Last Updated:
ಮಂಗಳೂರಿನಲ್ಲಿ ಬ್ಲೂಬೆರಿ ಹಿಲ್ಸ್‌ನಲ್ಲಿ IT ಪಾರ್ಕ್ ಅಭಿವೃದ್ಧಿಗೆ ಕಿಯೋನಿಕ್ಸ್ ಟೆಂಡರ್ ಪ್ರಕ್ರಿಯೆ ಶೀಘ್ರ ಆರಂಭ, ಪಿಪಿಪಿ ಮಾದರಿಯಲ್ಲಿ 30+30 ವರ್ಷಗಳ ಲೀಸ್ ಯೋಜನೆ.
ಮಂಗಳೂರು: ಕರ್ನಾಟಕ ರಾಜ್ಯದ (Karnataka) ಎರಡನೇ ಐಟಿ ಕೇಂದ್ರವಾಗಿ ಮಂಗಳೂರು ಅಭಿವೃದ್ಧಿಯಾಗಲು ದೊಡ್ಡ ವೇದಿಕೆ ಸಿದ್ಧವಾಗುವ ಹಂತದಲ್ಲಿದೆ. ಎಲ್ಲವೂ ಅಂದುಕೊಂಡಂತೆ ಆದಲ್ಲಿ ಮುಂದಿನ ಕೆಲವೇ ತಿಂಗಳಲ್ಲಿ ಮಂಗಳೂರಿನಲ್ಲಿ (Mangaluru) ಐಟಿ ಪಾರ್ಕ್ ಕಾರ್ಯಾರಂಭಗೊಳ್ಳಲಿದೆ. ಇದು ನಗರದ ಐಟಿ (IT) ವಲಯದಲ್ಲಿ ಉದ್ಯೋಗದಲ್ಲಿರುವವರಿಗೆ ಹೊಸ ನಿರೀಕ್ಷೆ ಮೂಡಿಸಿದೆ.
ದೇಶದಲ್ಲಿ ಬೆಂಗಳೂರು, ಪುಣೆ ಬಿಟ್ಟರೆ ಮಂಗಳೂರು ಐಟಿ ಕಂಪೆನಿಗಳ ಮೆಚ್ಚಿನ ತಾಣವಾಗಿ ಪರಿಗಣಿಸಲ್ಪಟ್ಟಿತ್ತು. ಸರಕಾರ 2ನೇ ಹಂತದ ನಗರಗಳಲ್ಲಿ ಐಟಿ ಅಭಿವೃದ್ಧಿಗೆ ಮಂಗಳೂರನ್ನು ಮೊದಲ ಆದ್ಯತೆಯಾಗಿ ಗುರುತಿಸಿದೆ. ಕೆಲವು ಕಂಪೆನಿಗಳು ಮಂಗಳೂರಿನಲ್ಲಿ ಕಾರ್ಯಕ್ಷೇತ್ರ ಹೊಂದಿದ್ದರೂ ಸರಕಾರದ ನಿರ್ಲಕ್ಷ್ಯದಿಂದಾಗಿ ಐಟಿ ಹಬ್ ಸ್ವರೂಪ ಪಡೆಯಲು ಮಂಗಳೂರಿಗೆ ಇನ್ನೂ ಸಾಧ್ಯವಾಗಿಲ್ಲ.
ಮಂಗಳೂರಿನ ದೇರೆಬೈಲ್‌ನ ಬ್ಲೂಬೆರಿ ಹಿಲ್ಸ್ ರಸ್ತೆಯಲ್ಲಿರುವ 3.285 ಎಕರೆ ಭೂಮಿಯನ್ನು ವಾಣಿಜ್ಯ ಕಚೇರಿ ಟೆಕ್ ಪಾರ್ಕ್ ಉದ್ದೇಶಕ್ಕೆ ಪಿಪಿಪಿ ಮಾದರಿಯಲ್ಲಿ ಅಭಿವೃದ್ಧಿಪಡಿಸಲು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ. ಬ್ಲೂಬೆರಿ ರಸ್ತೆಯ ಸರ್ವೇ ನಂ. 129 ಮತ್ತು 113ರಲ್ಲಿನ ಭೂಮಿ ಕಿಯೋನಿಕ್ಸ್ ಹೆಸರಿನಲ್ಲಿದೆ.
ಶೀಘ್ರದಲ್ಲೇ ನಡೆಯಲಿದೆ ಕಿಯೋನಿಕ್ಸ್ ಟೆಂಡರ್ ಪ್ರಕ್ರಿಯೆ
ಖಾಸಗಿಯವರು ಹೂಡಿಕೆ ಮಾಡಿ 30+30 ವರ್ಷಗಳ ಲೀಸ್ ಆಧಾರದಲ್ಲಿ ಸಾರ್ವಜನಿಕ ಖಾಸಗಿ ಸಹಭಾಗಿತ್ವ (ಪಿಪಿಪಿ) ಮಾದರಿಯಲ್ಲಿ ವಿನ್ಯಾಸ, ನಿರ್ಮಾಣ, ಹಣಕಾಸು ಕಾರ್ಯಾಚರಣೆ ಮತ್ತು ವರ್ಗಾವಣೆ (ಡಿಬಿಎ-ಒಟಿ) ಆಧಾರದ ಮೇಲೆ ಅಭಿವೃದ್ಧಿಗೆ ಪ್ರಕ್ರಿಯೆಗಳು ನಡೆಯಬೇಕಿದೆ. ಪ್ರಥಮ ಹಂತವಾಗಿ ಕಿಯೋನಿಕ್ಸ್‌ನಿಂದ ಟೆಂಡರ್ ಆಹ್ವಾನ ಶೀಘ್ರ ನಡೆಯಲಿದೆ. ಇವೆಲ್ಲಾ ಕಾರ್ಯಗಳೂ ಸಾಂಗವಾಗಿ ನಡೆದರೆ ಕಡಲತಡಿಯ ಬಂದರು ನಗರಿ ಮಾಹಿತಿ ತಂತ್ರಜ್ಞಾನದ ಕಣಜವೂ ಆಗಬಹುದು.
Mangalore,Dakshina Kannada,Karnataka
October 17, 2025 5:13 PM IST