Last Updated:
ತುಳುನಾಡಿನ ಪತ್ತನಾಜೆ ತಿಂಗಳಲ್ಲಿ ಪಿಲಿ ಚಾಮುಂಡಿ, ಉಳ್ಳಾಕುಲು, ಶಿರಾಡಿ ದೈವಗಳಿಗೆ ಮಾತ್ರ ಪುದ್ವಾರ್ ನೇಮ ನಡೆಯುತ್ತದೆ. ಪಿಲಿ ಚಾಮುಂಡಿ ನೇಮ ತುಲಾ ಸಂಕ್ರಮಣದಂದು ವಿಶೇಷವಾಗಿ ಆಚರಿಸಲಾಗುತ್ತದೆ.
ದಕ್ಷಿಣ ಕನ್ನಡ: ದೈವಗಳ ನಾಡು ತುಳುನಾಡಿನಲ್ಲಿ (Tulu Nadu) ಆಚರಣೆಯಲ್ಲಿರುವ ಪತ್ತನಾಜೆ ಎನ್ನುವ ತಿಂಗಳುಗಳಲ್ಲಿ ತುಳುನಾಡಿನಲ್ಲಿ ಯಾವುದೇ ರೀತಿಯ ದೈವಗಳ (Demi God) ಕೋಲ, ತಂಬಿಲಗಳು ನಡೆಯುವುದಿಲ್ಲ. ಸುಮಾರು 3 ತಿಂಗಳ ಕಾಲ ತುಳುನಾಡಿನಲ್ಲಿ ಪತ್ತನಾಜೆ ಮುಂದುವರಿದು, ದೀಪಾವಳಿಯ ವೇಳೆಗೆ ಅದು ಮುಕ್ತಾಯವಾಗುತ್ತದೆ. ಆದರೆ ಪತ್ತನಾಜೆಯ ತಿಂಗಳಲ್ಲೂ ತುಳುನಾಡಿನ ಕೆಲವು ದೈವಗಳಿಗೆ ಮಾತ್ರ ನೇಮೋತ್ಸವ (Rituals) ನಡೆಯುತ್ತದೆ. ಪುದ್ವಾರ್ ನೇಮ ಎಂದು ಇದನ್ನು ಕರೆಯಲಾಗುತ್ತಿದ್ದು, ಕೆಲವೇ ಕೆಲವು ದೈವಸ್ಥಾನಗಳಲ್ಲಿ ಮಾತ್ರವೇ ಈ ನೇಮ ನಡೆಯುತ್ತದೆ.
ತುಳುನಾಡಿನಲ್ಲಿ ಹಲವು ಪ್ರಕಾರದ ದೈವಗಳಿದ್ದು, ಅವುಗಳಲ್ಲಿ ಕೆಲವು ಪ್ರಧಾನ ದೈವಗಳೆಂದು ಗುರುತಿಸಲ್ಪಟ್ಟಿವೆ. ರಾಜನ್ ದೈವ ಎಂದು ಕರೆಯುವ ಈ ದೈವಗಳ ಚಾವಡಿಗಳಲ್ಲಿ ಪುದ್ವಾರ್ ನೇಮ ನಡೆಯುತ್ತದೆ. ಪುದ್ವಾರ್ ಎಂದರೆ ಹೊಸ ಅಕ್ಕಿ ಊಟ ಎನ್ನುವ ಕನ್ನಡ ಅರ್ಥ ಬರುತ್ತದೆ. ಉಳ್ಳಾಕುಲು, ಪಿಲಿಚಾಮುಂಡಿ, ಶಿರಾಡಿ ದೈವ ಹೀಗೆ ಕೆಲವು ಪ್ರಧಾನ ದೈವಗಳ ಸ್ಥಾನಗಳಲ್ಲಿ ಮಾತ್ರವೇ ಈ ಪುದ್ವಾರ್ ನೇಮ ನಡೆಯುತ್ತದೆ.
ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಈಶ್ವರಮಂಗಲ ಸಮೀಪದ ಪಡುಮಲೆಯ ಕಿನ್ನಿಮಾಣಿ-ಪೂಮಾಣಿ ದೈವಸ್ಥಾನದ ವ್ಯಾಪ್ತಿಗೆ ಬರುವ ಪಿಲಿ ಚಾಮುಂಡಿ ದೈವಸ್ಥಾನದಲ್ಲೂ ಈ ಪುದ್ವಾರ್ ನೇಮೋತ್ಸವವು ಪ್ರತೀ ವರ್ಷವೂ ತುಲಾ ಸಂಕ್ರಮಣದಂದು ನಡೆಯುತ್ತದೆ. ದೈವಸ್ಥಾನಕ್ಕೆ ಸಂಬಂಧಪಟ್ಟ ಗ್ರಾಮಸ್ಥರ ಜೊತೆಗೆ ಇತರ ಗ್ರಾಮದ ಜನ ಕೂಡಾ ಈ ಪುದ್ವಾರ್ ನೇಮವನ್ನು ನೋಡಿ, ದೈವ ಹೊಸಕ್ಕಿಯ ಊಟ ಸ್ವೀಕರಿಸಿದ ಬಳಿಕ ಗ್ರಾಮಸ್ಥರೆಲ್ಲಾ ಸೇರಿ ಹೊಸಕ್ಕಿ ಊಟ ಮಾಡೋದು ಈ ನೇಮೋತ್ಸವದ ಹಿಂದಿರುವ ಉದ್ದೇಶವೂ ಆಗಿದೆ.
ಪಿಲಿ ಚಾಮುಂಡಿ ಎಂಬ ರಕ್ಷಕ ದೈವ ನುಡಿಗಿದೆ ಬಹು ಪ್ರಾಮುಖ್ಯತೆ
ಪಿಲಿ ಚಾಮುಂಡಿ ದೈವವು ತುಳುನಾಡಿನಲ್ಲಿ ಅತ್ಯಂತ ಪ್ರಭಾವಶಾಲಿ ದೈವವಾಗಿದ್ದು, ಸ್ತ್ರೀ ಪ್ರಧಾನ ದೈವವಾಗಿರುವುದರಿಂದ ದೇವಿಯ ಪ್ರತಿರೂಪವಾಗಿಯೂ ಈ ದೈವವನ್ನು ಆರಾಧಿಸಿಕೊಂಡು ಬರಲಾಗುತ್ತಿದೆ. ಅತ್ಯಂತ ಆಕರ್ಷಕ ಮುಖವರ್ಣಿಕೆಯ ಜೊತೆಗೆ ರೌದ್ರ ರೂಪದ ಈ ದೈವದ ನರ್ತನವು ದೈವದ ಮೇಲಿನ ಭಯ-ಭಕ್ತಿಯನ್ನು ಇನ್ನಷ್ಟು ಹೆಚ್ಚಿಸುತ್ತದೆ. ನೇಮೋತ್ಸವ ಪ್ರಾರಂಭವಾಗುವ ಮೊದಲು ಕ್ಷೇತ್ರದ ಪ್ರಧಾನ ದೈವಗಳಾದ ಕಿನ್ನಿಮಾಣಿ-ಪೂಮಾಣಿ ದೈವದ ನಡೆಯಲ್ಲಿ ಪ್ರಾರ್ಥನೆ ನೆರವೇರಿದ ಬಳಿಕ ಪಿಲಿಚಾಮುಂಡಿ ದೈವದ ನರ್ತನ ಸೇವೆ ಆರಂಭಗೊಳ್ಳುತ್ತದೆ. ಈ ಸಂದರ್ಭದಲ್ಲಿ ದೈವವು ಗ್ರಾಮದ ಹಿರಿಯರನ್ನು ಮತ್ತು ದೈವಕ್ಕೆ ಸಂಬಂಧಪಟ್ಟವರಲ್ಲಿ ಕೆಲವು ವಿಚಾರಗಳನ್ನು ಹೇಳುವ ಮತ್ತು ಸೂಚಿಸುವ ಮೂಲಕ ಭೂಮಿಯ ಮೇಲೆ ತನ್ನ ಇರುವಿಕೆಯನ್ನೂ ಪ್ರಕಟಪಡಿಸುತ್ತದೆ.
Dakshina Kannada,Karnataka
October 19, 2025 11:20 AM IST