Last Updated:
ಪಾಕಿಸ್ತಾನ ಪರ ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ ಎರಡನ ಹಿರಿಯ ಕ್ರಿಕೆಟಿಗ ಎಂಬ ಹೆಗ್ಗಳಿಕೆ ಆಸಿಫ್ ಅಫ್ರಿದಿ ಪಾತ್ರರಾಗಿದ್ದಾರೆ.
ರಾವಲ್ಪಿಂಡಿ ಕ್ರಿಕೆಟ್ (Cricket) ಕ್ರೀಡಾಂಗಣದಲ್ಲಿ ದಕ್ಷಿಣ ಆಫ್ರಿಕಾ ಮತ್ತು ಪಾಕಿಸ್ತಾನ (South Africa vs Pakistan) ತಂಡಗಳ ನಡುವೆ 2ನೇ ಟೆಸ್ಟ್ (Test) ಪಂದ್ಯ ನಡೆಯುತ್ತಿದೆ. ಈ ಪಂದ್ಯದ ಮೂಲಕ ಪಾಕಿಸ್ತಾನ ಪರ ಟೆಸ್ಟ್ ಕ್ರಿಕೆಟ್ಗೆ ಎರಡನೇ ಹಿರಿಯ ಕ್ರಿಕೆಟಿಗ ಪದಾರ್ಪಣೆ ಮಾಡಿದ್ದಾರೆ. ಶಾನ್ ಮಸೂದ್ (Shaan Masood) ನಾಯಕತ್ವದ ಪಾಕಿಸ್ತಾನ ತಂಡದ ಪರ 38 ವರ್ಷದ ಆಟಗಾರ ಪಾದಾರ್ಪಣೆ ಮಾಡಿರುವುದು ವಿಶೇಷ. ಕಳೆದ ಪಂದ್ಯದಲ್ಲಿ ಕಳಪೆ ಪ್ರದರ್ಶನ ನೀಡಿದ 31 ವರ್ಷದ ಹಸನ್ ಅಲಿ (Hassan Ali) ಬದಲಿಗೆ ಈ ಆಟಗಾರನನ್ನು ಆಯ್ಕೆ ಮಾಡಲಾಗಿದೆ. ಕಳೆದ ಟೆಸ್ಟ್ ಪಂದ್ಯದಲ್ಲಿ ಪಾಕಿಸ್ತಾನ ತಂಡವು ದಕ್ಷಿಣ ಆಫ್ರಿಕಾವನ್ನು 93 ರನ್ಗಳಿಂದ ಸೋಲಿಸಿತು.
ಪಾಕಿಸ್ತಾನ ಪರ ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ ಎರಡನೇ ಹಿರಿಯ ಕ್ರಿಕೆಟಿಗ ಆಸಿಫ್ ಅಫ್ರಿದಿ. ಪೇಶಾವರದ 38 ವರ್ಷದ ಆಸಿಫ್ ಅಫ್ರಿದಿ ಅನುಭವಿ ಸ್ಪಿನ್ನರ್. ಅವರು ಸ್ಪಿನ್ ಸ್ನೇಹಿ ಪಿಚ್ಗಳಲ್ಲಿ ವಿಕೆಟ್ ಪಡೆಯುವುದರಲ್ಲಿ ಹೆಸರುವಾಸಿಯಾಗಿದ್ದಾರೆ. ಅವರು ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವಾಗ ಪಂದ್ಯದ ದಿಕ್ಕನ್ನು ಬದಲಾಯಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ.
ಆಸಿಫ್ ಅಫ್ರಿದಿ 2009 ರಲ್ಲಿ ಪ್ರಥಮ ದರ್ಜೆ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದರು. ಸ್ವಲ್ಪ ವಿರಾಮದ ನಂತರ 2015 ರಲ್ಲಿ ಪ್ರಥಮ ದರ್ಜೆ ಕ್ರಿಕೆಟ್ಗೆ ಮರಳಿದರು. ಇಲ್ಲಿವರೆಗೆ ಅವರು 57 ಪ್ರಥಮ ದರ್ಜೆ ಪಂದ್ಯಗಳ 95 ಇನ್ನಿಂಗ್ಸ್ಗಳಲ್ಲಿ 198 ವಿಕೆಟ್ಗಳನ್ನು ಪಡೆದಿದ್ದಾರೆ. ಸರಾಸರಿ 25.49 ಮತ್ತು 2.92 ರ ಎಕಾನಮಿ ದರವನ್ನು ಹೊಂದಿದ್ದಾರೆ. ಬ್ಯಾಟಿಂಗ್ನಲ್ಲಿ ಅವರು 94 ಇನ್ನಿಂಗ್ಸ್ಗಳಲ್ಲಿ ಒಂದು ಶತಕ ಸೇರಿದಂತೆ 1630 ರನ್ ಗಳಿಸಿದ್ದಾರೆ.
ಪಾಕಿಸ್ತಾನ ಪರ ಟೆಸ್ಟ್ ಪಂದ್ಯಕ್ಕೆ ಪಾದಾರ್ಪಣೆ ಮಾಡಿದ ಅತ್ಯಂತ ಹಿರಿಯ ಆಟಗಾರ ಮಿರಾನ್ ಬಕ್ಷ್. ಜನವರಿ 29, 1955 ರಂದು ಲಾಹೋರ್ನಲ್ಲಿ ಭಾರತ ವಿರುದ್ಧ ಪಾಕಿಸ್ತಾನ ತಂಡಕ್ಕಾಗಿ ತಮ್ಮ ಮೊದಲ ಟೆಸ್ಟ್ ಪಂದ್ಯವನ್ನು ಆಡಿದ್ದರು. ಈ ಸಂದರ್ಭದಲ್ಲಿ ಮಿರಾನ್ ಬಕ್ಷ್ ಅವರಿಗೆ 47 ವರ್ಷ ಮತ್ತು 284 ದಿನಗಳು.
ಈಗ ಆಸಿಫ್ ಅಫ್ರಿದಿ ಪಾಕಿಸ್ತಾನದ ಎರಡನೇ ಅತ್ಯಂತ ಹಿರಿಯ ಟೆಸ್ಟ್ ಆಟಗಾರ. ದೇಶೀಯ ಕ್ರಿಕೆಟ್ನಲ್ಲಿ ನಿರಂತರವಾಗಿ ಉತ್ತಮ ಪ್ರದರ್ಶನ ನೀಡುತ್ತಿದ್ದರೂ, ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಲು ಅವರು ಹಲವು ವರ್ಷಗಳ ಕಾಲ ಕಾಯಬೇಕಾಯಿತು. ಇದೀಗ ಪಾಕಿಸ್ತಾನ ತಂಡದ ಸ್ಪಿನ್ ವಿಭಾಗ ಮತ್ತಷ್ಟು ಬಲಗೊಂಡಿದೆ. ಈಗಾಗಲೇ ನೋಮನ್ ಅಲಿ ಮತ್ತು ಸಾಜಿದ್ ಖಾನ್ರಂತಹ ಸ್ಪಿನ್ ಬೌಲರ್ಗಳು ತಂಡದಲ್ಲಿದ್ದಾರೆ.
October 20, 2025 9:01 PM IST