ರೋಹಿತ್ ಶರ್ಮಾ (Rohit Sharma) ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದಲೂ ನಿವೃತ್ತಿ ಹೊಂದಬೇಕು. ಆಸ್ಟ್ರೇಲಿಯಾದಲ್ಲಿ (Australia) ನಡೆದ ಟೆಸ್ಟ್ ಸರಣಿಯಲ್ಲಿ ರನ್ ಗಳಿಸಲಿಲ್ಲ, ಅವರಿಂದ ಏಕದಿನ ಕ್ರಿಕೆಟ್‌ನಲ್ಲೂ ರನ್ ಗಳಿಸಲು ಸಾಧ್ಯವಾಗುವುದಿಲ್ಲ. ಅವರನ್ನು ನಾಯಕತ್ವದಿಂದ ತೆಗೆದುಹಾಕಿದ್ದು, ಮಾತ್ರವಲ್ಲ, ಅವರನ್ನ ತಂಡದಿಂದಲೂ ಹೊರ ಹಾಕಬೇಕು. ಇದು ಆಸ್ಟ್ರೇಲಿಯಾ ಪ್ರವಾಸಕ್ಕೂ ಮುನ್ನ ರೋಹಿತ್ ಶರ್ಮಾ ಬಗ್ಗೆ ಕೇಳಿ ಬರುತ್ತಿದ್ದ ಮಾತುಗಳು. ಆದರೆ ರೋಹಿತ್ ಶರ್ಮಾ ತಮ್ಮ ಸಾಮರ್ಥ್ಯ ಏನೆಂಬುದನ್ನ ಕ್ರಿಕೆಟ್ ಜಗತ್ತಿಗೆ ತೋರಿಸಿಕೊಟ್ಟಿದ್ದಾರೆ. ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ, ರೋಹಿತ್ ಫೇಲ್ ಆದರೂ, ನಂತರ ಎರಡನೇ ಪಂದ್ಯದಲ್ಲಿ 73 ರನ್ ಸಿಡಿಸಿದ್ದರು. ಇದೀಗ ಮೂರನೇ ಪಂದ್ಯದಲ್ಲಿ ತಮ್ಮ ನೈಜ ಆಟವನ್ನ ಕಂಡುಕೊಂಡಿದ್ದು,ಎರಡು ಪ್ರಶಸ್ತಿಗಳನ್ನ ಪಡೆದು ಇತಿಹಾಸ ಸೃಷ್ಟಿಸಿದರು.
ಪಂದ್ಯ ಶ್ರೇಷ್ಠ ಹಾಗೂ ಸರಣಿ ಶ್ರೇಷ್ಠ ಪ್ರಶಸ್ತಿ ಗೆದ್ದ ರೋಹಿತ್
ಆಸ್ಟ್ರೇಲಿಯಾ ವಿರುದ್ಧದ ಸಿಡ್ನಿ ಪಂದ್ಯದಲ್ಲಿ ಶತಕ ಗಳಿಸಿ ಟೀಮ್ ಇಂಡಿಯಾವನ್ನು ಗೆಲುವಿನತ್ತ ಕೊಂಡೊಯ್ದಿದ್ದಕ್ಕಾಗಿ ರೋಹಿತ್ ಶರ್ಮಾ ಅವರನ್ನು ಪಂದ್ಯಶ್ರೇಷ್ಠ ಎಂದು ಹೆಸರಿಸಲಾಯಿತು. ಎರಡನೇ ಪಂದ್ಯದಲ್ಲಿ ತಮ್ಮ ಪ್ರಬಲ ಅರ್ಧಶತಕ ಮತ್ತು ಸರಣಿಯಲ್ಲಿ ಹೆಚ್ಚು ರನ್ಗಳಿಸಿದ್ದಕ್ಕಾಗಿ ಅವರು ಸರಣಿಶ್ರೇಷ್ಠ ಪ್ರಶಸ್ತಿಗೂ ಭಾಜನರಾದರು. ಇದರೊಂದಿಗೆ, ಆಸ್ಟ್ರೇಲಿಯಾದಲ್ಲಿ ನಡೆದ ಏಕದಿನ ಸರಣಿಯಲ್ಲಿ ಎರಡು ಬಾರಿ ಸರಣಿಶ್ರೇಷ್ಠ ಪ್ರಶಸ್ತಿಯನ್ನು ಗೆದ್ದ ಮೊದಲ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ರೋಹಿತ್ ಶರ್ಮಾ ಪಾತ್ರರಾದರು. ಆದರೆ ಎರಡೂ ಬಾರಿಯೂ ತಂಡ ಸರಣಿ ಗೆಲ್ಲಲು ಭಾರತ ತಂಡಕ್ಕೆ ಸಾಧ್ಯವಾಗದಿರುವುದು ವಿಷಾಧನೀಯ ಸಂಗತಿ.
ಎರಡು ಸರಣಿ ಶ್ರೇಷ್ಠ ಪ್ರಶಸ್ತಿ ಗೆದ್ದ ಮೊದಲ ಭಾರತೀಯ
2016ರಲ್ಲಿ ಭಾರತ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿತ್ತು. ಆ ಪ್ರವಾಸದಲ್ಲಿ ರೋಹಿತ್ ಶರ್ಮಾ 2 ಶತಕ, ಒಂದು 99 ರನ್ ಆಟ ಸೇರಿ 5 ಇನ್ನಿಂಗ್ಸ್ಗಳಲ್ಲಿ 441 ರನ್ಗಳಿಸಿದ್ದರು. ಆದರೆ ಭಾರತ ತಂಡ ಆ ಸರಣಿಯಲ್ಲಿ 1-4ರಲ್ಲಿ ಸೋಲು ಕಂಡಿತ್ತು. ಇದೀಗ ರೋಹಿತ್ 3 ಪಂದ್ಯಗಳ ಸರಣಿಯಲ್ಲಿ ರೋಹಿತ್ 202 ರನ್ಗಳಿಸಿದರಾದರೂ ತಂಡಕ್ಕೆ ಸರಣಿ ಗೆಲ್ಲಿಸಲು ವಿಫಲರಾದರು.
ಧೋನಿ ದಾಖಲೆ ಬ್ರೇಕ್ ಮಾಡಿದ ಹಿಟ್ಮ್ಯಾನ್
2019ರ ಪ್ರವಾಸದಲ್ಲಿ ಸರಣಿ ಗೆದ್ದ ಸಂದರ್ಭದಲ್ಲಿ ಎಂಎಸ್ ಧೋನಿ ಸರಣಿ ಶ್ರೇಷ್ಠ ಪ್ರಶಸ್ತಿ ಗೆದ್ದಿದ್ದರು. ಧೋನಿ 37 ವರ್ಷ 194 ದಿನಗಳ ನಂತರ ಸರಣಿ ಶ್ರೇಷ್ಠ ಪ್ರಶಸ್ತಿಗೆ ಗೆದ್ದ ಅತ್ಯಂತ ಹಿರಿಯ ಆಟಗಾರ ಎಂಬ ದಾಖಲೆ ಬರೆದಿದ್ದರು. ಇದೀಗ ರೋಹಿತ್ ಶರ್ಮಾ 38 ವರ್ಷ , 178 ದಿನಗಳ ನಂತರ ಈ ಸಾಧನೆ ಮಾಡಿ ಧೋನಿ ದಾಖಲೆ ಬ್ರೇಕ್ ಮಾಡಿದ್ದಾರೆ.
ಪಂದ್ಯದ ಹೈಲೈಟ್ಸ್
ಇನ್ನು ಪಂದ್ಯದ ವಿಷಯಕ್ಕೆ ಬಂದರೆ ಟಾಸ್ ಗೆದ್ದ ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ತಂಡ ಕೇವಲ 236 ರನ್ಗಳಿಗೆ ಆಲೌಟ್ ಆಯಿತು. ಆಸ್ಟ್ರೇಲಿಯಾ ಪರ 50 ರನ್‌ಗಳ ಗಡಿ ದಾಟಿದ ಏಕೈಕ ಬ್ಯಾಟ್ಸ್‌ಮನ್ ಮ್ಯಾಟ್ ರೆನ್‌ಶಾ. ರೆನ್‌ಶಾ 58 ಎಸೆತಗಳಲ್ಲಿ 2 ಬೌಂಡರಿಗಳ ಸಹಿತ 56 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದರು. ಟ್ರಾಟಿಸ್ ಹೆಡ್ 26 ಎಸೆತಗಳಲ್ಲಿ 29, ಮಿಚೆಲ್ ಮಾರ್ಷ್ 50 ಎಸೆತಗಳಲ್ಲಿ 41, ಮ್ಯಾಥ್ಯೂ ಶಾರ್ಟ್ 30 ರನ್, ಕ್ಯಾರಿ 24, ಕೂಪರ್ ಕೊನೊಲಿ 23 ರನ್ಗಳಿಸಿದರು. ಆಸ್ಟ್ರೇಲಿಯಾ 46.4 ಓವರ್‌ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 236 ರನ್‌ಗಳಿಸಿತು.
ಭಾರತ ತಂಡದ ಪರ ಹರ್ಷಿತ್ ರಾಣಾ ಅದ್ಭುತ ಬೌಲಿಂಗ್ ಪ್ರದರ್ಶನ ತೋರಿದರು. 8.4 ಓವರ್‌ಗಳಲ್ಲಿ 39 ರನ್ ನೀಡಿ 4 ವಿಕೆಟ್ ಪಡೆದರೆ, ಸುಂದರ್ 44 ರನ್ ನೀಡಿ 2 ವಿಕೆಟ್ ಪಡೆದರು. ಪ್ರಸಿಧ್ ಕೃಷ್ಣ 51ಕ್ಕೆ1, ಮೊಹಮ್ಮದ್ ಸಿರಾಜ್ 24ಕ್ಕೆ1, ಅಕ್ಷರ್ ಪಟೇಲ್ 18ಕ್ಕೆ1, ಕುಲ್ದೀಪ್ ಯಾದವ್ 50ಕ್ಕೆ1 ವಿಕೆಟ್ ಪಡೆದ ಆಸ್ಟ್ರೇಲಿಯಾ ತಂಡವನ್ನ ಸಾಧಾರಣ ಮೊತ್ತಕ್ಕೆ ನಿಯಂತ್ರಿಸಲು ನೆರವಾದರು.
October 25, 2025 6:17 PM IST