Last Updated:
ಕಾಮನ್ವೆಲ್ತ್ ಕ್ರೀಡಾ ಕಾರ್ಯಕಾರಿ ಮಂಡಳಿಯ ಸಭೆಯ ನಂತರ ಪ್ರಸ್ತಾವಿತ ಆತಿಥೇಯ ನಗರವಾಗಿ ಕ್ರೀಡಾಕೂಟ ಆಯೋಜಿಸಲುs ಅಹಮದಾಬಾದ್ ಅನ್ನು ಶಿಫಾರಸು ಮಾಡಲಾಗಿದೆ.
ಭಾರತ (India)ವು ಒಲಿಂಪಿಕ್ಸ್ (Olympics) 2036 ರ ಕ್ರೀಡಾಕೂಟವನ್ನು ಆಯೋಜಿಸುವ ಮಹತ್ವಾಕಾಂಕ್ಷೆಯಲ್ಲಿದೆ. ಇದಕ್ಕೂ ಮುನ್ನ ಭಾರತವು 2030 ರ ಕಾಮನ್ವೆಲ್ತ್ (Commonwealth) ಕ್ರೀಡಾಕೂಟವನ್ನು ಆಯೋಜಿಸಲು ಸಜ್ಜಾಗಿದ್ದು, ಶತಮಾನೋತ್ಸವದ ಆವೃತ್ತಿಗೆ ಅಹಮದಾಬಾದ್ (Ahmedabad) ಆತಿಥ್ಯ ವಹಿಸಲಿದೆ. ಬುಧವಾರ ನಡೆದ ಕಾಮನ್‌ವೆಲ್ತ್ ಕ್ರೀಡಾ ಕಾರ್ಯಕಾರಿ ಮಂಡಳಿಯ ಸಭೆಯ ನಂತರ ಪ್ರಸ್ತಾವಿತ ಆತಿಥೇಯ ನಗರವಾಗಿ ಅಹಮದಾಬಾದ್ ಅನ್ನು ಶಿಫಾರಸು ಮಾಡಲಾಯಿತು. ಸ್ಕಾಟ್ಲೆಂಡ್‌ನ ಗ್ಲಾಸ್ಗೋದಲ್ಲಿ ನವೆಂಬರ್ 26 ರಂದು ನಡೆಯಲಿರುವ ಸಾಮಾನ್ಯ ಸಭೆಯಲ್ಲಿ ಅಹಮದಾಬಾದ್ ನಗರವನ್ನು ಪೂರ್ಣ ಕಾಮನ್‌ವೆಲ್ತ್ ಕ್ರೀಡಾ ಸದಸ್ಯತ್ವಕ್ಕೆ ಮುಂದಿಡಲಾಗುವುದು ಎಂದು ಕಾಮನ್‌ವೆಲ್ತ್ ಕ್ರೀಡಾ ಕಾರ್ಯಕಾರಿ ಮಂಡಳಿ ತನ್ನ ಪತ್ರಿಕಾ ಹೇಳಿಕೆ ಮಾಹಿತಿ ನೀಡಿದೆ.
ಭಾರತ ಕೊನೆಯ ಬಾರಿಗೆ 2010 ರಲ್ಲಿ ಕಾಮನ್‌ವೆಲ್ತ್ ಕ್ರೀಡಾಕೂಟವನ್ನು ಆಯೋಜಿಸಿತ್ತು. ದೆಹಲಿಯಲ್ಲಿ ನಡೆದ ಕ್ರೀಡಾಕೂಟವು ಕಳಪೆ ಯೋಜನೆ, ಮೂಲಸೌಕರ್ಯಗಳನ್ನು ಪೂರ್ಣಗೊಳಿಸುವಲ್ಲಿ ವಿಳಂಬ ಮತ್ತು ಭ್ರಷ್ಟಾಚಾರದ ಆರೋಪಗಳಿಂದ ಸಂಪೂರ್ಣವಾಗಿ ಹಾಳಾಗಿತ್ತು. ಮುಂಬರುವ 2030 ರ ಕಾಮನ್ವೆಲ್ತ್ ಕ್ರೀಡಾಕೂಟವನ್ನು ಆಯೋಜಿಸಲು ಭಾರತವು ಈಗ ಎಲ್ಲಾ ರೀತಿಯಲ್ಲೂ ಸಿದ್ಧತೆ ನಡೆಸುತ್ತಿದೆ.
ಇದೇ ವೇಳೆ ಮಾತನಾಡಿರುವ ಭಾರತೀಯ ಒಲಿಂಪಿಕ್ ಅಸೋಸಿಯೇಷನ್‌ನ ಅಧ್ಯಕ್ಷೆ ಪಿ.ಟಿ ಉಷಾ ಸಂತಸ ವ್ಯಕ್ತಪಡಿಸಿದ್ದಾರೆ. ಕಾಮನ್‌ವೆಲ್ತ್ ಶತಮಾನೋತ್ಸವ ಕ್ರೀಡಾಕೂಟವನ್ನು ಆಯೋಜಿಸುವುದು ದೇಶಕ್ಕೆ ‘ಅಸಾಧಾರಣ ಗೌರವ’ ಎಂದು ಹೇಳಿದ್ದಾರೆ. ಕಾಮನ್‌ವೆಲ್ತ್ ಕ್ರೀಡಾಕೂಟವು ಭಾರತದ ವಿಶ್ವ ದರ್ಜೆಯ ಕ್ರೀಡಾ ಮತ್ತು ಕ್ರೀಡಾಕೂಟದ ಸಾಮರ್ಥ್ಯಗಳನ್ನು ಪ್ರದರ್ಶಿಸುವುದಲ್ಲದೆ, 2047 ರ ವಿಕ್ಷಿತ್ ಭಾರತ್ ಕಡೆಗೆ ನಮ್ಮ ರಾಷ್ಟ್ರೀಯ ಪ್ರಯಾಣದಲ್ಲಿ ಅರ್ಥಪೂರ್ಣ ಪಾತ್ರವನ್ನು ವಹಿಸುತ್ತದೆ. ನಮ್ಮ ಯುವಕರಿಗೆ ಸ್ಫೂರ್ತಿ ನೀಡಲು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಂಬಂಧಗಳನ್ನು ಬಲಪಡಿಸಲು 2030 ರ ಕ್ರೀಡಾಕೂಟ ಉತ್ತಮ ಅವಕಾಶವೆಂದು ನೋಡುತ್ತೇವೆ ಎಂದು ಪಿ.ಟಿ ಉಷಾ ತಿಳಿಸಿದ್ದಾರೆ.
ಅಹಮದಾಬಾದ್ ಮತ್ತು ನೈಜೀರಿಯಾದ ರಾಜಧಾನಿ ಅಬುಜಾ ನಗರಗಳು ಮಾತ್ರ ಕಾಮನ್‌ವೆಲ್ತ್ ಶತಮಾನೋತ್ಸವ ಕ್ರೀಡಾಕೂಟವನ್ನು ಆಯೋಜಿಸಲು ಸ್ಪರ್ಧಿಗಳಿವೆ. 2022 ರ ಕಾಮನ್ವೆಲ್ತ್ ಕ್ರೀಡಾಕೂಟವನ್ನು ದಕ್ಷಿಣ ಆಫ್ರಿಕಾದ ಡರ್ಬನ್‌ನಲ್ಲಿ ನಡೆಸಲು ನಿರ್ಧರಿಸಲಾಗಿತ್ತು. ಆದರೆ ಆರ್ಥಿಕ ಅಡಚಣೆಗಳಿಂದಾಗಿ ದಕ್ಷಿಣ ಆಫ್ರಿಕಾ ಹಿಂದೆ ಸರಿಯಿತು. ನಂತರ ಬರ್ಮಿಂಗ್ಹ್ಯಾಮ್ ನಗರದಲ್ಲಿ ಕ್ರೀಡಾಕೂಟವನ್ನು ಆಯೋಜಿಸಲಾಗಿತ್ತು.
ಅದೇ ರೀತಿ 2026 ರ ಕ್ರೀಡಾಕೂಟವನ್ನು ಆಸ್ಟ್ರೇಲಿಯಾದ ವಿಕ್ಟೋರಿಯಾದಲ್ಲಿ ನಡೆಸಬೇಕಿತ್ತು. ಆದಾಗ್ಯೂ, ಅವರು ಕೂಡ ಹಿಂದೆ ಸರಿದಿದ್ದರು. ಭಾರತವು 2030 ರ ಕಾಮನ್ವೆಲ್ತ್ ಕ್ರೀಡಾಕೂಟವನ್ನು ಯಶಸ್ವಿಯಾಗಿ ಆಯೋಜಿಸುವ ಮೂಲಕ 2036 ರ ಒಲಿಂಪಿಕ್ಸ್‌ಗೆ ಆತಿಥ್ಯವಹಿಸುವ ಅವಕಾಶ ಪಡೆದುಕೊಳ್ಳಲು ಎದುರು ನೋಡುತ್ತಿದೆ.
October 15, 2025 9:00 PM IST