಜಡೇಜಾ ಅವರನ್ನು ಹೊಗಳಿದರು. ಜಡೇಜಾ ನಮ್ಮ ಜೊತೆಗಿರುವುದು ಬಹಳ ಸಂತೋಷ ತಂದಿದೆ. ಅವರು ಯಾವಗಲೂ ಕಷ್ಟಕರ ಸಂದರ್ಭಗಳಲ್ಲಿ ನನಗೆ ಮಾರ್ಗದರ್ಶನ ನೀಡುತ್ತಾರೆ. ಅವರಿಂದ ನಾನು ಬಹಳಷ್ಟು ಕಲಿಯುತ್ತಿದ್ದೇನೆ. ಅವರೊಂದಿಗೆ ನಾನು ತಂಡದಲ್ಲಿರುವುದು ತುಂಬಾ ಸಹಾಯಕವಾಗಿದೆ ಎಂದು ಜಡೇಜಾ ಬಗ್ಗೆ ಗುಣಗಾನ ಮಾಡಿದರು.
ದೆಹಲಿಯ ಅರುಣ್ ಜೇಟ್ಲಿ ಮೈದಾನದ ಪಿಚ್ ಟೆಸ್ಟ್ ಕ್ರಿಕೆಟ್ಗೆ ಸಂಪೂರ್ಣ ಭಿನ್ನವಾಗಿತ್ತು. ಹಲವು ಓವರ್ಗಳನ್ನು ಬೌಲಿಂಗ್ ಮಾಡುವುದು ಒಂದು ಸವಾಲಾಗಿತ್ತು. ಪಿಚ್ ತುಂಬಾ ಒಣಗಿದ ಕಾರಣ ಬೌಲಿಂಗ್ ಮಾಡುವುದು ಸ್ವಲ್ಪ ಕಷ್ಟವೆನಿಸಿತು. ಆದರೆ ನಾನು ಬೌಲಿಂಗ್ ಮಾಡುವುದನ್ನು ಆನಂದಿಸಿದೆ. ಸತತವಾಗಿ ಆಡುವುದು ಯಾವಾಗಲೂ ಖುಷಿ ಕೊಡುತ್ತದೆ ಎಂದು ಪಿಚ್ ಬಗ್ಗೆ ಕುಲ್ದೀಪ್ ಯಾದವ್ ಹೇಳಿದ್ದಾರೆ.
ದೆಹಲಿ ಟೆಸ್ಟ್ ಪಂದ್ಯದಲ್ಲಿ ಕುಲ್ದೀಪ್ ಯಾದವ್ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದರು. ಕುಲ್ದೀಪ್ ಮೊದಲ ಇನ್ನಿಂಗ್ಸ್ನಲ್ಲಿ 82 ರನ್ಗಳಿಗೆ 5 ವಿಕೆಟ್ ಪಡೆದರು. ಇದು ಟೆಸ್ಟ್ ಕ್ರಿಕೆಟ್ರನಲ್ಲಿ 5ನೇ ಬಾರಿಗೆ ಐದು ವಿಕೆಟ್ ಪಡೆದ ಸಾಧನೆಯಾಯಿತು. ಎರಡನೇ ಇನ್ನಿಂಗ್ಸ್ನಲ್ಲಿಯೂ ಕುಲ್ದೀಪ್ ಉತ್ತಮ ಬೌಲಿಂಗ್ ಮಾಡಿದರು. 104 ರನ್ಗಳಿಗೆ 3 ವಿಕೆಟ್ ಕಬಳಿಸಿದರು. ಈ ಮೂಲಕ ಅವರು ಒಟ್ಟು 8 ವಿಕೆಟ್ ಪಡೆದು ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.
October 14, 2025 6:07 PM IST