ಸಲೀಲ್ ಅಂಕೋಲಾ ವೃತ್ತಿಜೀವನದ ಹಲವು ತಿರುವುಗಳನ್ನು ಪಡೆದುಕೊಂಡಿತ್ತು. ಹಲವು ಬಾರಿ ತಂಡದ ಆಡುವ ಅವಕಾಶ ಸಿಕ್ಕಾಗಲೂ ತಮ್ಮ ಸಾಮರ್ಥ್ಯವನ್ನು ತೋರಿಸಿದ್ದರು. ಆದರೆ ಸಲೀಲ್ ಅಂಕೋಲಾ ವೃತ್ತಿಜೀವನ ಕ್ರಿಕೆಟ್ಗೆ ಮಾತ್ರ ಸೀಮಿತವಾಗಿರಲಿಲ್ಲ.
ಸಲೀಲ್ ಅಂಕೋಲಾ 1968 ರಲ್ಲಿ ಕರ್ನಾಟಕದ ಅಂಕೋಲಾದ ಕೊಂಕಣಿ ಕುಟುಂಬದಲ್ಲಿ ಜನಿಸಿದರು. ನಂತರ ಅಂಕೋಲಾ ಕುಟುಂಬ ಪುಣೆಗೆ ಬಂದರು. ಹೀಗಾಗಿ ಸಲೀಲ್ ಅವರು ಪುಣೆಯಲ್ಲಿ ತಮ್ಮ ಬಾಲ್ಯವನ್ನು ಕಳೆದರು. ಆದರೆ, ಸಲೀಲ್ ದೇಶೀಯ ಕ್ರಿಕೆಟ್ನಲ್ಲಿ ಮಹಾರಾಷ್ಟ್ರವನ್ನು ಪ್ರತಿನಿಧಿಸಿದರು. 20ನೇ ವಯಸ್ಸಿನಲ್ಲಿ ಅವರು ತಮ್ಮ ಪ್ರಥಮ ದರ್ಜೆ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದರು.
ಈ ಪಂದ್ಯದಲ್ಲಿ 43 ರನ್ಗಳನ್ನು ಗಳಿಸುವ ಮೂಲಕ ಮೊದಲ ಬಾರಿಗೆ ಹ್ಯಾಟ್ರಿಕ್ ವಿಕೆಟ್ ಪಡೆದು ಮಿಂಚಿದ್ದರು. ಈ ವರ್ಷದ ಆವೃತ್ತಿಯ ಅಂತ್ಯದ ವೇಳೆಗೆ, ಅವರು 27 ವಿಕೆಟ್ಗಳನ್ನು ಪಡೆದುಕೊಂಡಿದ್ದರು. ಈ ಪ್ರದರ್ಶನದಿಂದಾಗಿ ಅವರು 1989 ರ ಪಾಕಿಸ್ತಾನ ಪ್ರವಾಸದ ಭಾರತ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದರು.
ಪಾಕಿಸ್ತಾನ ಪ್ರವಾಸವು ಕ್ರಿಕೆಟ್ ಜಗತ್ತಿಗೆ ಇಬ್ಬರು ಸ್ಟಾರ್ ಆಟಗಾರರನ್ನು ಕೊಡುಗೆಯಾಗಿ ಕೊಟ್ಟಿತ್ತು. ಸಚಿನ್ ತೆಂಡೂಲ್ಕರ್ ಮತ್ತು ವಕಾರ್ ಯೂನಿಸ್ ತಮ್ಮ ಚೊಚ್ಚಲ ಪಂದ್ಯದಲ್ಲಿ ಎಲ್ಲರ ಗಮನ ಸೆಳೆದಿದ್ದರು. ಈ ಟೆಸ್ಟ್ ಪಂದ್ಯದಲ್ಲಿ ಸಲೀಲ್ ಕೂಡ ತಮ್ಮ ಮೊದಲ ಟೆಸ್ಟ್ ಆಡಿದ್ದರು. ಉತ್ತಮ ಬೌಲಿಂಗ್ ಪ್ರದರ್ಶನದ ಮೂಲಕ ಎರಡು ವಿಕೆಟ್ಗಳನ್ನು ಪಡೆದಿದ್ದರು. ದುರದೃಷ್ಟವಶಾತ್, ಗಾಯದಿಂದಾಗಿ ಅವರು ಸರಣಿಯ ಉಳಿದ ಪಂದ್ಯಗಳಿಂದ ಹೊರಗುಳಿಬೇಕಾಯಿತು.
ಡಿಸೆಂಬರ್ 1989 ರಲ್ಲಿ ಸಲೀಲ್ ಅವರು ಗುಜ್ರನ್ವಾಲಾದಲ್ಲಿ ತಮ್ಮ ಚೊಚ್ಚಲ ಏಕದಿನ ಪಂದ್ಯವನ್ನು ಆಡಿದರು. ಕೆಟ್ಟ ಬೆಳಕಿನ ಕಾರಣ ಪಂದ್ಯವನ್ನು ಮೊಟಕುಗೊಳಿಸಲಾಯಿತು. ಆದರೆ ಸಲೀಲ್ ಎದುರಿಸಿದ ಮೊದಲ ಎಸೆತದಲ್ಲೇ ಸಿಕ್ಸರ್ ಬಾರಿಸುವ ಮೂಲಕ ಸಂಚಲನ ಮೂಡಿಸಿದ್ದರು. ಅವರು ತಮ್ಮ ಕಠಿಣ ಪರಿಶ್ರಮ ಮುಂದುವರಿಸಿದರು. ಅವಕಾಶ ಸಿಕ್ಕಾಗಲೆಲ್ಲಾ ಗಮನಾರ್ಹ ಪ್ರದರ್ಶನ ನೀಡುತ್ತಾ ಬಂದರು.
1993 ರಲ್ಲಿ ಮೊಹಾಲಿಯಲ್ಲಿ ಸಲೀಲ್ ಅವರಿಂದ ಅತ್ಯುತ್ತಮ ಪ್ರದರ್ಶನ ಬಂದಿತ್ತು. ದಕ್ಷಿಣ ಆಫ್ರಿಕಾ ವಿರುದ್ಧ 33 ರನ್ಗಳಿಗೆ ಮೂರು ವಿಕೆಟ್ಗಳನ್ನು ಪಡೆದು ಭಾರತವನ್ನು ಗೆಲುವಿಗೆ ಕಾರಣವಾಗಿದ್ದರು. ಆದಾಗ್ಯೂ, ಆ ಕಾಲದ ಅನೇಕ ವೇಗದ ಬೌಲರ್ಗಳಂತೆ, ಅವರ ದೇಹವು ಕೆಲಸದ ಹೊರೆಯನ್ನು ತಡೆದುಕೊಳ್ಳಲಿಲ್ಲ. ಹೀಗಾಗಿ ದೀರ್ಘಕಾಲದ ಗಾಯಗಳು ಅವರನ್ನು ತಂಡದಿಂದ ಆಗಾಗ್ಗೆ ಹೊರಗುಳಿಯುವಂತೆ ಮಾಡಿತು.
ಸಲೀಲ್ ಅಂಕೋಲಾ 1996 ರ ವಿಶ್ವಕಪ್ ಭಾರತ ತಂಡದಲ್ಲಿದ್ದರು. ಫಿರೋಜ್ ಷಾ ಕೋಟ್ಲಾದಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಸಲೀಲ್ ಆಡಿದರು. ಅವರು ವಿಕೆಟ್ ಪಡೆಯದಿದ್ದರೂ, ಶ್ರೀಲಂಕಾ ವಿರುದ್ಧ ಪರಿಣಾಮಕಾರಿಯಾಗಿ ಬೌಲಿಂಗ್ ಮಾಡಿದ್ದರು. ಆದರೆ ಸಲೀಲ್ ಅವರಿಗೆ ಅವಕಾಶಗಳು ಸತತವಾಗಿ ಸಿಗಲಿಲ್ಲ. ಪರಿಣಾಮ ಒಂದು ವರ್ಷದೊಳಗೆ ಅವರ ಅಂತಾರಾಷ್ಟ್ರೀಯ ವೃತ್ತಿಜೀವನ ಕೊನೆಗೊಂಡಿತು.
ಸಲೀಲ್ ಅಂಕೋಲಾ ಅವರಿಗೆ ಕ್ರಿಕೆಟ್ ನಂತರದ ಜೀವನ ನಿಲ್ಲಲಿಲ್ಲ. ಅದು ಬೇರೆಯದೇ ತಿರುವು ಪಡೆದುಕೊಂಡಿತು. ಅವರು ಕ್ರಿಕೆಟ್ನಿಂದ ನಿವೃತ್ತರಾದ ಅದೇ ವರ್ಷದಲ್ಲಿ ಅವರು ನಟನೆಯಲ್ಲಿ ಹೊಸ ದಿಕ್ಕನ್ನು ಕಂಡುಕೊಂಡರು. ದೂರದರ್ಶನದಲ್ಲಿ ಅವರ ಮೊದಲ ಜೀ ಟಿವಿ ಕಾರ್ಯಕ್ರಮ ಚಾಹತ್ ಔರ್ ನಫ್ರತ್ನೊಂದಿಗೆ ಬಂದಿತು.
ಬಳಿಕ ಅವರು ಸ್ಟಾರ್ ಪ್ಲಸ್ನಲ್ಲಿ ಕೋರಾ ಕಾಗಜ್ನಲ್ಲಿ ಕಾಣಿಸಿಕೊಂಡರು. ಇದು ಅವರನ್ನು ಭಾರತದಾದ್ಯಂತ ವೀಕ್ಷಕರಿಗೆ ಪರಿಚಿತರನ್ನಾಗಿ ಮಾಡಿತು. ನಂತರದ ವರ್ಷಗಳಲ್ಲಿ ಸಲೀಲ್ ಕುರುಕ್ಷೇತ್ರ, ಪಿತಾಹ್, ಮತ್ತು ಚುರಾ ಲಿಯಾ ಹೈ ತುಮ್ನೆ ಸೇರಿದಂತೆ ಹಲವು ಪ್ರಸಿದ್ಧ ಧಾರಾವಾಹಿಗಳು ಮತ್ತು ಚಲನಚಿತ್ರಗಳಲ್ಲಿ ನಟಿಸಿದರು.
ನಟನಾ ಕ್ಷೇತ್ರದಲ್ಲಿದ್ದರೂ ಕ್ರಿಕೆಟ್ ಅವರ ಕೈಬಿಡಲಿಲ್ಲ. 2020 ರಲ್ಲಿ ಸಲೀಲ್ ಅಂಕೋಲಾ ಅವರು ಮುಂಬೈ ಕ್ರಿಕೆಟ್ ಅಸೋಸಿಯೇಷನ್ನ ಮುಖ್ಯ ಆಯ್ಕೆದಾರರಾಗಿ ಅಧಿಕಾರ ವಹಿಸಿಕೊಂಡರು. ಈ ಮೂಲಕ ಕ್ರಿಕೆಟ್ ಮೈದಾನಕ್ಕೆ ಮರಳಿದ್ದರು. ನಂತರ 2023 ರಲ್ಲಿ, ಅವರನ್ನು ಭಾರತದ ರಾಷ್ಟ್ರೀಯ ಆಯ್ಕೆ ಸಮಿತಿಗೆ ಹೆಸರಿಸಲಾಯಿತು.
October 15, 2025 5:12 PM IST
ಸಚಿನ್ ತೆಂಡೂಲ್ಕರ್ ಜೊತೆ ವೃತ್ತಿ ಜೀವನ ಆರಂಭಿಸಿದ್ದ ಸಲೀಲ್ ಅಂಕೋಲಾ ಯಾರು? ಅವರ ಏಳು ಬೀಳಿನ ಪ್ರಯಾಣದಿಂದ ತಿಳಿದುಕೊಳ್ಳಬೇಕಾದ್ದೇನು?