Last Updated:
ಆಸ್ಟ್ರೇಲಿಯಾ ಪ್ರವಾಸಕ್ಕೆ ಸೆಲೆಕ್ಟ್ ಆಗದ ಆಟಗಾರರಿಗೆ ಟೀಮ್ ಇಂಡಿಯಾ ಹೆಡ್ಕೋಚ್ ಗೌತಮ್ ಗಂಭೀರ್ ವಾರ್ನಿಂಗ್ ಕೊಟ್ಟಿದ್ದಾರೆ. ಏನಿದು ಗಂಭೀರ್ ವಾರ್ನಿಂಗ್? ಎಂಬುದು ಬಗ್ಗೆ ಇಲ್ಲಿದೆ ಮಾಹಿತಿ.
ವೆಸ್ಟ್ ಇಂಡೀಸ್ (West Indies) ವಿರುದ್ಧದ ಟೆಸ್ಟ್ ಸರಣಿ (Test series)ಯನ್ನು ಭಾರತ (Team India) 2-0 ಅಂತರದಲ್ಲಿ ಗೆದ್ದು ಬೀಗಿದೆ. ಶುಭಮನ್ ಗಿಲ್ (Shubman Gill) ನಾಯಕತ್ವದಲ್ಲಿ ಭಾರತ ತಂಡ ಮೊದಲ ಟೆಸ್ಟ್ ಸರಣಿ ಗೆಲುವು ಇದಾಗಿದೆ. ಭಾರತ ತಂಡಕ್ಕೆ ಮುಂದಿನ ಗುರಿ ಆಸ್ಟ್ರೇಲಿಯಾ (Australia) ವಿರುದ್ಧ ಏಕದಿನ ಸರಣಿ (ODI series)ಯಾಗಿದ್ದು, ಇದರಲ್ಲಿ ರೋಹಿತ್ ಶರ್ಮಾ (Rohit Sharma) ಮತ್ತು ವಿರಾಟ್ ಕೊಹ್ಲಿ(Virat Kohli) ಕೂಡ ಭಾಗವಹಿಸಲಿದ್ದಾರೆ. ಆದಾಗ್ಯೂ, ಸರಣಿಗೆ ಹೊರಡುವ ಮೊದಲು, ಟೀಮ್ ಇಂಡಿಯಾ ಹೆಡ್ ಕೋಚ್ (Head coach) ಗೌತಮ್ ಗಂಭೀರ್ (Gautam Gambhir) ಆಟಗಾರರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ಅಕ್ಟೋಬರ್ 19 ರಂದು ಟೀಮ್ ಇಂಡಿಯಾ ಮೊದಲ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು ಎದುರಿಸಲಿದೆ.
ವೆಸ್ಟ್ ಇಂಡೀಸ್ ವಿರುದ್ಧದ ಗೆಲುವಿನ ನಂತರ ಟೀಮ್ ಇಂಡಿಯಾ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ (ಡಬ್ಲ್ಯೂಟಿಸಿ) ಪಾಯಿಂಟ್ಗಳ ಪಟ್ಟಿಯಲ್ಲಿ ತನ್ನ ಸ್ಥಾನವನ್ನು ಬಲಪಡಿಸಿಕೊಂಡಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿ ಗೆಲುವಿನ ಮೇಲೆ ಟೀಮ್ ಇಂಡಿಯಾ ಕಣ್ಣಿಟ್ಟಿದೆ. ಗಂಭೀರ್ ನೇತೃತ್ವದಲ್ಲಿ ಭಾರತ ತಂಡ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯನ್ನು ಗೆಲ್ಲುವ ಅಗತ್ಯವಿದೆ. ಇದಕ್ಕಾಗಿ ಆಸ್ಟ್ರೇಲಿಯಾ ಪ್ರವಾಸಕ್ಕೆ ಸೆಲೆಕ್ಟ್ ಆಗದ ಟೀಮ್ ಇಂಡಿಯಾ ಆಟಗಾರರಿಗೆ ಗೌತಮ್ ಗಂಭೀರ್ ವಿಶೇಷ ಸೂಚನೆ ಕೊಟ್ಟಿದ್ದಾರೆ.
ಆಸ್ಟ್ರೇಲಿಯಾ ಪ್ರವಾಸಕ್ಕೆ ಸೆಲೆಕ್ಟ್ ಆಗದ ಟೀಮ್ ಇಂಡಿಯಾ ಆಟಗಾರರು ಸೆಂಟರ್ ಆಫ್ ಎಕ್ಸಲೆನ್ಸ್ನಲ್ಲಿ ಅಭ್ಯಾಸ ಮಾಡುವ ಬದಲು ರಣಜಿ ಟ್ರೋಫಿಯನ್ನು ಆಡುವಂತೆ ಗೌತಮ್ ಗಂಭೀರ್ ಸಲಹೆ ನೀಡಿದ್ದಾರೆ. ಟೆಸ್ಟ್ ತಂಡದ ಭಾಗವಾಗಿದ್ದ ಆದರೆ ಆಸ್ಟ್ರೇಲಿಯಾ ಪ್ರವಾಸದ ಭಾಗವಾಗಿರದ ಎಲ್ಲಾ ಆಟಗಾರರು ರಣಜಿ ಟ್ರೋಫಿಯನ್ನು ಆಡಲೇಬೇಕಾಗಿದೆ. ಸೂಚನೆಯನ್ನು ಪಾಲಿಸದ ಆಟಗಾರರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಎಚ್ಚರಿಕೆ ನೀಡಲಾಗಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯು ನವೆಂಬರ್ 14 ರಂದು ಪ್ರಾರಂಭವಾಗಲಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಗೌತಮ್ ಗಂಭೀರ್, ಟೀಮ್ ಇಂಡಿಯಾದ ಬಿಡುವಿಲ್ಲದ ವೇಳಾಪಟ್ಟಿಯ ಹಿಂದಿರುವ ಆಸಲಿ ಕಾರಣವನ್ನು ವಿವರಿಸಿದರು. “ಕೆಲವೊಮ್ಮೆ ಇದು ಸುಲಭವಲ್ಲ, ಆದರೆ ವೃತ್ತಿಪರತೆ ಎಂದರೆ ಅದೇ. ಆಟಗಾರರು ತಮ್ಮ ರಜೆಯ ದಿನಗಳನ್ನು ಸದುಪಯೋಗಪಡಿಸಿಕೊಳ್ಳಲು ಪ್ರಯತ್ನಿಸಬೇಕು. ಏಕದಿನ, ಟಿ20 ಮತ್ತು ನಂತರ ಟೆಸ್ಟ್ ಕ್ರಿಕೆಟ್ ಆಡುವುದು ತುಂಬಾ ಕಷ್ಟ ಎಂದು ನಮಗೆ ತಿಳಿದಿದೆ ಎಂದು ಹೇಳಿದರು.
ಮುಂದಿನ ಸರಣಿಗಳಿಗೆ ತಮ್ಮ ಸಿದ್ಧತೆಗಳ ಬಗ್ಗೆ ಮಾತನಾಡಿದ ಗಂಭೀರ್, “ಟೆಸ್ಟ್ ತಂಡದ ಭಾಗವಾಗಿರುವ ಆಟಗಾರರಿಗೆ, ದೇಶೀಯ ಕ್ರಿಕೆಟ್ಗೆ ಸಿದ್ಧತೆ ನಡೆಸುವುದು ಮತ್ತು ಆಡುವುದು ನಿರ್ಣಾಯಕ. ಕೇವಲ ಸಿಒಇಗೆ ಹೋಗಿ ತಮ್ಮ ಸಾಮರ್ಥ್ಯದ ಮೇಲೆ ಕೆಲಸ ಮಾಡುವ ಬದಲು, ಟೆಸ್ಟ್ ಪಂದ್ಯಗಳನ್ನು ಆಡುವುದು ಹೆಚ್ಚು ಪ್ರಯೋಜನಕಾರಿಯಾಗಿದೆ ಅಂದುಕೊಂಡಿದ್ದೇನೆ ಎಂದು ತಿಳಿಸಿದರು. ರವೀಂದ್ರ ಜಡೇಜಾ, ಸಾಯಿ ಸುದರ್ಶನ್ ಮತ್ತು ಎನ್. ಜಗದೀಶನ್ ಸೇರಿದಂತೆ ಕೆಲವು ಆಟಗಾರರು ಆಸ್ಟ್ರೇಲಿಯಾ ಪ್ರವಾಸಕ್ಕೆ ಹೋಗುತ್ತಿಲ್ಲ. ಈ ಎಲ್ಲಾ ಆಟಗಾರರು ರಣಜಿ ಟ್ರೋಫಿಯಲ್ಲಿ ಆಡಲಿದ್ದಾರೆ.
October 14, 2025 11:33 PM IST